»   »  'ಕರ್ನಾಟಕ ಹೆಮ್ಮೆಯ ಪುತ್ರ'ನಾಗಿ ಪುನೀತ್

'ಕರ್ನಾಟಕ ಹೆಮ್ಮೆಯ ಪುತ್ರ'ನಾಗಿ ಪುನೀತ್

Posted By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ತಲೆಗೆ ಹೊಸ ಕಿರೀಟ ತೊಡಿಸಲಾಗಿದೆ. 'ಕರ್ನಾಟಕ ಹೆಮ್ಮೆಯ ಪುತ್ರ' ಎಂಬ ಬಿರುದನ್ನು ಅಖಿಲ ಕರ್ನಾಟಕ ಬುದ್ಧಿಜೀವಿಗಳ ಸಂಘ ಪುನೀತ್ ಅವರಿಗೆ ನೀಡಿದೆ. ಪುನೀತ್ ಅವರ ವಿನಮ್ರತೆ, ಸಿನಿಮಾ ವೃತ್ತಿ ಜೀವನ ಮುಂತಾದ ಅಂಶಗಳನ್ನು ಗಮನಿಸಿ ಈ ಪ್ರಶಸ್ತಿ ನೀಡಲಾಗಿದೆ.

ಪುನೀತ್ ಅವರೊಂದಿಗೆ ವಿಧಾನ ಪರಿಷತ್ ಸಭಾಪತಿ ವೀರಣ್ಣ ಮತ್ತಿಕಟ್ಟಿ, ಮಾಜಿ ಸಚಿವ ಪರಮೇಶ್ವರ್ ಸೇರಿದಂತೆ ಒಟ್ಟು 15 ಮಂದಿಗೆ 'ಕರ್ನಾಟಕ ಹೆಮ್ಮೆಯ ಪುತ್ರ' ಪ್ರಶಸ್ತಿ ನೀಡಿ ಗೌರವಿಸಲಾಯಿತು.ಪುನೀತ್ ಅವರಿಗೆ ನ್ಯಾಯಮೂರ್ತಿ ವಿ ಎಸ್ ಸಾಯಿ ಪ್ರಕಾಶ್ ಅವರು ಪ್ರಶಸ್ತಿಯನ್ನು ಪ್ರದಾನ ಮಾಡಿದರು. 'ಕರ್ನಾಟಕ ಹೆಮ್ಮೆಯ ಪುತ್ರ' ಪ್ರಶಸ್ತಿ ಪತ್ರದೊಂದಿಗೆ ಪೇಟ, ಫಲಕವನ್ನು ನೀಡಿ ಗೌರವಿಸಲಾಯಿತು.

'ಕೋಮು ಸೌಹಾರ್ದದಲ್ಲಿ ಬುದ್ಧಿ ಜೀವಿಗಳ ಪಾತ್ರ' ಕುರಿತ ವಿಚಾರ ಸಂಕಿರಣವನ್ನು ಬುದ್ಧಿಜೀವಿಗಳ ಸಂಘ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು. ರಾಜ್ಯ ಕಾನೂನು ಆಯೋಗದ ಅಧ್ಯಕ್ಷ ನ್ಯಾ.ವಿ.ಎಸ್.ಮಳಿಮಠ ಮಾತನಾಡುತ್ತಾ, ಬುದ್ದ್ಧಿಜೀವಿಗಳು ತಮ್ಮ ಬುದ್ಧಿವಂತಿಕೆಯನ್ನು ತುಸು ಕಡಿಮೆ ಮಾಡಿ ಹೃದಯವಂತಿಕೆಯನ್ನು ಹೆಚ್ಚಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಒಟ್ಟು ಹದಿನೈದು ಮಂದಿಯನ್ನು 'ಕರ್ನಾಟಕದ ಹೆಮ್ಮೆಯ ಪುತ್ರರು' ಎಂಬುದಾಗಿ ಆಯ್ಕೆ ಮಾಡಲಾಗಿದೆ. ಆದರೆ ರಾಜ್ಯದಲ್ಲಿ ಒಬ್ಬರೂ ಹೆಮ್ಮೆಯ ಪುತ್ರಿ ಇಲ್ಲವೆ? ಸುಧಾಮೂರ್ತಿ, ಮಾಯಾರಾವ್ ನಿಮ್ಮ ಕಣ್ಣಿಗೆ ಬೀಳಲಿಲ್ಲವೇ? ಎಂದು ಮಳೀಮಠ್ ತರಾಟೆಗೆ ತೆಗೆದುಕೊಂಡರು. ಹಿರಿಯ ಸಂಶೋಧಕ ಡಾ.ಎಂ.ಚಿದಾನಂದಮೂರ್ತಿ, ಸೈಬರ್ ಅಪರಾಧ ಮೇಲ್ಮನವಿ ನ್ಯಾಯಾಧಿಕರಣದ ರಾಜೇಶ್ ಟಂಡನ್, ಸಂಘದ ರಾಷ್ಟ್ರೀಯ ಅಧ್ಯಕ್ಷ ಗಾರ್ಗ್ ಮತ್ತಿತರರು ಉಪಸ್ಥಿತರಿದ್ದರು.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada