»   »  ಹೊಸ ನಾಯಕ ನಟರ ಬಗ್ಗೆ ದ್ವಾರಕೀಶ್ ಬೇಸರ

ಹೊಸ ನಾಯಕ ನಟರ ಬಗ್ಗೆ ದ್ವಾರಕೀಶ್ ಬೇಸರ

Subscribe to Filmibeat Kannada

ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯ ನಟ, ನಿರ್ಮಾಪಕ ದ್ವಾರಕೀಶ್ ಹೊಸ ನಾಯಕ ನಟರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಹೊಸ ಪೀಳೆಯ ನಟರು ಹಿಂದುಮುಂದು ಆಲೋಚಿಸಲ್ಲ. ಕತೆ ಹೇಗಾದರೂ ಇರಲಿ ಅದರ ಬಗ್ಗೆ ಒಂಚೂರು ತಲೆ ಕೆಡಿಸಿಕೊಳ್ಳಲ್ಲ. ಬೇಕಾಬಿಟ್ಟಿ ಚಿತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ದ್ವಾರಕೀಶ್ ಹೊಸಬರನ್ನು ತರಾಟೆಗೆ ತೆಗೆದುಕೊಂಡರು.

''ಎಪ್ಪತ್ತು ಲಕ್ಷ ಅಥವಾ ಒಂದು ಕೋಟಿ ರುಪಾಯಿ ಚೆಕ್ ಕೊಟ್ಟರೆ ಸಾಕು ಕತೆ ಹೇಗಾದರೂ ಇರಲಿ ಕೂಡಲೆ ಆ ಚಿತ್ರಕ್ಕೆ ಸಹಿ ಹಾಕುತ್ತಾರೆ. ಚೆಕ್ ತೆಗೆದುಕೊಳ್ಳುವ ಮುನ್ನ ಚಿತ್ರಕತೆಯನ್ನು ಸೂಕ್ಷ್ಮವಾಗಿ ನೋಡುವ ಜಾಣ್ಮೆ ಅವರಲಿಲ್ಲದಿರುವುದು ದುರಂತ '' ಎಂದು ದ್ವಾರಕೀಶ್ ಯುವಪೀಳಿಗೆಯ ನಟರನ್ನು ದೂಷಿಸಿದರು.

ಕನ್ನಡ ಚಿತ್ರಗಳು ಬಿಡುಗಡೆಯಾದ ಮೂರು ದಿನಕ್ಕೆ ಎತ್ತಂಗಡಿಯಾಗುತ್ತಿವೆ. ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆಯುವಲ್ಲಿ ವಿಫಲವಾಗಿವೆ. ಈ ಕ್ಲಿಷ್ಟ ಪರಿಸ್ಥಿತಿಗೆ ನಮ್ಮಹೊಸ ನಾಯಕ ನಟರು ಕಾರಣವಾಗುತ್ತಿರುವುದು ದುರಂತ ಎಂದರು. ಕನ್ನಡ ಚಿತ್ರೋದ್ಯಮದ ಹಿರಿಯ ನಿರ್ಮಾಪರು ಸಹ ಈ ಸನ್ನಿವೇಶಕ್ಕೆ ಕಾರಣರಾಗುತ್ತಿದ್ದಾರೆ ಎಂದರು.

ಬಾಕ್ಸಾಫೀಸಲ್ಲಿ ಸಾಲು ಸಾಲು ಸೋಲಿನ ಚಿತ್ರಗಳನ್ನು ಕೊಡುತ್ತಿರುವ ನಟರು ನಮಗೆ ಬೇಕಾಗಿಲ್ಲ. ಇನ್ನೂ ಕೆಲವು ನಟರು ಜ್ಯೋತಿಷ್ಯ ಸಂಖ್ಯೆಗಳನ್ನು ತೋರಿಸಿ ಸಂಭಾವನೆ ಕೇಳುತ್ತಿದ್ದಾರೆ. ಇಂತಹ ನಟರುಬಾಕ್ಸಾಫೀಸ್ ಸೋಲುಗಳ ವಿಮರ್ಶೆ ಮಾಡಿಕೊಳ್ಳುವುದಿಲ್ಲ. ಚಿತ್ರೋದ್ಯಮ ಮುಳುಗುತ್ತಿದೆ ಎಂದರೆ ಆಶ್ಚರ್ಯ ಪಡಬೇಕಾಗಿಲ್ಲ ಎಂದರು.

ಎಸ್ ನಾರಾಯಣ್ ನಿರ್ದೇಶನದ 'ಚೆಲುವಿನ ಚಿಲಿಪಿಲಿ' ಚಿತ್ರದ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮದಲ್ಲಿ ದ್ವಾರಕೀಶ್ ಹೊಸ ನಟರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದು ಹೀಗೆ. ಮಲ್ಲೇಶ್ವರಂನ ರೇಣುಕಾ ಚಿತ್ರಮಂದಿರದಲ್ಲಿ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಕನ್ನಡ ಚಿತ್ರೋದ್ಯಮದ ಬೆಳವಣಿಗೆಗಿಂತಲೂ ನಮ್ಮನ್ನು ನಾವು ಮೊದಲು ರಕ್ಷಿಸಿಕೊಳ್ಳುವ ಪರಿಸ್ಥಿತಿ ಉದ್ಭವಿಸಿದೆ. ಇಲ್ಲದಿದ್ದರೆ ನಮಗೆಲ್ಲಾ ಉಳಿಗಾಲವಿಲ್ಲ ಎಂದು ದ್ವಾರಕೀಶ್ ಹೇಳಿದರು.

ಚೆಲುವಿನ ಚಿಲಿಪಿಲಿ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮದಲ್ಲಿ ಅಂಬರೀಶ್, ಸುಮಲತಾ, ಸಾ ರಾ ಗೋವಿಂದು, ಕೆ ಕಲ್ಯಾಣ್ ಸೇರಿದಂತೆ ಚಿತ್ರದ ನಾಯಕ ನಟ ಪಂಕಜ್, ನಟಿ ರೂಪಿಕಾ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸೋನು ನಿಗಂ ಮತ್ತು ಶಂಕರ್ ಮಹದೇವನ್ ಹಾಡಿರುವ ಚಿತ್ರದ ನಾಲ್ಕು ಹಾಡುಗಳನ್ನು ಪ್ರದರ್ಶಿಸಲಾಯಿತು.


(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada