»   » ಎರಡು ತಿಂಗಳು ಕಾಣೆಯಾಗಿದ್ದ ಐಂದ್ರಿತಾ ಪ್ರತ್ಯಕ್ಷ

ಎರಡು ತಿಂಗಳು ಕಾಣೆಯಾಗಿದ್ದ ಐಂದ್ರಿತಾ ಪ್ರತ್ಯಕ್ಷ

Posted By:
Subscribe to Filmibeat Kannada

ಎರಡು ತಿಂಗಳಿಂದ ರಜೆಯ ಮೂಡಿನಲ್ಲಿದ್ದ ನಟಿ ಐಂದ್ರಿತಾ ರೇ ಕೊನೆಗೂ ಬಣ್ಣದ ಲೋಕಕ್ಕೆ ಮರಳಿದ್ದಾರೆ. 'ವೀರ ಪರಂಪರೆ' ಅವರು ಒಪ್ಪಿಕೊಂಡಿರುವ ಹೊಸ ಸಿನಿಮಾದ ಹೆಸರು. ಅಂದಹಾಗೆ, ಯುವನಟಿಯೊಬ್ಬಳು ಎರಡು ತಿಂಗಳಷ್ಟು ದೀರ್ಘ ಕಾಲ ಸುಮ್ಮನಿದ್ದದ್ದು ಯಾಕೆ?

ಸುಮ್ಮನೆ ಎನ್ನುತ್ತಾರೆ ಐಂದ್ರಿತಾ. ಕಳೆದ ವರ್ಷವಿಡೀ ಬಿಡುವಿಲ್ಲದಂತೆ ಕೆಲಸ ಮಾಡಿದ್ದೆ. ಆ ಕಾರಣಕ್ಕೆ ಕೊಂಚ ಬಿಡುವು ಬೇಕನ್ನಿಸಿತ್ತು. ಧೂಳ್, ನೂರು ಜನ್ಮಕೂ ಚಿತ್ರಗಳು ತೆರೆಗೆ ಸಿದ್ಧವಾಗಿವೆ. ಇಂಥ ಹೊತ್ತಿನಲ್ಲಿ ಸುಮ್ಮನೆ ಸಿಕ್ಕ ಅವಕಾಶಗಳಲ್ಲಿ ನಟಿಸುವುದರಲ್ಲಿ ಅರ್ಥವಿಲ್ಲ ಅಂದುಕೊಂಡಿದ್ದೆ. ದೊಡ್ಡ ಅವಕಾಶವೊಂದರ ನಿರೀಕ್ಷೆಯಲ್ಲೂ ಇದ್ದೆ. ಆ ಕಾರಣದಿಂದಾಗಿಯೇ ಈ ವಿಳಂಬ ಎನ್ನುವುದು ಐಂದ್ರಿತಾ ಸ್ಪಷ್ಟನೆ.

'ವೀರ ಪರಂಪರೆ' ಬಗ್ಗೆ ಐಂದ್ರಿತಾ ಆಸೆಕಣ್ಣಿನ ಹುಡುಗಿ. ಅವರ ನಿರೀಕ್ಷೆಗಳಿಗೆ ಎರಡು ಕಾರಣ. ಮೊದಲನೆಯದು ನಿರ್ದೇಶಕ ಎಸ್. ನಾರಾಯಣ್ ಅವರ ಜೊತೆಯಲ್ಲಿ ಕೆಲಸ ಮಾಡುತ್ತಿರುವುದು. ಎಸ್ಸೆನ್ ಹೇಳಿದ ಕಥೆ ಜಂಗ್ಲಿ ಹುಡುಗಿಗೆ ಇಷ್ಟವಾಗಿದೆ. ಆ ಕಥೆಯಲ್ಲಿ ಅಭಿನಯಕ್ಕೆ ಅವಕಾಶವೂ ಇದೆ ಅನ್ನಿಸಿದೆ.

ಐಂದ್ರಿತಾ ನಿರೀಕ್ಷೆಗೆ ಮತ್ತೊಂದು ಕಾರಣ ಸುದೀಪ್. ಮೊದಲ ಸಲ ಸುದೀಪ್‌ಗೆ ಜೋಡಿಯಾಗಿ ಐಂದ್ರಿತಾ ನಟಿಸುತ್ತಿದ್ದಾರೆ. ಸುದೀಪ್ ಹೇಳಿಕೇಳಿ ಪಳಗಿದ ಅನುಭವಿ. ನಿರ್ದೇಶನದಲ್ಲಿ ಪಳಗಿದ ವೃತ್ತಿಪರ ಕೂಡ. ಹಾಗಾಗಿ, ಸುದೀಪ್ ಸಾಂಗತ್ಯದಲ್ಲಿ ಒಂದಷ್ಟು ಹೊಸ ವಿಷಯ ಕಲಿತುಕೊಳ್ಳಬಹುದು ಎನ್ನುವುದು ಆಕೆಯ ಲೆಕ್ಕಾಚಾರ. ಅಂದಹಾಗೆ, ವೀರ ಪರಂಪರೆ ಶೂಟಿಂಗ್ ಏಪ್ರಿಲ್‌ನಲ್ಲಿ ಶುರುವಾಗಲಿದೆ. ಅದೊಂದು ಸಣ್ಣ ಶೆಡ್ಯೂಲ್. ಚಿತ್ರದ ಬಹುಭಾಗದ ಶೂಟಿಂಗ್ ಮೇ ತಿಂಗಳಲ್ಲಿ ನಡೆಯಲಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada