»   »  ಕನ್ನಡ ಚಿತ್ರಗಳ ಸೋಲು, ಗೆಲುವು ಮತ್ತು ಸವಾಲು

ಕನ್ನಡ ಚಿತ್ರಗಳ ಸೋಲು, ಗೆಲುವು ಮತ್ತು ಸವಾಲು

Subscribe to Filmibeat Kannada
ಅಮೃತ ಮಹೋತ್ಸವ ಸಮಾರಂಭದಲ್ಲಿ ಹಮ್ಮಿಕೊಂಡಿದ್ದ' 'ಕನ್ನಡ ಚಿತ್ರಗಳ ಸೋಲು, ಗೆಲುವು ಮತ್ತು ಸವಾಲು' ವಿಚಾರ ಸಂಕಿರಣದಲ್ಲಿ ಹೊರಹೊಮ್ಮಿದ ವಿಚಾರಗಳು ಇಲ್ಲಿವೆ.

ಕೆ ಎಸ್ ಎಲ್ ಸ್ವಾಮಿ (ರವೀ), ನಿರ್ದೇಶಕ: ಈವರೆಗೆ ಕನ್ನಡದಲ್ಲಿ ಅತ್ಯಂತ ಯಶಸ್ವಿಯಾದ ಬಹುತೇಕ ಚಿತ್ರಗಳಲ್ಲಿ ಸಂಸ್ಕೃತಿ, ಸಂಸ್ಕಾರವಿತ್ತು. ಕ್ರೌರ್ಯ ಇರಲಿಲ್ಲ ಎಂಬುದನ್ನುನಿರ್ಮಾಪಕರು ಅರಿತುಕೊಳ್ಳಬೇಕು. ಹೀರೊಮತ್ತು ಹೀರೋಯಿನ್‌ಗಳ ಕಾಲ್‌ಶೀಟ್ ಇವತ್ತು ಗಗನಕ್ಕೆ ಏರಿದೆ. ಚಿತ್ರ ನಿರ್ಮಾಣಕ್ಕಿಂತ ಕಲಾವಿದರ ಸಂಭಾವನೆಯೇ ಹೆಚ್ಚಾಗುತ್ತಿದೆ. ಹೀಗಾದರೆ, ಚಿತ್ರದಲ್ಲಿ ಶ್ರೀಮಂತಿಕೆ ಬರಲು ಹೇಗೆ ಸಾಧ್ಯ? ಚಿತ್ರವೊಂದಕ್ಕೆ ರು.100 ಖರ್ಚು ಮಾಡಿದರೆ,ರು.25 ಮಾತ್ರಕಲಾವಿದರ ಸಂಭಾವನೆಗೆ ವೆಚ್ಚಮಾಡುವಂತಾಗಬೇಕು.

ರಾಜೇಂದ್ರ ಸಿಂಗ್ ಬಾಬು, ನಿರ್ದೇಶಕ: ಟೆಂಟ್ ಚಿತ್ರಮಂದಿರಗಳು ಕನ್ನಡ ಚಿತ್ರಗಳಿಗೆ ಸಂಜೀವಿನಿ ಆಗಿದ್ದವು. ಆದರೆ, ಇತ್ತೀಚೆಗೆ 400-500 ಟೆಂಟ್‌ಗಳು ಮುಚ್ಚಿಹೋಗಿವೆ. ಇದರಿಂದ ದೊಡ್ಡ ಪೆಟ್ಟು ಬಿದ್ದಿದೆ. ಇನ್ನು,ಬೆಂಗಳೂರಿನಲ್ಲಿರುವ 127ಚಿತ್ರಮಂದಿರಗಳಲ್ಲಿ ಕನ್ನಡ ಚಿತ್ರ ಪ್ರದರ್ಶಿಸುತ್ತಿರುವ ಟಾಕೀಸ್‌ಗಳು 27 ಮಾತ್ರ. ಹೀಗಾದರೆ,ನಿರ್ಮಾಪಕರ ಗತಿಯೇನು? ಚಿತ್ರಮಂದಿರಗಳಲ್ಲಿ ಹಾಲಿ ಇರುವ ಬಾಡಿಗೆ ವ್ಯವಸ್ಥೆ ಬದಲಿಗೆ ಕಮಿಷನ್ ಆಧಾರದ ವ್ಯವಸ್ಥೆ ಜಾರಿಗೊಳ್ಳಬೇಕು. ಇಲ್ಲವಾದರೆ, ನಿರ್ಮಾಪಕರು ಉಳಿಯಲು ಸಾಧ್ಯವಿಲ್ಲ.

ರಾಕ್ ಲೈನ್ ವೆಂಕಟೇಶ್, ನಿರ್ಮಾಪಕ: ಚಿತ್ರಮಂದಿರಗಳ ಮಾಲೀಕರು ಟಾಕೀಸ್ ಗಳನ್ನು ಗುತ್ತಿಗೆ ಆಧಾರದ ಮೇಲೆ ಮಧ್ಯವರ್ತಿಗಳಿಗೆ ಒಪ್ಪಿಸಿದ್ದಾರೆ. ಇವರು ಹೆಚ್ಚು ಬಾಡಿಗೆ ನೀಡುವ ನಿರ್ಮಾಪಕರಿಗೆ ಮಣೆ ಹಾಕುತ್ತಿದ್ದಾರೆ. ಇದನ್ನು ತಪ್ಪಿಸಬೇಕು. ಪ್ರದರ್ಶಕರು ಕಡಿಮೆ ಬಾಡಿಗೆ ಪಡೆಯಬೇಕು. ಬೆರಳೆಣಿಕೆಯ ಚಿತ್ರಮಂದಿರಗಳನ್ನು ಹೊರತುಪಡಿಸಿದರೆ, ಸೇವಾ ಶುಲ್ಕ ಪಡೆಯುತ್ತಿರುವ ಹಲವು ಚಿತ್ರಮಂದಿರಗಳು ಯಾವುದೇ ಸೌಕರ್ಯ ಒದಗಿಸುತ್ತಿಲ್ಲ. ಹೀಗಾದರೆ, ಚಿತ್ರಮಂದಿರಕ್ಕೆ ಪ್ರೇಕ್ಷಕರು ಹೇಗೆ ಬರುತ್ತಾರೆ?

ಎಸ್.ಎ.ಚಿನ್ನೇಗೌಡ, ನಿರ್ಮಾಪಕ: ಕನ್ನಡ ಸಿನಿಮಾಕ್ಕೆ ಮಾಧ್ಯಮಗಳು ಮೊದಲಿನಿಂದಲೂ ಪ್ರೋತ್ಸಾಹ ನೀಡುತ್ತ ಬಂದಿವೆ. ಕನ್ನಡ ಚಿತ್ರರಂಗ ಗಟ್ಟಿಯಾಗಿ ಬೇರೂರಲು ಮಾಧ್ಯಮಗಳ ಪೂರಕ ಕೆಲಸಕಾರಣ. ಆದರೆ, ಇತ್ತೀಚೆಗೆ ಕೆಲವು ಮಾಧ್ಯಮಗಳು ಪೂರ್ವಗ್ರಹ ಪೀಡಿತ ವರದಿ ಪ್ರಕಟಿಸುತ್ತಿವೆ. ಚಿತ್ರದ ಸರಿ, ತಪ್ಪುಗಳನ್ನುವಿಮರ್ಶಿಸುವ ಬದಲು ತೇಜೋವಧೆ ನಡೆಯುತ್ತಿದೆ.

ಸಾ ರಾ ಗೋವಿಂದು ನಿರ್ಮಾಪಕ: ಜನಪ್ರತಿನಧಿಗಳ ಬೆಂಬಲದಿಂದಲೇ ನಕಲಿ ಸಿ.ಡಿ. ಜಾಲ ಹೆಮ್ಮೆರವಾಗಿ ಬೆಳೆದಿದೆ. ಇದರಿಂದಾಗಿ ನಿರ್ಮಾಪಕರು,ಚಿತ್ರಮಂದಿರಗಳ ಮಾಲೀಕರು ನಷ್ಟ ಅನುಭವಿಸುತ್ತಿದ್ದಾರೆ. ಜತೆಗೆ, ಸರಕಾರಕ್ಕೆ ತೆರಿಗೆ ನಷ್ಟ ಆಗುತ್ತಿದೆ. ಇಷ್ಟಾದರೂ,ಸರಕಾರ ಪೈರಸಿ ತಡೆಯಲು ಗೂಂಡಾಕಾಯಿದೆ ಜಾರಿ ಮಾಡುತ್ತಿಲ್ಲ. ಸರಕಾರಕ್ಕೆ ಕನ್ನಡ ಚಿತ್ರೋದ್ಯಮದ ಬಗ್ಗೆ ಕಳಕಳಿ ಇದ್ದರೆ, ಗೂಂಡಾ ಕಾಯಿದೆ ಜಾರಿಗೆ ತರಲಿ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಅಮೃತ ಮಹೋತ್ಸವದಲ್ಲಿ ಮಿಡಿದ ಅಪಸ್ವರಗಳು
ಕನ್ನಡ ಚಿತ್ರದಲ್ಲಿ ನಟಿಸುವ ಆಸೆ: ರಜನಿಕಾಂತ್
ರಂಗುರಂಗಿನ ಅಮೃತ ಮಹೋತ್ಸವ ಚಿತ್ರಪಟ

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada