»   » ಬಹುನಿರೀಕ್ಷಿತ ’ಮಾಣಿಕ್ಯ’ ಧ್ವನಿಸುರುಳಿ ವಿಮರ್ಶೆ

ಬಹುನಿರೀಕ್ಷಿತ ’ಮಾಣಿಕ್ಯ’ ಧ್ವನಿಸುರುಳಿ ವಿಮರ್ಶೆ

By: ಪ್ರಶಾಂತ್ ಇಗ್ನೇಷಿಯಸ್
Subscribe to Filmibeat Kannada

ಕನ್ನಡದ ಇಬ್ಬರೂ ಸ್ಟಾರ್ ನಟರ ಸಂಗಮದೊಂದಿಗೆ ಮಲ್ಟಿ ಸ್ಟಾರ್ ಚಿತ್ರಗಳ ಕೊರತೆಯನ್ನು ನೀಗಿಸಲು ಬರುತ್ತಿರುವ 'ಮಾಣಿಕ್ಯ' ಅನೇಕ ರೀತಿಗಳಲ್ಲಿ ಒಂದು ವಿಶೇಷ ಚಿತ್ರವೆನ್ನಲು ಅಡ್ಡಿಯಿಲ್ಲ.

ನಿರ್ದೇಶನದಲ್ಲಿ ಪಳಗಿದ ಕೈಯೆಂದೇ ಸಾಬೀತು ಮಾಡುತ್ತಿರುವ ಸುದೀಪ್ ನಿರ್ದೇಶನದ ಚಿತ್ರ ಎನ್ನುವುದು ಒಂದು ಕಡೆಯಾದರೆ, ಕನ್ನಡದ ಚಿತ್ರಗಳಿಗೆ ತಾಂತ್ರಿಕವಾಗಿ ಮಾಂತ್ರಿಕ ಸ್ಪರ್ಶ ನೀಡಿದ ರವಿಚಂದ್ರನ್ ಈ ಚಿತ್ರದಲ್ಲಿ ನಟಿಸುತ್ತಿರುವುದು ಇನ್ನೊಂದು ವಿಶೇಷ. ಅದರಲ್ಲೂ ರವಿ ತಮ್ಮ ರೊಮ್ಯಾಂಟಿಕ್ ಪಾತ್ರಕ್ಕೆ ವಿಭಿನ್ನವಾದ ತಂದೆಯ ಪಾತ್ರದಲ್ಲಿ ಕಾಣಿಸುಕೊಳ್ಳುತ್ತಿರುವುದು ಮತ್ತೊಂದು ವಿಶೇಷ.

ಇದೊಂದು ದೊಡ್ಡ ಬದಲಾವಣೆಯ ಸಂಕೇತ. ಇದು ಸುದೀಪ್ ಚಿತ್ರವೆಂದರೂ ರವಿಚಂದ್ರನ್ ಇದ್ದ ಮೇಲೆ ಅದಕ್ಕೆ ಹಾಡಿನ ಮೆರಗು ಅನಿವಾರ್ಯವೇ. "ಮಾಣಿಕ್ಯ" ಚಿತ್ರದ ಹಾಡುಗಳು ಹೇಗಿವೆ. ಅರ್ಜುನ್ ಜನ್ಯರ ಸಂಗೀತದ ಸ್ಪರ್ಷ ಹೇಗಿದೆ ಎಂಬುದರತ್ತ ಒಂದು ನೋಟ. (ಮಾಣಿಕ್ಯ ಗ್ಯಾಲರಿ)

Rating:
3.5/5

'ನಿನ್ನ ಹಿಂದೆ' ಉತ್ತಮವಾದ ಸಂಗೀತ

ಸಾಹಿತ್ಯ: ಜಯಂತ್ ಕಾಯ್ಕಿಣಿ
ಹಾಡಿರುವವರು : ಕಾರ್ತಿಕ್

ಕಾರ್ತಿಕ್ ಹಾಡಿರುವ ಇಡೀ ಗೀತೆಯಲ್ಲಿ ಅರ್ಜುನ ಜನ್ಯರ ಸ್ಪರ್ಷ ಎದ್ದು ಕಾಣುತ್ತದೆ. ಉತ್ತಮವಾದ ಸಂಗೀತ ಹಾಗೂ ವಾದ್ಯ ಸಂಯೋಜನೆಯಿಂದ ಮೆಲಕು ಹಾಕುವಂತಿರುವ ಈ ಗೀತೆಯಲ್ಲಿ ಜಯಂತ್ ಕಾಯ್ಕಣಿಯವರ ಸಾಹಿತ್ಯ ಕಾರ್ತಿಕರ ಧ್ವನಿಯಲ್ಲಿ ತೇಲಿ ಹೋದಂತೆ ಭಾಸವಾಗುತ್ತದೆ. ಕೊನೆಗೆ ಅರ್ಜುನ್ ರಿಂದಾಗಿಯೇ ಹಾಡು ಇಷ್ಟವಾಗುತ್ತದೆ.

ಸುದೀಪ್ ಅಭಿಮಾನಿಗಳಿಗೆ

ಸಾಹಿತ್ಯ: ಯೋಗರಾಜ್ ಭಟ್
ಹಾಡಿರುವವರು : ವಿಜಯ್ ಪ್ರಕಾಶ್

ಹುಚ್ಚ ನಾ ಈ ಹಾಡು ಸುದೀಪ್ ಅಭಿಮಾನಿಗಳಿಗೆ ಹೇಳಿ ಮಾಡಿಸಿದಂಥ ಗೀತೆ. ಯೋಗರಾಜ ಭಟ್ಟರ ಎಂದಿನ ತುಂಟ ಸಾಹಿತ್ಯಕ್ಕೆ ಅರ್ಜುನ್ ಭರ್ಜರಿ ಸಂಗೀತ ನೀಡಿದ್ದಾರೆ. ನಾಯಕನ ಹೊಗಳಿಕೆ, ಡ್ಯಾನ್ಸ್, ಶಿಳ್ಳೆಗೆ ಭಾರಿ ಸ್ಕೋಪ್ ಇರುವ ಗೀತೆಯಾಗಿರುವುದರಿಂದ ತೆರೆ ಮೇಲೆ ಹೇಗಿರಬಹುದೆಂಬ ಕುತೂಹಲ ಕೆರಳಿಸುವ ಗೀತೆ.

ಮಾಮು ಮಾಮು

ಸಾಹಿತ್ಯ: ಕವಿರಾಜ್
ಹಾಡಿರುವವರು : ವಿಜಯ್ ಪ್ರಕಾಶ್, ಪ್ರಿಯಾ ಹಿಮೇಶ್

ಸುದೀಪ್ ಹಾಗೂ ಅವರ ಚಿತ್ರಗಳ ಅನೇಕ ಉಲ್ಲೇಖಗಳು ಸಿಗುವ ಅರ್ಜುನರ ಎಂದಿನ ಶೈಲಿಯ ಕವಿರಾಜ್ ಸಾಹಿತ್ಯದ ಗೀತೆ. ಪ್ರಿಯಾ ಹಿಮೇಶ್ ಜೊತೆ ಧ್ವನಿಗೂಡಿಸಿರುವ ವಿಜಯ ಪ್ರಕಾಶ್ ಈ ರೀತಿಯ ಹಾಡಿಗೆ ಬೇಕಾದ ತಕ್ಕ ಪಟ್ಟುಗಳೊಂದಿಗೆ ಹಾಡಿಗೆ ವಿಶೇಷತೆಯನ್ನು ಕೊಟ್ಟಿದ್ದಾರೆ.

ಶ್ಲೋಕದಿಂದ ಆರಂಭವಾಗುವ ಗೀತೆ

ಸಾಹಿತ್ಯ: ಡಾ. ನಾಗೇಂದ್ರ ಪ್ರಸಾದ್
ಹಾಡಿರುವವರು : ಮಾಲತಿ

ಪಂಟರ ಪಂಟ ಎನ್ನುವ ಈ ಹಾಡು ಶ್ಲೋಕದಿಂದ ಆರಂಭವಾಗಿ ಶ್ಲೋಕದಿಂದಲೇ ಮುಗಿಯುವ ಬಿಟ್ ಗೀತೆಯ ನಡುವೆ ನಾಗೇಂದ್ರ ಪ್ರಸಾದರ ಸಾಹಿತ್ಯವಿದ್ದರೂ ಇಡೀ ಗೀತೆಯನ್ನು ಆವರಿಸಿಕೊಂಡಿರುವುದು ಅರ್ಜುನ ಜನ್ಯರ ವಾದ್ಯ ಸಂಗೀತವೇ. ಮಾಣಿಕ್ಯ ಬರುತ್ತಿದ್ದಾನೆ ಎಂಬುದನ್ನು ಅಬ್ಬರದಿಂದ ಸಾರುವ, ಮುನ್ಸೂಚನೆ ಕೊಡುವ ಗೀತೆ.

ಹಿಂದಿ ಸಾಹಿತ್ಯವೂ ಇರುವ ’ಜೀವ ಜೀವ’

ಸಾಹಿತ್ಯ: ಕೆ ಕಲ್ಯಾಣ್
ಹಾಡಿರುವವರು : ಶಂಕರ್ ಮಹಾದೇವನ್

ಅರ್ಜುನ್ ಜನ್ಯ, ಶಂಕರ್ ಮಹದೇವನ್ ಹಾಗೂ ಕಲ್ಯಾಣ್ ಕಾಂಬಿನೇಶನಿನ ಮತ್ತೊಂದು ಗೀತೆ. ಮತ್ತೆ ನಾಯಕನ ಗುಣಗಾನ. ಸಂಗೀತ ನಿರ್ದೇಶಕ, ಗಾಯಕ ಹಾಗೂ ಸಾಹಿತಿ ಎಲ್ಲರೂ ಈ ರೀತಿಯ ಗೀತೆಗಳಲ್ಲಿ ಪರಿಣಿತರಾದ್ದರಿಂದ ಸುಲಭವಾಗಿ ಸುಲಲಿತವಾಗಿ ಕೇಳಿಸಿಕೊಂಡು ಹೋಗುವ ಗೀತೆ.

ಜೀನ ಜೀನ ಯಾ

ಸಾಹಿತ್ಯ: ಡಾ. ನಾಗೇಂದ್ರ ಪ್ರಸಾದ್
ಹಾಡಿರುವವರು : ಶಾನ್

ಅರ್ಜುನ್ ಜನ್ಯರ ಗೀತೆಗಳಲ್ಲಿ ಹಾಸು ಹೊಕ್ಕಾಗಿರುವ ಹಿಂದಿ ಸಾಹಿತ್ಯ ಇಲ್ಲಿಯೂ ಸಾಕಷ್ಟು ಕೇಳ ಸಿಗುತ್ತದೆ. ಕೋರಸ್ ನಲ್ಲಿ ಬರುವ ಇಂಗ್ಲಿಷ್ ಸಾಹಿತ್ಯದ ನಂತರ ಬರುವ ಕಲ್ಯಾಣರ ಕನ್ನಡ ಪದಗಳ ಸಾಹಿತ್ಯ ಹಾಡನ್ನು ಬಹುಭಾಷಾ ಗೀತೆಯನ್ನಾಗಿ ಪರಿವರ್ತಿಸುತ್ತದೆ.

ಸುದೀಪ್, ರವಿ ಹೆಸರನ್ನು ಬಳಸಿಕೊಂಡ ಸಾಹಿತ್ಯ

ಸಾಹಿತ್ಯ: ಡಾ. ನಾಗೇಂದ್ರ ಪ್ರಸಾದ್
ಹಾಡಿರುವವರು : ಅರ್ಜುನ್ ಜನ್ಯ

ನಲ್ಲ ಮಲ್ಲ ಈ ಹಾಡು ಸುದೀಪ್ ಹಾಗೂ ರವಿಚಂದ್ರನರ ಚಿತ್ರಗಳ ಹೆಸರನ್ನೇ ಬಳಸಿಕೊಂಡೇ ಸಾಹಿತ್ಯ ನೀಡಿರುವ ನಾಗೇಂದ್ರ ಪ್ರಸಾದ್ ರ ಈ ಗೀತೆ ನಾಯಕರನ್ನು ಪರಿಚಯಿಸುತ್ತಾ, ಹೊಗಳುತ್ತಾ, ಅವರ ಗುಣಗಳನ್ನು ವಿಜೃಂಭಿಸುತ್ತಾ ಸಾಗುತ್ತದೆ. ಅರ್ಜುನ್ ಜನ್ಯರದು ಎಂದಿನಂತಹ ಸಂಗೀತವೇ. ಮುಂದೆ ಇನ್ನೇನು ಎಂದು ಕೊಳ್ಳುತ್ತಿದಂತೆ ತಟ್ಟನೆ ಹಾಡು ಮುಗಿದು ಹೋಗುತ್ತದೆ.

ಬೆಳಕೇ ಬೆಳಕೇ

ಸಾಹಿತ್ಯ: ಡಾ. ನಾಗೇಂದ್ರ ಪ್ರಸಾದ್
ಹಾಡಿರುವವರು : ಶಂಕರ್ ಮಹಾದೇವನ್

ನಾಗೇಂದ್ರ ಪ್ರಸಾದರ ಸಾಹಿತ್ಯದ ಮತ್ತೊಂದು ಸಣ್ಣ ಬಿಟ್. ಉತ್ತಮವಾದ ಸಂಗೀತ, ಮಾಧುರ್ಯ ಹಾಗೂ ಅಷ್ಟೇ ಉತ್ತಮವಾದ ಶಂಕರ್ ಮಹದೇವನ್ ರವರ ಗಾಯನದಿಂದಾಗಿ ಹಾಡು ನೆನಪಿನಲ್ಲಿ ಉಳಿಯುತ್ತದೆ.

ಮಣಿ ಮಣಿ ಮಾಣಿಕ್ಯ

ಸಾಹಿತ್ಯ: ಕವಿರಾಜ್
ಹಾಡಿರುವವರು : ಜಿ ವಿಜಯ್ ಬಾಬು

ಊರನ್ನು ಕಾಯುವ ರಕ್ಷಿಸುವ ಮಾಣಿಕ್ಯನ ಗುಣಗಾನ ಮಾಡುವ ಮತ್ತೊಂದು ಗೀತೆಗೆ ಸಾಹಿತ್ಯ ಒದಗಿಸುವ ಅವಕಾಶ ಸಿಕ್ಕಿರುವುದು ಕವಿರಾಜರಿಗೆ. ಹಾಡುವ ಅದೃಷ್ಟ ವಿಜಯ್ ಬಾಬು ರವರಿಗೆ ಸಿಕ್ಕಿದ್ದು ಅದನ್ನು ಚೆನ್ನಾಗಿಯೇ ಉಪಯೋಗಿಸಿಕೊಂಡಿದ್ದಾರೆ. ಅರ್ಜುನ್ ರವರದೇ ಇನ್ನಾವುದೋ ಗೀತೆಯಂತೆಯೇ ಅನಿಸಿದರೂ ಇಷ್ಟವಾಗುವ ಗೀತೆ.

English summary
Audio review of Ravichandran and Sudeep starer Maanikya. Arjun Janya composed the music and album has nine songs.
Please Wait while comments are loading...