For Quick Alerts
  ALLOW NOTIFICATIONS  
  For Daily Alerts

  ಶಿವಣ್ಣರ 'ಶಿವ' ಆಡಿಯೋ ಬಿಡುಗಡೆ ಎಲ್ಲಿ ಗೊತ್ತೇ?

  |

  ಶಿವರಾಜ್ ಕುಮಾರ್ ನಾಯಕತ್ವದ 'ಶಿವ' ಚಿತ್ರಕ್ಕೆ ಬಹುನಿರೀಕ್ಷೆ ಮೂಡಿದೆ. ದಿನದಿನಕ್ಕೂ ನಿರೀಕ್ಷೆಗಳ ಮಹಾಪೂರವೇ ಸೇರಿಕೊಳ್ಳುತ್ತಿದೆ. ಶಿವಣ್ಣರ ನೂರನೇ ಚಿತ್ರ 'ಜೋಗಯ್ಯ' ನಿರೀಕ್ಷೆ ಮೂಡಿಸಿದ್ದರೂ ಪ್ರೇಕ್ಷಕರಿಗೆ ಇಷ್ಟವಾಗಲಿಲ್ಲ. ಅದೆಷ್ಟೇ ಪ್ರಚಾರ, ಗಿಮಿಕ್ ಮಾಡಿದರೂ, ನಿರ್ದೇಶಕ ಪ್ರೇಮ್ ಅವರಿಂದ ಚಿತ್ರವನ್ನು ಗೆಲ್ಲಿಸಲಾಗಲಿಲ್ಲ.

  ಹೀಗಾಗಿ, ನೂರನೇ ಚಿತ್ರ ಜೋಗಯ್ಯ ಬದಲಿಗೆ 'ಶಿವ' ಚಿತ್ರಕ್ಕೆ ಎಲ್ಲಿಲ್ಲದ ಪ್ರತಿಕ್ರಿಯೆ ಮೂಡಿದೆ. ಶಿವರಾಜ್ ಕುಮಾರ್ ಕೂಡ 'ನನ್ನ ನೂರನೇ ಚಿತ್ರ ಜೋಗಯ್ಯ, ನಿರೀಕ್ಷಿತ ಫಲ ನೀಡಲಿಲ್ಲ. ಆ ಚಿತ್ರದ ಸೋಲನ್ನು ಮರೆತುಬಿಡಿ, ಶಿವ ಚಿತ್ರವನ್ನು ನೋಡಿ. ಈ ಚಿತ್ರ ನೂರನೇ ಚಿತ್ರದ ನಿಮ್ಮ ನಿರೀಕ್ಷೆಯನ್ನು ನಿಜ ಮಾಡಲಿದೆ" ಎಂದಿದ್ದಾರೆ.

  ಶಿವಣ್ಣರ ಅಭಿಮಾನಿಗಳು ಶಿವಣ್ಣನ ಈ ಮಾತುಗಳಿಂದ ಪುಳಕಗೊಂಡಿದ್ದಾರೆ. ಶಿವ ಚಿತ್ರದ ಬಿಡುಗಡೆಗೆ ಕಾದು ಕುಳಿತಿದ್ದಾರೆ. ಈಗಾಗಲೇ ಚಿತ್ರೀಕರಣ ಪೂರ್ಣಗೊಳಿಸಿರುವ ಈ ಚಿತ್ರ, ನಿರ್ದೇಶಕ ಓಂ ಪ್ರಕಾಶ್ ರಾವ್ ಕೈಚಳಕದಲ್ಲಿ ಚೆನ್ನಾಗಿ ಮೂಡಿಬಂದಿದೆ ಎನ್ನಲಾಗುತ್ತಿದೆ. ಶಿವಣ್ಣರಿಗೆ ನಾಯಕಿಯಾಗಿ ಗ್ಲಾಮರ್ ರಾಣಿ ರಾಗಿಣಿ ಇದ್ದಾರೆ.

  ಈ ಚಿತ್ರದ ಆಡಿಯೋ ಬಿಡುಗಡೆ ಚಿತ್ರದುರ್ಗದಲ್ಲಿ ನಡೆಯಲಿದೆ. ಇದೇ ತಿಂಗಳು 16 ರಂದು (16-06-2012) ಸಂಜೆ 6 ಗಂಟೆಗೆ ಚಿತ್ರದುರ್ಗದಲ್ಲಿ ನಡೆಯುವ ಈ ಸಮಾರಂಭದಲ್ಲಿ ಕನ್ನಡದ ಪ್ರಖ್ಯಾತ ನಟ-ನಟಿಯರ ಸಮ್ಮುಖದಲ್ಲಿ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅಂದು ಅಲ್ಲಿ ಕನ್ನಡದ ಬಹಳಷ್ಟು ತಾರೆಗಳ ಸಮಾಗಮ ನಡೆಯಲಿದೆ.

  'ಪವರ್ ಆಫ್ ಮಾಸ್ ಮಹಾರಾಜ ಶಿವರಾಜ್ ಕುಮಾರ್ ಆಡಿಯೋ ರಾಕಿಂಗ್ ಹಿಟ್' ಎಂಬ ಜಾಹೀರಾತು ಪ್ರಿಂಟ್ ಮೀಡಿಯಾಗಳಲ್ಲಿ ರಾರಾಜಿಸುತ್ತಿದೆ. ಶ್ರೀಕಾಂತ್ ಕೆಪಿ ಹಾಗೂ ಬಿ ಕಾಂತರಾಜು (ಚಿತ್ರದುರ್ಗ) ನಿರ್ಮಾಣದ ಈ ಚಿತ್ರದ ಧ್ವನಿಸುರುಳಿ ಬಹಳ ಅದ್ದೂರಿಯಾಗಿ ಚಿತ್ರದುರ್ಗದಲ್ಲಿ ನಡೆಯಲಿದೆ.

  ಶಿವರಾಜ್ ಕುಮಾರ್ ಅವರ ಇತ್ತೀಚಿನ ಹಿಟ್ ಚಿತ್ರವಾದ 'ಮೈಲಾರಿ' ಆಡಿಯೋ ಬಿಡುಗಡೆ ಕೂಡ ಚಿತ್ರದುರ್ಗದಲ್ಲೇ
  ಆಗಿತ್ತು. ಆ ಚಿತ್ರ ನೂರು ದಿನಗಳನ್ನು ಪೂರೈಸಿ ಯಶಸ್ವಿ ಚಿತ್ರದ ಸಾಲಿಗೆ ಸೇರಿದೆ. ಅದೇ ಕಾರಣಕ್ಕೋ ಏನೋ, ಈ ಚಿತ್ರದ ಆಡಿಯೋ ಬಿಡುಗಡೆಯೂ ಅದೇ ನೆಲದಲ್ಲಿ ನಡೆಯುತ್ತಿದೆ. ಹಾಗೇ, ನಿರ್ಮಾಪಕರೂ ಕೂಡ ಚಿತ್ರದುರ್ಗದವರು ಎಂಬುದನ್ನೂ ಮರೆಯುವಂತಿಲ್ಲ.

  ಇನ್ನೇನು ಸದ್ಯದಲ್ಲೇ ಶಿವ ಧ್ವನಿಸುರುಳಿ ಮಾರುಕಟ್ಟೆ ಪ್ರವೇಶಿಸಲಿದೆ. ಶಿವಣ್ಣರ ನೂರನೇ ಚಿತ್ರಕ್ಕೆ ಬದಲಿಗೆ ಬರುತ್ತಿರುವ ಚಿತ್ರವೆಂಬ ಹಣೆಪಟ್ಟಿ ಬೇರೆ. ಶಿವಣ್ಣರ ಮೈಲಾರಿ ಚಿತ್ರದ ನಂತರ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ಈ ಚಿತ್ರ, ಖಂಡಿತ ನಿರಾಸೆ ಮಾಡುವುದಿಲ್ಲ ಎಂಬುದು ಸ್ವತಃ ಶಿವಣ್ಣರ ಮಾತು.

  ನಿರ್ದೇಶಕ ಓಂ ಪ್ರಕಾಶ್ ರಾವ್ "ಈ ಚಿತ್ರ ಶಿವಣ್ಣರ ಅಭಿಮಾನಿಗಳಿಗೆ ಹೇಳಿ ಮಾಡಿಸಿದ ಚಿತ್ರ. ಮಾಸ್ ಹಾಗೂ ಕ್ಲಾಸ್ ಎರಡೂ ವರ್ಗದ ಪ್ರೇಕ್ಷಕರು ಇಷ್ಟಪಡಬಹುದಾದ ಸಿನಿಮಾ ಇದು. ಯಾವುದೇ ಗೊಂದಲವಿಲ್ಲದ ಕಥೆ-ಚಿತ್ರಕಥೆ ಇರುವ ಈ ಚಿತ್ರದ ಹಾಡುಗಳು, ದೃಶ್ಯವೈಭವ ಸೊಗಸಾಗಿದೆ" ಎಂದಿದ್ದಾರೆ.

  ಇನ್ನು ಚಿತ್ರದ ನಾಯಕಿ ರಾಗಿಣಿ ಕೂಡ ಈ ಚಿತ್ರದ ಬಗ್ಗೆ ಮೆಚ್ಚುಗೆಯ ಮಾತನ್ನಾಡಿದ್ದಾರೆ. "ಶಿವಣ್ಣರ ಜೋಡಿಯಾಗಿ ಈ ಚಿತ್ರದಲ್ಲಿ ನಟಿಸಿರುವ ನನಗೆ ಈ ಚಿತ್ರ ಸಂಪೂರ್ಣ ಖುಷಿ ಕೊಟ್ಟಿದೆ. ನಿರ್ದೇಶಕ ಓಂ ಪ್ರಕಾಶ್ ರಾವ್ ಅವರು ಚಿತ್ರವನ್ನು ಬಹಳ ಚೆನ್ನಾಗಿ ,ಅಚ್ಚುಕಟ್ಟಾಗಿ ಮಾಡಿದ್ದಾರೆ. ಈ ಚಿತ್ರದ ಬಿಡುಗಡೆಯನ್ನು ನಾನೂ ಎದುರು ನೋಡುತ್ತಿದ್ದೇನೆ" ಎಂದಿದ್ದಾರೆ.

  ಒಟ್ಟಿನಲ್ಲಿ ಶಿವ ಚಿತ್ರವು ಮಹೂರ್ತ ಮಾಡಿಕೊಂಡ ಕ್ಷಣದಿಂದಲೂ ಸಾಕಷ್ಟು ನಿರೀಕ್ಷೆ ಮೂಡಿಸಿದೆ. ದಿನದಿನಕ್ಕೂ ಅದು ಹೆಚ್ಚಾಗುತ್ತಲೇ ಇದೆ. ಸದ್ಯದಲ್ಲೇ ಧ್ವನಿಸುರುಳಿ ಬಿಡುಗಡೆಯೂ ಅದ್ದೂರಿಯಾಗೇ ನಡೆಯಲಿದೆ. ಅದ್ದೂರಿ ಪ್ರಚಾರದ ಮೂಲಕ ಮಹಾ ಅದ್ದೂರಿ ಬಿಡುಗಡೆ ಕಾಣಲಿದೆ ಶಿವಣ್ಣರ ಶಿವ. (ಒನ್ ಇಂಡಿಯಾ ಕನ್ನಡ)

  English summary
  Shivrajkumar Shiva movie Audio Release is held in Chitradurga on 16th June 2012, at 6.00 PM. Shivrajkumar and Ragini are in lead role in this movie and Om prakash Rao directed this.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X