»   » ಮಾಜಿ ಪ್ರಧಾನಿ ದೇವೇಗೌಡರಿಂದ ಪೃಥ್ವಿ ಚಿತ್ರ ವೀಕ್ಷಣೆ

ಮಾಜಿ ಪ್ರಧಾನಿ ದೇವೇಗೌಡರಿಂದ ಪೃಥ್ವಿ ಚಿತ್ರ ವೀಕ್ಷಣೆ

Posted By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ಪೃಥ್ವಿ' ಚಿತ್ರವನ್ನು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಶನಿವಾರ (ಮೇ.1)ಬೆಳಗ್ಗೆ ಬೆಂಗಳೂರು ರೇಣುಕಾಂಬ ಚಿತ್ರಮಂದಿರದಲ್ಲಿ ವೀಕ್ಷಿಸಿದರು. ದೇವೇಗೌಡರೊಂದಿಗೆ ಅವರ ಬಲಗೈ ಬಂಟ ಹಾಗೂ ಜೆಡಿಎಸ್ ವಕ್ತಾರ ವೈಎಸ್ ವಿ ದತ್ತ ಹಾಗೂ ಹಲವು ಜೆಡಿಎಸ್ ಕಾರ್ಯಕರ್ತರು ಚಿತ್ರವನ್ನು ವೀಕ್ಷಿಸಲು ರೇಣುಕಾಂಬ ಚಿತ್ರಮಂದಿರಕ್ಕೆ ಆಗಮಿಸಿದ್ದರು.

ಪೃಥ್ವಿ ಚಿತ್ರ ವೀಕ್ಷಣೆಗೂ ಮುನ್ನ ಸುದ್ದಿಗಾರೊಂದಿಗೆ ಮಾತನಾಡಿದ ದೇವೇಗೌಡ, ಈ ಚಿತ್ರವನ್ನು ತೆಗೆಯಲು ಪೃಥ್ವಿ ಚಿತ್ರತಂಡಬಳ್ಳಾರಿಯಲ್ಲಿ ಸಾಕಷ್ಟು ಸಮಸ್ಯೆಗಳನ್ನು ಅನುಭವಿಸಿದೆ. ಚಿತ್ರತಂಡಕ್ಕೆ ನೈತಿಕ ಬೆಂಬಲ ನೀಡುವ ಸಲುವಾಗಿ ಚಿತ್ರವನ್ನು ವೀಕ್ಷಿಸಲು ಬಂದಿದ್ದೇನೆ. ರಾಜ್ಯವನ್ನು ಹೇಗೆ ಲೂಟಿ ಮಾಡುತ್ತಿದ್ದಾರೆ. ರಾಜ್ಯದ ಸಂಪತ್ತನ್ನು ಹೇಗೆ ಕೊಳ್ಳೆಹೊಡೆಯುತ್ತಿದ್ದಾರೆ ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ ಎಂದು ಕೇಳಲ್ಪಟ್ಟಿದ್ದೇನೆ. ಹಾಗಾಗಿ ಚಿತ್ರ ನೋಡಲು ಬಂದಿದ್ದಾಗಿ ದೇವೇಗೌಡ ತಿಳಿಸಿದರು.

ವೈಎಸ್ ವಿ ದತ್ತ ಅವರ ಕುಟುಂಬ ಸದಸ್ಯರು ಪೃಥ್ವಿ ಚಿತ್ರ ವೀಕ್ಷಣೆಗೆ ಬಂದಿದ್ದರು. ರೇಣುಕಾಂಬ ಚಿತ್ರಮಂದಿರದ ಎಲ್ಲಾ ಟಿಕೆಟ್ ಗಳನ್ನು ಬುಕ್ ಮಾಡಿಕೊಳ್ಳಲಾಗಿದ್ದು ಸದ್ಯಕ್ಕೆ ದೇವೇಗೌಡರು ಪೃಥ್ವ್ವಿ ಚಿತ್ರ ವೀಕ್ಷಣೆಯಲ್ಲಿ ತಲ್ಲೀನರಾಗಿದ್ದಾರೆ. ಚಿತ್ರ ವೀಕ್ಷಣೆಯ ಬಳಿಕ ದೇವೇಗೌಡರ ಪ್ರತಿಕ್ರಿಯೆ ಏನು ಎಂಬ ಕುತೂಹಲ ಹಲವರನ್ನು ಕಾಡುತ್ತಿದೆ.

ಪೃಥ್ವಿ ಚಿತ್ರ ಬಳ್ಳಾರಿ ಗಣಿಗಾರಿಕೆ,ಆಂಧ್ರ ಕರ್ನಾಟಕ ಗಡಿ ಸಮಸ್ಯೆ, ಗಣಿಧಣಿಗಳ ಸುತ್ತ ಹೆಣೆಯಲಾದ ಕತೆಯಾದ ಕಾರಣ ದೇವೇಗೌಡರ ಗಮನ ಸೆಳೆದಿತ್ತು.ದಿನದ ಇಪ್ಪತ್ತನಾಲ್ಕು ಗಂಟೆಯೂ ರಾಜಕಾರಣ ಮಾಡುವ ದೇವೇಗೌಡರು ಈ ಚಿತ್ರವನ್ನು ವೀಕ್ಷಿಸುತ್ತಿರುವ ಹಿಂದಿನ ಮರ್ಮ ಏನು ಎಂಬುದು ಸದ್ಯಕ್ಕೆ ಸಸ್ಪೆನ್ಸ್ ಆಗಿ ಉಳಿದಿದೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada