»   » ಶುಕ್ರವಾರ ಆರು ಚಿತ್ರಗಳ ನಡುವೆ ಪೈಪೋಟಿ

ಶುಕ್ರವಾರ ಆರು ಚಿತ್ರಗಳ ನಡುವೆ ಪೈಪೋಟಿ

Posted By:
Subscribe to Filmibeat Kannada

ಕನ್ನಡ ಚಿತ್ರೋದ್ಯಮ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆಯೇ? ಕರ್ನಾಟಕ ಚಲನಚಿತ್ರ ಮಂಡಳಿಯ ನಿಯಮಕ್ಕೆ ಬೆಲೆ ಇಲ್ಲವೇ? ಏಕಕಾಲದಲ್ಲಿ ಮೂರು ಚಿತ್ರಗಳು ಮಾತ್ರ ತೆರೆಕಾಣಬೇಕೆನ್ನುವ ಮಂಡಳಿಯ ನಿಯಮವನ್ನು ಗಾಳಿಗೆ ತೂರಲಾಗುತ್ತಿದೆಯೇ? ಕನ್ನಡ ಚಿತ್ರ ನಿರ್ಮಾಪಕರೇ ಮಂಡಳಿ ನಿಯಮವನ್ನು ಪಾಲಿಸದಿದ್ದರೆ ಪರಭಾಷಾ ಚಿತ್ರ ನಿರ್ಮಾಪಕರು ಮತ್ತು ವಿತರಕರು ಎಲ್ಲಿ ಪಾಲಿಸುತ್ತಾರೆ ಎನ್ನುವ ಕನಿಷ್ಠ ಬುದ್ದಿ ಇವರಿಗೆ ಇರುವುದು ಬೇಡವೇ? ಕನ್ನಡ ಚಿತ್ರೋಧ್ಯಮ ಇದೇ ರೀತಿ ಆಂತರಿಕ ಕಲಹದಲ್ಲಿ/ಕಚ್ಚಾಟದಲ್ಲಿ/ಪೈಪೋಟಿಯಲ್ಲಿ ಮುಂದುವರಿದರೆ ಚಿತ್ರೋಧ್ಯಮ ಬಾಗಿಲು ಹಾಕಿಕೊಳ್ಳಬೇಕಾದ ಪರಿಸ್ಥಿತಿ ಬರುವ ದಿನ ದೂರವಿಲ್ಲ, ಆದರೆ ಹಾಗಾಗದಿರಲಿ.

ಏನೇ ಇರಲಿ ಒಟ್ಟು ಆರು ಚಿತ್ರಗಳು ಈ ಶುಕ್ರವಾರ ತೆರೆಗೆ ಅಪ್ಪಳಿಸಲು ಸಿದ್ದವಾಗಿದೆ. ಹೆಂಡ್ತೀರ್ ದರ್ಬಾರ್, ಜಮಾನ, ಹೋಳಿ, ಪ್ರೀತಿ ಅಂದ್ರೆ ಇಷ್ಟೇನಾ, ಪರೀಕ್ಷೆ ಮತ್ತು ರೌಡಿ ಹೃದಯ ಇವಿಷ್ಟು ಚಿತ್ರಗಳು ಬಿಡುಗಡೆಗೊಳ್ಳುತ್ತಿವೆ. 'ಪರೀಕ್ಷೆ' ಚಿತ್ರವನ್ನು ಬೆಳಗಾವಿ ಶಾಸಕ ಸಂಜಯ್ ಪಾಟೀಲ್ ನಿರ್ಮಿಸುತ್ತಿದ್ದು ಬರೀ 'ಬಿ' ಸೆಂಟರ್ ನಲ್ಲಿ ಮಾತ್ರ ಬಿಡುಗಡೆಗೊಳಿಸುತ್ತಿದ್ದಾರೆ. ಅನು ಪ್ರಭಾಕರ್ ಮುಖ್ಯ ಭೂಮಿಕೆಯಲ್ಲಿರುವ ಈ ಚಿತ್ರ ಅಪ್ಪಟ ಸಾಮಾಜಿಕ ಚಿತ್ರ. ಉತ್ತರ ಕರ್ನಾಟಕದ ಕೇಂದ್ರಗಳಲ್ಲಿ ಮಾತ್ರ ಚಿತ್ರ ಬಿಡುಗಡೆಗೊಳ್ಳುತ್ತಿದೆ. ಮಿಕ್ಕ ಎಲ್ಲಾ ಐದು ಚಿತ್ರಗಳು ರಾಜ್ಯಾದ್ಯಂತ ಬಿಡುಗಡೆಗೊಳ್ಳುತ್ತಿವೆ.

14 ವರ್ಷಗಳ ಹಿಂದೆ ಬಂದಿದ್ದ ಯಶಸ್ವಿ ತಮಿಳು ಚಿತ್ರದ ರಿಮೇಕ್ ಚಿತ್ರವೇ 'ಹೆಂಡ್ತೀರ ದರ್ಬಾರ್'. ರಮೇಶ್ ಅರವಿಂದ್ ಮತ್ತು ಮೀನಾ ಪ್ರಮುಖ ಭೂಮಿಕೆಯಲ್ಲಿದ್ದಾರೆ. 'ಜಮಾನ' ಚಿತ್ರದ ಮುಖಾಂತರ ಬಾಲಿವುಡ್ ನಟ ಜಾಕಿಶ್ರಾಫ್ ಮತ್ತೊಮ್ಮೆ ಕನ್ನಡದಲ್ಲಿ ನಟಿಸುತ್ತಿದ್ದಾರೆ. ಇದಕ್ಕೂ ಮುನ್ನ ಕಿಶನ್ ನಿರ್ದೇಶನದ 'ಕೇರಾಫ್ ಫುಟ್ ಪಾತ್' ಚಿತ್ರದಲ್ಲಿ ಅತಿಥಿ ನಟರಾಗಿ ಕಾಣಿಸಿಕೊಂಡಿದ್ದರು. 'ಹೋಳಿ' ಚಿತ್ರ ದೇವಾದಸಿ ಪದ್ಧತಿ ಕಥೆ ಆಧಾರಿತ ಚಿತ್ರ ಮತ್ತು ರಾಗಿಣಿ ಎನ್ನುವ ನಟಿಗೆ ಮೊದಲ ಚಿತ್ರ. ಇನ್ನು 'ರೌಡಿ ಹೃದಯ' ಮತ್ತು 'ಪ್ರೀತಿ ಅಂದ್ರೆ ಇಷ್ಟೇನಾ' ಚಿತ್ರಗಳು ಹೊಸಬರ ಪ್ರಯತ್ನ.

ಒಟ್ಟಿನಲ್ಲಿ ಶುಕ್ರವಾರ (ಜು.2) ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಒಂದು ವಿಶಿಷ್ಟವಾದ ದಿನ. ಈ ವರ್ಷ ಇದುವರೆಗೆ ಹೆಚ್ಚುಕಮ್ಮಿ 60 ಚಿತ್ರಗಳು ಬಿಡುಗಡೆಯಾಗಿದ್ದರೂ ಹಿಟ್ ಆಗಿರುವ ಚಿತ್ರ ಬೆರಳಣಿಕೆಯಷ್ಟು. ಒಟ್ಟಿನಲ್ಲಿ ತಾಯಿ ಭುವನೇಶ್ವರಿಯೇ ಚಿತ್ರೋಧ್ಯಮವನ್ನು ಕಾಪಾಡಬೇಕು. ಬೀದಿಜಗಳ ಬಿಟ್ಟು ಚಿತ್ರರಂಗ ಒಳ್ಳೆ ಒಳ್ಳೆ ಚಿತ್ರ ನೀಡಲಿ ಅನ್ನುವುದು ಪ್ರೇಕ್ಷಕರ ಆಶಯ.

ಈ ನಡುವೆ, 'ವಿಷ್ಣುವರ್ಧನ್' ಶೀರ್ಷಿಕೆಯಿಂದ ತೀವ್ರ ವಿವಾದಕ್ಕೀಡಾಗಿದ್ದ ದ್ವಾರಕೀಶ್ ಅವರ ಚಿತ್ರ ಅಬ್ಬಾಯಿ ನಾಯ್ಡು ಸ್ಟುಡಿಯೋದಲ್ಲಿ ಸೆಟ್ಟೇರಿದೆ. ಸೋಲುತ್ತಿರುವ ಚಿತ್ರಗಳು, ಅನಗತ್ಯ ವಿವಾದಗಳು, ಅನ್ಯ ಭಾಷಾ ಚಿತ್ರಗಳ ದಾಂಗುಡಿ ಕನ್ನಡ ಚಿತ್ರವನ್ನು ಕಂಗೆಡಿಸಿವೆ. ಹೆಸರಿನ ವಿವಾದ ಬಗೆಹರಿದು ದ್ವಾರಕೀಶ್ ನಿರ್ಮಾಣದ ಚಿತ್ರ ಗೆಲ್ಲಲಿ. ದಿನಕ್ಕೆ ಆರಲ್ಲ ಹತ್ತುಗಳು ಬಿಡುಗಡೆಯಾದರೂ ಜನ ನೋಡುವಂತಾಗಲಿ!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada