»   » ಅಮೂಲ್ಯಗೆ ಉತ್ತಮ ಅವಕಾಶ ಸಿಕ್ಕಿದೆ: ರಮ್ಯಾ

ಅಮೂಲ್ಯಗೆ ಉತ್ತಮ ಅವಕಾಶ ಸಿಕ್ಕಿದೆ: ರಮ್ಯಾ

Subscribe to Filmibeat Kannada

ನಟಿ ರಮ್ಯಾ ಪರಿಸ್ಥಿತಿ ಈಗ ಅಕ್ಕಿ ಮೇಲೆ ಆಸೆ ನೆಂಟರ ಮೇಲೆ ಪ್ರೀತಿ ಎಂಬಂತಾಗಿದೆ. ಪ್ರಕಾಶ್ ರೈ ಚೊಚ್ಚಲ ನಿರ್ದೇಶನದ 'ನಾನು ನನ್ನ ಕನಸು' ಚಿತ್ರದಿಂದ ಹೊರಬಿದ್ದಿರುವ ಸುದ್ದಿ ಗೊತ್ತೆ ಇದೆಯಲ್ಲ. ಒಂದು ಕಡೆ ಉತ್ತಮ ಚಿತ್ರ, ಕಲಾವಿದರೊಂದಿಗೆ ಅಭಿನಯಿಸುವ ಅವಕಾಶ. ಮತ್ತೊಂದೆಡೆ ಒಳ್ಳೆ ಸಂಭಾವನೆ ಸಿಗುತ್ತಿಲ್ಲವಲ್ಲ ಎಂಬ ಅಳಲು. ಕಡೆಗೂ ಸಂಭಾವನೆಯನ್ನೇ ನೆಚ್ಚಿಕೊಂಡು ಪ್ರಕಾಶ್ ರೈ 'ಕನಸಿ'ನಿಂದ ಆಚೆ ಬಂದಿದ್ದಾರೆ.

ತಮ್ಮ ಸ್ಥಾನಕ್ಕೆ 'ಚೆಲುವಿನ ಚಿತ್ತ್ತಾರ' ಬೆಡಗಿ ಅಮೂಲ್ಯ ಆಯ್ಕೆಯಾಗಿರುವ ಬಗ್ಗೆ ರಮ್ಯಾಗೇನು ಬೇಸರವಿಲ್ಲವಂತೆ. 'ನಾನು ನನ್ನ ಕನಸು' ಅದ್ಭುತ ಚಿತ್ರ, ಒಳ್ಳೆಯ ಪಾತ್ರ ಸಹ. ಹಾಗಂತ ಹೇಳಿ ಸಂಭಾವನೆ ವಿಚಾರವಾಗಿ ರಾಜಿ ಮಾಡಿಕೊಳ್ಳಲು ನನಗಿಷ್ಟವಿಲ್ಲ. ಈ ಚಿತ್ರಕ್ಕೆ ಅಮೂಲ್ಯ ಆಯ್ಕೆ ಫೈನಾಗಿದೆ. ಅಮೂಲ್ಯ ಉತ್ತಮವಾಗಿ ಅಭಿನಯಿಸುತ್ತಾರೆ ಎಂಬ ವಿಶ್ವಾಸ ನನಗಿದೆ ಎಂಬ ಮೆಚ್ಚುಗೆ ಮಾತುಗಳು ರಮ್ಯಾ ಬಾಯಿಂದ ಹೊರಬಿದ್ದಿವೆ.

ಕಡೆ ಕ್ಷಣದವರೆಗೂ ನನ್ನ ಸಂಭಾವನೆ ವಿಚಾರವನ್ನು ಮಾತನಾಡಿರಲಿಲ್ಲ. ಚಿತ್ರೀಕರಣಕ್ಕೂ ಎರಡು ದಿನದ ಮುಂಚೆ ಸಂಭಾವನೆ ವಿಚಾರವನ್ನು ಪ್ರಸ್ತಾಪಿಸಲಾಯಿತು. ನನ್ನ ಸಂಭಾವನೆಯ ಅರ್ಧಕ್ಕಿಂತಲೂ ಕಡಿಮೆ ಕೊಡಲು ಮುಂದೆ ಬಂದರು. ಹಾಗಾಗಿ ಚಿತ್ರವನ್ನು ಕೈಬಿಟ್ಟೆ ಎಂಬುದು ರಮ್ಯಾ ಕೊಡುವ ವಿವರಣೆ. ಒಂದು ವೇಳೆ ಹಿರಿಯ ನಿರ್ಮಾಪಕರಾದ ರಾಕ್ ಲೈನ್ ವೆಂಕಟೇಶ್ ಅಥವಾ ಕೆ ಮಂಜು ಅವರು ಹೀಗೆ ಮಾಡಿದ್ದರೆ ಒಪ್ಪಿಕೊಳ್ಳಬಹುದಾಗಿತ್ತು ಎಂದು ರಮ್ಯಾ ಪ್ರತಿಕ್ರಿಯಿಸಿದ್ದಾರೆ.

ಸದ್ಯಕ್ಕೆ ಒಂದು ವಾರ ಕಾಲ ರಮ್ಯಾ ವಿಶ್ರಾಂತಿ ಪಡೆಯುತ್ತಿದ್ದಾರೆ. ನಂತರ ತಮಿಳು ಚಿತ್ರರಂಗಕ್ಕೆ ಹಾರಿ 'ಸಿಂಗಂ Vs ಪುಲಿ' ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ. ಸಿಂಗಂ Vs ಪುಲಿ ಚಿತ್ರೀಕರಣ ಮುಗಿದ ನಂತರವಷ್ಟೇ 'ಸಂಜು ವೆಡ್ಸ್ ಗೀತಾ' ಚಿತ್ರೀಕರಣ ಮುಂದುವರಿಯಲಿದೆ. ಈಗಾಗಲೇ ಸಂಜು ವೆಡ್ಸ್ ಗೀತಾ 25 ದಿನಗಳ ಚಿತ್ರೀಕರಣ ಮುಗಿಸಿದೆ. ತಮಿಳು ಚಿತ್ರರಂಗದ ರಮ್ಯಾ ದೃಷ್ಟಿ ನೆಟ್ಟಿರುವುದು ಢಾಳಾಗಿ ಗೋಚರಿಸುತ್ತಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada