»   » 'ಜಸ್ಟ್ ಮಾತ್ ಮಾತಲ್ಲಿ' ಧ್ವನಿಸುರುಳಿ ವಿಮರ್ಶೆ

'ಜಸ್ಟ್ ಮಾತ್ ಮಾತಲ್ಲಿ' ಧ್ವನಿಸುರುಳಿ ವಿಮರ್ಶೆ

Posted By: *ನಿಸ್ಮಿತಾ
Subscribe to Filmibeat Kannada

'ಸೈಕೋ' ಚಿತ್ರದ ಮೂಲಕ ರಾಜ್ಯದ ಮನೆ ಮಾತಾಗಿರುವ ಸಂಗೀತ ನಿರ್ದೇಶಕ ರಘು ದೀಕ್ಷಿತ್ ಸಂಗೀತ ನೀಡಿರುವ ಎರಡನೇ ಚಿತ್ರ ಜಸ್ಟ್ ಮಾತ್ ಮಾತಲ್ಲಿ. 'ನಿನ್ನ ಪೂಜೆಗೆ ಬಂದೇ ಮಾದೇಶ್ವರ' ಎನ್ನುವ ಪಾಪ್ ಶೈಲಿಯ ಸಂಗೀತ ನೀಡಿ ಜನಪ್ರಿಯತೆ ಗಳಿಸಿದ್ದ ರಘು ದೀಕ್ಷಿತ್ ಈ ಚಿತ್ರದಲ್ಲೂ ವಿಭಿನ್ನ ರೀತಿಯ ಸಂಗೀತ ನೀಡಿದ್ದಾರೆ ಎನ್ನಬಹುದು.ಎರಡು ಹಾಡಿಗೆ ಅವರೇ ಸಾಹಿತ್ಯ ಕೂಡ ರಚಿಸಿರುವುದು ವಿಶೇಷ.

ಕನ್ನಡಚಿತ್ರರಂಗದ ವೃತ್ತಿಪರ ನಟರಲ್ಲಬ್ಬೊರಾದ ಸುದೀಪ್ ಮತ್ತು ರಮ್ಯಾ ಮುಖ್ಯ ಭೂಮಿಕೆಯಲ್ಲಿರುವ ಚಿತ್ರದ ಧ್ವನಿಸುರುಳಿ ಇತ್ತೀಚಿಗೆ ಮಾರುಕಟ್ಟೆಗೆ ಬಿಡುಗಡೆಗೊಂಡಿತು. ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ ಮೂಲಕ ರಘು ಸೈ ಎನಿಸಿ ಕೊಂಡಿದ್ದಾರೆ. ಸುದೀಪ್ ನಿರ್ದೇಶನ ಮತ್ತು ಆರ್ ಶಂಕರ್ ನಿರ್ಮಾಪಕರಾದ ಈ ಚಿತ್ರಕ್ಕೆ ಹೊಸಬರು ಸಾಹಿತ್ಯ ನೀಡುವ ಮೂಲಕ ತಮ್ಮ ಖಾತೆ ತೆರೆದಿದ್ದಾರೆ ಆದರೆ ಚಿತ್ರದ ಸಾಹಿತ್ಯ ಮಾಮೂಲಿ.

'ಜಸ್ಟ್ ಮಾತಲ್ಲಿ' ಎನ್ನುವ ಹಾಡನ್ನು ರಘು ಅವರೇ ಹಾಡಿದ್ದಾರೆ, ಹಾಡಿಗೆ ಕಿರಣ್ ವಿಪ್ರಾ ಮತ್ತು ರಘು ಸಾಹಿತ್ಯ ನೀಡಿದ್ದಾರೆ. ಇಂಗ್ಲಿಷ್ ಮಿಶ್ರಿತ ಈ ಹಾಡು ಪಕ್ಕಾ ಹಾಲಿವುಡ್ ಶೈಲಿಯಲ್ಲಿದೆ ಮತ್ತು ಹಾಡಿನ ಸಾಹಿತ್ಯ ಅಷ್ಟಕಷ್ಟೆ. ಈ ರೀತಿಯ ಹಾಡಿಗೆ ರಘು ಧ್ವನಿ ಚೆನ್ನಾಗಿ ಹೊಂದಿಕೊಳ್ಳುತ್ತೆ. 'ಎಲ್ಲೋ ಜಿನುಗುತಿರುವ' ಹಾಡಿಗೆ ರಾಘವೇಂದ್ರ ಕಾಮತ್ ಮತ್ತು ಸುಧೀರ್ ಅತ್ತಾವರ್ ಸಾಹಿತ್ಯ ನೀಡಿದ್ದಾರೆ. ಕೋರಸ್ ಜೊತೆಯಾಗಿ ಶ್ರೇಯಾ ಘೋಷಾಲ್ ಕಂಠಸಿರಿಯಲ್ಲಿ ಬಂದ ಈ ಹಾಡು ಇಂಪಾಗಿದೆ.

'ಮುಂಜಾನೆ ಮಂಜಲ್ಲಿ' ಹಾಡನ್ನು ರಘು ದೀಕ್ಷಿತ್ ಮತ್ತು ಹರಿಚರಣ್ ಹಾಡಿದ್ದಾರೆ.ಹಾಡಿಗೆ ರಾಘವೇಂದ್ರ ಕಾಮತ್ ಸಾಹಿತ್ಯ ಬರೆದಿದ್ದಾರೆ. ಸ್ಲೋ, ಹೈಪಿಚ್ ಮತ್ತು ವೆಸ್ಟರ್ನ್ ಶೈಲಿಯಲ್ಲಿರುವ ಹಾಡನ್ನು ರಘು ಚೆನ್ನಾಗಿ ನಿಭಾಯಿಸಿದ್ದಾರೆ. 'ಈ ಕಣ್ಣಿನಲ್ಲಿ ನಾನು ಹಾಡಿದ್ದನ್ನು ನೀವೂ ಹಾಡಬೇಕು ಓಕೆ' ಎಂದು ಶುರುವಾಗುವ ಹಾಡನ್ನು ನಂದೀಶ್ ಚಂದ್ರ ಬರೆದಿದ್ದಾರೆ. ರಘು, ಲಕ್ಷ್ಮೀ ಮನಮೋಹನ್ ಹಾಡಿದ್ದಾರೆ. ಹಾಡಿಗಿಂತ ಟ್ಯೂನ್ ಅಬ್ಬರವೇ ಜಾಸ್ತಿ. ಟ್ಯೂನ್ ಅಬ್ಬರಗಳ ಮುಂದೆ ಸಾಹಿತ್ಯ ಕೇಳಿಸುವುದೇ ಕಷ್ಟ.

'ಬಾನಿನ ಹನಿಯು' ಹಾಡಿಗೆ ಮನೋಜವ ಗಲಗಲಿ ಸಾಹಿತ್ಯ ಮತ್ತು ರಘು ದೀಕ್ಷಿತ್ ಧ್ವನಿ, ಪ್ಯಾತೋ ಮಾದರಿಯಲ್ಲಿರುವ ಹಾಡಿನ ಸಾಹಿತ್ಯ ಚೆನ್ನಾಗಿಲ್ಲ. 'ಮರುಭೂಮಿಯಲ್ಲಿ ಹೂಅರಳುವ ಕನಸು ಕಂಡೆ' ಹಾಡನ್ನು ರಾಜೇಶ್ ಕೃಷ್ಣನ್ ಹಾಡಿದ್ದಾರೆ ಮತ್ತು ರಘು ಸಾಹಿತ್ಯ ನೀಡಿದ್ದಾರೆ. ರಾಜೇಶ್ ಧ್ವನಿ ಅಷ್ಟೇನು ಹಾಡಿಗೆ ಹೊಂದಿಕೊಳ್ಳುವುದಿಲ್ಲ.

ಕನ್ನಡ ಚಿತ್ರ ರಸಿಕರ ಪಾಲಿಗೆ ಇದೊಂದು ಹೊಸ ಪ್ರಯತ್ನ. ಪಾಪ್ ಮತ್ತು ವೆಸ್ಟರ್ನ್ ಶೈಲಿಯಲ್ಲಿರುವ ಹಾಡನ್ನು ಈ ಮೊದಲು ಚಿತ್ರಕ್ಕೆ ಅಳವಡಿಸಿಕೊಂಡಿದ್ದು ಅಪರೂಪ. ಆ ಮಟ್ಟಿಗೆ ರಘು ಹೊಸತನ ಮೆರೆದಿದ್ದಾರೆ. ಆದರೆ ಕನ್ನಡಿಗರು ಹಾಡನ್ನು ಕೇಳುತ್ತಾರೋ ಅಥವಾ ಕಿವಿಗೆ ಹತ್ತಿಇಟ್ಟು ಕೊಳ್ಳುತ್ತಾರೋ ಮುಂದಿನ ದಿನಗಳಲ್ಲಿ ತಿಳಿಯಲಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada