»   »  ನಟಿ ಶರ್ಮಿಳಾ ಮಾಂಡ್ರೆ ಸ್ವಯಂವರ!

ನಟಿ ಶರ್ಮಿಳಾ ಮಾಂಡ್ರೆ ಸ್ವಯಂವರ!

Posted By:
Subscribe to Filmibeat Kannada

ನಟಿ ಶರ್ಮಿಳಾ ಮಾಂಡ್ರೆ 'ಸ್ವಯಂವರ'ಕ್ಕೆ ತಯಾರಿ ನಡೆಸುತ್ತಿದ್ದಾರೆ! ಕೊರಳಿಗೆ ಹಾರ ಹಾಕಿಸಿಕೊಳ್ಳಲು ಇಬ್ಬರು ವರರಾದ ಶ್ರೀನಗರ ಕಿಟ್ಟಿ ಹಾಗೂ ದಿಗಂತ್ ಸಿದ್ಧರಾಗಿದ್ದಾರೆ. ಆದರೆ ಅವರು ಹೀಗೆ ತಯಾರಿ ಮಾಡಿಕೊಳ್ಳುತ್ತಿರುವುದು ರಿಯಾಲಿಟಿ ಕಾರ್ಯಕ್ರಮಕ್ಕಲ್ಲ 'ಸ್ವಯಂವರ' ಎಂಬ ಚಿತ್ರಕ್ಕೆ!

ಶ್ರೀ ಸಾಯಿ ಕಂಬೈನ್ಸ್ ಲಾಂಛನದಲ್ಲಿ ಎಂ.ಚಂದ್ರು ಅವರು ನಿರ್ಮಿಸುತ್ತಿರುವ 'ಸ್ವಯಂವರ' ಚಿತ್ರದ ಹಾಡುಗಳು ರೇಣು ಸ್ಟೂಡಿಯೋದಲ್ಲಿ ಧ್ವನಿಮುದ್ರಣಗೊಂಡಿದೆ. ಮಣಿಕಾಂತ್ ಕದ್ರಿ ಸಂಗೀತ ಸಂಯೋಜಿಸುತ್ತಿರುವ ಈ ಚಿತ್ರದಲ್ಲಿ ಐದು ಹಾಡುಗಳಿವೆ. ಕನ್ನಡದ ಐದು ನಿರ್ದೇಶಕರು ಐದು ಗೀತೆಗಳನ್ನು ಬರೆದಿರುವುದು 'ಸ್ವಯಂವರ'ದ ವಿಶೇಷ. ಪ್ರೇಂ, ಯೋಗರಾಜ್‌ಭಟ್, ವಿ.ನಾಗೇಂದ್ರಪ್ರಸಾದ್. ತುಷಾರ ರಂಗನಾಥ್ ಹಾಗೂ ಎ.ಪಿ.ಅರ್ಜುನ್ ಈ ಚಿತ್ರಕ್ಕೆ ಗೀತರಚನೆ ಮಾಡಿರುವ ನಿರ್ದೇಶಕರು.

ಖ್ಯಾತನಾಮರ ಬಳಿ ಸಹಾಯಕರಾಗಿ ಕಾರ್ಯ ನಿರ್ವಹಿಸಿ, 'ಮಸ್ತ್ ಮಜಾ ಮಾಡಿ' ಚಿತ್ರದ ಮೂಲಕ ಸ್ವತಂತ್ರ ನಿರ್ದೇಶನಕ್ಕೆ ಪಾದಾರ್ಪಣೆ ಮಾಡಿದ ಅನಂತರಾಜು ಈ ಚಿತ್ರದ ನಿರ್ದೇಶಕರು. ಈಗಾಗಲೇ ಹಲವು ಚಿತ್ರಗಳನ್ನು ನಿರ್ದೇಶಿಸಿರುವ ಇವರು 'ಸ್ವಯಂವರ' ಉತ್ತಮ ಕಥಾಹಂದರವನ್ನು ಹೊಂದಿರುವ ಚಿತ್ರ ಎಂದು ತಿಳಿಸಿದ್ದಾರೆ.

ಸೆಪ್ಟಂಬರ್ 2ರಿಂದ ಚಿತ್ರದ ಚಿತ್ರೀಕರಣ ಆರಂಭವಾಗಲಿದ್ದು, ಬೆಂಗಳೂರು ಹಾಗೂ ಮೈಸೂರಿನಲ್ಲಿ 45ದಿನಗಳ ಚಿತ್ರೀಕರಣ ನಡೆಯಲಿದೆ. ನಿರ್ದೇಶಕರೇ ಚಿತ್ರಕಥೆ ಬರೆದಿರುವ ಈ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಹಾಗೂ ದಿಗಂತ್ ನಾಯಕರಾಗಿ ನಟಿಸುತ್ತಿದ್ದಾರೆ. ಶರ್ಮಿಳಾ ಮಾಂಡ್ರೆ ನಾಯಕಿಯಾಗಿ ಅಭಿನಯಿಸುತ್ತಿರುವ 'ಸ್ವಯಂವರ'ದ ಉಳಿದ ತಾರಾಬಳಗದಲ್ಲಿ ತಾರಾ, ಓಂಪ್ರಕಾಶ್‌ರಾವ್, ಅರುಣ್‌ಸಾಗರ್ ಮುಂತಾದವರಿದ್ದಾರೆ. ಎಚ್.ಸಿ.ವೇಣು ಛಾಯಾಗ್ರಹಣ, ದೀಪು.ಎಸ್.ಕುಮಾರ್ ಸಂಕಲನ, ತುಷಾರರಂಗನಾಥ್ ಸಂಭಾಷಣೆ, ಹರ್ಷ ನೃತ್ಯ ಹಾಗೂ ಪಳನಿರಾಜ್ ಅವರ ಸಾಹಸ ಈ ನೂತನ ಚಿತ್ರಕ್ಕಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada