»   » ಕ್ಲಾಸ್+ಮಾಸ್ ಚಿತ್ರ ಸಾಹಿತಿ ಹೃದಯ ಶಿವಗಿರೊದೊಂದೇ ಆಸೆ!

ಕ್ಲಾಸ್+ಮಾಸ್ ಚಿತ್ರ ಸಾಹಿತಿ ಹೃದಯ ಶಿವಗಿರೊದೊಂದೇ ಆಸೆ!

Posted By:
Subscribe to Filmibeat Kannada

ಕನ್ನಡ ಚಿತ್ರರಂಗದಲ್ಲಿ ಸಾರ್ವಕಾಲಿಕ ದಾಖಲೆ ಸೃಷ್ಟಿಸಿದ್ದ 'ಮುಂಗಾರು ಮಳೆ' ಚಿತ್ರವನ್ನ ಹೇಗೆ ತಾನೆ ಮರೆಯೋಕೆ ಸಾಧ್ಯ ಹೇಳಿ. ಕಣ್ಮನ ಸೆಳೆಯುವ ರಮ್ಯತಾಣಗಳ ಜೊತೆ ಮಧುರ ಸಂಗೀತ ಮತ್ತು ಮನಸ್ಸಿಗೆ ಮುದ ನೀಡುವ ಸಾಹಿತ್ಯ, 'ಮುಂಗಾರು ಮಳೆ' ಹಿಟ್ ಆಗುವುದಕ್ಕೆ ಪ್ರಮುಖ ಪಾತ್ರ ವಹಿಸಿತ್ತು.

ಸಾಹಿತ್ಯದ ವಿಚಾರದಲ್ಲಿ ಜಯಂತ್ ಕಾಯ್ಕಿಣಿ ಯಶಸ್ಸಿನ ಸೂತ್ರಧಾರರಲ್ಲಿ ಒಬ್ಬರಾಗಿದ್ದರೆ, 'ಮುಂಗಾರು ಮಳೆ' ಸಕ್ಸಸ್ ಹಿಂದೆ ಇದ್ದ ಮತ್ತೊಬ್ಬ ಸಾಹಿತಿ 'ಹೃದಯ ಶಿವ'.

ಜಯಂತ್ ಕಾಯ್ಕಿಣಿ ಬರೆದ ಹಾಡುಗಳು ಒಂದ್ಕಡೆ ಯುವ ಜೋಡಿಗಳನ್ನ ಆಕರ್ಷಿಸಿದ್ದರೆ, ಕನ್ನಡ ಚಿತ್ರರಂಗಕ್ಕೆ ಆಗಷ್ಟೇ ಪದಾರ್ಪಣೆ ಮಾಡಿದ್ದ ಯುವ ಸಾಹಿತಿ ಹೃದಯ ಶಿವ, 'ಇವನು ಗೆಳೆಯನಲ್ಲ.....' ಹಾಡಿನ ಮೂಲಕ ಎಲ್ಲರ ಹೃದಯಕ್ಕೆ ಲಗ್ಗೆ ಇಟ್ಟುಬಿಟ್ಟಿದ್ದರು. ನಿಜ ಹೇಳ್ಬೇಕಂದರೆ, ಹೃದಯ ಶಿವ ಅವರಿಗೆ 'ಮುಂಗಾರು ಮಳೆ' ಜಸ್ಟ್ ನಾಲ್ಕನೇ ಸಿನಿಮಾ.

hrudaya shiva1

ಚಿಕ್ಕವಯಸ್ಸಿನಿಂದಲೂ ಕಥೆ-ಕವನ ಬರೆಯುವುದರಲ್ಲಿ ಹೃದಯ ಶಿವ ಅವರಿಗೆ ಎಲ್ಲಿಲ್ಲದ ಆಸಕ್ತಿ. ಕವನಗಳ ಜೊತೆ ಬಣ್ಣದ ಬದುಕಿನ ಬಗ್ಗೆ ಆಕರ್ಷಿತರಾದ ಹೃದಯ ಶಿವ, ಬಣ್ಣದ ಬದುಕಿನ್ನಲ್ಲಿ ದೊಡ್ಡ ನಿರ್ದೇಶಕನಾಗಬೇಕು ಅಂತ ಬೆಟ್ಟದಷ್ಟು ಕನಸಹೊತ್ತು ಚಿತ್ರರಂಗಕ್ಕೆ ಕಾಲಿಟ್ಟರು. ಆದ್ರೆ ಇಲ್ಲಾಗಿದ್ದೇ ಬೇರೆ.

ಕನಕಪುರದಲ್ಲಿ ಹುಟ್ಟಿ ಬೆಳೆದ ಹೃದಯ ಶಿವ ತಮ್ಮ ಕವನಗಳಿಗೆ ಇನ್ನಷ್ಟು ಮೆರುಗು ನೀಡುವುದಕ್ಕೆ ಸಂಗೀತ ನಿರ್ದೇಶಕ ಗುರುಕಿರಣ್ ಬಳಿ ತೆರಳಿದ್ದರು. ಅವರ ಬಳಿ ಆಗಾಗ ಟಿಪ್ಸ್ ಕೂಡ ಕೇಳುತ್ತಿದ್ದರು. ಹೃದಯ ಶಿವ ಬರೆದ ಕವನಗಳನ್ನ ನೋಡಿ, ಗುರುಕಿರಣ್, ತಾವು ಸಂಗೀತ ನಿರ್ದೇಶನದ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಮಂಡ್ಯ' ಚಿತ್ರಕ್ಕೆ ಹಾಡು ಬರೆಯುವಂತೆ ಹೇಳೇಬಿಟ್ಟರು.

hrudaya shiva

ಕವಿಯಾಗಿದ್ದ ಹೃದಯ ಶಿವ, 'ಸಿನಿಮಾ ಸ್ಟೈಲ್' ನಲ್ಲಿ ಬರೆದ ಮೊಟ್ಟ ಮೊದಲ ಹಾಡು ''ಮುಟ್ಟಿದ್ರೆ ಯಾಕೋ....''. ಮಾಸ್ ಪ್ರೇಕ್ಷಕರಿಗೆ ಸಿಕ್ಕಾಪಟ್ಟೆ ಕಿಕ್ ಕೊಟ್ಟ ಈ ಹಾಡಿಂದ ಹೃದಯ ಶಿವ ಅದೃಷ್ಟ ಖುಲಾಯಿಸಿಬಿಡ್ತು. 'ಮಂಡ್ಯ' ಹಾಡುಗಳು ಹಿಟ್ ಆಗ್ತಿದ್ದಂತೆ ಹೃದಯ ಶಿವ ಕೆಲವೇ ದಿನಗಳ ಅಂತರದಲ್ಲಿ ಪೆನ್ನು ಹಿಡಿದದ್ದು 'ಗಂಡ ಹೆಂಡತಿ' ಚಿತ್ರದ ಹಾಡೊಂದಕ್ಕೆ.

''ನಿದಿರೆಗೂ ರಜಾ...'' ಹಾಡಿಗೆ ಸಾಹಿತ್ಯ ಬರೆದ ಹೃದಯ ಶಿವ, ಏಕದಂತ ಚಿತ್ರದ ''ಈ ಸೊಂಟ ನೋಡು ಭಂಟ...'' ಅನ್ನುವ ಐಟಂ ಸಾಂಗ್ ಬರೆಯುವುದಕ್ಕೂ ಅಂಜಲಿಲ್ಲ. 'ಮುಂಗಾರು ಮಳೆ' ಚಿತ್ರದಲ್ಲಿ ''ಇವನು ಗೆಳೆಯನಲ್ಲ...'', ''ಸುವ್ವಿ ಸುವ್ವಾಲಿ....'' ಹಾಡುಗಳನ್ನ ಬರೆದ ಹೃದಯ ಶಿವ ಇಂದಿಗೂ ಕನ್ನಡ ಚಿತ್ರರಂಗದ ಬಹುಬೇಡಿಕೆಯ ಸಾಹಿತಿ.

hrudaya shiva

ಚಿತ್ರರಂಗಕ್ಕೆ ಕಾಲಿಟ್ಟ 10 ವರ್ಷಗಳಲ್ಲಿ ಇತ್ತೀಚಿನ 'ಸಾಫ್ಟ್ ವೇರ್ ಗಂಡ', 'ನಮಸ್ತೆ ಮೇಡಂ', 'ಸಿಗರೇಟ್', 'ಬೆಂಕಿಪಟ್ನ', ಸೇರಿದಂತೆ 280 ಕ್ಕೂ ಹೆಚ್ಚು ಚಿತ್ರಗಳಿಗೆ ಸಾಹಿತ್ಯ ಬರೆದಿರುವ ಹೃದಯ ಶಿವ, ಕೊಟ್ಟಿರುವ ಸೂಪರ್ ಹಿಟ್ ಹಾಡುಗಳು ಲೆಕ್ಕವಿಲ್ಲದಷ್ಟು. [ಬೆಂಕಿಪಟ್ಣ ಆಡಿಯೋ ವಿಮರ್ಶೆ: ತಪ್ಪದೇ ಕೇಳಿ ಆನಂದಿಸಿ]

ಸದ್ಯಕ್ಕೆ 'ಫ್ಲೈ', 'ಸಿಪಾಯಿ', 'ಅಲೋನ್', 'ಬಾಂಬೆ ಮಿಟಾಯಿ', 'ಮತ್ತೊಮ್ಮೆ ಶ್', 'ಫಸ್ಟ್ ರ್ಯಾಂಕ್ ಬಾಬು', ಸೇರಿದಂತೆ ಹಲವಾರು ಚಿತ್ರಗಳಿಗೆ ಸಾಹಿತ್ಯ ಬರೆಯುವುದರಲ್ಲಿ ಹೃದಯ ಶಿವ ಬಿಜಿ.

ಈ ಹಿಂದೆ 'ಉಯ್ಯಾಲೆ', 'ಕಾರ್ತಿಕ್' ಅನ್ನುವ ಚಿತ್ರಗಳಿಗೆ ಸಂಭಾಷಣೆ ಬರೆದಿದ್ದ ಹೃದಯ ಶಿವ, ಇದೀಗ ಪತ್ರಕರ್ತ ಗೌರೀಶ್ ಅಕ್ಕಿ ನಿರ್ದೇಶಿಸುತ್ತಿರುವ 'ಸಿನಿಮಾ ಮೈ ಡಾರ್ಲಿಂಗ್' ಮತ್ತು 'ಶ್ವೇತ' ಚಿತ್ರಗಳಿಗೆ ಸಂಭಾಷಣೆ ಬರೆಯುತ್ತಿದ್ದಾರೆ.

hrudaya shiva

ಬೆಂಗಳೂರಿನ ಶೇಷಾದ್ರಿಪುರಂ ಕಾಲೇಜಿನಲ್ಲಿ ಕಲಾ ವಿಭಾಗದ ವಿದ್ಯಾರ್ಥಿಯಾಗಿದ್ದ ಹೃದಯ ಶಿವ ಇಂದಿಗೂ ಕಲೆಯನ್ನೇ ಆರಾಧಿಸುತ್ತಿದ್ದಾರೆ. ಕೈಲಿದ್ದ ಮಾರ್ಕೆಟಿಂಗ್ ಕೆಲಸವನ್ನು ಬಿಟ್ಟು ಸಿನಿಮಾ, ಕವನ, ಬರಹಗಳಲ್ಲೇ ಉಸಿರಾಡುತ್ತಿರುವ ಹೃದಯ ಶಿವ ಗಾಂಧಿನಗರದ ಅನೇಕ ನಿರ್ಮಾಪಕ ಮತ್ತು ನಿರ್ದೇಶಕರ ಅಚ್ಚುಮೆಚ್ಚಿನ ಸಾಹಿತಿ. [ಶೇಷಾದ್ರಿಪುರಂ ಕಾಲೇಜಿನಲ್ಲಿ ಮೊಳಗಿದ ಗಾನಯಾನ]

ಬದಲಾದ ಟ್ರೆಂಡ್ ಗಳಿಗೆ ಒಗ್ಗಿಕೊಂಡು, ಕಾವ್ಯಾತ್ಮಕವಾಗಿ ಹಾಡುಗಳನ್ನ ಬರೆಯುವುದರಿಂದ ಹಿಡಿದು ಗರಮಾಗರಂ ಐಟಂ ಹಾಡುಗಳು, ಸರಳ ಸಾಹಿತ್ಯ, ಆಡುಭಾಷೆ ವರೆಗಿನ ಎಲ್ಲಾ ಹಾಡುಗಳಲ್ಲೂ ಹೃದಯ ಶಿವ ಲೀಲಾಜಾಲ.

hrudaya shiva

''ಸಿನಿಮಾ ಸಾಹಿತ್ಯದಲ್ಲಿ ಅಷ್ಟು ಸ್ವಾತಂತ್ರ್ಯ ಇಲ್ಲ, ನಿರ್ದೇಶಕರ ಹಿತಾಸಕ್ತಿಗೆ ತಕ್ಕಂತೆ ಹಾಡುಗಳನ್ನ ಬರೆಯಬೇಕು'', ಅಂತ್ಹೇಳುವ ಹೃದಯ ಶಿವ, ತಾವೇ ಖುದ್ದಾಗಿ ಮನಸೋ ಇಚ್ಛೆಯಿಂದ ಬರೆದಿರುವ 3 ಕವನ ಸಂಕಲನಗಳನ್ನ ('ಹರಿವ ತೊರೆ', 'ಮೂಕ ಮೈಲಿಗಲ್ಲು' ಮತ್ತು 'ಚರಕ ಮುದುಕ') ಹೊರತಂದಿದ್ದಾರೆ.

ಚಿತ್ರರಂಗದಲ್ಲಿ ಯಶಸ್ವಿ ಸಾಹಿತಿಯಾಗಿರುವ ಹೃದಯ ಶಿವ ಅವರಿಗೆ ಚಿತ್ರ ನಿರ್ದೇಶಿಸುವ ಕನಸೂ ಇದೆ. ಅದು ಆದಷ್ಟು ಬೇಗ ಈಡೇರಲಿ ಅನ್ನುವುದು ನಮ್ಮ ಹಾರೈಕೆ. (ಫಿಲ್ಮಿಬೀಟ್ ಕನ್ನಡ)

English summary
Lyricist Hrudaya Shiva of Mungaru Male Fame is currently busy in writing songs for many movies. Hrudaya Shiva is also penning script for the movie 'Cinema My Darling'. Here is the special story on Lyricist Hrudaya Shiva, take a look.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada