For Quick Alerts
  ALLOW NOTIFICATIONS  
  For Daily Alerts

  ದೆಹಲಿ ಕನ್ನಡಿಗರಿಗೆ ದಾಟು ಚಿತ್ರದ ಅನುಭವ

  By ವರದಿ:ವೀರಣ್ಣ ಕಮ್ಮಾರ, ನವದೆಹಲಿ
  |
  ನವದೆಹಲಿ, ಜ. 11: ಚಲನಚಿತ್ರ ಮಾಧ್ಯಮವು ಸಮಾಜಕ್ಕೆ ಹೊಸ ದಿಕ್ಕು ತೋರಿಸುವ, ಬದಲಾವಣೆಗೆ ಕಾರಣವಾಗಬಹುದಾದ ಮಾಧ್ಯಮವಾಗಿದ್ದು, ಅದನ್ನು ಕೆ. ಶಿವರುದ್ರಯ್ಯ ಅವರು ಮಾನವೀಯ ನೆಲೆಯಲ್ಲಿ ಅತ್ಯಂತ ಸಮರ್ಥವಾಗಿ ಬಳಕೆ ಮಾಡಿಕೊಂಡಿದ್ದಾರೆ ಎಂದು ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ಸಿ.ವಿ. ಗೋಪಿನಾಥ್ ಶನಿವಾರದಂದು ಇಲ್ಲಿ ಹೇಳಿದರು.

  ಅವರು, ಕರ್ನಾಟಕ ಸರ್ಕಾರದ ವಾರ್ತಾ ಇಲಾಖೆಯ ದೆಹಲಿಯಲ್ಲಿನ ಕರ್ನಾಟಕ ವಾರ್ತಾ ಕೇಂದ್ರವು ಇಂದು ಇಲ್ಲಿನ ದೆಹಲಿ ಕರ್ನಾಟಕ ಸಂಘದ ಸಭಾಂಗಣದಲ್ಲಿ ಏರ್ಪಡಿಸಿದ್ದ ಕೆ. ಶಿವರುದ್ರಯ್ಯ ನಿರ್ದೇಶನದ 'ದಾಟು' ಚಲನಚಿತ್ರ ಪ್ರದರ್ಶನ ಸಂದರ್ಭದಲ್ಲಿ ನಿರ್ದೇಶಕರನ್ನು ಅಭಿನಂದಿಸಿ ಮಾತನಾಡುತ್ತಿದ್ದರು.

  ಅತ್ಯಂತ ಸೂಕ್ಷ್ಮತೆಯನ್ನು ಈ ಚಿತ್ರದಲ್ಲಿ ಅವರು ಬಳಕೆ ಮಾಡಿಕೊಂಡಿದ್ದು, ಉತ್ತಮ ರೀತಿಯಲ್ಲಿ ಕಥೆ ಹೆಣೆದಿದ್ದಾರೆ. ಅವರ ಈ ಪ್ರಯತ್ನಕ್ಕೆ ನಮ್ಮೆಲ್ಲರ ಸಹಕಾರ ಇದೆ ಎಂದರು.

  ಈ ಸಂದರ್ಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಶಿವರುದ್ರಯ್ಯ, ಈ ಚಿತ್ರವು 60ರ ದಶಕದಲ್ಲಿ ಅಶ್ವತ್ಥ ಎಂಬ ಕಥೆಗಾರರು ಬರೆದ 'ಧರ್ಮಕೊಂಡದ ಕಥೆ' ಆಧರಿಸಿದ ಚಿತ್ರವಾಗಿದ್ದು, ಆಗಿನ ಕಾಲವನ್ನು ಗಣನೆಗೆ ತೆಗೆದುಕೊಂಡು ಚಿತ್ರ ನಿರ್ಮಾಣ ಮಾಡಲಾಗಿದೆ. ಚಿತ್ರದಲ್ಲಿ ಎಲ್ಲಿಯೂ ವಿದ್ಯುತ್ ಕಂಬಗಳಾಗಲೀ, ಟಾರ್ ರಸ್ತೆಯಾಗಲೀ ಬಳಕೆಯಾಗಿಲ್ಲ; ಉಡುಗೆ ತೊಡುಗೆಗಳು, ಆಗಿನ ನಮ್ಮ ದಕ್ಷಿಣ ಕರ್ನಾಟಕದ ಸ್ಥಿತಿಗತಿಗಳನ್ನು ಅತ್ಯಂತ ಸೂಕ್ಷ್ಮವಾಗಿಟ್ಟುಕೊಂಡು ಚಿತ್ರವನ್ನು ತೆರೆಗೆ ತರಲಾಗಿದೆ' ಎಂದರು.

  ಕೇವಲ 17-18 ಲಕ್ಷ ರೂ.ಗಳ ಖರ್ಚಿನಲ್ಲಿ, ಹದಿಮೂರು ದಿನಗಳ ಕಾಲ ಈ ಚಿತ್ರವನ್ನು ಚಿತ್ರೀಕರಿಸಲಾಗಿದ್ದು, ಒಟ್ಟಾರೆಯಾಗಿ ಕ್ಯಾಮರಾಮ್ಯಾನ್ ರಾಮಚಂದ್ರ, ಪಾತ್ರಧಾರಿಗಳು ಹಾಗೂ ತಂತ್ರಜ್ಞರ ಅಪೂರ್ವ ಸಹಕಾರದಿಂದ ಈ ಚಿತ್ರ ಇಷ್ಟೊಂದು ಉತ್ತಮವಾಗಿ ಮೂಡಿಬರಲು ಸಾಧ್ಯವಾಯಿತು ಎಂದರು.
  ಚಿತ್ರ ಪ್ರದರ್ಶನದ ನಂತರ ನಿರ್ದೇಶಕರು ಮತ್ತು ಪ್ರೇಕ್ಷಕರ ನಡುವೆ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಇಡೀ ಗ್ರಾಮವೇ ಅತ್ಯಂತ ಗೌರವ ಆದರಗಳಿಂದ ಕಾಣುತ್ತಿದ್ದ ಶಾರದಾ ಎಂಬ ಶಾನುಭೋಗರ ಪತ್ನಿಯನ್ನು ಒಬ್ಬ ಕಂದಹಾರಿ ಮುಸ್ಲಿಂ ವ್ಯಾಪಾರಿ ಅಪಹರಿಸಿಕೊಂಡು ಹೋಗುತ್ತಾನೆ. ಆಕೆಯನ್ನು ಮತಾಂತರ ಮಾಡಲು ಪ್ರಯತ್ನಿಸುತ್ತಾನೆ. ಆದರೆ, ಅದೇ ಧರ್ಮಕ್ಕೆ ಸೇರಿದ ಮೌಲ್ವಿಯಾಗಿದ್ದ ವೃದ್ಧನೊಬ್ಬನು ಆಕೆಯನ್ನು ಮರಳಿ ಶಾನುಭೋಗರ ಮನೆಗೆ ಸೇರಿಸುತ್ತಾನೆ. ಆದರೆ, ಅಗ್ರಹಾರದ ಮುಖಂಡರು ಆಕೆ ಮನೆಯೊಳಕ್ಕೆ ಬರುವುದನ್ನು ಮತ್ತೆ ಮನೆಗೆ ಹಿಂದಿರುಗುವುದನ್ನು ಇಷ್ಟಪಡುವುದಿಲ್ಲ. ಕೊನೆಗೆ ಆಕೆಯನ್ನು ಮನೆಯಲ್ಲಿ ಸೇರಿಸಿಕೊಂಡರೂ ಆಕೆ ಮನೆ ಬಿಟ್ಟು ಹೊರಟು, ಮನುಜಮತ ಪಾಲಿಸೋಣ ಎಂದು ಹೊರಡುತ್ತಾಳೆ. ಆಕೆಗೆ ಒಂದು ದಲಿತ ಕುಟುಂಬ, ಮುಸ್ಲಿಂ ಮೌಲ್ವಿ ಸಹ ಪಥಿಕರಾಗುತ್ತಾರೆ. ಇಂಥ ಧರ್ಮ ಸೂಕ್ಷ್ಮವಾದ ವಿಚಾರವನ್ನು ಇಲ್ಲಿ ಅತ್ಯಂತ ಹೃದಯಂಗಮವಾಗಿ ಹೆಣೆದಿರುವ ಶಿವರುದ್ರಯ್ಯ ಸೆಲ್ಯುಲಾಯ್ಡ್ ಮಾಧ್ಯಮಕ್ಕೆ ಒಂದು ಉತ್ತಮ ಕೊಡುಗೆ ನೀಡಿದ್ದಾರೆ.'ದಾಟು' ಚಿತ್ರದ ಒಟ್ಟಾರೆ ಪರಿಣಾಮ ಅತ್ಯುತ್ತಮವಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.

  ಈ ಸಂದರ್ಭದಲ್ಲಿ ಗೋಪಿನಾಥ್ ಅವರು ಶಿವರುದ್ರಯ್ಯ ಅವರಿಗೆ ಸ್ಮರಣಿಕೆ, ಹೂಗುಚ್ಛ ನೀಡಿ ಸನ್ಮಾನಿಸಿದರು.ಸಂಘದ ಉಪಾಧ್ಯಕ್ಷ ವಸಂತಶೆಟ್ಟಿ ಬೆಳ್ಳಾರೆ ಕಾರ್ಯಕ್ರಮ ನಿರೂಪಿಸಿದರೆ, ಜಂಟಿ ಕಾರ್ಯದರ್ಶಿ ಎನ್.ಆರ್. ಶ್ರೀನಾಥ್ ವಂದಿಸಿದರು. ಕರ್ನಾಟಕ ವಾರ್ತಾ ಕೇಂದ್ರದ ಪ್ರಭಾರ ಉಪ ನಿರ್ದೇಶಕ ವೀರಣ್ಣ ಕಮ್ಮಾರ, ಕಾರ್ಯದರ್ಶಿ ರೇಣುಕುಮಾರ್, ಖಜಾಂಚಿ ಎಂ.ವಿ. ವೆಂಕಟೇಶ್, ಸದಸ್ಯರಾದ ಅಂಜನಿಗೌಡ, ಹರಿಶ್ಚಂದ್ರ ಬಂಟ್ವಾಳ್, ಟಿ.ಎಂ. ಮೈಲಾರಪ್ಪ, ಮಹಾಲಿಂಗಪ್ಪ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


  ಪೂರಕ ಓದಿಗೆ:
  ನವದೆಹಲಿಯಲ್ಲಿ ದಾಟು ಚಿತ್ರ ಪ್ರದರ್ಶನ

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X