»   » ಯಶ್ ಅಭಿನಯದ 'ಮಾಸ್ಟರ್ ಪೀಸ್' ಧ್ವನಿಸುರುಳಿ ವಿಮರ್ಶೆ

ಯಶ್ ಅಭಿನಯದ 'ಮಾಸ್ಟರ್ ಪೀಸ್' ಧ್ವನಿಸುರುಳಿ ವಿಮರ್ಶೆ

By: ಪ್ರಶಾಂತ್ ಇಗ್ನೇಷಿಯಸ್
Subscribe to Filmibeat Kannada

ಈ ಡಿಸೆಂಬರ್ ನಿಜಕ್ಕೂ ಕನ್ನಡ ಚಿತ್ರರಂಗ ಕಾತುರದಿಂದ ನೋಡುತ್ತಿರುವ ತಿಂಗಳಾಗಿದೆ. ಅನೇಕ ದೊಡ್ಡ ಚಿತ್ರಗಳು ಬಿಡುಗಡೆಗೆ ಕಾದಿವೆ. ಅದರಲ್ಲಿ ಯಶ್ ಅಭಿನಯದ ಮಾಸ್ಟರ್ ಪೀಸ್ ಚಿತ್ರ ಕೂಡಾ ಒಂದು.

ಕಳೆದ ವರ್ಷ ಬಿಡುಗಡೆಗೊಂಡು ಅಪಾರ ಯಶಸ್ಸು ಪಡೆದ 'ಮಿಸ್ಟರ್ ಎಂಡ್ ಮಿಸಸ್ ರಾಮಾಚಾರಿ' ಚಿತ್ರದ ಗುಂಗಿನಿಂದ ಕನ್ನಡ ಚಿತ್ರರಂಗ ಇನ್ನೂ ಹೊರಬಂದಿಲ್ಲ.

ಅಂತಹ ಯಶಸ್ಸು ಪಡೆದ ಚಿತ್ರದ ನಾಯಕನ ಮುಂದಿನ ಚಿತ್ರ ಎಂದ ಮೇಲೆ ಬೆಟ್ಟದಷ್ಟು ನಿರೀಕ್ಷೆ ಸಹಜವೇ.

ಅದರಲ್ಲೂ ಮಂಜು ಮಾಂಡವ್ಯರಂತಹ ಬರಹಗಾರ, ನಿರ್ದೇಶನದ ಕುರ್ಚಿಯಲ್ಲಿ ಕೂತಾಗ ಚಿತ್ರದ ಅಭಿರುಚಿಯ ಬಗ್ಗೆಯೂ ಭರವಸೆ ಮೂಡುತ್ತದೆ. (ಅಭಿಮಾನಿಗಳಿಗೆ ಯಶ್ ಕ್ಷಮೆ ಕೇಳಿದ್ದು ಯಾಕೆ)

ಇವುಗಳ ನಡುವೆ ಚಿತ್ರದ ಹಾಡುಗಳು ಬಿಡುಗಡೆಗೊಂಡು ಜನರನ್ನು ತಲುಪಿವೆ. ಮತ್ತೊಮ್ಮೆ ಹರಿಕೃಷ್ಣ, ಯಶ್ ಚಿತ್ರದ ಹಾಡುಗಳ ಸಾರಥ್ಯವಹಿಸಿಕೊಂಡಿದ್ದಾರೆ.

ಹಾಡುಗಳು ಹೇಗಿವೆ, ಸ್ಲೈಡಿನಲ್ಲಿ..

ಅಣ್ಣಂಗ್ ಗೆ ಲವ್ ಆಗಿದೆ

ಹಾಡಿರುವವರು : ಯಶ್, ಚಿಕ್ಕಣ್ಣ
ಸಾಹಿತ್ಯ : ಮಂಜು ಮಾಂಡವ್ಯ

ರಾಮಾಚಾರಿ ಚಿತ್ರದಲ್ಲಿ ಹಾಡಿದ ಹಾಡು ಸಿಕ್ಕಾಪಟ್ಟೆ ಜನಪ್ರಿಯ ಆಗಿದ್ದಕ್ಕೋ ಏನೋ, ಯಶ್ ಗೆ ಮತ್ತೆ ಹಾಡೋಕೆ ಲವ್ ಆದಂಗಿದೆ. ಮಂಜುರವರ ಸಾಹಿತ್ಯದಲ್ಲಿ ಕನ್ನಡ ಪದಗಳ ಜೊತೆ ಇಂಗ್ಲಿಷ್ ಪದಗಳು ಪೈಪೋಟಿಗೆ ಬಿದ್ದು ಗೆದ್ದಿವೆ. ಸಾಹಿತ್ಯದ ಮೇಲೆ ಹರಿಕೃಷ್ಣರವರ ಸಂಗೀತವೂ ಅಬ್ಬರಿಸಿದೆ. ಇವುಗಳ ನಡುವೆ ಯಶ್ ಮತ್ತು ಚಿಕ್ಕಣ್ಣ ಗಾಯನ ಬಂದು ಹೋಗುತ್ತಿದೆ. ಚಿಕ್ಕಣ್ಣ ಅಭಿನಯದತ್ತ ಗಮನಕೊಟ್ಟರೆ ಒಳ್ಳೆಯದು ಅನ್ನೋದು ಸಲಹೆ. ನೂರಾರು ಸಹ ಕಲಾವಿದರನ್ನು ಬಳಸಿಕೊಂಡು ಅಭಿಮಾನಿಗಳಿಗೆ ಭರ್ಜರಿ ನೃತ್ಯದ ರಸದೌತಣ ನೀಡುವ ಮುನ್ಸೂಚನೆ ಈ ಹಾಡಿನ ಮೂಲಕ ಕಾಣುತ್ತಿದೆ.

ಐ ಕಾಂಟ್ ವೇಟ್ ಬೇಬಿ

ಹಾಡಿರುವವರು : ಟಿಪ್ಪು, ಇಂದು ನಾಗರಾಜ್
ಸಾಹಿತ್ಯ : ನರ್ತನ್

ನೃತ್ಯಕ್ಕೆ ಹೇಳಿ ಮಾಡಿಸಿದ ಸಂಗೀತಕ್ಕೆ ನರ್ತನ್ ರವರ ಕನ್ನಡ ಸಾಹಿತ್ಯವಿದೆ, ಜೊತೆಗೆ ಇಂಗ್ಲಿಷ್ ಪದಗಳೂ ಸರಿಸಮಾನವಾಗಿವೆ. ಟಿಪ್ಪು ಇಂತಹ ಗಾಯನದಲ್ಲಿ ಎತ್ತಿದ ಕೈ. ಇಂದು ನಾಗರಾಜ್ ಕೂಡಾ ಹಿಂದೆ ಬಿದ್ದಿಲ್ಲ. ಇಷ್ಟು ಬಿಟ್ಟರೆ ಅಂತಹ ವಿಶೇಷತೆ ಏನೂ ಇಲ್ಲ.

KD ನಂ. 1

ಹಾಡಿರುವವರು : ಟಿಪ್ಪು, ಸಂಗೀತ ರವೀಂದ್ರನಾಥ್
ಸಾಹಿತ್ಯ : ಮಂಜು ಮಾಂಡವ್ಯ

ನಾ ಅಲೆಕ್ಸಾಂಡರಾ.. ನಾ ನಿನ್ನ ಲವರಾ.. ಎಂಬ ಸಾಲುಗಳಿರುವ ಸಾಹಿತ್ಯದ ಹಾಡು. ಸಾಮಾನ್ಯ ಸಾಹಿತ್ಯದ ನಡುವೆ ಹರಿಕೃಷ್ಣರ ಎಂದಿನ ಬೀಟ್ಸ್. ಕೋರಸ್ ಎಲ್ಲವೂ ಇದೆ. ಟಿಪ್ಪು ಮತ್ತು ಸಂಗೀತ ಇಬ್ಬರ ಧ್ವನಿಯಲ್ಲೂ ಲವಲವಿಕೆ ಇದೆ. ಸಾಹಿತ್ಯ ಕೇಳುವಂತಹ ಸಂಯಮದ ಸಂಗೀತವಿದೆ. ಕೇ..ಡಿ ನಂ ಒನ್ ಎಂಬ ಕೋರಸ್ ಇಡೀ ಗೀತೆಯನ್ನು ತುಂಬಿಕೊಂಡಿದೆ.

ಜಾಗೋರೆ.. ಜಾಗೋರೆ

ಹಾಡಿರುವವರು : ಕುನಾಲ್ ಗಾಂಜಾವಾಲ
ಸಾಹಿತ್ಯ : ಗೌಸ್ ಪೀರ್

ಮಲಗಿರುವ ಸಿಂಹದಂತಹ ವೀರನನ್ನು ಹೋರಾಟಕ್ಕೆ ಕರೆ ನೀಡುವ ಆಶಯದ ಈ ಗೀತೆ ಚಿತ್ರದ ಇತರ ಗೀತೆಗಳಿಗಿಂತ ಭಿನ್ನವಾಗಿದೆ. ಕುನಾಲ್ ರವರ ಗಾಯನ ಹಾಗೂ ಹರಿಕೃಷ್ಣರ ಸಂಗೀತದಲ್ಲಿ ರಭಸವಿದೆ. ಗೌಸ್ ಪೀರ್ ಆವರ ಸಾಹಿತ್ಯದಲ್ಲಿ ಗಾಂಭೀರ್ಯವಿದ್ದು, ಚಿತ್ರದಲ್ಲಿ ಮತ್ತು ಕಥೆಯಲ್ಲಿ ಈ ಹಾಡಿನ ಪಾತ್ರವೇನು ಎಂದು ಕೆರಳಿಸಿರುವ ಗೀತೆ.

ಅಟೆನ್ಸನ್ ಪ್ಲೀಸ್

ಹಾಡಿರುವವರು : ರಂಜಿತ್, ರಾಹುಲ್ ನಂಬಿಯಾರ್, ನವೀನ್ ಮಾಧವ್
ಸಾಹಿತ್ಯ : ನರ್ತನ

ನರ್ತನ್ ಅವರ ಸಾಹಿತ್ಯದ ಪ್ರತಿ ಪದವೂ ನಾಯಕನ ಗುಣಗಾನದಿಂದ ತುಂಬಿ ಹೋಗಿದೆ. ಗೀತೆ ಮುಂದುವರಿಯುತ್ತಿದ್ದಂತೇ, ಗುಣಗಾನಕ್ಕಿಂತ ಎದುರಾಳಿಗೆ ಎಚ್ಚರಿಕೆ ನೀಡುತ್ತಾ "Attention Please" ಎನ್ನುತ್ತದೆ ಗೀತೆ. ಹರಿಕೃಷ್ಣರ ಸಂಗೀತದಲ್ಲಿ ಈ ರೀತಿಯ ಗೀತೆಗೆ ಬೇಕಾದ ಶಕ್ತಿಯಿದೆ. ರಂಜಿತ್, ರಾಹುಲ್, ನವೀನ್ ಸುಂದರವಾಗಿ ಹಾಡಿ ಮೆರುಗು ತಂದಿದ್ದಾರೆ.

English summary
Audio review of Yash starer and Manju Mandavya directed Master Piece. Album has five songs and V Harikrishna has composed the songs.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada