Just In
Don't Miss!
- Lifestyle
ಶನಿವಾರದ ಭವಿಷ್ಯ: ಮಕರ ರಾಶಿಯವರೇ ಆರ್ಥಿಕ ದೃಷ್ಟಿಯಿಂದ ಒಳ್ಳೆಯದು
- Sports
ಭಾರತ vs ಆಸ್ಟ್ರೇಲಿಯಾ, 4ನೇ ಟೆಸ್ಟ್ ಪಂದ್ಯ, 2ನೇ ದಿನ, Live ಸ್ಕೋರ್
- News
ಮುರುಗೇಶ್ ನಿರಾಣಿಗೆ ಸಚಿವ ಸ್ಥಾನ ಯಡಿಯೂರಪ್ಪಗೆ ಶುರುವಾಯ್ತು ಸಂಕಷ್ಟ!
- Education
ECIL Recruitment 2021: ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ವಾಕ್ ಇನ್ ಇಂಟರ್ವ್ಯೂ
- Automobiles
ಡಕಾರ್ ರ್ಯಾಲಿ 2021: 43ನೇ ಆವೃತ್ತಿಯನ್ನು ಗೆದ್ದ ಹೋಂಡಾ ರೈಡರ್ ಕೆವಿನ್ ಬೆನೆವಿಡೆಸ್
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 15ರ ಚಿನ್ನ, ಬೆಳ್ಳಿ ದರ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಗಳು'ಗಂಟೆಗಳು ಸಾರ್ ಗಂಟೆಗಳು!
ಯೋಗರಾಜ್ ಭಟ್ಟರ ಪಂಚರಂಗಿ ಚಿತ್ರದ 'ಗಳು ಗಳು' ಹಾಡುಗಳು ಬಂಪರ್ ಹಿಟ್ ಆಗಿದೆ. ಅನಿರೀಕ್ಷಿತ ಎನ್ನುವಂಥ ಸಾಹಿತ್ಯದ ಸಾಲುಗಳಿದ್ದರೂ ಜನ ಅದನ್ನು ಮೆಚ್ಚಿಕೊಂಡಿದ್ದಾರೆ. ಇಂಥ ಸಂದರ್ಭದಲ್ಲಿ ನಾವುಗಳು ಮಾಡಿರುವ ಕನ್ನಡ ಚಿತ್ರೋದ್ಯಮದ ಕುರಿತ ಸಣ್ಣದೊಂದು ವಿಮರ್ಶಾತ್ಮಕ ಗಳಗಂಟೆಗಳು ಇಲ್ಲಿದೆ. ಓದಿ, ಇಷ್ಟವಾದರೆ ಒಮ್ಮೆ ನಕ್ಕು, ಸುಮ್ಮನಾಗಿಬಿಡಿ!
*
ಕನ್ನಡ ಚಿತ್ರೋದ್ಯಮಗಳು, ವಾರಕ್ಕೆ ಮೂರು ಸಿನಿಮಾಗಳು, ನಿಂತಲ್ಲೇ ನಿಲ್ಲುವ ರೀಲುಗಳು, ಪ್ರೇಕ್ಷಕರ ಕಟ್ಟು-ಪಾಡುಗಳು, ಆಗ ಈಗ ಹಿಟ್ ಆಗುವ ಹಾಡುಗಳು, ಮಲೆನಾಡಿನ ಮಳೆಗಾಲದಂತೇ ಸುರಿಯುವ ನಿರ್ಮಾಪಕರ ಕಾಸುಗಳು, ಮೊದಲ ವಾರದಲ್ಲೇ ಮುಗ್ಗರಿಸಿ ಬೀಳುವ ವಿ-ಚಿತ್ರಗಳು, ಕಾಸು ಕಳೆದುಕೊಳ್ಳುವವರ ಕಣ್ಣೀರ ಧಾರೆಗಳು, ಎಲ್ಲೋ ಆಪ್ತರಕ್ಷಕದಂಥ ಚಿತ್ರದ ಗೆಲುವುಗಳು, ಓಡುತ್ತಿರುವ ಕೃಷ್ಣನ ಲವ್ ಸ್ಟೋರಿಗಳು, ಇನ್ನೊಂದೆಡೆ-ಕಿತ್ತೋಗಿರೋ ಲವ್ ಸ್ಟೋರಿಗಳು, ಲಾಂಗುಗಳು, ಲಾಂಗ್ ಲೀವ್ ನೋವುಗಳು, ಮಚ್ಚುಗಳು, ಥ್ಯಾಂಕ್ಯೂ ವೆರಿ ಮಚ್ಚುಗಳು, ಹಿಡಿದು ಚಚ್ಚುಗಳು, ಜನರನ್ನು ಚುಚ್ಚುವ ಚುಚ್ಚು ಮದ್ದುಗಳು,
ಒಂದೆಡೆ ಕಾಸು ಕೊಟ್ಟು ನೋಡುವ ಸಿನಿಮಾಗಳು, ಇನ್ನೊಂದೆಡೆ ಕಾಸರವಳ್ಳಿ ಚಿತ್ರಗಳು, ಕಲಾತ್ಮಕತೆಯ ಕಲಹಗಳು, ಕಮರ್ಷಿಯಲ್ ವರ್ತುಲಗಳು, ಚಿತ್ರಮಂದಿರದ ಸುತ್ತ ಸಿಡಿಯುವ ಪಟಾಕಿಗಳು, ಸೋತರೂ ಗೆದ್ದಿದ್ದೇವೆ ಎಂದು ಫೋಸು ಕೊಡುವವರ ಚಟಾಕಿಗಳು, ವಾಕಿಗಳು, ಟಾಕಿಗಳು, ಟಾಕೀಸನ್ನು ಮುತ್ತುವ ಸೊಳ್ಳೆಗಳು, ನವ 'ಬಸಂತ'ಗಳು, ಹಳೇ 'ಜಯ'ದ 'ಮಾಲಾ'ಶ್ರೀಗಳು, ಸೋಲಿನ ಸರಮಾಲೆಗಳು, ಅಲ್ಲೆಲ್ಲೋ ಸದ್ದು ಮಾಡುವ 'ಎರಡನೇ ಮದುವೆ'ಗಳು, ಆಕಾಶಕ್ಕೆ ಏರಿದ ಹೀರೋಗಳ ಕಾಲ್‌ಶೀಟುಗಳು, ಪುರುಷತ್ವ ಕಳೆದುಕೊಂಡ ಸಿಳ್ಳೆಗಳು, ಬದಲಾದ ಬೆಳ್ಳಿ ಪರದೆ ನೋಟಗಳು, ಬಾಲ್ಕನಿಯಲ್ಲಿ ಬಾಲ ಮುದಿರಿ ಕೂತಿರುವ ಮತ್ತಷ್ಟು ಸೀಟುಗಳು, ಮಧ್ಯಂತರಕ್ಕೇ ಸಾಕೆನಿಸುವ 'ಸಾಹಸ' ದೃಶ್ಯಗಳು, ಅಲ್ಲಲ್ಲಿ ಅದೃಶ್ಯಗಳು, ಪದೇ ಪದೇ ಪರಪರ ಪರದಾಡುವ ವಿಲನ್‌ಗಳು, ಕಣ್ಣಲ್ಲೇ ಕೊಲ್ಲುವ ನಾಯಕಿಯರು, ಅವರ ಅಕ್ಕ ಪಕ್ಕ ಕುಣಿಯುವ ಆಂಟಿಗಳು ಮತ್ತು ಹುಡುಗಿಯರುಗಳು...
ರಿಮೇಕ್ ಪಾಕಗಳು, ಸ್ವಮೇಕ್ ನಾಕಗಳು, ಹದ್ದುಮೀರಿದ ಹೊಡೆದಾಟಗಳು, ನಾಯಕ ನಾಯಕಿಯ 'ಕಾ ಕಾ'ದಾಟಗಳು, ಕಿವಿಗೆ ಕಚ್ಚುವ ಸಂಭಾಷಣೆಗಳು, ನಾಯಕರ ಕೋಟಿ ಮೀರಿದ ಸಂಭಾವನೆಗಳು, ಈ ಕಡೆ ಚಿತ್ರಮಂದಿರ ಸಮಸ್ಯೆಗಳು, ಆ ಕಡೆ ಪರಭಾಷಾ ಹಾವಳಿಗಳು, ದೀಪಾವಳಿಗಳು, ದಿವಾಳಿಗಳು, ಅಭಿನಯದಲ್ಲಿ ಕಂಡುಬರುತ್ತಿರುವ ಸವಕಳಿಗಳು, ಬಂಡವಾಳಶಾಹಿಗಳನ್ನು ಕಟ್ಟಿಹಾಕುವ ಸರಪಳಿಗಳು, ನೋಡಲೇಬೇಕಾದ ಬ್ರೇಕಿಂಗ್ ಫೈಟುಗಳು, ಟೈಟಲ್ಲಲ್ಲೇ ಟೈಟಾನಿಕ್ ತೋರಿಸೋ ಗಿಮಿಕ್ಕುಗಳು,
ಜೋಗ-ಜಲಪಾತಗಳು, ಆಗ ಈಗ ಆಗುವ ಸಿನಿಮಾ ಗರ್ಭಪಾತಗಳು, ಪಾತಾಳದಲ್ಲೇ ಇರುವ ಗೆಲುವೆಂಬ ಕನಸುಗಳು, ಆಕಾಶ ಸೇರಿರುವ ಅರೆಬೆಂದ ಚಿತ್ರ ಪ್ಲಸ್ ಅನ್ನಗಳು, ಬಾಂಬೆ ನಾಯಕಿಯರು, ರಂಬೆ ಮೇನಕೆಯರಿಗೇ ಸವಾಲು ಹಾಕುವ ಹಾಟ್ ಕೇಕುಗಳು, ರಸ್ತೆ ತುಂಬಾ ರಾರಾಜಿಸುವ ಪೋಸ್ಟರ್‌ಗಳು, ಫಾರಿನ್ನಲ್ಲೇ ಶೂಟ್ ಆಗುವ ಹಾಡುಗಳು, ನಿತ್ಯ ನರ್ತನ ಮಾಡುವ ನೃತ್ಯ ಸಂಯೋಜನೆಗಳು, ಪಂಚ ವಾರ್ಷಿಕ ಅವಾರ್ಡುಗಳು, ಪಂಚರ್ ಆಗುವ ಹಂತದಲ್ಲಿ ಅಡ್ಡ ಮಲಗಿರುವ ಪಂಚಕಜ್ಜಾಯಗಳು, ಬಿಡುಗಡೆ ದಿನವೇ ನಡೆಯುವ ಪೋಸ್ಟ್ ಮಾರ್ಟಮ್‌ಗಳು, ಆಟಮ್‌ಗಳು, ಬಾಂಬ್‌ಗಳು...
ಇನ್ನೆಲ್ಲೋ ನಡೆಯುವ ಸರಸಗಳು, ಮತ್ತೆಲ್ಲೋ ಸುದ್ದಿಯಾಗುವ ವಿರಸಗಳು, 'ಕೂಲ್' ಆಗೇ ನಡೆಯುವ ಕೋಲಾಹಲಗಳು, ವಿವಾದಗಳ ನಡುವೆಯೇ ನಡೆಯುವ ಸಂಧಾನಗಳು, ಸಮಾಧಾನಗಳು, 'ಸಾರಾ' ಸಗಟಾಗಿ ನಡೆಯುವ ಶಿವರಾತ್ರಿಗಳು, ಗೋವಿನಂತೆ ಫೋಸು ಕೊಡುವ, ನಂತರ ತುರಿಸುವ ನಾಲಿಗೆಗಳು, ನಡೆಸುವ ಗಮ್ಮತ್ತುಗಳು, ಮತ್ತುಗಳು ಮತ್ತು ಮತ್ತು ಮತ್ತುಗಳು...
ಇಂಥಾ ಸಂದರ್ಭದಲ್ಲಿ ನಾವು ಬರೆಯುವ ವಿಮರ್ಶೆಗಳು, ನಿಮ್ಮ ಕಾಮೆಂಟುಗಳು, ಸಿನಿಮಾ ಮಂದಿಯ ಶಾಕ್ ಟ್ರೀಟ್ ಮೆಂಟುಗಳು, ಆಮೇಲೆ ನೀವು ಅದನ್ನು ಪುರುಸೊತ್ತಿದ್ದರೆ ಓದುತ್ತೀರಿ, ಚೆನ್ನಾಗಿದ್ದರೆ ಕಷ್ಟಪಟ್ಟು ನೋಡುತ್ತೀರಿ, ಇಲ್ಲವಾದರೆ ತೆಗೆದು ಪಕ್ಕಕ್ಕಿಟ್ಟು ಕಂಬಳಿ ಹೊದ್ದು ಮಲಗುತ್ತೀರಿ!
***
ಇತಿ ವಾರ್ತಾ'ಹ ಹ ಹ' ಗಳು!