For Quick Alerts
  ALLOW NOTIFICATIONS  
  For Daily Alerts

  ಆಡಿಯೋ ವಿಮರ್ಶೆ: 'ಸಂತೆಯಲ್ಲಿ ನಿಂತ ಕಬೀರ' ಹಾಡುಗಳು ಸೂಪರ್

  By ಪ್ರಶಾಂತ್ ಇಗ್ನೇಷಿಯಸ್
  |

  ಕನ್ನಡ ಚಿತ್ರಗಳ ಇತಿಹಾಸದಲ್ಲಿ ಭಕ್ತಿ ಪ್ರಧಾನ ಚಿತ್ರಗಳ ಪಾಲು ಬಹು ದೊಡ್ಡದು. ಆ ಭಕ್ತಿ ಪ್ರಧಾನ ಚಿತ್ರಗಳಲ್ಲಿನ ಹಾಡುಗಳು ಸಹ ಬಹು ದೊಡ್ಡ ಪಾತ್ರ ವಹಿಸಿರುವುದನ್ನು ನಾವು ನೋಡಿದ್ದೇವೆ. 'ಸಂತೆಯಲ್ಲಿ ನಿಂತ ಕಬೀರ' ಚಿತ್ರ ಘೋಷಣೆಯಾದಗಲೇ ಚಿತ್ರದ ಸಂಗೀತದ ಬಗ್ಗೆ ನಿರೀಕ್ಷೆಗಳಿದ್ದವು.

  ಸಂಗೀತ ನಿರ್ದೇಶಕ ಇಸ್ಮಾಯಿಲ್ ದರ್ಬಾರ್ ಎಂಬ ಮಾತೇ ಆ ನಿರೀಕ್ಷೆಯನ್ನು ಅಕಾಶದೆತ್ತರಕ್ಕೆ ಏರಿಸಿತ್ತು. ಈಗ ಆಡಿಯೋ ಬಿಡುಗಡೆಯಾಗಿದೆ. ನಿರ್ದೇಶಕ ನರೇಂದ್ರ ಬಾಬು ಖುಷಿಯಾಗಿರಬೇಕು, ಯಾಕೆಂದರೆ ಇಸ್ಮಾಯಿಲ್ ಸಂಗೀತದ ರಸದೌತಣವನ್ನು ಬಡಿಸಿದ್ದಾರೆ. (ಶೂಟಿಂಗ್ ಮುಗಿಸಿದ ಶಿವಣ್ಣನ ಸಂತೆಯಲ್ಲಿ ನಿಂತ ಕಬೀರ)

  ಸಂಗೀತ ಪ್ರಿಯರೂ ಅಷ್ಟೇ ಖುಷಿಯಲ್ಲಿ ಗೀತೆಗಳನ್ನು ಸವಿಯುತ್ತಿದ್ದಾರೆ. ಇಂದಿನ fast foodನಂಥ ಗೀತೆಗಳ ನಡುವೆ ಸಂಗೀತ ಸುಧೆ ಹರಿದು ಬಂದಿದೆ. ಯುವಕರು ಮತ್ತು ಸಂಗೀತ ಕೇಳುಗರು ಚಿತ್ರದ ಹಾಡನ್ನು ಹೇಗೆ ಸ್ವೀಕರಿಸುತ್ತಾರೆ ಎಂದು ಕಾದು ನೋಡಬೇಕಷ್ಟೇ.. ಚಿತ್ರದ ಎಲ್ಲಾ ಹಾಡಿಗೆ ಸಾಹಿತ್ಯ ಬರೆದವರು ಗೋಪಾಲ ವಾಜಪೇಯಿಯವರು.

  1. ಅವನೇ ಮಹಾದೇವ
  ಹಾಡಿರುವವರು: ರಾಮಚಂದ್ರ ಹಡ್‍ಪದ್

  ಉತ್ತಮವಾದ ವಾದ್ಯ ಸಂಯೋಜನೆ ಹಾಗೂ ಆಲಾಪನೆಯಿಂದ ಪ್ರಾರಂಭವಾಗುವ ಗೀತೆ ಉತ್ತಮ ಗಾಯನದಿಂದ ಕೇಳುಗರನ್ನು ಸೆಳೆಯುತ್ತದೆ. ಮೃದುವಾಗಿ ಆರಂಭವಾಗಿ ಕ್ರಾಂತಿಕಾರಿಯಾಗಿ ಸಾಗುತ್ತಾ ವಿಷಾದದಿಂದ ಮುಗಿಯುವ ಗೀತೆಯ ಎಲ್ಲಾ ಭಾವಕ್ಕೂ ಅತ್ಯುತ್ತಮವಾಗಿ ದನಿ ನೀಡಿದ್ದಾರೆ ಗಾಯಕ ರಾಮಚಂದ್ರ ಹಡ್‍ಪದ್.

  ಬಾರೇ ನಿನಗೆ ನಾನು

  ಬಾರೇ ನಿನಗೆ ನಾನು

  ಹಾಡಿರುವವರು: ಸೋನು ನಿಗಮ್ ಹಾಗೂ ಅನ್ವೇಷ

  ಇಸ್ಮಾಯಿಲ್ ದರ್ಬಾರ್‍‍ ರವರ ಮಧುರವಾದ ಸಂಯೋಜನೆಯಿಂದ ಆರಂಭಗೊಳ್ಳುವ ಗೀತೆಯನ್ನು ಸೋನು ನಿಗಮ್ ಮತ್ತಷ್ಟು ಮಧುರಗೊಳಿಸುತ್ತಾರೆ. ಗಾಯಕಿ ಅನ್ವೇಷಾ ಹಿಂದೆ ಬೀಳದೆ ಗೀತೆಯನ್ನು ಎತ್ತರಕ್ಕೆ ಕೊಂಡೊಯ್ಯುತ್ತಾರೆ. ಪ್ರೇಮಿಗಳಿಬ್ಬರ ಪಿಸುಮಾತಿನ ಆಪ್ತತೆ ಇಡೀ ಗೀತೆಯಲ್ಲಿದೆ. ಸಾಹಿತ್ಯ ಅತ್ಯುತ್ತಮವಾಗಿದ್ದು, ಗಾಯನದಲ್ಲಿ ಪದಗಳು ಇನ್ನಷ್ಟು ಸ್ಪಷ್ಟತೆ ಪಡೆಯಬಹುದಾಗಿತ್ತು.

  ಧಾರ್ಮಿಕನಲ್ಲ ಅಧಾರ್ಮಿಕನಲ್ಲ

  ಧಾರ್ಮಿಕನಲ್ಲ ಅಧಾರ್ಮಿಕನಲ್ಲ

  ಹಾಡಿರುವವರು: ರಾಮಚಂದ್ರ ಹಡ್‍ಪದ್

  ರಾಮಚಂದ್ರ ಹಡ್‍ಪದ್‍ರವರ ಗಾಯನದ ಗೀತೆ ಅತ್ಯುತ್ತಮ ಸಾಹಿತ್ಯವನ್ನು ಹೊಂದಿದೆ. ಯಾವುದಕ್ಕೂ ಬಂಧಿತನಲ್ಲ ಎಂಬ ನಿರ್ಲಿಪ್ತತನ್ನು ತೋಡಿಕೊಳ್ಳುವ ಗೀತೆಗೆ ಅತ್ಯುತ್ತಮ ಸಂಗೀತ ಹಾಗೂ ವಾದ್ಯ ಸಂಯೋಜನೆ ಒದಗಿ ಬಂದಿದೆ. ಎರಡೂವರೆ ನಿಮಿಷದಲ್ಲಿ ಮುಗಿದು ಹೋಗುವ ಗೀತೆ ಇನ್ನೂ ಕೇಳಬೇಕು ಎಂಬ ಭಾವ ಉಳಿಸುತ್ತದೆ. (ಚಿತ್ರದಲ್ಲಿ: ಸಂಗೀತ ನಿರ್ದೇಶಕ ಇಸ್ಮಾಯಿಲ್ ದರ್ಬಾರ್)

  ಕಲ್ಲ ಪೂಜೆಗೆ

  ಕಲ್ಲ ಪೂಜೆಗೆ

  ಹಾಡಿರುವವರು: ರಾಮಚಂದ್ರ ಹಡ್‍ಪದ್

  "ಗುಡಿ ಚರ್ಚು ಮಸಜೀದಿಗಳ ಬಿಟ್ಟು ಹೊರಬನ್ನಿ" ಎಂಬ ಕುವೆಂಪುರವರ ಕವಿತೆಯನ್ನು ನೆನೆಪಿಸುವ ಗೀತೆ. ಜಾನಪದ ಶೈಲಿಯಲ್ಲಿರುವ ಸಂಗೀತ ಮನಸೆಳೆಯುತ್ತದೆ. ಸಾಹಿತ್ಯಕ್ಕೆ ತಕ್ಕ ಗಾಯನ ರಾಮಚಂದ್ರ ಹಡ್‍ಪದ್‍ರವರಿಂದ ಬಂದಿದೆ. ಇನ್ನಷ್ಟು ಕೇಳಬೇಕು ಎನಿಸುವ ಗೀತೆ

  ಲೀಲಾಮಯನ ಲೀಲೆಯು

  ಲೀಲಾಮಯನ ಲೀಲೆಯು

  ಹಾಡಿರುವವರು: ಸುಖವಿಂದರ್ ಸಿಂಗ್

  ಸಾಹಿತ್ಯ ಸಂಗೀತ ಅತ್ಯುತ್ತಮವಾಗಿದ್ದರೂ ಇಡೀ ಗೀತೆಯನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡು ಆವರಿಸಿಕೊಳ್ಳುವುದು ಗಾಯಕ ಸುಖವೀಂದರ್ ಸಿಂಗ್. ಶಾಸ್ತ್ರೀಯ ಸಂಗೀತದ ಎಲ್ಲಾ ಸಾಧ್ಯತೆಗಳನ್ನು ಅದರ ಸೀಮಿತ ಮಿತಿಯಲ್ಲಿ ಬಳಸಿಕೊಂಡು ಕೇಳುಗನಿಗೆ ಸಂಗೀತದ ರಸದೌತಣವನ್ನು ಸುಖವೀಂದರ್ ಕೊಡುತ್ತಾರೆ. ಉತ್ತಮ ಸಂಗೀತ ಹಾಗೂ ಉತ್ಕೃಷ್ಟ ಮಟ್ಟದ ಗಾಯನದ ರಸದೌತಣ. ಪದಗಳ ಉಚ್ಚಾರಣೆಯ ಸಣ್ಣ ಕಿರಿಕಿರಿಯನ್ನು ಮೀರುವ ಸಂಗೀತ ಗಾಯನ ಸುಧೆ.

  ಮನೆಯೆಂಬುದು

  ಮನೆಯೆಂಬುದು

  ಹಾಡಿರುವವರು: ಮಹಮದ್ ಇರ್ಫಾನ್ ಹಾಗೂ ಅನ್ವೇಷ

  ಲೀಲಾಮಯನ ಗೀತೆಯ ಗುಂಗಿನಿಂದ ಒಮ್ಮೆಲೇ ಬಿಡಿಸಿ ಕೈ ಹಿಡಿದು ಮತ್ತೆ ಯಥಾಸ್ಥಿತಿಗೆ ತರುವ ಮತ್ತೊಂದು ಮಧುರ ಗೀತೆ. ಹರಿಕೃಷ್ಣ, ಭಟ್, ಸೋನುನಿಗಮ್ ಪಾಲುದಾರಿಕೆಯ ಮಧುರ ಗೀತೆಗಳಂತೆ ಕೇಳುವ ಈ ಗೀತೆ ಮಹಮದ್ ಇರ್ಫಾನ್ ಹಾಗೂ ಅನ್ವೇಷಾರವರ ಭಾವಪೂರ್ಣ ಗಾಯನದಿಂದ ಇಷ್ಟವಾಗುತ್ತದೆ. ಪೈಪೋಟಿಯಲ್ಲಿ ಕೊನೆಗೆ ಗೆಲುವು ಇಸ್ಮಾಯಿಲ್‍ರವರ ಸಂಗೀತ ಸಂಯೋಜನೆಗೆ.

  ನಾವು ಪ್ರೇಮದ ಹುಚ್ಚರು

  ನಾವು ಪ್ರೇಮದ ಹುಚ್ಚರು

  ಹಾಡಿರುವವರು: ಅನ್ವೇಷ ಹಾಗೂ ಕವಿತಾ ಸೇಠ್

  ಹಾಡಿನ ಪ್ರಾರಂಭದಲ್ಲಿ ಮಳೆ ಸಿಡಿಲು, ಗುಡುಗುಗಳು ಹಿನ್ನಲೆಯಲ್ಲಿ ಕೇಳುತ್ತದೆ. ಮುಂದೆ ಕೇಳ ಸಿಗುವುದು ಸಹಾ ಸಂಗೀತದ ಮಳೆಯ ಸಿಂಚನ, ವಾದ್ಯ ಸಂಯೋಜನೆಯ ಮಧುರ ಗುಡುಗುಗಳು ಎದೆಯಲ್ಲಿ ಸಂತಸದ ಕಂಪನಗಳನ್ನು ಎಬ್ಬಿಸುವುದರಲ್ಲಿ ಸಂದೇಹವಿಲ್ಲ. ಸಂಪೂರ್ಣ ಸಂಗೀತಮಯವಾದ ಇಂಥ ಗೀತೆಯನ್ನು ಕನ್ನಡದಲ್ಲಿ ಕೇಳಿ ಬಹಳ ದಿನಗಳೇ ಆಗಿತ್ತೇನೋ. ಅನ್ವೇಷಾ ಹಾಗೂ ಕವಿತಾ ಸೇಟ್ ರವರ ಗಾಯನದ ಬಗ್ಗೆ ಹೆಚ್ಚೇನೂ ಹೇಳಬೇಕಾಗಿಲ್ಲ. ಸಂಯೋಜನೆಯೊಡನೆ ಹಾಡಿದರಷ್ಟೇ ಸಾಕು ಎನ್ನಬಹುದೇನೋ.

  ಶಾಸ್ತ್ರವನೋದಿ

  ಶಾಸ್ತ್ರವನೋದಿ

  ಹಾಡಿರುವವರು: ರಾಮಚಂದ್ರ ಹಡ್‍ಪಡ್

  ಮತ್ತೊಂದು ರಾಮಚಂದ್ರ ಹಡ್‍ಪದ್ ಗಾಯನದ, ಮತ್ತೊಂದು 2.30ನಿಮಿಷದೊಳಗೆ ಮುಗಿಯುವ ಕಿರುಗೀತೆ. ಮತ್ತೊಂದು ಹೃದಯ ಹೊಕ್ಕು ಸಂಗೀತದ ತರಂಗಗಳನ್ನು ಎಬ್ಬಿಸುವ ಗೀತೆ. ಹೆಚ್ಚೇನು ಹೇಳದೆ ಸುಮ್ಮನೆ ಕೂತು ಅಸ್ವಾದಿಸಬಹುದಾದ ಗೀತೆ.

  ವಿಶ್ವಾಸದಲ್ಲಿ

  ವಿಶ್ವಾಸದಲ್ಲಿ

  ಹಾಡಿರುವವರು: ಜಾವೇದ್ ಆಲಿ

  ಜಾವೇದ್ ಆಲಿ ಗಾಯನದಲ್ಲಿ ಮೂಡಿ ಬಂದಿರುವ ಗೀತೆ ಅರ್ಥಪೂರ್ಣ ಸಾಹಿತ್ಯದಿಂದ ಗಮನ ಸೆಳೆಯುತ್ತದೆ. ಮಾಧುರ್ಯ ಹಾಗೂ ಶಕ್ತಿಯುತವಾದ ಸಂಗೀತ ಸಂಯೋಜನೆಯಿಂದ ಲವಲವಿಕೆ ತುಂಬಿದ ಗೀತೆ. ಸಂಗೀತ ಪ್ರಿಯರಿಗೆ ಇಷ್ಟವಾಗುವುದರಲ್ಲಿ ಸಂದೇಹವಿಲ್ಲ.

  English summary
  Audio review of Shiva Rajkumar starer, Narendra Babu directed Santheyalli Nintha Kabira. Noted Musician Ismail Darbar has composed the music.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X