»   »  ಕಡೆಗೂ ವಿದೇಶಕ್ಕೆ ರಾಜ್ ದ ಶೋಮ್ಯಾನ್ ರಫ್ತು

ಕಡೆಗೂ ವಿದೇಶಕ್ಕೆ ರಾಜ್ ದ ಶೋಮ್ಯಾನ್ ರಫ್ತು

Subscribe to Filmibeat Kannada

ಕಡೆಗೂ 'ರಾಜ್ ದ ಶೋ ಮ್ಯಾನ್' ಚಿತ್ರ ವಿದೇಶಗಳಲ್ಲಿ ಬಿಡುಗಡೆಯಾಗುತ್ತಿದೆ. ಆದರೆ ಈ ಬಾರಿ ರಾಜ್ ಚಿತ್ರವನ್ನು ಯಾವುದೇ ಒಬ್ಬ ವ್ಯಕ್ತಿ ಬಿಡುಗಡೆ ಮಾಡುತ್ತಿಲ್ಲ. ಬದಲಾಗಿ ಬೆವಿನ್ ಎಕ್ಸ್ ಫೋರ್ಟ್ಸ್ ಇಂಡಿಯಾ ಪ್ರೈ ಲಿಮಿಟೆಡ್ ಎಂಬ ಕಂಪನಿ ಬಿಡುಗಡೆ ಮಾಡುತ್ತಿದೆ. ಹಾಗಾಗಿ ಅನಿವಾಸಿ ಕನ್ನಡಿಗರನ್ನು ರಂಜಿಸಲು ರಾಜ್ ವಿದೇಶಗಳಿಗೆ ರಫ್ತಾಗುತ್ತಿದೆ.

ರಾಜ್ ಚಿತ್ರದ ವಿದೇಶಿ ಬಿಡುಗಡೆ ಹಾಗೂ ವಿತರಣೆ ಹಕ್ಕುಗಳನ್ನು ತಮ್ಮ ಸಂಸ್ಥೆಗೆ ನೀಡಲಾಗಿದೆ. ಈ ಕುರಿತ ಒಪ್ಪಂದಕ್ಕೆ ನಿರ್ಮಾಕರೊಂದಿಗೆ ಈಗಾಗಲೇ ಸಹಿ ಮಾಡಿದ್ದೇವೆ ಎಂದು ಬೆವಿನ್ ಎಕ್ಸ್ ಫೋರ್ಟ್ಸ್ ತಿಳಿಸಿದೆ. ಮೊದಲ ಹಂತದಲ್ಲಿ ಚಿತ್ರವನ್ನು ಎಲ್ಲೆಲ್ಲಿ ಬಿಡುಗಡೆ ಮಾಡಬೇಕೆಂಬ ದಿನಾಂಕವನ್ನು ಈಗಾಗಲೇ ನಿಗದಿಪಡಿಸಲಾಗಿದೆ.

ಸೆಪ್ಟೆಂಬರ್ 27ರಂದು ಸಿಂಗಪುರದಲ್ಲಿ ಹಾಗೂ ಅಕ್ಟೋಬರ್ 4ರಂದು ಆಸ್ಟ್ರೇಲಿಯಾದಲ್ಲಿ ಚಿತ್ರ ಬಿಡುಗಡೆಯಾಗಲಿದೆ. ಎರಡನೇ ಹಂತದಲ್ಲಿ ನ್ಯೂಜಿಲ್ಯಾಂಡ್, ಯುಎಸ್ ಎ, ದುಬೈ, ಮಲೇಷ್ಯಾ, ಯುಕೆ ಮತ್ತು ದಕ್ಷಿಣ ಅಮೆರಿಕಾದಲ್ಲಿ ರಾಜ್ ಚಿತ್ರ ಬಿಡುಗಡೆಯಾಗಲಿದೆ. ಆದರೆ ದಿನಾಂಕ ಇನ್ನೂ ನಿಗದಿಯಾಗಿಲ್ಲ.

ವಿದೇಶದಲ್ಲಿ ಕನ್ನಡ ಚಿತ್ರಗಳನ್ನು ಬಿಡುಗಡೆ ಮಾಡುವಲ್ಲಿ ಬೆವಿನ್ ಸಂಸ್ಥೆಗೆ ಈಗಾಗಲೇ ಅನುಭವಿದೆ. ಈ ಹಿಂದೆ ಅಭಿ, ಆಕಾಶ್, ಮುಂಗಾರು ಮಳೆ, ಗಾಳಿಪಟ, ರಾಮಾ ಶಾಮಾ ಭಾಮ ಮುಂತಾದ ಚಿತ್ರಗಳನ್ನು ವಿದೇಶಗಳಲ್ಲಿಬಿಡುಗಡೆ ಮಾಡಿತ್ತು. ಒಟ್ಟಿನಲ್ಲಿ ರಾಜ್ ಚಿತ್ರ ವಿದೇಶಗಳಲ್ಲಿ ಬಿಡುಗಡೆಯಾಗಲು ಸೂಕ್ತ ಸಂಸ್ಥೆಯ ಕೈಗೆ ಸಿಕ್ಕಿದೆ.

ಕರ್ನಾಟಕದ ನೆಲದಲ್ಲಿ ರಾಜ್ ಚಿತ್ರವನ್ನು ಪ್ರೇಕ್ಷಕರು ನೋಡಿಯಾಗಿದೆ. ಆದರೆ ಅನಿವಾಸಿ ಕನ್ನಡಿಗರ ಪಾಲಿಗೆ ರಾಜ್ ಮರೀಚಿಕೆಯಾಗಿತ್ತು. ಚಿತ್ರ ಹೇಗಿದೆ ಎಂಬ ಕುತೂಹಲ ಕಾಡುತ್ತಿತ್ತು. ಇದೀಗ ವಿದೇಶಗಳಲ್ಲಿ ರಾಜ್ ತೆರೆಕಾಣುತ್ತ್ತಿರುವ ಕಾರಣ ಆ ಕುತೂಹಲಕ್ಕೆ ತೆರೆ ಬೀಳಲಿದೆ. ಅನಿವಾಸಿ ಕನ್ನಡಿಗರನ್ನು ರಾಜ್ ಚಿತ್ರ ರಂಜಿಸುತ್ತದೋ ಇಲ್ಲವೋ ಎಂಬುದನ್ನು ಕಾದು ನೋಡಬೇಕಾಗಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada