»   » ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಚಿತ್ರೋತ್ಸವ

ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಚಿತ್ರೋತ್ಸವ

Posted By: Super
Subscribe to Filmibeat Kannada
Girish Kasaravalli
ಬೆಂಗಳೂರಿನಲ್ಲಿ ಮೂರನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಜನವರಿ 16ರಿಂದ 22ರವರೆಗೆ ನಡೆಯಲಿದೆ. 30 ದೇಶಗಳ 140 ಚಿತ್ರಗಳು ಚಿತ್ರೋತ್ಸವದಲ್ಲಿ ಪ್ರದರ್ಶನ ಕಾಣಲಿವೆ. ಜ.15ರಂದು ಚೌಡಯ್ಯ ಸಭಾಂಗಣದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಚಿತ್ರೋತ್ಸವವನ್ನು ಉದ್ಘಾಟಿಸಲಿದ್ದಾರೆ.ಇಟಲಿ ಮತ್ತು ನಾರ್ವೆ ಚಿತ್ರಗಳು ಚಿತ್ರೋತ್ಸವದಲ್ಲಿ ಪ್ರಮುಖ ಆಕರ್ಷಣೆಯಾಗಲಿವೆ.

ಉದ್ಘಾಟನಾ ಸಮಾರಂಭಕ್ಕೆ ಕನ್ನಡ ಚಿತ್ರೋದ್ಯಮದ ಗಣ್ಯರು, ಸಾಂಸ್ಕೃತಿಕ ಲೋಕದ ದಿಗ್ಗಜರು ಮತ್ತು ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳು ಆಗಮಿಸಲಿದ್ದಾರೆ. ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ರಾಜ್ಯ ವಾರ್ತಾ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ವಹಿಸಲಿದ್ದಾರೆ. ದಕ್ಷಿಣ ಭಾರತದ ಜನಪ್ರಿಯ ನಟ ಪ್ರಕಾಶ್ ರೈ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ನಿರ್ಮಾಪಕ, ನಿರ್ದೇಶಕ ಗಿರೀಶ್ ಕಾಸರವಳ್ಳಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜಾಗತಿಕ ಸಿನಿಮಾದ ಸಿಂಹಾವಲೋಕನ, ಸ್ಮರಣೆ, ಸರ್ವಶ್ರೇಷ್ಠ ಚಿತ್ರಗಳು, ಮಕ್ಕಳ ವಿಭಾಗದಲ್ಲಿ ಚಿತ್ರ ಭಾರತಿ, ಸಾಕ್ಷ್ಯ ಚಿತ್ರಗಳು ಚಿತ್ರೋತ್ಸವದಲ್ಲಿ ಪ್ರದರ್ಶನ ಕಾಣಲಿವೆ. ಜ.30ರಂದು ಭಾರತದಲ್ಲಿ ಬಿಡುಗಡೆಯಾಗಲಿರುವ ಅಮೆರಿಕದ 'ಸೆವೆನ್ ಪೌಂಡ್ಸ್' ಚಿತ್ರೋತ್ಸವದ ಉದ್ಘಾಟನಾ ಪ್ರದರ್ಶನ ಚಿತ್ರವಾಗಲಿದೆ.

ಚಿತ್ರೋತ್ಸವದ ಸಿನಿಮಾಗಳು ವಿಷನ್ ಸಿನಿಮಾಸ್ ಕಾಂಪ್ಲೆಕ್ಸ್, ಕೆಂಗಲ್ ಹನುಮಂತಯ್ಯ ರಸ್ತೆಯ ಕೆ.ಎಚ್.ಪಾಟೀಲ್ ಸಭಾಂಗಣ, ಎನ್ ಆರ್ ವೃತ್ತದ ಬಾದಾಮಿ ಹೌಸ್ ಮತ್ತು ಬನಶಂಕರಿ 2ನೇ ಹಂತದಲ್ಲಿರುವ ಸುಚಿತ್ರಾ ಸಭಾಂಗಣದಲ್ಲಿ ಪ್ರದರ್ಶನ ಕಾಣಲಿವೆ. ಕನ್ನಡ ಚಿತ್ರೋದ್ಯಮದ ಬೆಳವಣಿಗೆಗೆ ಕಾಣಿಕೆ ನೀಡಿರುವ ಬಿ.ಎಸ್.ರಂಗಾ, ನಟಿ ಬಿ.ಸರೋಜಾದೇವಿ ಅವರನ್ನುಸನ್ಮಾನಿಸಲಾಗುತ್ತದೆ. ನಿರ್ದೇಶಕ ದಿ.ಎನ್.ಲಕ್ಷ್ಮಿನಾರಾಯಣ ಅವರಿಗೆ ಸಂಬಂಧಿಸಿದ ಎರಡು ಪುಸ್ತಕಗಳನ್ನು ಬಿಡುಗಡೆ ಮಾಡಲಾಗುತ್ತದೆ.

ಚಿತ್ರೋತ್ಸವ ಪ್ರವೇಶಕ್ಕೆ ಪ್ರತಿನಿಧಿ ಪಾಸ್ 500 ರು.ಗಳಾಗಿದ್ದು ಚಲನಚಿತ್ರ ಸಂಸ್ಥೆಗಳ ಸದಸ್ಯರು, ಚಲನಚಿತ್ರ ತರಬೇತಿ ಸಂಸ್ಥೆಗಳ ವಿದ್ಯಾರ್ಥಿಗಳು, ಪತ್ರಿಕೋದ್ಯಮ ಮತ್ತು ಸಂವಹನ ವಿಭಾಗದ ವಿದ್ಯಾರ್ಥಿಗಳು 300 ರು.ಗಳಿಗೆ ಪಾಸ್ ಖರೀದಿಸಬಹುದು. ಆಸಕ್ತರು ಹೆಚ್ಚಿನ ಮಾಹಿತಿಗೆ ದೂರವಾಣಿ-2671 1785 ಅಥವಾ ಇ-ಮೇಲ್: suchitrafilmsociety@gmail.com ಸಂಪರ್ಕಿಸಬಹುದು.

(ದಟ್ಸ್ ಕನ್ನಡ ಚಿತ್ರವಾರ್ತೆ)

ಪೂರಕ ಓದಿಗೆ:
ಬೆಂಗಳೂರು ಚಿತ್ರೋತ್ಸವದಲ್ಲಿ ಕನ್ನಡ ಚಿತ್ರಗಳ ಸುಗ್ಗಿ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada