»   » ಹಂಸಲೇಖ-ಹರಿಕೃಷ್ಣ ಇಬ್ಬರಲ್ಲಿ ಯಾರು ಪ್ರತಿಭಾನ್ವಿತರು?

ಹಂಸಲೇಖ-ಹರಿಕೃಷ್ಣ ಇಬ್ಬರಲ್ಲಿ ಯಾರು ಪ್ರತಿಭಾನ್ವಿತರು?

Posted By:
Subscribe to Filmibeat Kannada
Who is the number one music director of Kannada
ಪ್ರಸಕ್ತ ಕನ್ನಡ ಚಿತ್ರರಂಗದಲ್ಲಿ ನಂಬರ್ ಒನ್ ಸಂಗೀತ ನಿರ್ದೇಶಕರು ಯಾರೆಂದರೆ ಅದಕ್ಕೆ ಥಟ್ ಅಂತ ಬರುವ ಉತ್ತರವೆಂದರೆ ವಿ ಹರಿಕೃಷ್ಣ. ಹಂಸಲೇಖ, ಗುರುಕಿರಣ್ ನಂತರ ಹರಿಕೃಷ್ಣ ಆ ಸ್ಥಾನದಲ್ಲಿ ಕೆಲ ವರ್ಷಗಳಿಂದ ವಿರಾಜಮಾನರಾಗಿದ್ದಾರೆ. ನಾದಬ್ರಹ್ಮ ಬಿರುದಾಂಕಿತ ಹಂಸಲೇಖ ತನ್ನದೇ ಆದ ಶೈಲಿಯಲ್ಲಿ ಸಂಗೀತ ನೀಡಿ ಹೆಸರು ಗಳಿಸಿದವರು.

ಒಂದು ಲೆಕ್ಕದಲ್ಲಿ ಕನಸುಗಾರ ರವಿಚಂದ್ರನ್ ಚಿತ್ರಕ್ಕೆ ಹೊಸ ಆಯಾಮ ನೀಡಿದವರು ಹಂಸಲೇಖ ಅಂದರೆ ಅತಿಶಯೋಕ್ತಿ ಆಗಲಾರದು. ಜಾನಪದ ಶೈಲಿಯಿಂದ ಹಿಡಿದು ಎಲ್ಲಾ ರೀತಿಯ ಸಂಗೀತದಲ್ಲಿ ಪಳಗಿ ಒಂದು ಕಾಲದಲ್ಲಿ ಯುವ ಪೀಳಿಗೆಯ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದರು. ಇನ್ನು ಇತ್ತೀಚಿನ ಹೆಚ್ಚುಕಮ್ಮಿ ಎಲ್ಲಾ ಹಿಟ್ ಗೀತಗಳನ್ನು ನೀಡಿದವರಲ್ಲಿ ಹರಿಕೃಷ್ಣ ಅವರದ್ದು ಸಿಂಹಪಾಲು.

ಹಂಸಲೇಖ ಮತ್ತು ಹರಿಕೃಷ್ಣ ಈ ಇಬ್ಬರು ಸಂಗೀತ ನಿರ್ದೇಶಕರಲ್ಲಿ ಯಾರು ಪ್ರತಿಭಾನ್ವಿತರು? ಹಂಸಲೇಖ ಪ್ರತಿಭೆಗೆ ಹರಿಕೃಷ್ಣ ಸರಿದೂಗಬಲ್ಲರೇ? ಈ ಹೊಸ ಚರ್ಚೆಗೆ ನಟ, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ನಾಂದಿ ಹಾಡಿದ್ದಾರೆ. ಇತ್ತೀಚಿಗೆ ನಡೆದ ಸಮಾರಂಭವೊಂದರಲ್ಲಿ ನಮ್ಮ ಹರಿಕೃಷ್ಣ ಅವರು ಹಂಸಲೇಖಾ ಅವರ ಪ್ರತಿಭೆಗೆ ತೂಗಬಲ್ಲರಾದ ಸಂಗೀತ ನಿರ್ದೇಶಕರೆಂದು ಹಾಡಿ ಹೊಗಳಿದರು.

ಓದುಗ ಬಾಂಧವರಿಗೆ ತಿಳಿದಿರುವಂತೆ ಹರಿಕೃಷ್ಣ ಅವರು ಹಂಸಲೇಖ ಗರಡಿಯಲ್ಲೇ ಕೆಲಸ ಮಾಡಿ ಪಳಗಿದವರು. ಜೊತೆಜೊತೆಯಲಿ ಎನ್ನುವ ಸಿನಿಮಾದ ಮೂಲಕ ಸಂಗೀತ ನಿರ್ದೇಶಕನಾಗುವ ಅವಕಾಶ ಗಿಟ್ಟಿಸಿದ ಹರಿಕೃಷ್ಣ ಅದಾದ ಮೇಲೆ ಹಿಂದಿರುಗಿ ತಿರುಗಿ ನೋಡುವ ಪ್ರಮೇಯವೇ ಬಂದಿಲ್ಲ. ಅವರ ಬತ್ತಳಿಕೆಯಲ್ಲಿ ಸಾಲು ಸಾಲು ಹಿಟ್ ಗಳಿವೆ. ಇವತ್ತಿಗೂ ಬಹುನಿರೀಕ್ಷಿತ ಚಿತ್ರಗಳಿಗೆಲ್ಲಾ ಹರಿಕೃಷ್ಣ ಅವರೇ ಸಂಗೀತ ನಿರ್ದೇಶಕರು.

ವಾರಪೂರ್ತಿ ಬಿಡುವಿಲ್ಲದೆ ಕೆಲಸ ಮಾಡುತ್ತಿರುವ ಸದ್ಯದ ಜನಪ್ರಿಯ ಸಂಗೀತ ನಿರ್ದೇಶಕರೆಂದರೆ ಅದು ಹರಿಕೃಷ್ಣ ಮಾತ್ರ. ಇದನ್ನು ಎಲ್ಲರೂ ಒಪ್ಪಿಕೊಳ್ಳುವ ವಿಚಾರ. ಆದರೆ ಹಂಸಲೇಖ ಕುಳಿತು ಹೋದ ಸೀಟಿನಲ್ಲಿ ಪ್ರಸ್ತುತ ಇರುವ ಸಂಗೀತ ನಿರ್ದೇಶಕರನ್ನು ಹೋಲಿಸುವುದು ಸರಿಯಾದ ವಿಚಾರವೇ ಎನ್ನುವುದು.

ಯಾಕೆಂದರೆ ಹಂಸಲೇಖ ಬರೀ ಸಂಗೀತ ನಿರ್ದೇಶಕರಲ್ಲ. ಅವರ ಹಾಡಿನಲ್ಲಿ ಕಂಗೊಳಿಸುತ್ತಿದ್ದ ಸಾಹಿತ್ಯದ ಸಾಲುಗಳಲ್ಲಿ ಇಣುಕುತ್ತಿದ್ದದ್ದು ಅವರ ವಿದ್ವತ್. ಸಾಹಿತ್ಯವನ್ನು ತಾವೇ ರಚಿಸಿಕೊಂಡು ಅದಕ್ಕೆ ತಾನೇ ಸಂಗೀತ ಸಂಯೋಜಿಸುತ್ತಾ ಜೊತೆಗೆ ಆ ಹಾಡುಗಳ ಅತ್ಯಂತ ಜನಪ್ರಿಯವಾಗುವಂತೆ ನೋಡಿಕೊಂಡ ಗಾರುಡಿಗ ಹಂಸಲೇಖಾ.

ಅವರ ಸಂಗೀತದ ಮಾಧುರ್ಯದಷ್ಟೇ ಅವರ ಸಾಹಿತ್ಯವೂ ಅಧ್ಯಯನಕ್ಕೆ ಯೋಗ್ಯವಾದುದ್ದು. ಹಾಗಾಗಿ ಹಂಸಲೇಖಾ ಅವರ ಸ್ಥಾನವನ್ನು ಹರಿಕೃಷ್ಣ ಅವರು ತುಂಬುತ್ತಾರೆ ಅಂದದ್ದು ಬಹುತೇಕರಿಗೆ ಇಷ್ಟವಾಗದೆಯೂ ಇರಬಹುದು. ಹಾಡಿನ ಜನಪ್ರಿಯತೆ ವಿಚಾರದಲ್ಲಿ ಹೋಲಿಕೆ ಮಾಡುವುದಾದರೆ ಧೀರ ರಾಕ್ ಲೈನ್ ವೆಂಕಟೇಶ್ ಅವರ ಹೇಳಿಕೆಗೆ ಒಂದಷ್ಟು ಸಮ್ಮತಿಯೂ ಸಿಕ್ಕಿದರೂ ಸಿಗಬಹುದು.

ಹಂಸಲೇಖ, ಗುರುಕಿರಣ್, ಹರಿಕೃಷ್ಣ ಅವರ ಹಾಡನ್ನು ನಾವೆಲ್ಲರೂ ಕೇಳಿದ್ದೇವೆ. ಈ ಮೂವರಲ್ಲಿ ನಿಮಗೆ ಯಾರು ಹಿತವರು?

English summary
Who among Hamsalekha, V Harikrishna, and Guru Kiran is the number one music director of Kannada film industry?
Please Wait while comments are loading...