twitter
    For Quick Alerts
    ALLOW NOTIFICATIONS  
    For Daily Alerts

    ಚಿತ್ರವಿಮರ್ಶಕರಿಗೆ ಜವಾಬ್ದಾರಿ ಇರ್ಬೇಕು: ನಾಗಾಭರಣ

    By Mahesh
    |

    ಸಾಮಾಜಿಕ ಜವಾಬ್ದಾರಿಯನ್ನು ಮನಸ್ಸಿನಲ್ಲಿಟ್ಟುಕೊಂಡು ಯಾವುದೇ ಚಿತ್ರ ವಿಮರ್ಶೆ ಮಾಡುವಂತೆ ಚಲನಚಿತ್ರ ಪತ್ರಕರ್ತರಿಗೆ ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಟಿಎಸ್ ನಾಗಾಭರಣ ಅವರು ಮನವಿ ಮಾಡಿದರು.

    ಕರ್ನಾಟಕ ಮಾಧ್ಯಮ ಅಕಾಡೆಮಿ ಮತ್ತು ವಾರ್ತಾ ಇಲಾಖೆ ಜಂಟಿಯಾಗಿ ಪತ್ರಿಕಾ ದಿನಾಚರಣೆ ಅಂಗವಾಗಿ ಇಂದು ಬಾದಾಮಿ ಹೌಸ್‌ನಲ್ಲಿ 'ಚಲನಚಿತ್ರ ಪತ್ರಿಕೋದ್ಯಮ : ಒಂದು ಚಿಂತನೆ' ಎಂಬ ವಿಷಯ ಕುರಿತು ಏರ್ಪಡಿಸಿದ್ದ ವಿಚಾರ ಸಂಕಿರಣದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.

    70 ರ ದಶಕದಲ್ಲಿದ್ದ ಚಲನಚಿತ್ರ ಪತ್ರಕರ್ತರು ಒಂದು ಸಿನಿಮಾದಲ್ಲಿರುವ ಎಲ್ಲಾ ಒಳಿತು ಕೆಡುಕುಗಳ ಬಗ್ಗೆ ನೈಜ ವರದಿಯನ್ನು ನೀಡುವ ಮೂಲಕ ಉತ್ತಮ ಕಾರ್ಯವೈಖರಿಯನ್ನು ಮರೆದಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಚಿತ್ರ ವಿಮರ್ಶೆಗಳು ತಮ್ಮ ನೈಜತೆಯನ್ನು ಕಳೆದುಕೊಳ್ಳುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದರು.

    ಒಂದು ಚಿತ್ರ ಯಶಸ್ವಿಯಾಗಬೇಕಾದರೆ ವರದಿಗಾರ ಚಿತ್ರದ ಬಗ್ಗೆ ನೀಡಿರುವ ವಿಮರ್ಶೆಯು ಪರಿಣಾಮ ಬೀರುವುದರಿಂದ ವರದಿಗಾರರು ತಮ್ಮ ವಿಮರ್ಶೆಗಳಲ್ಲಿ ನೈಜತೆಯನ್ನು ಉಳಿಸಿಕೊಳ್ಳುವಂತೆ ಅವರು ಮನವಿ ಮಾಡಿದರು.

    ಪತ್ರಿಕೋದ್ಯಮ ಒಂದು ಉದ್ಯಮವಾಗಿ ರೂಪುಗೊಂಡಿರುವ ಹಿನ್ನೆಲೆಯಲ್ಲಿ ಚಿತ್ರೋದ್ಯಮದವರು ಪತ್ರಿಕಾ ಮಾಧ್ಯಮದವರೊಂದಿಗೆ ಸ್ಪಂದಿಸುವ ಮೂಲಕ ಎರಡೂ ಉದ್ಯಮಗಳ ನಡುವೆ ಸೌರ್ಹರ್ಧ ಭಾವನೆ ಬೆಳೆಯಬೇಕಾಗಿದೆ ಎಂದು ಚಲನಚಿತ್ರ ಪತ್ರಕರ್ತ ಸದಾಶಿವ ಶೆಣೈ ಅವರು ಅಭಿಪ್ರಾಯಪಟ್ಟರು.

    ಚಿತ್ರೋದ್ಯಮ ಮಾಧ್ಯಮದವರನ್ನು ಕಡೆಗಣಿಸಲಾಗುತ್ತಿದೆ.ಒಂದು ಚಿತ್ರದ ಮುಹೂರ್ತದಿಂದ ಹಿಡಿದು ಅದು ತೆರೆಕಾಣುವ ಹಂತದವರೆವಿಗೂ ನಿರ್ದೇಶಕರು ಹೇಳಿದ್ದನ್ನೆ ಯಥಾವತ್ತಾಗಿ ವರದಿ ಮಾಡುತ್ತೇವೆ. ಆದರೆ ವಿಮರ್ಶೆ ಮಾಡುವ ಹಂತದಲ್ಲಿ ಅವರ ಹಸ್ತಕ್ಷೇಪದಿಂದ ವರದಿಗಾರನ ಬರವಣಿಗೆಗೆ ತೊಡಕುಂಟಾಗುತ್ತದೆ ಎಂದರು.

    ಆರ್ಟ್ ಮೂವಿ ನೋಡುವವರಾರು?:
    ಸಂಯುಕ್ತ ಕರ್ನಾಟಕ ದಿನ ಪತ್ರಿಕೆಯ ಸ್ಥಾನಿಕ ಸಂಪಾದಕರಾದ ಕೆಹೆಚ್ ಸಾವಿತ್ರ್ರಿಯವರು ಮಾತನಾಡಿ 100 ಚಿತ್ರಗಳಲ್ಲಿ 10 ಚಿತ್ರಗಳು ಮಾತ್ರ ಯಶಸ್ವಿಯಾಗುತ್ತಿದೆ. ಅದಕ್ಕೆ ಪತ್ರಿಕೋದ್ಯಮಿಗಳು ಹೊಣೆಯಾಗುವುದಿಲ್ಲ. ಕಲಾತ್ಮಕ ಚಿತ್ರಗಳನ್ನು ಪತ್ರಕರ್ತರಿಗೆ ತೋರಿಸದಿದ್ದರೆ ಜನರು ಹೇಗೆ ನೋಡುತ್ತಾರೆ. ಆದ್ದರಿಂದ ಚಿತ್ರೋದ್ಯಮದವರು ಮಾಧ್ಯಮದವರೊಂದಿಗೆ ಚರ್ಚೆಗೆ ಅವಕಾಶ ಮಾಡಿಕೊಡಬೇಕಾಗಿದೆ ಎಂದರು.

    ಪತ್ರಿಕೆಗಳಿಗೆ ಸೀಮಿತ ಪ್ರೇಕ್ಷಕರಿರುತ್ತಾರೆ. ಆದರೆ ಚಲನಚಿತ್ರ ಮಾಧ್ಯಮ ಹೆಚ್ಚು ಪ್ರೇಕ್ಷಕರನ್ನು ಮುಟ್ಟುವುದರಿಂದ ಉತ್ತಮ, ಸದಭಿರುಚಿಯ ಚಿತ್ರಗಳನ್ನು ನೀಡಬೇಕಾದುದು ಚಲನಚಿತ್ರೋದ್ಯಮದ ಕರ್ತವ್ಯವಾಗಿದೆ ಎಂದರು.

    ಉತ್ತಮ ವಿಮರ್ಶೆ ಅಗತ್ಯವಿದೆ: ಪ್ರೇಕ್ಷಕರ ಅಭಿರುಚಿಗೆ ತಕ್ಕಂತಹ ಸಿನಿಮಾ ಮಾಡುವ ಬದಲು ಒಳ್ಳೆ ಸದಭಿರುಚಿಯುಳ್ಳ ಸಿನೆಮಾವನ್ನು ಚಿತ್ರೋದ್ಯಮ ಪ್ರೇಕ್ಷಕರಿಗೆ ನೀಡುವುದನ್ನು ಬೆಳೆಸಿಕೊಂಡರೆ, ಚಲನಚಿತ್ರ ವರದಿಗಾಗಿ ಪತ್ರಿಕೆಗಳಲ್ಲಿ ಇನ್ನೂ ಹೆಚ್ಚಿನ ಸ್ಥಳಾವಕಾಶ ನೀಡುವುದರ ಜೊತೆಗೆ ಜನಸಾಮಾನ್ಯರಿಗೆ ಅರ್ಥವಾಗುವಂತಹ ದಾಟಿಯಲ್ಲಿ ಲೇಖನಗಳನ್ನು, ವಿಮರ್ಶೆಗಳನ್ನು ಚಲನಚಿತ್ರ ಪತ್ರಿಕೋದ್ಯಮವು ನೀಡಿದರೆ ಮಾತ್ರ ಎರಡೂ ಉದ್ಯಮಗಳು ಪ್ರಗತಿ ಹೊಂದಲು ಸಾಧ್ಯವೆಂದು ಬೆಂಗಳೂರು ವಿಶ್ವವಿದ್ಯಾನಿಲಯದ ಸಮೂಹ ಸಂವಹನ ಮತ್ತು ವಿದ್ಯುನ್ಮಾನ ವಿಭಾಗದ ಮುಖ್ಯಸ್ಥ ಪ್ರೊ.ಎನ್ ಎಸ್ ಅಶೋಕ್ ಕುಮಾರ್ ಅವರು ಅಭಿಪ್ರಾಯಪಟ್ಟರು.

    Friday, July 2, 2010, 11:09
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X