»   » ಆದಿತ್ಯ ರಾವ್, ಹಿನ್ನೆಲೆ ಸಂಗೀತಕ್ಕೆ ಸಿಕ್ಕ ಹೊಸ ಪ್ರತಿಭೆ

ಆದಿತ್ಯ ರಾವ್, ಹಿನ್ನೆಲೆ ಸಂಗೀತಕ್ಕೆ ಸಿಕ್ಕ ಹೊಸ ಪ್ರತಿಭೆ

Posted By:
Subscribe to Filmibeat Kannada

ಯುಟ್ಯೂಬಲ್ಲಿ ಹರಿದಾಡುತ್ತಿರುವ ಕನ್ನಡ ಬಾಲ್ ಪೆನ್ ಚಿತ್ರದ 'ಸಾವಿರ ಕಿರಣವ ಚೆಲ್ಲಿ...' ಹಾಡು ಕೇಳಿದ್ದೀರಾ? ಕೇಳಿಲ್ಲದಿದ್ದರೆ ಖಂಡಿತ ಕೇಳಿ. ಈಗಾಗಲೆ ಕೇಳಿದ್ದೀರಾದರೆ ನಿಮಗೊಂದು ಪ್ರಶ್ನೆ ಮನದಲ್ಲಿ ಮೂಡಿಯೇ ಇರುತ್ತದೆ. ಗಂಟೆಗೆ ಗಂಟೆ ತಾಕಿಸಿದಂತೆ ಕಂಚಿನ ಕಂಠದಲ್ಲಿ, ಅತ್ಯಂತ ಸ್ಪಷ್ಟ ಧ್ವನಿಯಲ್ಲಿ ಮೊಳಗಿ ಬರುತ್ತಿರುವ ಈ ಅದ್ಭುತ ಕಂಠದ ಒಡೆಯ ಯಾರಿವನು, ಯಾರೋ ಇವನು?

ಆತ ಮತ್ತಾರೂ ಅಲ್ಲ ಜಾಗತಿಕ ಸಂಗೀತ ಕ್ಷೇತ್ರದಲ್ಲಿ ವಿಶಿಷ್ಟ ಪ್ರಯೋಗಗಳನ್ನು ಮಾಡುತ್ತ, ವಿಶಿಷ್ಟ ಛಾಪನ್ನು ಸ್ಥಾಪಿಸಿರುವ ಆದಿತ್ಯ ರಾವ್. ಅಚ್ಚ ಕನ್ನಡದ ಮಣ್ಣಿನ 23 ವರ್ಷದ ಕನಸು ಕಂಗಳ ಹುಡುಗ. ಹುಟ್ಟಿದ್ದು ಬೆಂಗಳೂರಿನಲ್ಲಿ ಆದರೆ ಬೆಳೆದಿದ್ದು ಮಾತ್ರ ದೂರದ ಅಮೆರಿಕಾದಲ್ಲಿ. ಇಷ್ಟಾದರೂ ಕನ್ನಡತನವನ್ನು ಮರೆತಿಲ್ಲ. ಪಿಬಿ ಶ್ರೀನಿವಾಸ್, ರಘು ದೀಕ್ಷಿತ್, ಇಳಯರಾಜ ಅವರ ಸಂಗೀತವೆಂದರೆ ಆದಿತ್ಯಗೆ ಪಂಚಪ್ರಾಣ.

ಪತ್ರಕರ್ತ ರವಿ ಬೆಳಗೆರೆ ಅವರು ಅರ್ಪಿಸಿ ಅವರ ಮಗಳು ಭಾವನಾ ಬೆಳಗೆರೆ ಮತ್ತು ಅಳಿಯ ಶ್ರೀನಗರ ಕಿಟ್ಟಿ ನಿರ್ಮಿಸಿರುವ 'ಬಾಲ್ ಪೆನ್' ಚಿತ್ರದ ಮುಖಾಂತರ ಒಬ್ಬ ಉದಯೋನ್ಮುಖ ಹಾಡುಗಾರ ಮತ್ತು ಸಂಗೀತಗಾರ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಸಂಗೀತವನ್ನು ಸಂಗೀತವಾಗಿ ಮಾತ್ರವಲ್ಲ ಅದನ್ನು ಒಂದು ಮನರಂಜನಾ ಉದ್ಯಮವಾಗಿ ಬೆಳೆಸಿ, ಅದರಲ್ಲಿ ವ್ಯಾಪಾರಿಕವಾಗಿಯೂ ಯಶಸ್ಸು ಕಾಣುವ ಕನಸು ಆದಿತ್ಯ ಹೊತ್ತಿದ್ದಾರೆ.

ಸಾವಿರ ಕಿರಣಗಳ ಚೆಲ್ಲಿ ಭೂಮಿಯನು ಬೆಳಗೋ ನೇಸರ... [ವಿಡಿಯೋ ನೋಡಿರಿ ಹಾಡು ಕೇಳಿರಿ] ಹಾಡನ್ನು ಆದಿತ್ಯ ರಾವ್ ಅವರು ಜೀವ ತುಂಬಿ ಹಾಡಿದ್ದಾರೆ. ಮಾಧುರ್ಯ ತುಂಬಿರುವ ಈ ಹಾಡು ಈಗಾಗಲೆ ಕನ್ನಡ ಚಿತ್ರ ಸಂಗೀತ ಕ್ಷೇತ್ರದಲ್ಲಿ ಹೊಸ ಅಲೆಯನ್ನೇ ಎಬ್ಬಿಸಿದೆ. ಕನ್ನಡ ಚಿತ್ರರಂಗಕ್ಕೆ ಅದ್ಭುತವಾದ ಪ್ರತಿಭೆಯೊಂದು ಸಿಕ್ಕಂತಾಗಿದೆ.

ಒನ್ಇಂಡಿಯಾ ಕನ್ನಡ ಅವರೊಂದಿಗೆ ನಡೆಸಿರುವ ಸಂದರ್ಶನದ ಆಯ್ದ ಭಾಗ ಇಲ್ಲಿದೆ. ಅಮೆರಿಕದಲ್ಲಿ ಇದ್ದರೂ ಕನ್ನಡದ ಕಂಪನ್ನು ಆದಿತ್ಯ ಮೈಗೂಡಿಸಿಕೊಂಡಿದ್ದಾರೆ. "ಕನ್ನಡ ನನ್ನ ಮಾತೃಭಾಷೆ. ಕನ್ನಡ ಅಂದ್ರೆ ತುಂಬಾ ಇಷ್ಟ. ಕನ್ನಡ ಖಂಡಿತ ಮಾತನಾಡುತ್ತೇನೆ. ಆದರೆ, ನಿರರ್ಗಳವಾಗಿ ಮತ್ತು ತಪ್ಪಿಲ್ಲದಂತೆ ಮಾತನಾಡುತ್ತೇನೆಂದು ಹೇಳುವುದಿಲ್ಲ" ಎಂದು ಅವರು ವಿನಮ್ರವಾಗಿ ಹೇಳುತ್ತಾರೆ.

ಆದಿತ್ಯ ರಾವ್ ಸಂಕ್ಷಿಪ್ತ ವಿವರ

ನಾನು ಹುಟ್ಟಿದ್ದು ಬೆಂಗಳೂರಿನಲ್ಲಾದರೂ ಬೆಳೆದದ್ದು ಪಿಟ್ಸ್‌ಬರ್ಗ್‌ನಲ್ಲಿ. ನನಗೆ ಇಂಗ್ಲಿಷ್, ಕನ್ನಡ, ತಮಿಳು, ಹಿಂದಿ ಮತ್ತು ಸ್ವಲ್ಪಮಟ್ಟಿಗೆ ಜರ್ಮನ್ ಮಾತನಾಡಲು ಬರುತ್ತದೆ. ಮನರಂಜನಾ ಉದ್ಯಮದಲ್ಲಿ ಯಶಸ್ವಿಗಾಗಿ ತಹತಹಿಸುತ್ತಿರುವ, ಸಂಪಗೀತ ಇಷ್ಟಪಡುವ ಜಾಗತಿಕ ಮನುಷ್ಯ ನಾನು. ಪೆನ್ ವಿಶ್ವವಿದ್ಯಾಲಯದಲ್ಲಿ ಹಣಕಾಸು ವಿಷಯದಲ್ಲಿ ಪದವಿ ಪಡೆದಿದ್ದೇನೆ. ಪ್ರಸ್ತುತ ನಾನು, ಕಾರ್ನೆಜೀ ಮೆಲನ್ ವಿಶ್ವವಿದ್ಯಾಲಯದಲ್ಲಿ ಎಂಟರ್ಟೇನ್ಮೆಂಟ್ ಇಂಡಸ್ಟ್ರಿ ಮ್ಯಾನೇಜ್ಮೆಂಟ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮಾಡುತ್ತಿದ್ದೇನೆ. ಸಂಗೀತ ನನ್ನ ಪ್ರಾಥಮಿಕ ಆದ್ಯತೆಯಾದರೂ, ವ್ಯಾಪಾರದ ಬಗ್ಗೆ ನನಗೆ ಇರುವ ನೈಪುಣ್ಯತೆಯನ್ನು ಮನರಂಜನಾ ಕ್ಷೇತ್ರದ ತೊಡಗಿಸಿ ಯಶಸ್ಸು ಕಾಣಬೇಕೆಂಬುದು ನನ್ನ ಹಂಬಲ.

5 ವರ್ಷದವನಿದ್ದಾಗಲೇ ಸಂಗೀತ ಕಲಿಕೆ ಆರಂಭ

ಸಂಗೀತ ಕಲೆಯಿಂದ ಹಿಡಿದು ಆಟೋಮೊಬೈಲ್ಸ್ ಕ್ಷೇತ್ರದ ಅದ್ಭುತಗಳ ಬಗ್ಗೆ ನನಗೆ ಅಪಾರ ಆಸಕ್ತಿಯಿದೆ. ಸಂಗೀತವೇ ಉಸಿರಾಗಿರುವ ಕುಟುಂಬ ನಮ್ಮದು. ನನ್ನ ತಂದೆ ತಾಯಿ ಶಾಸ್ತ್ರೀಯ(ಭಾರತೀಯ ಮತ್ತು ಪಾಶ್ಚಾತ್ಯ), ಚಲನಚಿತ್ರ ಸಂಗೀತವನ್ನು ಕೇಳುತ್ತಾರೆ. ನಮ್ಮ ಮನೆಯಲ್ಲಿ ಎಂಎಸ್ ಸುಬ್ಬುಲಕ್ಷ್ಮಿ, ಕದ್ರಿ ಗೋಪಾಲನಾಥ್, ಮದುರೈ ಸೋಮು, ಜಾನ್ ಡೆನ್ವರ್, ಕಿಶೋರ್ ಕುಮಾರ್, ಎಆರ್ ರೆಹಮಾನ್ ಸಂಗೀತಗಳು ಗುಂಗಿಡುತ್ತಿರುತ್ತವೆ. ಬೆಂಗಳೂರಿನಲ್ಲಿ ವಿಜಯಾ ಸಂಗೀತ ಶಾಲೆಯಲ್ಲಿ ಕೆ. ರಮೇಶ್ ಅವರ ಅಡಿಯಲ್ಲಿ ಸಂಗೀತ ಕಲಿಯಲು ಆರಂಭಿಸಿದೆ. ಕರ್ನಾಟಕ, ಹಿಂದೂಸ್ತಾನಿ, ಜಾಝ್, ಪಾಶ್ಚಾತ್ಯ ಶಾಸ್ತ್ರೀಯ, ಹಿಪ್ ಹಾಪ್ ಸಂಗೀತ ಪ್ರಕಾರಗಳನ್ನು ಅಧ್ಯಯನ ಮಾಡಿದ್ದೇನೆ. ಸ್ಕೈಪ್ ಮುಖಾಂತರ ಬೆಂಗಳೂರಿನಲ್ಲಿಯೇ ಇರುವ ರಮೇಶ್ ಅವರ ಮುಖಾಂತರ ಈಗಲೂ ಕಲಿಯುತ್ತಿದ್ದೇನೆ.

ಯುಟ್ಯೂಬ್‌ನಲ್ಲಿ ನನ್ನ ಸಂಗೀತದ ಅಭಿಯಾನ

2007ರಿಂದ ನನ್ನ ಸಂಗೀತವನ್ನು ಯುಟ್ಯೂಬ್‌ನಲ್ಲಿ ಪ್ರಕಟಿಸಲು ಆರಂಭಿಸಿದೆ. 2011ರಲ್ಲಿ ಶಂಕರ್ ಟಕ್ಕರ್ ಜೊತೆ ಸೇರಿಕೊಂಡು ಎಆರ್ ರೆಹಮಾನ್ ಅವರ ಸಂಗೀತವಿರುವ 'ಮನಮೋಹಿನಿ ಮೊರೆ' ಹಾಡನ್ನು ಹಾಡಿದ್ದು ನನಗೆ ಭಾರೀ ತಿರುವು ನೀಡಿತು. ಯುಟ್ಯೂಬ್‌ನಲ್ಲಿ 900 ಸಾವಿರಕ್ಕೂ ಹೆಚ್ಚು ಜನ ಅದನ್ನು ವೀಕ್ಷಿಸಿ ಪ್ರಶಂಸಿಸಿದ್ದಾರೆ. ಕನ್ನಡದ ಹಚ್ಚಹಸಿರು ಹಾಡು 'ಶಿವಪ್ಪ ಕಾಯೋ ತಂದೆ' ಹಾಡಿಗೆ, ಮೂಲ ಸಂಗೀತದ ಜೊತೆ ವಾಯ್ಸ್ ಮಾಡ್ಯೂಲೇಷನ್ ಮಾಡಿದ್ದೇನೆ.

ಭಾವನಾ ಬೆಳಗೆರೆ 'ಬಾಲ್ ಪೆನ್' ಜೊತೆ ಕೆಲಸ ಮಾಡಿದ್ದು...

ಶಿವಪ್ಪ ಕಾಯೋ ತಂದೆ ಮತ್ತು ಮನಮೋಹಿನಿ ಹಾಡುಗಳನ್ನು, ಸಂಗೀತ ನಿರ್ದೇಶಕರಾದ ಮಣಿಕಾಂತ್ ಕದ್ರಿ ಅವರಿಗೆ ಕಳಿಸಿದ್ದೆ. ನನ್ನ ಕೆಲಸವನ್ನು ಇಷ್ಟಪಟ್ಟ ಅವರು ಬಾಲ್ ಪೆನ್ ಚಿತ್ರಕ್ಕೆ ಹಾಡುವ ಅವಕಾಶವನ್ನು ನೀಡಿದರು. ಈ ಚಿತ್ರಕ್ಕೆ ಎರಡು ಹಾಡು ಹಾಡಿದ್ದೇನೆ. ಮಣಿಕಾಂತ್ ಸರ್ ಮತ್ತು ಚಿತ್ರದ ನಿರ್ದೇಶಕ ಶಶಿಕಾಂತ್ ಅವರೊಂಡನೆ ಕೆಲಸ ಮಾಡಿದ್ದು ಮರೆಯಲಾರದ ಅನುಭವ. ಯುಟ್ಯೂಬ್‌ನಲ್ಲಿ ಮನೆಮಾತಾಗಿರುವ 'ಸಾವಿರ ಕಿರಣ...' ಹಾಡು ಕೇಳಿದಾಗ ಇದರ ಅರಿವು ನಿಮಗಾಗುತ್ತದೆ.

ಸಂಗೀತ ಹವ್ಯಾಸವೂ ಹೌದು ಪ್ಯಾಷನ್ನೂ ಹೌದು

ಸಂಗೀತ ನನ್ನ ಜೀವ. ಸಂಗೀತ ನನ್ನಲ್ಲೇ ಹಾಸುಹೊಕ್ಕಾಗಿದೆ. ಸಂಗೀವನ್ನು ನನ್ನಿಂದ ಬೇರ್ಪಡಿಸುವುದು ಸಾಧ್ಯವೇ ಇಲ್ಲ. ನಾನು ನನ್ನ ಶೈಕ್ಷಣಿಕ ಭವಿಷ್ಯದ ಬಗ್ಗೆ ಚಿಂತಿಸುತ್ತಿದ್ದಾಗಲೂ ನನಗೆ ಸಂಗೀತ ಮತ್ತು ಮನರಂಜನೆಯ ಹಾದಿ ಬೇಕಾಗುತ್ತಿತ್ತು. ಸ್ನಾತಕೋತ್ತರ ಪದವಿ ನನಗೆ ಅಟ್ಲಾಂಟಿಕ್ ರೆಕಾರ್ಡ್ಸ್, ವಾರ್ನರ್ ಬ್ರದರ್ಸ್ ರೆಕಾರ್ಡ್ಸ್, ಇಂಟರ್ನ್ಯಾಷನಲ್ ಕ್ರಿಯೇಟಿವ್ ರೆಕಾರ್ಡ್ಸ್‌ನಲ್ಲಿ ಕಲಿಯಲು ಅನುವು ಮಾಡಿಕೊಟ್ಟಿದೆ.

ಅರಸಿ ಬರುತ್ತಿರುವ ನೂರೊಂದು ಅವಕಾಶಗಳು

ಅನೇಕ ಅವಕಾಶಗಳು ಬರುತ್ತಿವೆ. ಅದಕ್ಕೆ ನಾನು ಭಾರತದಲ್ಲಿಯೇ ಇರಬೇಕಾಗುತ್ತದೆ. ಆದರೆ, ಸದ್ಯಕ್ಕೆ ನಾನು ಎಂಟರ್ಟೇನ್ಮೆಂಟ್ ಇಂಡಸ್ಟ್ರಿ ಮ್ಯಾನೇಜ್ಮೆಂಟ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮಾಡುತ್ತಿರುವುದರಿಂದ 2013ರಲ್ಲಿ ಅದನ್ನು ಮುಗಿಸಿ ಮುಂದಿನ ಅವಕಾಶಗಳ ಬಗ್ಗೆ ವಿಚಾರ ಮಾಡುತ್ತೇನೆ. ಆದರೂ, ನನ್ನ ಮುಂದೆ ಎರಡು ಹಾಡುವ ಅವಕಾಶಗಳು ಇದ್ದು, ಡಿಸೆಂಬರಲ್ಲಿ ಭಾರತಕ್ಕೆ ಬಂದಾಗ ಪೂರೈಸುತ್ತೇನೆ.

English summary
Aditya Rao, the young music talent, who has entered Sandalwood in Bhavana Belagere's Kannada movie 'Ball Pen', spoke to Oneindia about his passion, works and more. Here are the excerpts from the interview. Aditya Rao is originally from Bangalore brought up in America.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada