»   » ತಾಜಾ ಅನುಭವದ 'ಫೇರ್ ಅಂಡ್ ಲವ್ಲಿ' ಹಾಡುಗಳು

ತಾಜಾ ಅನುಭವದ 'ಫೇರ್ ಅಂಡ್ ಲವ್ಲಿ' ಹಾಡುಗಳು

By: ರವೀಂದ್ರ ಕೋಟಕಿ
Subscribe to Filmibeat Kannada

ಲವ್ಲಿ ಸ್ಟಾರ್ (ಪ್ರೇಮ್) ಅಂಡ್ ಸಿಂಪಲ್ಲಾಗಿ ಒಂದು ಫೇರ್ ಹುಡುಗಿ (ಶ್ವೇತಾ ಶ್ರೀವಾಸ್ತವ್) ಮೊದಲ ಬಾರಿಗೆ ಫೇರ್ (ಜೋಡಿ)ಯಾಗಿ ರೂಪಗೊಳ್ಳುತ್ತಿರುವ ಚಿತ್ರ 'ಫೇರ್ ಅಂಡ್ ಲವ್ಲಿ'. ಈ ಚಿತ್ರದ ಆಡಿಯೋ ಬಿಡುಗಡೆ ಸಂಭ್ರಮ ಇತ್ತೀಚೆಗೆ ಬೆಂಗಳೂರಿನಲ್ಲಿ ಬಹಳ ಅದ್ದೂರಿಯಾಗಿ ನಡೆಯಿತು.

'ಚೆಲುವೆಯೆ ನಿನ್ನ ನೋಡಲು' ಚಿತ್ರದ ನಂತರ ಕೆಲಕಾಲ ಆಕ್ಷನ್ ಕಟ್ ಗೆ ದೂರವಾಗಿದ್ದ ಯುವ ನಿರ್ದೇಶಕ ರಘುರಾಮ್ ಡಿ.ಪಿ ಮತ್ತೆ 'ಫೇರ್ ಅಂಡ್ ಲವ್ಲಿ' ಮೂಲಕ ಫೀಲ್ ಇರೋ ಪ್ರೇಮಕತೆಯನ್ನು ಕನ್ನಡಿಗರಿಗೆ ನೀಡಲು ಮುಂದಾಗಿದ್ದಾರೆ. ಜೆಡ್ ಪ್ಲಾಂಟ್ ಅಡಿಯಲ್ಲಿ ನಿರ್ಮಾಪಕಿ ಶಿಲ್ಪ ರಮೇಶ್ ರಮಣಿ ಈ ಫೇರ್ ಅಂಡ್ ಲವ್ಲಿ ನಿರ್ಮಾಪಕರು. [ಲವ್ಲಿ ಸ್ಟಾರ್ ಪ್ರೇಮ್ ನಿಮ್ಮ ಮನೆಗೂ ಬರ್ಬಹುದು]

ಸದಾ ನೆನಪಿರಲಿ ಪ್ರೇಮ್ ಕನ್ನಡ ಸಿಗ್ನೇಚರ್ ಹಾಗೂ ಶ್ವೇತಾ ಶ್ರೀವಾಸ್ತವ್ ಇಂಗ್ಲೀಷ್ ಸಹಿಯೊಂದಿಗೆ ಲವ್ಲಿಸ್ಟಾರ್ ಪ್ರೇಮ್ ರ 'ಫೇರ್ ಅಂಡ್ ಲವ್ಲಿ' ಮುಖಪುಟವಿರೋ ಕವರ್ ನಿಂದ ಕ್ರೀಮನ್ನು (ಸಿಡಿನಾ) ಹೊರತೆಗೆದು ಹಚ್ಕೊಂಡಾಗ (ಹಾಡುಗಳ್ನಾ ಕೇಳಿದಾಗ) ನನ್ನ ಮುಖದ್ಮೇಲೆ ಅರಳಿದ ಭಾವನೆಗಳನ್ನು ನೇರವಾಗಿ ಸಂಗೀತಪ್ರಿಯರ ಮುಂದಿಡುತ್ತಿದ್ದೇನೆ.

ಖಂಡಿತ ಕಾಡುವಂತಹ ಹಾಡಿದು

ಮೊದಲನೇಯ ಹಾಡು ನಿರ್ದೇಶಕ ಎ.ಪಿ.ಅರ್ಜುನ್ ರ ಬಿಲ್ಲಿಂದ ಹೊರಟು ಬಂದಿರೋ ಸಾಹಿತ್ಯದ ಬಾಣ 'ರಿಂಗಾಗಿದೆ'ಗೆ ಸೋನು ನಿಗಮ್ ಗುರಿ (ಧ್ವನಿ)ಯಾಗಿದ್ದಾರೆ. ಇತ್ತೀಚಿನ ಬಾಲಿವುಡ್ ಅಂಗಳದಲ್ಲಿ ಕಂಡುಬರುವ ಸೂಫಿ ಶೈಲಿಯಲ್ಲಿ ಇದು ಅರಳಿದ್ದರೂ ಖಂಡಿತ ಕಾಡುವಂತ ಹಾಡಾಗಿದೆ.

ಮಾಯಾನಾ ಕೇಳಿದಷ್ಟು ಮಾಯಾ

ಎರಡನೇಯ ಹಾಡು ಪ್ರೇಮಿಕವಿ ಕವಿರಾಜ್ 'ಮಾಯಾ' (ಸಾಹಿತ್ಯ)ಗೆ ಸಂತೋಷ್ ವೆಂಕಿ ಮರುಳು ಮಾಡುವ ಗಾಯನ ಜೊತೆಯಾಗಿದೆ. ಮಾಯಾಮಾಯಾಮಾಯಾ ಎಂದು ಶುರುವಾಗುವ ಮಾಯಾನಾ ಕೇಳಿದಷ್ಟು ಮಾಯಾ ಅಷ್ಟೆ ಹೊರತು ಪದೇ ಪದೇ ಕೇಳಬೇಕೆಂಬ ಮಾಯೆ ಮಾತ್ರ ಸಾಹಿತ್ಯದಲ್ಲಿ-ಸಂಗೀತದಲ್ಲಿ ಮರೆಯಾಗಿ ಮಾಯಾದ ಅಬ್ಬರ ಮಾತ್ರ ಉಳಿದುಬಿಟ್ಟಿದೆ.

ಕಂಗ್ಲೀಷ್ ಹಾಡುಗಳು ಸಾಲಿಗೆ ಮತ್ತೊಂದು

ಇನ್ನು ಮೂರನೇಯ ಹಾಡು ರೇಖ ಮೋಹನ್ ರ "ಅನಿರೀಕ್ಷಿತ" ಸಾಹಿತ್ಯಕ್ಕೆ ರಂಜಿತ್ ನಿರೀಕ್ಷಿತ ಗಾಯನ ಜೊತೆಯಾಗಿದೆ. ಇದು ಕನ್ನಡದ ಕಂಗ್ಲೀಷ್ ಹಾಡುಗಳು ಸಾಲಿಗೆ ಮತ್ತೊಂದು ಸೇರ್ಪಡೆ ಅಷ್ಟೆ. ಈ ಅನಿರೀಕ್ಷಿತ ಹಾಡೇ ಫೇರ್ ಅಂಡ್ ಲವ್ಲಿಯ ಟೈಟಲ್ ಸಾಂಗ್ ಕೂಡ ಆಗಿದ್ದರೂ ಅತ್ತ ಫೇರ್ ಆಗದೇ ಇತ್ತ ಲವ್ಲಿನೂ ಆಗದೇ ಸಾಹಿತ್ಯ-ಸಂಗೀತ ಎರಡು ಸೊರಗಿವೆ.

ಹಾಡಿನಲ್ಲಿ ತಾಜಾತನವಿದೆ, ಆದರೆ...

"ಹಾಗೆ ಒಂದು ಮಾತು ಹೇಳುವೆ" ವಿ.ಹರಿಕೃಷ್ಣರ ಸಾಹಿತ್ಯವಿರುವ ಈ ಹಾಡು ಸೋನು ನಿಗಮ್ ಧ್ವನಿಯಲ್ಲಿ ಕೇಳುವ ಮೊದಲೇ ಶಾರೂ
ಖ್ ಖಾನ್-ಜೂಹಿಚಾವ್ಲಾ ಅಭಿನಯದ "ಯಸ್ ಬಾಸ್'ನ "ಜಮೀಕೂ ಅಸುಮಾ ಬನಾದೂ..." ನೆಪದಾದರೆ ನಿಮ್ಮ ತಪ್ಪೇನಿಲ್ಲ ಬಿಡಿ. ಹಾಡಿನಲ್ಲಿ ತಾಜಾತನವಿದ್ದರೂ ಈ ಹಾಡಿನ ಬಗ್ಗೆ ವಿಶೇಷವಾಗಿ ಏನೇ ಹೇಳಲು ಹೋದರೂ ಯಾಕೋ ಟ್ಯೂನ್ ಮಾತ್ರ ಏನು ಹೇಳಬೇಡ ಅಂತಿದೆ.

ವಿರಾಗದ ಸರಾಗದ ಪ್ಯಾಥೋ ಹಾಡು

"ಈ ಕಾಣದ..." ಆನಂದ್ ಪ್ರಿಯ ಸಾಹಿತ್ಯಕ್ಕೆ ವಿ. ಹರಿಕೃಷ್ಣ ಕಾಣುವಂತೆಯೆ ಧ್ವನಿ ನೀಡಿದ್ದಾರೆ. ದೇಸಿತನಕ್ಕೆ ಒತ್ತು ನೀಡಿ ಟ್ಯೂನ್ ಮಾಡಿರೋ ಈ ಫ್ಯಾಥೋ ವಿರಾಗದ ಸರಾಗದ ಭಾವದಲ್ಲಿ ಮೂಡಿಬಂದಿದೆ. ಮೊದಲನೆಯ ಪಲ್ಲವಿ ಪ್ರೀತಿಗಿಂತ ತಾಯಿಯಿಲ್ಲ-ತಂದೆಯಿಲ್ಲ ಅಂತೇಳಿ ಪ್ರೀತಿಯ ವೈಭವಕ್ಕೆ ಸಾಕ್ಷಿಯಾದರೆ ಎರಡನೆ ಪಲ್ಲವಿ ಬದುಕು ಜಟಾಇಕಾಬಂಡಿ, ಬದುಕು ಇರೋದು ಮೂರೇ ದಿವಸವೆಂಬ ವೈರಾಗ್ಯದಲ್ಲಿ ಬೆಂದು ನೊಂದಿದೆ. ಆದರೂ ಯಾಕೋ ಸಾಹಿತ್ಯದಲ್ಲಿ ಕಾಡುವ ಗುಣವಿಲ್ಲ.

ಯಾಕೋ ಏನೋ ಫೀಲ್ ಮಿಸ್ ಆಗಿದೆ

"ಹಾಗೆ ಒಂದು ಮಾತು ಹೇಳುವೆ" ಸೋನುನಿಗಮ್ ಸೋಲೋ ಹಾಡೇ ಸಿಡಿಯಲ್ಲಿರುವ ಕೊನೆಯ ಹಾಡಾಗಿ ವಿಜಯ್ ರಾಘವೇಂದ್ರ, ವಿಜಯಾ ಶಂಕರ್ ಧ್ವನಿಯಲ್ಲಿ ಡ್ಯೂಯಟಾಗಿ ಕೇಳಿಬಂದಿದೆ. ಮೇಲ್ ವಾಯಿಸ್ ಡಾಮಿನೇಟ್ ಆಗಿರೋ ಇಲ್ಲಿ ಯಾಕೋ ಫೀಮೇಲ್ ಫೀಲ್ ಮಿಸ್ಸಾಗಿದೆ. ಒಟ್ಟಾರೆ ರಿಂಗಾಗಿದೆಯಿಂದ ನಿರೀಕ್ಷೆ ಹುಟ್ಟಿಸುವ ಫೇರ್ ಅಂಡ್ ಲವ್ಲಿಯ ಹಾಡುಗಳು ಅದೇ ಜೋಶನ್ನು ಉಳಿದ ಹಾಡಗಳಲ್ಲಿ ಮಾತ್ರ ಉಳಿಸಿಕೊಳ್ಳಲು ವಿಫಲವಾಗಿದೆ.

English summary
Read Kannada movie 'Fair and Lovely' music review by Ravi Kotaki. The author says, songs are simple and melodious. The first song "Ringaagide' sung by Sonu Nigam and lyrics by AP Arjun is sweet toned. Music by V Harikrishna.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada