ತಮಿಳು ತಾರೆ ಕೃತಿ ಜೊತೆ ಅನೂಪ್ ಸೀಳಿನ್ ಸಪ್ತಪದಿ

ಭರತನಾಟ್ಯ ಕಲಾವಿದೆಯೂ ಆಗಿರುವ ಕೃತಿ ಅವರು ತಮಿಳಿನ 'ಅಳಗರಸ್ವಾಮಿಯಿನ್ ಕುದಿರೈ' ಹಾಗೂ 'ಕೊಂಡುತಾನ್ ಕೊಡುತಾನ್' ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇತ್ತೀಚೆಗೆ ಇವರಿಬ್ಬರ ಮದುವೆ ನಿಶ್ಚಿತಾರ್ಥವೂ ನೆರವೇರಿತು.
ಬೆಂಗಳೂರು ವಿಜಯನಗರದ ಬಂಟ್ಸ್ ಅಸೋಸಿಯೇಷನ್ ನಲ್ಲಿ ಅಕ್ಟೋಬರ್ 22ರಂದು ಮದುವೆ ಸಮಾರಂಭ ನಡೆಯಲಿದೆ. ಅಂದು ಸಂಜೆ 7.30ಕ್ಕೆ ಆರತಕ್ಷತೆ ಕಾರ್ಯಕ್ರಮವನ್ನೂ ಇಟ್ಟುಕೊಂಡಿದ್ದಾರೆ.
ಕಿಚ್ಚ ಸುದೀಪ್ ಹಾಗೂ ಮಮತಾ ಮೋಹನ್ ದಾಸ್ ಜೋಡಿಯ 'ಗೂಳಿ' ಚಿತ್ರದ ಮೂಲಕ ಸಂಗೀತ ನಿರ್ದೇಶಕರಾಗಿ ಕನ್ನಡ ಚಿತ್ರರಂಗದಲ್ಲಿ ಅನೂಪ್ ಸೀಳಿನ್ ಪರಿಚಿತರಾಗಿದ್ದರು. ಬಳಿಕ ಅವರ ಸಂಗೀತ ನಿರ್ದೇಶನದ ಹತ್ತಾರು ಚಿತ್ರಗಳ ಹಾಡುಗಳು ಹಿಟ್ ಆಗಿವೆ.
ಎದ್ದೇಳು ಮಂಜುನಾಥ, ಪ್ರೀತ್ಸೆ ಪ್ರೀತ್ಸೆ, ಐ ಯಾಮ್ ಸಾರಿ ಮತ್ತೆ ಬನ್ನಿ ಪ್ರೀತ್ಸೋಣ, ಮನಸಾಲಜಿ, ಗಲ್ಲ ಸಿದ್ಲಿಂಗು, ಪ್ರೇಮಗಾಮಿ ಹಾಗೂ ಜನ್ಮ ಚಿತ್ರಗಳಲ್ಲಿ ತಮ್ಮದೇ ಆದಂತಹ ಛಾಪು ಮೂಡಿಸಿದರು.
ಕೆ.ಎಂ.ಚೈತನ್ಯ ನಿರ್ದೇಶಿಸುತ್ತಿರುವ 'ಪರಾರಿ' ಚಿತ್ರಕ್ಕೂ ಸಂಗೀತ ಸಂಯೋಜಿಸುತ್ತಿದ್ದಾರೆ ಅನೂಪ್. ಮಾಜಿ ನ್ಯಾಯಮೂರ್ತಿ ಹಾಗೂ ಕನ್ನಡದ ಬರಹಗಾರ ಕೋ.ಚನ್ನಬಸಪ್ಪ ಅವರ ಹತ್ತಿರದ ಸಂಬಂಧಿಕರು ಅನೂಪ್ ಸೀಳಿನ್.
ಕೃತಿ ಅವರು ಕನ್ನಡದ 'ಸರಿಗಮಪ' ಎಂಬ ಚಿತ್ರಕ್ಕೂ ಸಹಿಹಾಕಿದ್ದರು. ಆದರೆ ಕಾರಣಾಂತರಗಳಿಂದ ಅವರು ಚಿತ್ರವನ್ನು ಮಧ್ಯದಲ್ಲೇ ಕೈಬಿಟ್ಟಿದ್ದರು. ಹೊಸ ಬಾಳಿನ ಹೊಸಿಲಲಿ ನಿಂತಿರುವ ಹೊಸ ಜೋಡಿಗೆ ಶುಭವಾಗಲಿ ಎಂದು ಹಾರೈಸೋಣ. (ಒನ್ಇಂಡಿಯಾ ಕನ್ನಡ)


Click it and Unblock the Notifications











