ಶರಣ್ ಸಿನಿಮಾಗೆ ಯೋಗರಾಜ್ ಭಟ್ ಹಾಡು

'ರ್ಯಾಂಬೊ' ಚಿತ್ರದ ಯಶಸ್ಸಿನ ನಂತರ ಹಾಸ್ಯನಟ ಶರಣ್ ನಾಯಕರಾಗಿ ನಟಿಸುತ್ತಿರುವ ಚಿತ್ರಕ್ಕೆ ಖ್ಯಾತ ನಿರ್ದೇಶಕ ಯೋಗರಾಜ್ ಭಟ್ "ಖಾಲಿ ಕ್ವಾಟ್ರು ಬಾಟ್ಲಿಯಂಗೆ ಲೈಫು..." ಎಂಬ ಹಾಡನ್ನು ಬರೆದಿದ್ದಾರೆ. ಶರಣ್ ಹಾಗೂ ಸಾಧುಕೋಕಿಲ ಅಭಿನಯಿಸಿದ ಈ ಹಾಡಿಗೆ ಮುರಳಿ ನೃತ್ಯ ನಿರ್ದೇಶನ ಮಾಡಿದ್ದಾರೆ.
ಮೈಸೂರು ಲ್ಯಾಂಪ್ಸ್ ನಲ್ಲಿ ಬಾರೊಂದರ ಸೆಟ್ ನಲ್ಲಿ ಈ ಹಾಡಿನ ಚಿತ್ರೀಕರಣ ನಡೆಯಿತು. ಚಿತ್ರದ ಸಿಂಬಲ್ ವಿಭಿನ್ನ, ವಿನೋದ, ವಿಸ್ಮಯ ಎಂದು ಅಂದುಕೊಳ್ಳಬಹುದು. ಎರಡು ಎಂದಾದರೂ ಭಾವಿಸಕೊಳ್ಳಬಹುದು ಎನ್ನುತ್ತಾರೆ ಶರಣ್.
ಸಂಪೂರ್ಣ ಹಾಸ್ಯಮಯ ಚಿತ್ರವನ್ನು ನಂದಕಿಶೋರ್ ನಿರ್ದೇಶಿಸುತ್ತಿದ್ದಾರೆ. ಎಸ್.ಆರ್.ಎಸ್ ಮಿಡಿಯಾ ವಿಷನ್ ಎಂಬ ಲಾಂಛನದಲ್ಲಿ ಆನಂದ್ ಆಡಿಯೋ ಮೋಹನ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಶ್ರೀನಾಥ್ ಕಥೆ, ಚಿತ್ರಕಥೆ ಹೆಣೆದಿದ್ದಾರೆ. ಪ್ರಶಾಂತ್ ಸಂಭಾಷಣೆ ಬರೆದಿದ್ದಾರೆ.
ಅರ್ಜುನ್ ಜನ್ಯ ಅವರ ಸಂಗೀತವಿರುವ ಈ ಚಿತ್ರಕ್ಕೆ ಚಂದ್ರಶೇಖರ್ ಅವರ ಛಾಯಾಗ್ರಹಣವಿದೆ. ಶರಣ್, ಅಸ್ಮಿತಾ ಸೂದ್, ತಬಲನಾಣಿ, ಅವಿನಾಶ್, ರಮೇಶ್ ಭಟ್, ಸಾಧುಕೋಕಿಲಾ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ. (ಒನ್ಇಂಡಿಯಾ ಕನ್ನಡ)


Click it and Unblock the Notifications











