ಇನ್ನೊಂದು ಮಸ್ತ್ ಹಾಡಿನಲ್ಲಿ ತಾರೆ ಐಂದ್ರಿತಾ ರೇ
'ಪ್ರೇಮ್ ಅಡ್ಡ' ಚಿತ್ರದಲ್ಲಿ "ಮೈ ನೇಮು ಬಸಂತೀ..." ಎಂದು ಕುಣಿದು ಈಗಾಗಲೆ ಪಡ್ಡೆಗಳ ಹೃದಯದಲ್ಲಿ ಚೆಲುವಿನ ಚಿತ್ತಾರ ಬಿಡಿಸಿರುವ ಚಿಗರೆ ಕಂಗಳ ಬೆಡಗಿ ಐಂದ್ರಿತಾ ರೇ ಮತ್ತೊಂದು ಹಾಟ್ ಹಾಡಿಗೆ ಸಹಿ ಹಾಕಿದ್ದಾರೆ. ಈ ಬಾರಿ ಹ್ಯಾಟ್ರಿಕ್ ಹೀರೋ ಶಿವಣ್ಣ ಚಿತ್ರದಲ್ಲಿ ಐಂದ್ರಿತಾ ಹೆಜ್ಜೆ ಹಾಕಲಿದ್ದಾರೆ.
ಐಂದ್ರಿತಾ ವಿಶೇಷ ಹಾಡು ಹಿಟ್ ಆಗುತ್ತಿದ್ದಂತೆ ಅದೇ ರೀತಿಯ ಆಫರ್ ಗಳು ಹೆಚ್ಚಾಗುತ್ತಿವೆ. ಈಗ ಸೂರಿ ನಿರ್ದೇಶನದ 'ಕಡ್ಡಿಪುಡಿ' ಚಿತ್ರದಲ್ಲಿ ತಮ್ಮ ಸೊಂಟ ಕುಲುಕಿಸಿ ಬಳುಕಿಸಲಿದ್ದಾರೆ. ಈ ಹಾಡನ್ನು ಗತಕಾಲದ ವಿಶೇಷ ಸೆಟ್ ನಲ್ಲಿ ಚಿತ್ರೀಕರಿಸಲಾಗುತ್ತಿದೆ.
ಈ ಹಾಡು ಐಟಂ ಹಾಡು ಎಂದು ಚಿತ್ರತಂಡ ಹೇಳದಿದ್ದರೂ ಇದೊಂದು ವಿಶೇಷ ಸಾಂಗ್ ಅಂತೂ ಹೌದು ಎಂಬ ಸುದ್ದಿಯಿದೆ. ಒಟ್ಟಿನಲ್ಲಿ ಐಟಂ ಹಾಡು ಎಂಬ ಮುದ್ರೆ ಬೀಳದಂತೆ ಜಾಗ್ರತೆವಹಿಸಿದ್ದಾರೆ. ಈ ಹಾಡಿಗೆ ನೃತ್ಯ ನಿರ್ದೇಶನ ಮಾಡಿರುವವರು ನಿರ್ದೇಶಕ ಪವನ್ ಕುಮಾರ್ ಅವರ ಪತ್ನಿ ಸೌಮ್ಯಾ.
ಅವರು ಭರತನಾಟ್ಯ ಕಲಾವಿದೆಯಾಗಿರುವ ಕಾರಣ ಹಾಡೂ ಅಷ್ಟೇ ಕ್ಲಾಸಿಕಲ್ ಆಗಿ ಬಂದಿದೆಯಂತೆ. ಈ ಹಿಂದೆ ಕಾಂಚನ, ಲವ್ ಗುರು, ಮಸ್ತ್ ಮಜಾ ಮಾಡಿ ಚಿತ್ರಗಳಲ್ಲೂ ಐಂದ್ರಿತಾ ರೇ ಅತಿಥಿ ಪಾತ್ರಗಳಲ್ಲಿ ಅಭಿನಯಿಸಿದ್ದರು. ಈಗ ಹಾಡಿನ ಮೂಲಕ ಮತ್ತೊಮ್ಮೆ ವಿಶೇಷ ಪಾತ್ರ ಪೋಷಿಸುತ್ತಿದ್ದಾರೆ. (ಏಜೆನ್ಸೀಸ್)


Click it and Unblock the Notifications











