»   » ಸುದೀಪ್ ಅಭಿನಯದ ’ರನ್ನ’ ಧ್ವನಿಸುರುಳಿ ವಿಮರ್ಶೆ

ಸುದೀಪ್ ಅಭಿನಯದ ’ರನ್ನ’ ಧ್ವನಿಸುರುಳಿ ವಿಮರ್ಶೆ

By: ಪ್ರಶಾಂತ್ ಇಗ್ನೇಷಿಯಸ್
Subscribe to Filmibeat Kannada

ವಿಕ್ಟರಿ, ಅಧ್ಯಕ್ಷದಂತಹ ಯಶಸ್ವಿ ಚಿತ್ರಗಳನ್ನು ಕೊಟ್ಟ ನಂದ ಕಿಶೋರ್ ಈ ಬಾರಿ ಅಭಿನಯ ಚಕ್ರವರ್ತಿ ಸುದೀಪ್ ರವರ ಜೊತೆ 'ರನ್ನ' ಸಿನಿಮಾದ ಮೂಲಕ ತೆರೆಗೆ ಅಪ್ಪಳಿಸಲು ತಯಾರಾಗಿ ಬರುತ್ತಿದ್ದಾರೆ.

ಬಹು ದಿನಗಳ ನಂತರ ಬರುತ್ತಿರುವ ಕಿಚ್ಚ ಸುದೀಪ್ ಚಿತ್ರ ಇದಾಗಿರುವುದರಿಂದ ಅಭಿಮಾನಿಗಳ ಕಾತರ ನಿರೀಕ್ಷೆ ಸಹಾ ಮುಗಿಲು ಮುಟ್ಟಿದೆ.

ಚಿತ್ರದ ಟೀಸರ್, ಟ್ರೈಲರ್ ಗಳು ಈ ನಿರೀಕ್ಷಯನ್ನು ದ್ವಿಗುಣಗೊಳಿಸಿರುವ ಬೆನ್ನಲ್ಲೇ ಹಾಡುಗಳು ಚಿತ್ರ ರಸಿಕರ ಮುಂದಿದೆ. ಹರಿಕೃಷ್ಣರ ಸಾರಥ್ಯದ ಹಾಡುಗಳು ಹೇಗಿವೆ, ಮುಂದೆ ಓದಿ.(ಬಬ್ಬರ್ ಶೇರ್ ಆಗಿ ರನ್ನ, ದಾರಿ ಬಿಡಿ)

ಬಬ್ಬರ್ ಶೇರ್

ಗಾಯಕರು: ಶ್ರೀ ದೇವಿ ಪ್ರಸಾದ್
ಸಾಹಿತ್ಯ: ಡಾ. ವಿ ನಾಗೇಂದ್ರ ಪ್ರಸಾದ್

ಉತ್ತಮವಾದ ಕನ್ನಡ ಸಾಹಿತ್ಯದೊಂದಿಗೆ ಆರಂಭವಾಗುವ ಗೀತೆ ಇದ್ದಕ್ಕಿದ್ದಂತೆ ಹಿಂದಿಗೆ ಹೊರಳಿ ಇಂಗ್ಲಿಷ್ ಪದಗಳ ನಡುವೆ ಸಾಗುವುದು ನಿರಾಸೆ ಮೂಡಿಸಿದರೂ, ಉತ್ತಮ ಸಂಗೀತ ಹಾಗೂ ವಾದ್ಯ ಸಂಯೋಜನೆ ಗೀತೆಯನ್ನು ಎತ್ತಿ ಹಿಡಿಯುತ್ತದೆ. ನಾಗೇಂದ್ರ ಪ್ರಸಾದರ ಸಾಹಿತ್ಯದಲ್ಲಿ ನಾಯಕ ಗುಣಗಾನಕ್ಕೆ ಹೆಚ್ಚಿನ ಪ್ರಾಮುಖ್ಯತೆ ದೊರಕಿದೆ. ಮುಂದೆ ಓದಿ..

ಸೀರೆಲಿ ಹುಡುಗೀನ

ಗಾಯಕರು: ವಿಜಯ್ ಪ್ರಕಾಶ್
ಸಾಹಿತ್ಯ: ಯೋಗರಾಜ್ ಭಟ್

ಸರಳ ಸುಮಧುರ ಸಂಗೀತ ಸಂಯೋಜನೆ ಇರುವ ಗೀತೆ, ಖುದ್ದು ಸುದೀಪರೇ ಹಾಡಿದರೇನೋ ಎನ್ನುವಷ್ಟು ಮಟ್ಟಿಗೆ ವಿಜಯ್ ಪ್ರಕಾಶರ ಧ್ವನಿ ಹೊಂದಿಕೆಯಾಗಿದೆ. ಯೋಗರಾಜ್ ಭಟ್ಟರ ಸಾಹಿತ್ಯವನ್ನು ಹೇಗೆ ಹಾಡಿದರೆ ಚೆಂದ ಎಂಬುದನ್ನು ಕರಗತ ಮಾಡಿಕೊಂಡಿರುವ ವಿಜಯ್ ಸೊಗಸಾಗಿ ಹಾಡಿದ್ದಾರೆ. ಭಟ್ಟರ ಸಾಹಿತ್ಯ ಎಂದಿನಂತೆ ಇದೆ.

ತಿಥಲಿ ತಿಥಲಿ

ಗಾಯಕರು: ಟಿಪ್ಪು, ಸಂಗೀತ ರವೀಂದ್ರನಾಥ್
ಸಾಹಿತ್ಯ: ಕೆ ಕಲ್ಯಾಣ್

ಟಿಪ್ಪು ಹಾಗೂ ಸಂಗೀತರವರು ಹಾಡಿರುವ ಈ ಗೀತೆ ಆರಕ್ಕೇರದೆ ಮೂರಕ್ಕಿಳಿಯದಂತಿದೆ ಕಲ್ಯಾಣರ ಸಾಹಿತ್ಯವೂ ಬದಲಾದ ಇಂದಿನ ಹವಾಗುಣಕ್ಕೆ ಹೊಂದಿಕೊಂಡಂತಿದೆ. ಸಾಧಾರಣ ಯುಗಳ ಗೀತೆಯಾಗಿದ್ದೂ ತೆರೆಯ ಮೇಲೆ ಹೇಗೆ ಇರಬಹುದು ಎಂದು ಕಾದು ನೋಡ ಬೇಕಾಗಿದೆ.

What to do?

ಗಾಯಕರು : ವಿಜಯ್ ಪ್ರಕಾಶ್
ಸಾಹಿತ್ಯ: ಯೋಗರಾಜ್ ಭಟ್

ಹರಿ, ವಿಜಯ್ ಹಾಗೂ ಭಟ್ಟರ ಸಮಾಗಮದ ಮತ್ತೊಂದು ಗೀತೆ. ಗುಂಡು ಹಾಕುತ್ತಾ, ಹುಡುಗೀರ ಬಗೆಗಿನ ಹುಡುಗರ ವಿರಹದ ಗೀತೆಗಳ ಸಾಲಿಗೆ ಮತ್ತೊಂದು ಸೇರ್ಪಡೆ. ನೃತ್ಯಕ್ಕೆ, ಅಭಿಮಾನಿಗಳಿಗೆ ಹೇಳಿ ಮಾಡಿಸಿದ ಗೀತೆ.

ಜಗದೋದ್ಧಾರನ

ಗಾಯಕರು : ಕಾರ್ತಿಕ್, ವಾಣಿ ಹರಿಕೃಷ್ಣ
ಮೂಲ ಸಾಹಿತ್ಯ: ಪುರಂದರ ದಾಸರು

ಪುರಂದರ ದಾಸರ ಪ್ರಸಿದ್ಧ ಗೀತೆಗಳಲ್ಲಿ ಒಂದಾದ, ಮೈ ಆಟೋಗ್ರಾಫ್ ಚಿತ್ರದಲ್ಲಿ ಬಳಕೆಯಾದ ಗೀತೆ ಮತ್ತೆ ಇಲ್ಲಿ ಕೇಳ ಸಿಗುತ್ತದೆ. ಈ ಬಾರಿ ಕಾರ್ತಿಕ್ ಹಾಗೂ ವಾಣಿ ಹರಿ ಕೃಷ್ಣರ ಧ್ವನಿಯಲ್ಲಿ ಮೂಡಿ ಬಂದಿರುವ ಗೀತೆ ಹಿಂದಿಗಿಂತಲೂ ಹೆಚ್ಚು ಆಪ್ತವಾಗುತ್ತದೆ. ಚಿತ್ರದಲ್ಲಿ ಹೇಗೆ ಎಲ್ಲಿ ಮೂಡಿ ಬಂದಿರಬಹುದೆಂಬ ಕುತೂಹಲ ಮೂಡಿಸುತ್ತದೆ.

ರನ್ನ ಥೀಮ್

ಕೊನೆಯಲ್ಲಿ ಬರುವ ರನ್ನ ಥೀಮ್ ಹರಿ ಕೃಷ್ಣರ ಹಳೆಯ ಥೀಮ್ ಗೀತೆಗಳನ್ನು ನೆನಪಿಸುತ್ತದೆ. ನಾಯಕನ ಎಂಟ್ರಿ ಅಥವಾ ಅವನ ಕಾರ್ಯ ವೈಖರಿಯನ್ನು ಪರಿಚಯಿಸುವ ಎಂದಿನ ಥೀಮ್ ಗೀತೆಗಳಂತೆ ಇಲ್ಲಿಯೂ ಲವಲವಿಕೆ ಇದೆ.

English summary
Audio review of Kichcha Sudeep starer Kannada movie Ranna. Movie directed by Nanda Kishore and music composed by V Harikrishna.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada