»   »  ಡಾ.ರಾಜ್ ಅಂಚೆಚೀಟಿ ಲೋಕಾರ್ಪಣೆ

ಡಾ.ರಾಜ್ ಅಂಚೆಚೀಟಿ ಲೋಕಾರ್ಪಣೆ

Subscribe to Filmibeat Kannada

ವರನಟ ಡಾ.ರಾಜ್ ಕುಮಾರ್ ಅವರ ರು.5 ಮುಖಬೆಲೆಯ ಅಂಚೆಚೀಟಿಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕನ್ನಡ ರಾಜ್ಯೋತ್ಸವದದಿನ ಬಿಡುಗಡೆ ಮಾಡಿದರು. ಈ ಮೂಲಕ ಅಂಚೆಚೀಟಿಯಲ್ಲಿ ಮೂಡಿದ ಮೊದಲ ಕನ್ನಡ ನಟ ಹಾಗೂ ದೇಶದ 31ನೇ ಚಿತ್ರರಂಗದ ದಿಗ್ಗಜ ಎಂಬ ಹೆಗ್ಗಳಿಕೆಗೆ ಡಾ.ರಾಜ್ ಪಾತ್ರರಾದರು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಮಾತನಾಡುತ್ತಾ, ಬಡ ಕುಟುಂಬದಿಂದ ಬಂದ ರಾಜ್ ಕುಮಾರ್ ಅವರು ಪರಿಶ್ರಮದಿಂದ ಮೇಲೆ ಬಂದವರು. ಐದು ದಶಕಗಳ ಕಾಲ ಕನ್ನಡ ಚಿತ್ರರಸಿಕರನ್ನು ರಂಜಿಸಿ ಕನ್ನಡ ಚಿತ್ರೋದ್ಯಮದ ಬೆಳವಣಿಗೆಗೂ ಕಾರಣರಾದರು ಎಂದರು.

ಕನ್ನಡ ಚಿತ್ರಗಳಿಗೆ ದೊಡ್ಡ ಮಟ್ಟದಲ್ಲಿ ಪ್ರೇಕ್ಷಕರನ್ನು ಸೃಷ್ಟಿಸಿದ ಘನತೆಯೂ ಅವರದು.ಕನ್ನಡ ಚಿತ್ರೋದ್ಯಮಕ್ಕೆ ಮಾರ್ಗದರ್ಶಕರಾಗಿದ್ದ ರಾಜ್ ಕುಮಾರ್ ಸದಭಿರುಚಿಯ ಚಿತ್ರಗಳಿಗೆ ಹೆಸರಾಗಿದ್ದರು. ರಾಜ್ ಅವರ ಜೀವನ ಕರ್ನಾಟಕದ ಜನತೆಗೆ ಮಾದರಿ. ತಮ್ಮ ಅಮೋಘ ನಟನೆಯ ಮೂಲಕ ಕನ್ನಡ ಚಿತ್ರರಂಗದಲ್ಲಿ ಅವರು ಅಜರಾಮರ ಎಂದು ಯಡಿಯೂರಪ್ಪ ರಾಜ್ ಅವರ ಸಾಧನೆಗಳನ್ನು ಕೊಂಡಾಡಿದರು.

ರಾಜ್ ಕುಮಾರ್ ಕೇವಲ ಪ್ರಬುದ್ಧ ನಟಷ್ಟೇ ಆಗಿರಲಿಲ್ಲ ಅವರ ಅಸಂಖ್ಯ ಅಭಿಮಾನಿಗಳಿಗೆ ದೇವರೂ ಆಗಿದ್ದರು ಎಂದು ರಾಜ್ ಜತೆ ಹಲವಾರು ಚಿತ್ರಗಳಲ್ಲಿ ನಟಿಸಿ ಜನಪ್ರಿಯ ಜೋಡಿ ಅನಿಸಿಕೊಂಡಿದ್ದ ಅಭಿನಯ ಶಾರದೆ ಜಯಂತಿ ಹೇಳಿದರು.

ರಾಜ್ಯದಲ್ಲಿ ಇದುವರೆಗೂ ಅಂಚೆ ಇಲಾಖೆ ಚಿತ್ರರಂಗದ 30 ಗಣ್ಯರ ಅಂಚೆ ಚೀಟಿಗಳನ್ನು ಬಿಡುಗಡೆ ಮಾಡಿದೆ. ಎಂ.ವಿಶ್ವೇಶ್ವರಯ್ಯ ಅವರು ಅಂಚೆಚೀಟಿಯಲ್ಲಿ ಅನಾವರಣಗೊಂಡ ಮೊದಲ ಕನ್ನಡಿಗ. ಇದೀಗ 31ನೇ ವ್ಯಕ್ತಿಯಾಗಿ ರಾಜ್ ಕುಮಾರ್ ಅವರ ಅಂಚೆಚೀಟಿ ಬಿಡುಗಡೆಯಾಗುತ್ತಿದೆ ಎಂದು ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್ ಎಂ ಪಿ ರಾಜನ್ ತಿಳಿಸಿದರು. ಪಾರ್ವತಮ್ಮ ರಾಜ್ ಕುಮಾರ್, ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್ ಮತ್ತು ಪುನೀತ್ ರಾಜ್ ಕುಮಾರ್ ಸಹ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada