»   »  ಹಿಂದು ಮುಸ್ಲಿಂ ಪ್ರೇಮಿಗಳ ಕಥೆ 'ಸೈಕಲ್'

ಹಿಂದು ಮುಸ್ಲಿಂ ಪ್ರೇಮಿಗಳ ಕಥೆ 'ಸೈಕಲ್'

Subscribe to Filmibeat Kannada

ಎರಡು ವರ್ಷಗಳ ಹಿಂದೆ ಫೆಬ್ರವರಿ 14 ಎಂಬ ಅಪ್ಪಟಪ್ರೇಮ ಕಥಾನಕ ಹೊಂದಿದ್ದ ಚಿತ್ರವನ್ನು ನಿರ್ಮಿಸಲು ಸಿದ್ದತೆ ಮಾಡಿಕೊಂಡಿದ್ದ ನಟ ನಿರ್ದೇಶಕ ಅಗ್ನಿ ಆ ಚಿತ್ರದ ಹಾಡುಗಳ ಧ್ವನಿಮುದ್ರಣವನ್ನು ಕೂಡ ಮುಗಿಸಿದ್ದರು. ಕಾರಣಾಂತರಗಳಿಂದ ಸ್ಥಗಿತಗೊಂಡಿದ್ದ ಆ ಚಿತ್ರವನ್ನು ಇದೀಗ ಮತ್ತೆ ಪ್ರಾರಂಭಿಸಿದ್ದಾರೆ. ಭಕ್ತ ಚಿತ್ರದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದ ಅಗ್ನಿ ಇದೀಗ ಸ್ನೇಹಿತರ ಸಲಹೆಯಂತೆ ತನ್ನ ಹೆಸರನ್ನು ಶಿವಾರ್ಜುನ ಎಂದು ಬದಲಾಯಿಸಿಕೊಂಡಿದ್ದಾರೆ ಹಾಗೆಯೇ ಚಿತ್ರದ ಹೆಸರು ಕೂಡ 'ಸೈಕಲ್' ಎಂದು ಬದಲಾಗಿದೆ.

ಆಗ ಭಕ್ತ ಚಿತ್ರ ನಿರ್ಮಿಸಿದ್ದ ರಮೇಶ್ ರೆಡ್ಡಿ ಅವರೇ ಈ ಚಿತ್ರ ನಿರ್ಮಿಸುತ್ತಿದ್ದಾರೆ. ಆ ಚಿತ್ರದಿಂದ ಹಣ ಕಳೆದುಕೊಂಡಿದ್ದರೂ ಎಲ್ಲಿ ಕಳೆದುಕೊಂಡಿದ್ದೆನೋ, ಅಲ್ಲಿಯೇ ಪಡೆದುಕೊಳ್ಳಬೇಕು ಎಂಬ ನಿರ್ಧಾರದಿಂದ ಈ ಚಿತ್ರಕ್ಕೆ ಹಣ ಹಾಕುತ್ತಿದ್ದೇನೆ ಎಂದರು. ಈಗಾಗಲೇ ಅರ್ಧಕ್ಕಿಂತ ಹೆಚ್ಚು ಚಿತ್ರೀಕರಣ ಮುಗಿದಿದೆ. ಪಿ.ಯು.ಸಿ ಚಿತ್ರದಲ್ಲಿ ನಾಯಕಿಯಾಗಿದ್ದ ಹರ್ಷಿಕಪೂರ್ಣಚ್ಚ ನಾಯಕಿಪಾತ್ರ ನಿರ್ವಹಿಸಿದ್ದಾರೆ. ನಿರ್ದೇಶಕ ಶಿವಾರ್ಜುನ ಅವರೇ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಸಿನಿಟೆಕ್ ಸೂರಿ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಯಶಸ್ವಿ ಸಂಗೀತ ನಿರ್ದೇಶಕರೆನಿಸಿಕೊಂಡಿರುವ ಅರ್ಜುನ್ ಸಂಗೀತ ಸಂಯೋಜನೆ ಕೂಡ ಇದೆ.

ಫೆಬ್ರವರಿ 14 ಪ್ರೇಮಿಗಳ ದಿನ. ಅಂದು ಪ್ರೇಮಿಗಳು ತಮ್ಮ ಮನದಾಳದ ಮಾತುಗಳನ್ನು ಸ್ವಚ್ಚಂದವಾಗಿ ಹೇಳಿಕೊಳ್ಳುತ್ತಾರೆ. ಅಂಥಾ ವಿಶೇಷ ದಿನದಂದೇ ಒಂದು ಅಪರೂಪದ ಘಟನೆ ನಡೆಯುತ್ತದೆ. ಆ ಘಟನೆ ಏನೆಂಬುದೇ ಚಿತ್ರದ ಪ್ರಮುಖ ಕಥಾವಸ್ತು. ನಾಯಕ ಹಿಂದೂ ಹುಡುಗನಾದರೆ ನಾಯಕಿ ಮುಸ್ಲಿಂ ಹುಡುಗಿಯಾಗಿರುತ್ತಾಳೆ. ಇವರಿಬ್ಬರ ಪ್ರೇಮ ಕಥೆಯೇ ಸೈಕಲ್ ಚಿತ್ರ ಎಂದು ಕಥೆ ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿರುವ ನಾಯಕ ಶಿವಾರ್ಜುನ್ ಹೇಳಿದರು.

ಟಿ.ವಿ. ನಿರೂಪಕಿಯಾಗಿ ಚಟಪಟ ಮಾತಾಡುವಂತೆ, ಈ ಚಿತ್ರದ ಪಾತ್ರ ಕೂಡ ಅದೇ ರೀತಿ ಇರುತ್ತದೆ ಎಂದು ನಿರ್ದೇಶಕರು ಹೇಳಿದ್ದರು. ಅದೇ ರೀತಿ ಅಭಿನಯಿಸಿದ್ದೇನೆ. ಹಿಂದು, ಕ್ರಿಶ್ಚಿಯನ್, ಮುಸ್ಲಿಂ ಹೀಗೆ ಎಲ್ಲಾ ರೀತಿಯ ಪಾತ್ರಗಳಲ್ಲಿ ಅಭಿನಯಿಸಿದ ಅದೃಷ್ಟ ನನ್ನದಾಗಿದೆ. ತಮಸ್ಸು ಚಿತ್ರದಲ್ಲಿ ಕೂಡ ಶಿವಣ್ಣನ ತಂಗಿಯಾಗಿ ಮುಸ್ಲಿಂ ಹುಡುಗಿ ಪಾತ್ರ ನಿರ್ವಹಿಸಿದ್ದೇನೆ ಎಂದು ನಾಯಕಿ ಹರ್ಷಿತಾ ಹೇಳಿದರು.

ನಿರ್ಮಾಪಕ ರಮೇಶ್ ರೆಡ್ಡಿ ಮಾತನಾಡುತ್ತಾ ಇದು ನನ್ನ 2ನೇ ಚಿತ್ರ. ಚಿತ್ರದ ಕಥೆ ಕೇಳಿದ್ದೇನೆ. ತುಂಬಾ ಇಷ್ಟವಾಗಿದೆ. ಪ್ಯಾಮಿಲಿ ಸೆಂಟಿಮೆಂಟ್, ಲವ್ ಎಲ್ಲಾ ಇದೆ. ಬೆಂಗಳೂರು ಸುತ್ತ ಮುತ್ತ ಈಗಾಗಲೆ ಮಾತಿನ ಭಾಗದ ಚಿತ್ರೀಕರಣ ನಡೆಸಲಾಗಿದ್ದು ಹಾಡುಗಳನ್ನು ಚಿತ್ರೀಕರಿಸಲು ಚಿಕ್ಕಮಗಳೂರು, ಮಡಿಕೇರಿ ಕಡೆ ಹೋಗುವ ಪ್ಲಾನ್ ಇದೆ ಎಂದರು.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada