For Quick Alerts
  ALLOW NOTIFICATIONS  
  For Daily Alerts

  ರೇಡಿಯೋ ಸ್ಪರ್ಶದಲ್ಲಿ 'ಕನ್ನಡ ಸಿನಿಮಾ 75'

  By Staff
  |

  ರೇಡಿಯೋ ಸ್ಪರ್ಶ, ವರ್ಲ್ಡ್ ಸ್ಪೇಸ್ ಉಪಗ್ರಹ ನೆಟ್‌ವರ್ಕ್‌ನ 24 ಗಂಟೆಗಳ ಪ್ರಪ್ರಥಮ ಕನ್ನಡ ರೇಡಿಯೋ ಸ್ಟೇಷನ್. ಕರ್ನಾಟಕದಲ್ಲಿನ ಹಾಗೂ ಕರ್ನಾಟಕದಿಂದಾಚೆಗಿರುವ ಕನ್ನಡಿಗರಿಗೆ ಕನ್ನಡ ನಾಡಿನ ಪರಂಪರೆ, ಸಂಸ್ಕೃತಿ, ಜನಜೀವನವನ್ನ ಪರಿಚಯಿಸುವ, ಕನ್ನಡದ ಇಂಪಾದ ಸಂಗೀತವನ್ನು ಕೇಳಿಸುವ ವಾಹಿನಿಯಾಗಿದೆ. ಎಲ್ಲಾ ವರ್ಗದ ಜನರ ಅಭಿರುಚಿಗೆ ತಕ್ಕಂತೆ ವೈವಿಧ್ಯಮಯವಾದ ಕಾರ್ಯಕ್ರಮವನ್ನು ನೀಡುವ ಒಂದು ಕಿರುಪತ್ರಿಕೆಯ ರೀತಿ ರೂಪಿಸಲಾಗಿದೆ.

  ಹಳೆಯ ಸುಮಧುರ ಗೀತೆಗಳ ಜೊತೆ ಇತ್ತೀಚಿನ ಹೊಸ ಹಾಡುಗಳನ್ನು ಕೇಳಿಸುವುದಲ್ಲದೆ ಮನಸ್ಸಿಗೆ ಆಹ್ಲಾದವನ್ನುಂಟು ಮಾಡುವ ಭಾವಗೀತೆ, ಜನಪದ ಗೀತೆ, ರಂಗಗೀತೆ ಹೀಗೆ ಎಲ್ಲಾ ಪ್ರಕಾರದ ಸಂಗೀತವನ್ನು ಪ್ರಸಾರ ಮಾಡುತ್ತಿದೆ. ಅಷ್ಟೇ ಅಲ್ಲದೆ ಕರ್ನಾಟಕದ ಪ್ರಮುಖ ಮಹನೀಯರ ಸಂದರ್ಶನ, ಸಂವಾದ, ರೇಡಿಯೋ ನಾಟಕಗಳು ಹಾಗೂ ಡಾಕ್ಯೂಮೆಂಟ್ರಿಗಳು, ಹೀಗೆ ಎಲ್ಲಾ ಬಗೆಯ ಕಾರ್ಯಕ್ರಮಗಳನ್ನು ನೀಡುತ್ತಿದೆ. ಪ್ರತ್ಯೇಕವಾಗಿ ರೇಡಿಯೋ ಸ್ಪರ್ಶ ಈಗಿನ ಯುವ ಜನಾಂಗಕ್ಕೆ ಸುಮಧುರ ಕನ್ನಡ ಸಂಗೀತ ಮತ್ತು ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಅವರಲ್ಲಿ ಕನ್ನಡ ಸಂಗೀತ, ಸಾಹಿತ್ಯ ಮತ್ತು ಸಂಸ್ಕೃತಿಗಳ ಮೇಲೆ ಹೆಚ್ಚು ಒಲವು ಮೂಡಿಸುವ ಪ್ರಯತ್ನವನ್ನೂ ಮಾಡುತ್ತಾ ಬಂದಿದೆ.

  ಮನರಂಜನೆ ಎಂದರೆ ಮೊದಲಿಗೆ ನೆನಪಿಗೆ ಬರೋದು ಸಿನಿಮಾ. ತಮ್ಮ ನೋವುಗಳನ್ನು ಮರೆತು ಮೂರು ಗಂಟೆಗಳ ಕಾಲ ಸಿನಿಮಾ ಪ್ರಪಂಚದಲ್ಲಿ ಇರೋದಕ್ಕೆ ಎಲ್ಲರೂ ಇಷ್ಟಪಡ್ತಾರೆ. ಆದ್ದರಿಂದಲೇ ಈಗ ಭಾರತದಲ್ಲಿ ಸಿನಿಮಾ ಕ್ಷೇತ್ರ ಬಹು ದೊಡ್ಡ ಉದ್ಯಮವಾಗಿ ಬೆಳೆದಿದೆ. ಮೂಕಿ ಚಿತ್ರದಿಂದ ಪ್ರಾರಂಭವಾದ ಈ ಉದ್ಯಮ ಅನಿಮೇಷನ್ ತಂತ್ರಜ್ಞಾನದವರೆಗೆ ಬೆಳೆದು ವಿಭಿನ್ನ ರೀತಿಯ ಚಿತ್ರಗಳನ್ನು ನೀಡುತ್ತಾ ಜನರನ್ನು ರಂಜಿಸುತ್ತಾ ಬರುತ್ತಿದೆ. ಪ್ರಾದೇಶಿಕ ಚಲನಚಿತ್ರೋದ್ಯಮವೂ ತನ್ನದೇ ಆದ ಇತಿಹಾಸವನ್ನು ಹೊಂದಿದೆ. ನಮ್ಮ ಭಾಷೆಗೆ ಬಂದರೆ ಕನ್ನಡ ಚಲನಚಿತ್ರ ಇತಿಹಾಸ ಶುರುವಾದದ್ದು 1921ರಲ್ಲಿ ತಯಾರಾದ "ನಿರುಪಮಾ" ಎಂಬ ಮೂಕಿ ಚಿತ್ರದೊಂದಿಗೆ. ಅನಂತರ ಕರ್ನಾಟಕದಲ್ಲಿ ಸುಮಾರು 175 ಮೂಕಿ ಚಿತ್ರಗಳು ತಯಾರಾದವು. ಮಾರ್ಚ್ 3, 1934ರಲ್ಲಿ ಕನ್ನಡದ ಮೊದಲ ವಾಕ್ಚಿತ್ರ "ಸತೀ ಸುಲೋಚನಾ" ತೆರೆಕಂಡಿತು. ಅಲ್ಲಿಂದ 2009ರ ವರೆಗೆ ಕನ್ನಡ ವಾಕ್ಚಿತ್ರಗಳ ಮಹಾಪೂರವೇ ಹರಿಯುತ್ತಾ ಬರುತ್ತಿದೆ.

  ಇಂಥ ಕನ್ನಡ ಚಲನಚಿತ್ರರಂಗ ಈಗ 75 ವರ್ಷವನ್ನು ಪೂರೈಸಿದೆ. ಅಮೃತ ಮಹೋತ್ಸವದ ವರ್ಷವನ್ನು ವರ್ಲ್ಡ್ ಸ್ಪೇಸ್ ಉಪಗ್ರಹ ವಾಹಿನಿಯ ಏಕೈಕ 24ಗಂಟೆಗಳ ಕನ್ನಡ ಸ್ಟೇಷನ್ ರೇಡಿಯೋ ಸ್ಪರ್ಶವೂ ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಆಚರಿಸುತ್ತಿದೆ. ಅಮೃತ ಮಹೋತ್ಸವದ ಮೊದಲ ಕಾರ್ಯಕ್ರಮವಾಗಿ ಮಾರ್ಚ್ ತಿಂಗಳು ಕನ್ನಡ ಚಿತ್ರರಂಗಕ್ಕೆ ದುಡಿದ ಮಹಾನ್ ಚೇತನಗಳನ್ನು "ಅಮೃತ ಕಲಶ" ಕಾರ್ಯಕ್ರಮದಲ್ಲಿ ಸಂದರ್ಶಿಸುವುದರ ಮೂಲಕ ಅವರಿಗೆ ಗೌರವವನ್ನು ಸಲ್ಲಿಸಿತ್ತು. ಈಗ ನವೆಂಬರ್ ತಿಂಗಳಿಂದ ಪ್ರಾರಂಭವಾದ "ಕನ್ನಡ ಸಿನಿಮಾ 75" ಎಂಬ ಶೀರ್ಷಿಕೆಯಲ್ಲಿ 1934ರಿಂದ 2009 ರವರೆಗೆ ಬಿಡುಗಡೆಯಾದ ಅತ್ಯುತ್ತಮ 75 ಚಿತ್ರಗಳು, ಅದರಲ್ಲೂ ಕನ್ನಡ ಚಲನಚಿತ್ರರಂಗದಲ್ಲಿ ಹಲವಾರು ಮೈಲಿಗಲ್ಲುಗಳನ್ನು ನಿರ್ಮಿಸಿದ 75 ಚಿತ್ರಗಳನ್ನು ನಿಮಗೆ ಪರಿಚಯ ಮಾಡಿಕೊಡುತ್ತಿದೆ.

  ಈ 75 ಚಿತ್ರಗಳ ಆಯ್ಕೆಯನ್ನು ಹಿರಿಯ ಸಿನಿಮಾ ಪ್ರರ್ತಕರ್ತರಾದ ಪಿ.ಜಿ. ಶ್ರೀನಿವಾಸಮೂರ್ತಿಯವರು ಮಾಡಿದ್ದಾರೆ. ಪ್ರತಿ ದಿನ ಒಂದೊಂದು ಚಿತ್ರದಂತೆ ಅವರೇ ಈ 75 ಚಿತ್ರಗಳ ವಿವರಗಳ ಜೊತೆಗೆ ಆ ಚಿತ್ರದ ವಿಶೇಷವನ್ನು ತಿಳಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ರೇಡಿಯೋ ಸ್ಪರ್ಶ ತನ್ನ ವೈಬ್‌ಸೈಟ್‌ನಲ್ಲಿ "ಕನ್ನಡ ಸಿನಿಮಾ 75" ಎಂಬ ಪ್ರತ್ಯೇಕ ಮೈಕ್ರೋಸೈಟ್ ಪ್ರಾರಂಭ ಮಾಡಿದೆ. ಇದರಲ್ಲಿ ಪಿ.ಜಿ. ಶ್ರೀನಿವಾಸಮೂರ್ತಿಯವರು ಆಯ್ಕೆ ಮಾಡಿರುವ 75 ಸಿನಿಮಾಗಳ ಮಾಹಿತಿಯೊಂದಿಗೆ ಹಲವಾರು ಚಿತ್ರಗಳ, ಕಲಾವಿದರ ಅಪರೂಪದ ಛಾಯಾಚಿತ್ರಗಳ ಜೊತೆಗೆ ಹಾಡು, ಸಂಭಾಷಣೆ ಮತ್ತು ಪಿ.ಜಿ. ಶ್ರೀನಿವಾಸಮೂರ್ತಿಯವರ ಮಾಹಿತಿಯನ್ನು ಕೇಳಬಹುದಾಗಿದೆ.

  ರೇಡಿಯೋ ಸ್ಪರ್ಶ ಕೇವಲ ಚಲನಚಿತ್ರರಂಗದ ಕಾರ್ಯಕ್ರಮಗಳ ಜೊತೆಗೆ ಸಾಹಿತ್ಯಕ್ಕೆ ಸಂಬಂಧಪಟ್ಟ ವಿಶೇಷ ಕಾರ್ಯಕ್ರಮಗಳನ್ನು ಬಿತ್ತರಿಸುತ್ತಿದೆ. ಕನ್ನಡ ಸಾಹಿತ್ಯದಲ್ಲಿ ಸಾಹಿತಿಗಳಿಗೆ ಬಂದಿರುವ ಪ್ರಶಸ್ತಿಗಳು ಹಲವಾರು. ಜ್ಞಾನಪೀಠದಿಂದ ರಾಜ್ಯೋತ್ಸವ ಪ್ರಶಸ್ತಿಯವರೆಗೆ ಹಾಗೆಯೇ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದ ಸಾಹಿತಿಗಳು ಅನೇಕ. ಕನ್ನಡ ಸಾಹಿತ್ಯದಲ್ಲಿ ಇದುವರೆಗೂ 60ಕ್ಕೂ ಹೆಚ್ಚು ಸಾಹಿತಿಗಳಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿವೆ. ಈ ಪ್ರಶಸ್ತಿಯನ್ನು ಪಡೆದ ಸಾಹಿತಿಯ ಹಾಗೂ ಪ್ರಶಸ್ತಿ ಪಡೆದ ಕೃತಿಯ ಬಗ್ಗೆ ರೇಡಿಯೊಚಿತ್ರಣವನ್ನ ನೀಡುತ್ತಿದೆ "ಚೈತ್ರಪಥ" ಕಾರ್ಯಕ್ರಮದಲ್ಲೆ. ನವೆಂಬರ್ ತಿಂಗಳು ಮೊದಲ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ರಾಷ್ಟ್ರಕವಿ ಕುವೆಂಪು ಅವರ ವ್ಯಕ್ತಿ ಚಿತ್ರಣದಿಂದ ಪ್ರಾರಂಭವಾದ ಈ ಕಾರ್ಯಕ್ರಮವೂ ಪ್ರತಿ ಭಾನುವಾರ ಬೆಳಿಗ್ಗೆ 11ಗಂಟೆಗೆ ಪ್ರಸಾರವಾಗುತ್ತಿದೆ. ರೇಡಿಯೋ ಸ್ಪರ್ಶದ ಬಗ್ಗೆ ಹೆಚ್ಚಿನ ಮಾಹಿತಿಗೆ ಹಾಗೂ ನಿಮ್ಮ ಅಭಿಪ್ರಾಯವನ್ನು ತಿಳಿಸಬೇಕೆಂದರೆ ಸಂಪರ್ಕಿಸಿ - sparsha@worldspace.com. ನಮ್ಮ ಅಂಚೆ ವಿಳಾಸ ರೇಡಿಯೋ ಸ್ಪರ್ಶ, ಅಂಚೆಪೆಟ್ಟಿಗೆ ಸಂಖ್ಯೆ 5161, ಬೆಂಗಳೂರು -1.

  (ದಟ್ಸ್ ಕನ್ನಡ ಚಿತ್ರವಾರ್ತೆ)

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X