»   »  'ಆನಂದ ಗೋಕುಲ'ದ ಹೀರೋಗೆ 98ವರ್ಷ

'ಆನಂದ ಗೋಕುಲ'ದ ಹೀರೋಗೆ 98ವರ್ಷ

Posted By:
Subscribe to Filmibeat Kannada

ಮಾತಾ ಪಿತ ಸಿನಿ ಕ್ರಿಯೇಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ 'ಆನಂದಗೋಕುಲ' ಚಿತ್ರದ ಮುಹೂರ್ತ ಕಳೆದ ಬುಧವಾರ ನೆರವೇರಿತು. ಈ ಚಿತ್ರದ ವಿಶೇಷವೇನೆಂದರೆ ವಯೋವೃದ್ಧರಾದ 98 ವರ್ಷ ವಯಸ್ಸಿನ ವೀರಭದ್ರಪ್ಪ ಹಾಗೂ 88 ವರ್ಷ ವಯಸ್ಸಿನ ಪಾರ್ವತಮ್ಮ ಚಿತ್ರದ ನಾಯಕ-ನಾಯಕಿ ಪಾತ್ರ ನಿರ್ವಹಿಸುತ್ತಿರುವುದು.

ನಿಜ ಜೀವನದಲ್ಲಿಯೂ ಇವರು ಪತಿ ಪತ್ನಿಯರಾಗಿದ್ದಾರೆ. ಇವರಿಬ್ಬರ ಮೇಲೆಯೇ ಇಡೀ ಚಿತ್ರದ ಕಥೆ ಸಾಗಲಿದೆ. ಎ.ಆರ್.ಬಾಬು, ರವಿಕೊಟ್ಟಾರಕರ ಮೊದಲಾದ ನಿರ್ದೇಶಕರ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ನಾಗೇಂದ್ರರಾವ್ ಅವರು ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶನ ಮಾಡಲಿದ್ದಾರೆ.

ವಯೋವೃದ್ಧರ ಜೀವನದ ಸಮಸ್ಯೆಗಳು, ಮಕ್ಕಳು ತಮ್ಮ ತಂದೆ ತಾಯಿಗಳನ್ನು ಹೇಗೆ ನಿರ್ಲಕ್ಷಿಸುತ್ತಾರೆ. ಸರ್ಕಾರವು ಎಷ್ಟರ ರಮಟ್ಟಿಗೆ ಸಂರಕ್ಷಿಸುತ್ತಿದೆ. ಮುಸ್ಸಂಜೆಯ ಬದುಕಿನಲ್ಲಿ ಅವರು ಯಾವ ರೀತಿಯ ನರಕಯಾತನೆ ಅನುಭವಿಸುತ್ತಾರೆ. ಸಂಬಂಧಿಕರೂ ಅವರನ್ನು ಯಾವ ರೀತಿ ನಡೆಸಿಕೊಳ್ಳುತ್ತಾರೆ. ಇವೇ ಮೊದಲಾದ ಸಮಸ್ಯೆಗಳನ್ನು ನಮ್ಮ ಚಿತ್ರದಲ್ಲಿ ನಿರೂಪಿಸುತ್ತಿದ್ದೇವೆ ಎಂದು ನಿರ್ದೇಶಕ ನಾಗೇಂದ್ರರಾವ್ ಪತ್ರಕಾಗೋಷ್ಠಿಯಲ್ಲಿ ವಿವರಿಸಿದರು.

ಇಡೀ ಚಿತ್ರದಲ್ಲಿ ಒಟ್ಟು 110ಜನ ಪಾತ್ರಧಾರಿಗಳು ಕಾಣಿಸಿಕೊಳ್ಳಲಿದ್ದಾರೆ. ಅಷ್ಟೊಂದು ಪಾತ್ರಗಳಿದ್ದರೂ ಎಲ್ಲವೂ ಕಥೆಗೆ ಪೂರಕವಾಗಿಯೇ ಬರುತ್ತವೆ. ಅಲ್ಲದೆ ಮಾಜಿ ಸಚಿವೆ ಬಿ.ಟಿ.ಲಲಿತಾನಾಯಕ್ ಜಡ್ಜ್ ಪಾತ್ರದಲ್ಲಿ ಅಭಿನಯಿಸಲಿದ್ದಾರೆ. ಹೆಸರಾಂತ ಸಂಗೀತ ನಿರ್ದೇಶಕರಾದ ರಾಜನ್‌ನಾಗೇಂದ್ರ ಜೋಡಿಯ ರಾಜನ್ ಅವರು ಈ ಚಿತ್ರದ ಹಾಡುಗಳಿಗೆ ಸಂಗೀತ ಸಂಯೋಜಿಸಲಿದ್ದಾರೆ.

ಒಟ್ಟು 6 ಹಾಡುಗಳಿದ್ದು, ಪ್ರತಿ ಹಾಡಿಗೂ ಒಂದೊಂದು ವಿಶೇಷತೆ ಇದೆ ಎಂದು ರಾಜನ್ ಹೇಳಿದರು. ಅನಂತಕುಮಾರ್ ಹಿನ್ನೆಲೆ ಸಂಗೀತ ಒದಗಿಸಿಲಿದ್ದಾರೆ. ಕೆ.ಕೆ.ಡ್ಯಾಮ್ ಅವರು ಛಾಯಾಗ್ರಹಣ ಕೆಲಸ ನಿರ್ವಹಿಸಲಿದ್ದಾರೆ. ಮಾತಿನ ಭಾಗದ ಚಿತ್ರೀಕರಣವನ್ನು ಬೆಂಗಳೂರು ಸುತ್ತಮುತ್ತ ಮಾಡಲಿದ್ದು, ಹಾಡಿನ ಚಿತ್ರಣಕ್ಕೆ ಕರ್ನಾಟಕದ ಪ್ರಮುಖ ಪ್ರವಾಸಿ ತಾಣಗಳಿಗೆ ಹೋಗುವ ಯೋಜನೆ ಇದೆಯಂತೆ. ಮುಖ್ಯಪಾತ್ರಧಾರಿ ವೀರಭದ್ರಪ್ಪ ಅವರು ಚಿಕ್ಕ ವಯಸ್ಸಿನಲ್ಲಿ ಸಂಗೀತ ನಾಟಕಗಳಲ್ಲಿ ಹಲವಾರು ಪಾತ್ರಗಳನ್ನು ನಿರ್ವಹಿಸಿದ್ದರಿಂದ ಈ ಚಿತ್ರದಲ್ಲಿ ಅಭಿನಯಿಸಲು ಒಪ್ಪಿದೆ ಎಂದರು.

'ಆನಂದ ಗೋಕುಲ' ಇದೊಂದು ತುಂಬಿದ ಸಂಸಾರ. ಆ ಮನೆಯು ಆಧಾರ ಸ್ತಂಭಗಳಾದ ಈ ದಂಪತಿಗಳಿಗೆ 7 ಜನ ಮಕ್ಕಳು. ಮೊಮ್ಮಕ್ಕಳು ಎಲ್ಲರೂ ಒಟ್ಟಿಗೇ ವಾಸಿಸುತ್ತಿರುತ್ತಾರೆ. ನಂತರದ ದಿನಗಳಲ್ಲಿ ಆನಂದ ಗೋಕುಲ ದ ಸ್ಥಿತಿ ಏನಾಯಿತು. ಆ ಮುದಿ ಜೀವಿಗಳ ಮೂಕರೋದನ ಮಕ್ಕಳು, ಮೊಮ್ಮಕ್ಕಳಿಗೆ ಕೇಳಿಸಿತೇ ಮುಂತಾದ ಮನಃ ಕಲಕುವಂಥ ಹೃದಯಸ್ಪರ್ಷಿ ಘಟನೆಗಳನ್ನು ನಿರ್ದೇಶಕರು ಚಿತ್ರದಲ್ಲಿ ಅಳವಡಿಸಿಕೊಂಡಿದ್ದಾರೆ.

ನೋವನ್ನು ನಲಿವಿನ ಮೂಲಕ ಹೇಳುತ್ತಿದ್ದಾರೆ ಎಂದು ಸಾಹಿತಿ ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ಅವರು ನಿರ್ದೇಶಕರನ್ನು ಪ್ರಶಂಶಿಸಿದರು. ರಿಯಲ್ ಎಸ್ಟೇಟ್ ಹಾಗೂ ವ್ಯಾಪಾರೋದ್ದಿಮೆ ನಡೆಸುತ್ತಿರುವ ಆಲಿಜಾನ್ ಹಾಗೂ ಬಿ.ನಾಗರಾಜ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಓಂಪ್ರಕಾಶನಾಯಕ, ಅನು, ಸೂರ್ಯಕಾಂತ, ಚಂದ್ರಕಾಂತಿ, ವಸಂತ, ಬ್ಯಾಂಕ್ ಜನಾರ್ಧನ್, ದೊಡ್ಡಣ್ಣ, ರೇಖದಾಸ್ ಬಿರಾದಾರ, ಕರಿಬಸಯ್ಯ, ಸತ್ಯಜಿತ್, ಡಿಂಗ್ರಿ ನಾಗರಾಜ್ ಹೀಗೆ ಮೊದಲಾದವರ ತಾರಾಗಣವಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada