»   »  ಫ್ಲೈಟ್ ಟಿಕೆಟ್ ಕೊಡಿಸೋಕೆ ಅಳುತ್ತಾರೆ: ರೇಖಾ

ಫ್ಲೈಟ್ ಟಿಕೆಟ್ ಕೊಡಿಸೋಕೆ ಅಳುತ್ತಾರೆ: ರೇಖಾ

Subscribe to Filmibeat Kannada

'ಅದು ಹಾಗಲ್ಲಪ್ಪಾ" ಅಂತ ಹೊಸದಾಗಿ ಪರಿಚಿತರಾದವರನ್ನೂ ಆತ್ಮೀಯತೆಯಿಂದ ಮಾತಾಡಿಸುವ ನಟಿ ರೇಖಾ. 'ಪರಿಚಯ" ಚಿತ್ರದ ಪ್ರಚಾರಕ್ಕೆಂದು ವಾರದ ಮಟ್ಟಿಗೆ ಅವರು ಬೆಂಗಳೂರಿಗೆ ಬಂದಿದ್ದಾರೆ. ಎಲ್ಲಾ ಸಿನಿಮಾಗಳ ಪ್ರಚಾರಕ್ಕೂ ಹೀಗ್ಯಾಕೆ ಬರೋದಿಲ್ಲ ಅಂದರೆ, ನಿರ್ಮಾಪಕರು ಫ್ಲೈಟ್ ಟಿಕೆಟ್ ಕೊಡಿಸೋದಕ್ಕೂ ಜುಗ್ಗತನ ತೋರುತ್ತಾರೆ ಅಂತಾರೆ ರೇಖಾ.

ರೇಖಾ ಮನೆ ಈಗ ಮುಂಬೈನಲ್ಲಿ. ಐದು ವರ್ಷವಾಯಿತು ಅವರು ಬೆಂಗಳೂರಿನಿಂದ ಅಲ್ಲಿಗೆ ಹೋಗಿ. ಅವಕಾಶದ ಬೇಟೆಯೊಂದೇ ತಾವು ಅಲ್ಲಿಗೆ ಹೋಗಲು ಕಾರಣವಲ್ಲ ಎನ್ನುವ ರೇಖಾಗೆ ಅಲ್ಲಿ ಹೋದದ್ದಕ್ಕೆ ವಿಷಾದವೇನೂ ಇಲ್ಲ. ಸಿನಿಮಾ ಬದುಕಿನ ಈವರೆಗಿನ ಹಾದಿ ಕೂಡ ಅವರಿಗೆ ತೃಪ್ತಿ ಕೊಟ್ಟಿದೆಯಂತೆ.

'ರಾಜ್' ಚಿತ್ರದಲ್ಲಿ ನೀರಿನಿಂದೆದ್ದು ಬರುವ ಸಣ್ಣ ದೃಶ್ಯದಲ್ಲಿ ಕಾಣಿಸಿಕೊಂಡಿದ್ದಕ್ಕಾಗಲೀ, ಯೋಗಿಚಿತ್ರದ ಒಂದೇಒಂದು ಹಾಡಿಗೆ ಕುಣಿದದ್ದಕ್ಕಾಗಲೀ ಅವರಿಗೆ ಬೇಸರವೇನೂ ಇಲ್ಲ. ನಾನು ಒಂದು ನಿಮಿಷ ಕಂಡರೂ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯುವಂತಾದರೆ ಅಷ್ಟೇ ಸಾಕು ಎಂದು ಕೂದಲನ್ನು ರೇಖಾ ಹಿಂದಕ್ಕೆ ಸರಿಸುತ್ತಾರೆ.

ರಾಜ್ ಚಿತ್ರದಲ್ಲಿ ತಾವು ಮೈಬಿಸಿಯಾಗುವಷ್ಟು ಸೆಕ್ಸಿಯಾಗಿರುವುದಾಗಿ ಅವರು ನಿಸ್ಸಂಕೋಚವಾಗಿ ಹೇಳಿಕೊಳ್ಳುತ್ತಾರೆ. ಕೆಲವೊಮ್ಮೆ ಸ್ನೇಹ-ಸಂಬಂಧಕ್ಕೆ ಬೆಲೆ ಕೊಟ್ಟು ಅತಿಥಿಪಾತ್ರ ಒಪ್ಪಿಕೊಳ್ಳುತ್ತೇನೆ ಎನ್ನುವ ರೇಖಾಗೆ ಅವಕಾಶಗಳು ಕಡಿಮೆ ಆದವು ಎಂಬ ಚಿಂತೆಯೇನೂ ಇಲ್ಲ.

'ಜೀವನದಲ್ಲಿ ಕನಸನ್ನೇ ಕಾಣದವಳು ನಾನು. ಬಂದದ್ದನ್ನು ಬಂದಹಾಗೇ ಸ್ವೀಕರಿಸುತ್ತೇನೆ. ಒಂದು ವಿಷಯಕ್ಕೆ ಮಾತ್ರ ಬೇಜಾರು ಮುಂಬೈನಿಂದ ಪರಭಾಷಾ ನಟಿಯರನ್ನು ಕರೆಸುತ್ತಾರೆ. ನಮಗೆ ಫ್ಲೈಟ್ ಟಿಕೆಟ್ ಕೊಡಿಸೋಕೆ ಅಳುತ್ತಾರೆ. ಪರಭಾಷಾ ನಟಿಯರನ್ನು ಕರೆದರೆ, ಅವರೊಟ್ಟಿಗೆ ಬರುವ ಕುಟುಂಬದವರು ಹಾಗೂ ಸಿಬ್ಬಂದಿಯ ಖರ್ಚನ್ನೂ ನೋಡಿಕೊಳ್ಳಬೇಕು ಎನ್ನುತ್ತಾರೆ.

ಅಷ್ಟೇ ಅಲ್ಲ ಅವರೆಲ್ಲ ಮಾಂಸ ತಿನ್ನುತ್ತಾರೆ. ಹೆಂಡ ಕುಡಿಯುತ್ತಾರೆ. ಅವನ್ನೆಲ್ಲಾ ಪೂರೈಸಬೇಕು. ನನಗಾಗಲೀ, ನನ್ನ ಅಪ್ಪ ಅಮ್ಮನಿಗಾಗಲೀ ಅಂಥಾ ಯಾವ ಅಭ್ಯಾಸವೂ ಇಲ್ಲ. ಬೇರೆ ಭಾಷೆಯ ನಟಿಯರಿಗೆ ಕೊಡುವ ಸಂಭಾವನೆಯಲ್ಲೇ ನಮ್ಮ ಅಷ್ಟೂ ಖರ್ಚನ್ನೂ ನಿರ್ಮಾಪಕರು ತೂಗಿಸಿಬಿಡಬಹುದು. ಆದರೇನು ಮಾಡೋದು" ರೇಖಾ ಪ್ರಶ್ನೆ ಮುಂದಿಡುತ್ತಾರೆ.

ಸದ್ಯಕ್ಕೆ ಮದುವೆಯ ಯೋಚನೆ ಮಾಡದ ರೇಖಾ, ಮದುವೆ ಆಗಲೇಬೇಕು ಎಂದೇನೂ ಇಲ್ಲವಲ್ಲ ಎನ್ನುತ್ತಾ ಚಕಿತಗೊಳಿಸುತ್ತಾರೆ. ಎಲ್ಲವನ್ನೂ ಹಗುರವಾಗಿ ಮಾತಾಡುತ್ತಾ, ಎಂಥವರನ್ನೂ ಗೇಲಿ ಮಾಡುವ ಅವರಿಗೆ ನಿರ್ಮಾಪಕಿಯಾಗುವ ಯೋಚನೆಯಂತೂ ಇಲ್ಲ. ಯಾರಾದರೂ ನಿರ್ಮಾಪಕರು ಸಿಕ್ಕಿದರೆ ನಿರ್ದೇಶನದಲ್ಲಿ ಒಂದು ಕೈ ನೋಡಬಹುದು ಅಂತ ನಗುತ್ತಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada