»   » ಯುವ ಗೀತಸಾಹಿತಿ ಸಂತೋಷ್ ನಾಯ್ಕ ಸಂದರ್ಶನ

ಯುವ ಗೀತಸಾಹಿತಿ ಸಂತೋಷ್ ನಾಯ್ಕ ಸಂದರ್ಶನ

Posted By:
Subscribe to Filmibeat Kannada
Santosh Naik
ಕನ್ನಡ ಗೀತಸಾಹಿತಿಗಳ ಹೆಸರುಗಳಲ್ಲಿ ಯುವ ಗೀತಸಾಹಿತಿಯೊಬ್ಬರ ಹೆಸರು ಪದೇ ಪದೇ ಕೇಳಿ ಬರುತ್ತಿದೆ. ಅವರೇ ಸಂತೋಷ ನಾಯ್ಕ. ಪದವಿ ಪರೀಕ್ಷೆ ಬರೆದು ಮುಗಿಸಿ ಫಲಿತಾಂಶಕ್ಕಾಗಿ ಕಾಯುತ್ತಿದ್ದ ವೇಳೆಯಲ್ಲೇ ಗುರುಕಿರಣ್ ಸಂಗೀತ ನಿರ್ದೇಶನದಲ್ಲಿ 'ಯುವ' ಚಿತ್ರಕ್ಕಾಗಿ ಹಾಡು ಬರೆದು ಗೀತಸಾಹಿತ್ಯ ಜಗತ್ತಿಗೆ ಕಾಲಿಟ್ಟವರು ಈ ಸಂತೋಷ್ ನಾಯ್ಕ. ತಮ್ಮ 21ನೇ ವಯಸ್ಸಿಗೇ ಗೀತಸಾಹಿತ್ಯ ಪ್ರಪಂಚದಲ್ಲಿ ಪ್ರಯಾಣ ಆರಂಭಿಸಿರುವ ಸಂತೋಷ್ ನಾಯ್ಕ, ಸದ್ಯಕ್ಕೆ ಅತೀ ಚಿಕ್ಕ ವಯಸ್ಸಿನ ಕನ್ನಡದ ಗೀತ ಸಾಹಿತಿ.

ಗುರುಕಿರಣ್ ಸಂಗೀತ ನಿರ್ದೇಶನದಲ್ಲಿ 'ಯುವ' ಚಿತ್ರದಲ್ಲಿನ 'ಓ ತಾವರೆ ಕೆಂದಾವರೆ...' ಮೂಲಕ ತಮ್ಮ ವೃತ್ತಿ ಬದುಕನ್ನು ಆರಂಭಿಸಿದ ಸಂತೋಷ್, ನಂತರ ಒಂದಾದ ಮೇಲೆ ಇನ್ನೊಂದರಂತೆ ಅವಕಾಶಗಳನ್ನು ಪಡೆಯುತ್ತಿದ್ದಾರೆ. ಈಗಾಗಲೇ ಹಲವು ಚಿತ್ರಗಳು ಸೇರಿ ಸುಮಾರು '75' ಕ್ಕಿಂತ ಹೆಚ್ಚು ಹಾಡುಗಳನ್ನು ಬರೆದು ಭವಿಷ್ಯದ ಭರವಸೆಯ ಗೀತಸಾಹಿತಿಯಾಗಿ ಬೆಳಗುತ್ತಿದ್ದಾರೆ. ಇತ್ತೀಚಿಗೆ ಗುರುಕಿರಣ್ ಸಂಗೀತ ನಿರ್ದೇಶನದ ಚಿತ್ರಗಳ ಹಾಡುಗಳಿಗೆ ಖಾಯಂ ಬರಹಗಾರರಲ್ಲಿ ಒಬ್ಬರಾಗಿರುವ ಸಂತೋಷ್, ಇತರ ಹೆಸರಾಂತ ಸಂಗೀತ ನಿರ್ದೇಶಕರೊಂದಿಗೂ ಕೆಲಸ ಮಾಡುವ ಅವಕಾಶ ಪಡೆದಿದ್ದಾರೆ. ಇಂಥ ಸಂತೋಷ್ ನಾಯ್ಕ, 'ಒನ್ ಇಂಡಿಯಾ ಕನ್ನಡ'ದ ಶ್ರೀರಾಮ್ ಭಟ್ ಜೊತೆ ಸಂದರ್ಶನದಲ್ಲಿ ಹೇಳಿದ ಮಾತುಗಳು ಇಲ್ಲಿವೆ, ಓದಿ...

*ನಿಮ್ಮ ಊರು, ವಿದ್ಯಾಭ್ಯಾಸ, ಹಿನ್ನಲೆ ಬಗ್ಗೆ ಹೇಳಿ...

ಊರು ಹೊನ್ನಾವರ ತಾಲೂಕಿನ ವಿಶ್ವವಿಖ್ಯಾತ ಗೇರುಸೊಪ್ಪಾ. ಹೊನ್ನಾವರದಲ್ಲೇ ಪದವಿ ಮುಗಿಸಿರುವ ನಾನು ಮಂಗಳೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಮುಗಿಸಿದ್ದೇನೆ. ಚಿಕ್ಕಂದಿನಿಂದಲೂ ನನಗೆ ಸಾಹಿತ್ಯದಲ್ಲಿ ಆಸಕ್ತಿಯಿತ್ತು. ನನಗೆ ಸಾಹಿತ್ಯದ ಹಿನ್ನೆಲೆಯೇನೂ ಇಲ್ಲದಿದ್ದರೂ ಚಿಕ್ಕ ವಯಸ್ಸಿನಲ್ಲಿ ಯಕ್ಷಗಾನದ ಕಲೆಯ 'ಟಚ್' ಇತ್ತು.

ಆ ಮೂಲಕ ನನಗೆ ಸಂಗೀತ ಹಾಗೂ ಸಾಹಿತ್ಯದ ಒಳಹೊರಗಿನ ದರ್ಶನವಾಯ್ತು. ಯಕ್ಷಗಾನ ಕಲಿಯುವಾಗ ಹಳಗನ್ನಡದ ಬಹಳಷ್ಟು ಪದ್ಯಗದ್ಯಗಳನ್ನು ಅಭ್ಯಸಿಸಿ ಅದನ್ನು ಹೊಸಗನ್ನಡಕ್ಕೆ ಭಾಷಾಂತರಿಸುವಾಗ ಸಾಕಷ್ಟು ಹಳೆಯ, ಹೊಸ ಪದಗಳು ನನ್ನ ಪದ ಭಂಡಾರ ಸೇರಿಕೊಂಡು ಮೊದಲೇ ಇದ್ದ ಸಾಹಿತ್ಯಾಸಕ್ತಿ ಹೆಮ್ಮರವಾಗುತ್ತಾ ಬಂತು.

ಹೈಸ್ಕೂಲಿನಲ್ಲೇ ಬರವಣಿಗೆ ಶುರುಮಾಡಿಕೊಂಡಿದ್ದ ನನಗೆ ಪದವಿ ದ್ವಿತೀಯ ವರ್ಷದಲ್ಲಿದ್ದಾಗಲೇ ಧಾರವಾಡದಲ್ಲಿ ಸಾಹಿತ್ಯ ಇಲಾಖೆ ವತಿಯಿಂದ ನಡೆಸಲ್ಪಟ್ಟ ರಾಜ್ಯಮಟ್ಟದ ಸ್ಪರ್ಧೆಯಲ್ಲಿ 'ಅತ್ಯುತ್ತಮ ಯುವಕವಿ' ಪ್ರಶಸ್ತಿ ಲಭಿಸಿತ್ತು. ತದನಂತರ ಮೊದಲೇ ಇದ್ದ ಸಾಹಿತ್ಯದ ಆಸಕ್ತಿ ಕಾಲದೊಡನೆ ಕಾಲುಸೇರಿಸಿ ಹೆಜ್ಜೆಹಾಕತೊಡಗಿತು.

ನಿಮ್ಮ ಮೊದಲು ಹಾಡು ಮೂಡಿಬಂದಿದ್ದು ಯಾವಾಗ, ಯಾರು ನಿಮ್ಮ ಗಾಡ್ ಫಾದರ್?

ಪದವಿ ಮುಗಿದ ತಕ್ಷಣ ಬೆಂಗಳೂರಿಗೆ ಬಂದ ನನಗೆ 'ಗುರುಕಿರಣ್ ಸರ್' ಅವಕಾಶ ಕೊಟ್ಟರು. ಅವರ ಮಾರ್ಗದರ್ಶನದಲ್ಲೇ ನನ್ನ ಚಿತ್ರಸಾಹಿತ್ಯದ 'ಜರ್ನಿ' ಸಾಗುತ್ತಿದೆ. ತಮ್ಮ ಸಂಗೀತ ನಿರ್ದೇಶನದ ಎಲ್ಲಾ ಚಿತ್ರಗಳಲ್ಲಿ ನನಗೆ ಅವಕಾಶ ಮಾಡಿಕೊಡುತ್ತಿರುವ ಗುರುಕಿರಣ್ ಸರ್ ಅವರೇ ನನ್ನ 'ಗಾಡ್ ಫಾದರ್'. ಅವರ ಸಂಗೀತ ನಿರ್ದೇಶನದ 'ಯುವ' ಚಿತ್ರದಲ್ಲಿನ 'ಓ ತಾವರೆ ಕೆಂದಾವರೆ...' ಹಾಡು ನಾನು ಬರೆದ ಮೊದಲ ಹಾಡು.

*ಇಲ್ಲಿಯವೆರೆಗೆ ಬರೆದ ಹಾಡುಗಳೆಷ್ಟು? ನಿಮ್ಮ ಇಷ್ಟವಾದ 'ಟಾಪ್ ಟೆನ್' ಹಾಡುಗಳ ಪಟ್ಟಿ ನೀಡುವಿರಾ?

'ಯುವ' ಚಿತ್ರದ 'ಓ ತಾವರೆ ಕೆಂದಾವರೆ...' ಹಾಡಿನ ನಂತರ 'ಪ್ರೇಮ್ ಕಹಾನಿ', 'ಜೀವ', 'ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೆ', 'ಶಂಕರ್ ಐಪಿಎಸ್', 'ವಿಲನ್' ಹಾಗೂ 'ಗೋವಿಂದಾಯ ನಮಃ' ಜೊತೆಗೆ ಇನ್ನೂ ಹಲವು ಸಿನಿಮಾಗಳಿಗೆ ಸಾಹಿತ್ಯ ಬರೆದಿದ್ದೇನೆ.

ನನ್ನ ಟಾಪ್ 5 ಗೀತೆಗಳೆಂದರೆ:
*ಓ ತಾವರೆ ಕೆಂದಾವರೆ... (ಯುವ)
*ಗಿಳಿಯ ಮರಿಯೊಂದು ಗೂಡು ಬಿಟ್ಟಿದೆ... (ಪ್ರೇಮ್ ಕಹಾನಿ)
*ಗೆಳತಿ ನಿನ್ನಿಂದ... (ವಿಲನ್)
*ಬದುಕೋಕೆ ಸಾಯ್ತವ್ನೆ ನರಮನುಸ... (ಸ್ಟೋರಿ ಕಥೆ)
*ಮೊದಮೊದಲು ಹೀಗೇನೆ... (ಗೋವಿಂದಾಯ ನಮಃ)

* ಸದ್ಯ ನಿಮ್ಮ ಕೈಯಲ್ಲಿರುವ ಚಿತ್ರಗಳು?

ತೆಲುಗು ಚಿತ್ರ 'ಅರುಂಧತಿ' ನಿರ್ದೇಶಕ ದಿಗಂತ್-ರಮ್ಯಾ ಜೋಡಿಯ ಬರಲಿರುವ ಚಿತ್ರ, 'ಸವಾರಿ-2', 'ಕೃಷ್ಣ ಸನ್ ಆಫ್ ಸಿಎಂ', 'ರಾಧಿಕಾನ್ ಗಂಡ', 'ಚಮಕ್' ಹಾಗೂ ಸಾಕಷ್ಟು ಹೊಸ ತಂಡಗಳು ಚಿತ್ರಗಳು ಕೈನಲ್ಲಿವೆ. ನನ್ನ ಗೀತಸಾಹಿತ್ಯಗಳಲ್ಲಿ ಕೆಲವು ಈಗಾಗಲೇ ಹಾಡುಗಳಾಗಿದ್ದರೆ ಇನ್ನೂ ಕೆಲವು ಹಾಡಾಗುವ ಹಂತದಲ್ಲಿವೆ.

*ನಿಮ್ಮ ಭವಿಷ್ಯದ ಕನಸೇನು?
ಈಗಾಗಲೇ ಚಿತ್ರಗಳಿಗೆ ಸಂಬಂಧಿಸಿ ಗೀತ ಸಾಹಿತ್ಯದ ದಾರಿಯಲ್ಲಿ ಸಾಗಿ ಬಂದಿರುವ ನನಗೆ ಚಿತ್ರ ನಿರ್ದೇಶನದ ಕನಸಿದೆ. ನನ್ನ ಆ ಕನಸು ಈಗಾಗಲೇ ಕಾರ್ಯರೂಪದಲ್ಲಿದ್ದು ಸದ್ಯದಲ್ಲೇ ನೆರವೇರಲಿದೆ. ಇನ್ನು ಮುಂದೇನಿದ್ದರೂ ಒಳ್ಳೊಳ್ಳೆಯ ಚಿತ್ರಗಳನ್ನು ನಿರ್ದೇಶಿಸುವ ಜೊತೆಗೆ ಅತ್ಯುತ್ತಮ ಗೀತಸಾಹಿತ್ಯವನ್ನು ಕನ್ನಡ ಚಿತ್ರಜಗತ್ತಿಗೆ ಕೊಡುವ ಕನಸು. ಅದನ್ನು ಸಾಧಿಸಲು ಗುರಿಯ ಕಡೆಗಷ್ಟೇ ನನ್ನ ಗಮನ ಎಂದು ನಿರ್ಧರಿಸಿದ್ದಾಗಿದೆ, ಕನಸು ಕೈಗೂಡುವುದಷ್ಟೇ ಬಾಕಿ...

                                                                            ***

English summary
Santosh Naik is the most popular Upcoming Lyricist in Kannada Film Industry. He started work with Music Director Gurukiarn from the movie 'Yuva'. He continue his carrier with Gurukiran and also others, wrote more than 75 Songs. Here is 'Oneindia' Interview of Santosh Naik, read for the more..
 
Please Wait while comments are loading...