»   »  ಹದಿನೇಳರ ಗೆಟಪ್ಪಿನಲ್ಲಿ ಸೂಪರ್ ಸ್ಟಾರ್ ಉಪೇಂದ್ರ

ಹದಿನೇಳರ ಗೆಟಪ್ಪಿನಲ್ಲಿ ಸೂಪರ್ ಸ್ಟಾರ್ ಉಪೇಂದ್ರ

By: *ಜಯಂತಿ
Subscribe to Filmibeat Kannada
Upendra in teenage getup
ಅಕಸ್ಮಾತ್ತಾಗಿ ಉಪೇಂದ್ರ ಮೀಸೆ ಬೋಳಿಸಬೇಕಾಗಿ ಬಂತು. ದುಬಯ್ ಬಾಬು ಚಿತ್ರೀಕರಣದ ಬಿಡುವಿನ ಸಂದರ್ಭ ಅದು. ಉಪೇಂದ್ರ ತಮ್ಮನ್ನು ತಾವೇ ಕನ್ನಡಿಯಲ್ಲಿ ನೋಡಿಕೊಂಡರು. ಆಗ ಹೊಳೆದ ಯೋಚನೆ: ಬೇರೆ ಬೇರೆ ಗೆಟಪ್‌ಗಳಲ್ಲಿ ಕಾಣಿಸಿಕೊಂಡರೆ ಹೇಗೆ ಅನ್ನೋದು. ನಿರ್ದೇಶಕ ನಾಗಣ್ಣ ಜೊತೆ ಕೂತು ಆ ಬಗ್ಗೆ ಚರ್ಚಿಸಿಯೂ ಆಯಿತು. ನಿರ್ಮಾಪಕ ಶೈಲೇಂದ್ರ ಬಾಬುಗೂ ಉಪ್ಪಿ ಮೊದಲಿಗೆ ಗುರುತೇ ಹತ್ತಲಿಲ್ಲ. ಟ್ರಿಮ್ ಅಂಡ್ ಸ್ಲಿಮ್ ಉಪ್ಪಿ ತಮ್ಮ ಸಿನಿಮಾದಲ್ಲೂ ಮೂಡಿದರೆ ಚೆನ್ನ ಅಲ್ಲವೇ ಅನ್ನಿಸಿತು. ಇವೆಲ್ಲದರ ಮೊತ್ತವೇ ಚಿತ್ರದಲ್ಲಿ ಉಪ್ಪಿ ಹದಿನೇಳು ಗೆಟಪ್‌ಗಳಲ್ಲಿ ಕಾಣಿಸಿಕೊಂಡಿದ್ದು.

ಶೂಟಿಂಗ್‌ಗೆ ಹದಿನೈದು ದಿನ ಬಿಡುವಿತ್ತಲ್ಲ. ಆಗ ಉಪ್ಪಿ ಪರಿವಾರ ಅಮೆರಿಕೆ ಪ್ರವಾಸಕ್ಕೆ ಹೋಗಿದೆ. ಅಲ್ಲಿ ಹಾಲಿವುಡ್‌ಗೆ ಹೋದಾಗ ಬಗೆಬಗೆಯ ವಿಗ್‌ಗಳು ಕಣ್ಣಿಗೆ ಬಿದ್ದಿವೆ. ಪತ್ನಿ ಪ್ರಿಯಾಂಕಾ ಮಾರ್ಗದರ್ಶನದಲ್ಲಿ ಕೆಲವನ್ನು ಉಪ್ಪಿ ಆರಿಸಿ, ಕೊಂಡು ತಂದಿದ್ದಾರೆ. ಆ ವಿಗ್‌ಗಳಲ್ಲಿ ಬಹುತೇಕವನ್ನು ದುಬಯ್ ಬಾಬು ಚಿತ್ರದ ಹಾಡುಗಳಲ್ಲಿ ಕಾಣಬಹುದು.

ಗುರುವಾರ (ಏ.2) ಶೈಲೇಂದ್ರ ಬಾಬು ಜನ್ಮದಿನ. ಅದನ್ನೇ ನೆಪ ಮಾಡಿಕೊಂಡು ಸೀಡಿ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಬೆಂಗಳೂರಿನ ಸದಾಶಿವನಗರದ ಕ್ಲಬ್ ಸಮಾರಂಭದ ತಾಣ. ಉಪ್ಪಿ ಮಗ ಮೈಕ್‌ನಲ್ಲಿ ಶೈಲೇಂದ್ರ ಬಾಬುಗೆ ಶುಭಕೋರಿದ. ಉಪ್ಪಿಗೆ ಬಾಬು ಹದಿನೇಳು ಗೆಟಪ್ಪುಗಳ ಚಿತ್ರಗಳ ದೊಡ್ಡ ಫೋಟೋ ಫ್ರೇಮನ್ನು ಕಾಣಿಕೆಯಾಗಿ ಕೊಟ್ಟರು. ಮೂರು ಹಾಡುಗಳನ್ನು ನೋಡಿದ ಕೆಲವು ಪ್ರತಿಷ್ಠಿತರು ಚಪ್ಪಾಳೆ ತಟ್ಟಿದರು. ಆಮೇಲೆ ಬೇಸಿಗೆ ಧಗೆ ತಗ್ಗಿಸಲು ಬಿಯರ್ ಸಮಾರಾಧನೆಯೂ ಇತ್ತು (ಇದು ನಿರ್ಮಾಪಕರ ಸಂಘದ ಗಮನಕ್ಕೆ). ಸುದ್ದಿಗೋಷ್ಠಿ ನೆಪದಲ್ಲಿ ಕುಡಿಸಬೇಡಿ ಅನ್ನೋದು ನಿರ್ಮಾಪಕರ ಸಂಘದ ಹತ್ತು ಪಾಯಿಂಟುಗಳಲ್ಲಿ ಒಂದು. ಸಂಜೆ ಪಾರ್ಟಿ ರದ್ದಾದರೇನಂತೆ, ಬೆಳಿಗ್ಗೆಯೇ ಗುಂಡು ಹಾಕಿಸಿದರಾಯಿತು ಅನ್ನೋದು ಶೈಲೇಂದ್ರ ಬಾಬು ಹಟ!

ದುಬೈ ಬಾಬು ಉಪ್ಪಿಗೆ ಜೋಡಿಯಾದ ನಿಖಿತಾ
ದುಬೈ ಬಾಬುನಲ್ಲಿ ಒಂದಾದ ಉಪೇಂದ್ರ,ಗೋವಿಂದ
ಥ್ರಿಲ್ಲರ್ ಮಂಜು ನಿರ್ದೇಶನದಲ್ಲಿ ಉಪೇಂದ್ರ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada