»   »  ಮಳೆ ರಚ್ಚೆಯಲ್ಲಿ ಫ್ರೀಜ್ ಆದ ಕನ್ನಡಚಿತ್ರೋದ್ಯಮ

ಮಳೆ ರಚ್ಚೆಯಲ್ಲಿ ಫ್ರೀಜ್ ಆದ ಕನ್ನಡಚಿತ್ರೋದ್ಯಮ

By: *ಜಯಂತಿ
Subscribe to Filmibeat Kannada

ಮಳೆ ರಚ್ಚೆಯಲ್ಲಿ ಚಿತ್ರೋದ್ಯಮ ಫ್ರೀಜ್ ಆಗಿದೆ. ಕಾನಿಷ್ಕಾ ಅಂಗಳದಲ್ಲಿ ಹಳೆ-ಹೊಸ ನಿರ್ಮಾಪಕರು ಕಪ್ಪುಗಟ್ಟಲೆ ಕಾಫಿ, ಚಹಾ ಹೀರುತ್ತಾ ಉದ್ಯಮದ ಅಧೋಗತಿಗೆ ಕಾರಣಗಳನ್ನು ಪಟ್ಟಿ ಮಾಡುತ್ತಾ ಕೂತಿದ್ದಾರೆ. ದಶಕದ ಹಿಂದೆ ಹತ್ತು ಹದಿನೈದು ಲಕ್ಷದಲ್ಲಿ ಸಿನಿಮಾ ಮಾಡಿ ದುಪ್ಪಟ್ಟು ಲಾಭ ಮಾಡಿಕೊಳ್ಳುತ್ತಿದ್ದ ನಿರ್ಮಾಪಕರು ಈಗ ಕೋಟಿಗಟ್ಟಲೆ ಹೂಡುವ ಪರಿಸ್ಥಿತಿ. ಹಾಕಿದ ಹಣ ವಾಪಸ್ ಬಂದೀತೆಂಬ ಖಾತರಿ ಇಲ್ಲ. ಸದ್ಯದ ಚಿತ್ರೋದ್ಯಮದ ವಸ್ತುಸ್ಥಿತಿಗೆ ಕನ್ನಡಿ ಹಿಡಿಯುವ ಕೆಲವು ಅಂಶಗಳು ಇಂತಿವೆ.

ಜನ ಸಿನಿಮಾ ನೋಡಲು ಮನೆಬಿಟ್ಟು ಮೊದಲಿನಂತೆ ಬರುತ್ತಿಲ್ಲ. ಇದಕ್ಕೆ ಮೊದಲ ಕಾರಣ ದುಬಾರಿ ಟಿಕೆಟ್ ಬೆಲೆ. ಮನಸಾರೆ ಚಿತ್ರವನ್ನೇ ಉದಾಹರಣೆಯಾಗಿ ತೆಗೆದುಕೊಳ್ಳೋಣ. ಶುಕ್ರವಾರ ನಂದಿನಿ ಚಿತ್ರಮಂದಿರದಲ್ಲಿ ಅಷ್ಟೂ ಪ್ರದರ್ಶನ ಹೌಸ್‌ಫುಲ್. ಆದರೆ, ಸಾಗರ್ ಚಿತ್ರಮಂದಿರದಲ್ಲಿ ಎರಡು ಪ್ರದರ್ಶನಗಳು ಡಲ್. ನಂದಿನಿಯಲ್ಲಿ ಸಿನಿಮಾ ನೋಡುವ ಬೆಲೆಗೆ ಸಾಗರ್‌ನಲ್ಲಿ ನೋಡಲು ಸಾಧ್ಯವಿಲ್ಲ ಎಂಬುದು ಸತ್ಯ.

ಎರಡು ಮಕ್ಕಳಿರುವ ಒಂದಿಡೀ ಸಂಸಾರ ಹೊರಗೆ ತಿಂದುಂಡು, ಹಾಯಾಗಿ ಸಿನಿಮಾ ನೋಡಿಕೊಂಡು ಬರಲು ಒಂದು ಸಾವಿರ ರುಪಾಯಿಯಾದರೂ ಬೇಕಲ್ಲವೇ? ಅದರ ಹೊರೆ ಈಗ ಜನರಿಗೆ ಭಾರ. ಡಿವಿಡಿ ಪ್ಲೇಯರ್ ಇರುವವರು ದೊಡ್ಡ ಪರದೆಯ ಟಿವಿ ಕೊಂಡು, ಮನೆಯಲ್ಲಿ ಪೈರೇಟೆಡ್ ಸೀಡಿಗಳನ್ನು ತಂದು ಆರಾಮವಾಗಿ ನೋಡಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಕನ್ನಡ ಚಿತ್ರಗಳ ಪೈರೆಸಿ ಕಡಿಮೆ. ಆದರೆ ಹುಬ್ಬಳ್ಳಿ, ಮೈಸೂರು, ಮಂಗಳೂರು, ಉತ್ತರ ಕರ್ನಾಟಕದ ತಾಲ್ಲೂಕು ಭಾಗಗಳಲ್ಲಿ ಫುಟ್‌ಪಾತ್ ಮೇಲೆಯೇ ಕನ್ನಡದ ಹೊಸ ಚಿತ್ರಗಳ ನಕಲಿ ಡಿವಿಡಿಗಳು ಮಾರಾಟವಾಗುತ್ತಿವೆ. ಐವತ್ತು ರೂಪಾಯಿಗೆ ಐವತ್ತು ಜನ ಸಿನಿಮಾ ನೋಡುವ ಆ ಅವಕಾಶಕ್ಕೆ ಹೋಲಿಸಿದರೆ ಚಿತ್ರಮಂದಿರ ತುಟ್ಟಿಯೇ ಹೌದಲ್ಲವೇ?

ಮಳೆಯ ಕಾಟದಿಂದ ಸಂಜೆಯ ನಂತರ ಎರಡು ಪ್ರದರ್ಶನಗಳ ಕಲೆಕ್ಷನ್ ಅರ್ಧಕ್ಕಿಂತ ಕಡಿಮೆಯಾಗುತ್ತಿದೆ. ಇದೇ ಕಾರಣಕ್ಕೆ ಕೆ.ಮಂಜು ತಮ್ಮ ಯೋಗಿ ಹಾಗೂ ಬಳ್ಳಾರಿ ನಾಗ ಚಿತ್ರಗಳ ಬಿಡುಗಡೆಯನ್ನು ಪದೇಪದೇ ಮುಂದೂಡುತ್ತಿರುವುದು. ಸತತ ಸೋಲಿನಿಂದ ಕಂಗಾಲಾಗಿರುವ ಮಂಜು ಒಂದು ಹಿಟ್ ನಿರೀಕ್ಷೆಯಲ್ಲಿರುವುದಂತೂ ಸತ್ಯ.

ಸದ್ಯಕ್ಕೆ ಕನ್ನಡ ಚಿತ್ರರಂಗದ ಸ್ಟಾರ್‌ಗಳು ಇಬ್ಬರೇ. ಒಂದು ಪುನೀತ್ ರಾಜ್‌ಕುಮಾರ್. ಇನ್ನೊಂದು ದರ್ಶನ್. ಈ ಇಬ್ಬರನ್ನೂ ಹಾಕಿಕೊಂಡು ಯಾರಾದರೂ ಸಿನಿಮಾ ಮಾಡಲು ಮುಂದಾದರೆ ಸಂಭಾವನೆಯೇ ಮೂರೂಕಾಲು ಕೋಟಿ ಕೊಡಬೇಕು. ಎಲ್ಲಾ ಡಲ್ಲುಗಳ ನಡುವೆಯೂ ರಾಜ್ ಸಿನಿಮಾ ನಿರ್ಮಾಪಕರಿಗೆ ಲಾಭ ತಂದಿದೆ ಎಂದರೆ ಅದಕ್ಕೆ ಕಾರಣ ಪುನೀತ್‌ಗಿರುವ ಸ್ಟಾರ್‌ಗಿರಿ. ಕುಟುಂಬ ಒಟ್ಟಾಗಿ ಬಂದು ನೋಡುವ ಸ್ಟಾರ್ ಪುನೀತ್. ದರ್ಶನ್ ಅಭಿಮಾನಿಗಳು ಮೊದಲ ವಾರದಲ್ಲಿ (ಇಡೀ ರಾಜ್ಯದಲ್ಲಿ) ಕೋಟಿಯನ್ನೂ ಮೀರಿ ಚಿತ್ರಮಂದಿರಗಳಿಗೆ ಅದಾಯ ತರುತ್ತಿದ್ದರು. ಆದರೆ, ಅಭಯ್ ಚಿತ್ರದ ಬಗ್ಗೆ ಆ ಮಾತುಗಳನ್ನು ಅನ್ವಯಿಸುವುದು ಕಷ್ಟ.

ಉಪೇಂದ್ರ ಪರಿಸ್ಥಿತಿ ತೀರಾ ಕೆಟ್ಟದಾಗಿದೆ. ಎಲ್ಲಾ ಮಸಾಲೆ ಇದ್ದೂ ರಜನಿ ಚಿತ್ರ ಮಕಾಡೆಯಾಗಿದೆ. ಅದು ಕೋಟಿ ನಿರ್ಮಾಪಕ ರಾಮು ಮತ್ತೊಮ್ಮೆ ಕಂಗಾಲಾಗಲು ಕಾರಣವಾಗಿರುವುದೂ ಸುಳ್ಳಲ್ಲ. ರಾಮು ಇದುವರೆಗೆ ಉಪೇಂದ್ರ ನೆಚ್ಚಿಕೊಂಡು ಮಾಡಿರುವ ನಾಲ್ಕೂ ಚಿತ್ರಗಳು ಸೋತಂತಾಗಿದೆ.

ಕಲೆಕ್ಷನ್ ವಿಷಯದಲ್ಲಿ ಇನ್ನೊಬ್ಬ ತೋಪು ನಟ ಶಿವರಾಜ್‌ಕುಮಾರ್. ಅವರು ಬಹುವಾಗಿ ನೆಚ್ಚಿಕೊಂಡಿದ್ದ ಭಾಗ್ಯದ ಬಳೆಗಾರ ನಿರ್ಮಾಪಕರಿಗೆ ಬರಕತ್ತು ಮಾಡಲಿಲ್ಲ. ಚೆಲುವೆಯೇ ನಿನ್ನ ನೋಡಲು ಚಿತ್ರದ ಶೂಟಿಂಗ್‌ಗೆಂದು ವಿದೇಶಗಳನ್ನು ಚಿತ್ರತಂಡ ಸುತ್ತುತ್ತಿದ್ದು, ಅದರ ನಿರ್ಮಾಪಕರ ಎದೆಬಡಿತವೂ ಹೆಚ್ಚಾಗಿದೆ.

ಆಶ್ವಾಸನೆ ಹಾಗೂ ಗಿಮಿಕ್ಕಿನ ವಿಷಯದಲ್ಲಿ ಪ್ರೇಮ್ ಸೋದರ ಎಂದೇ ಹೆಸರಾಗಿರುವ ಆರ್.ಚಂದ್ರು ನಿರ್ದೇಶಿಸಿದ ಪ್ರೇಮ್‌ಕಹಾನಿ ತೋಪಾದ ಚಿತ್ರಗಳ ಪಟ್ಟಿಗೆ ಸೇರ್ಪಡೆಯಾಗಿದೆ. ಇಪ್ಪತ್ತೈದು ವಾರ ಓಡಿಯೇ ಓಡುತ್ತದೆ ಅಂತ ಬಡಾಯಿ ಕೊಚ್ಚಿಕೊಳ್ಳುತ್ತಿದ್ದ ಅವರು ಮಳೆ ಹೆಸರಿನ ಚಿತ್ರ ಮಾಡಲು ಸಿದ್ಧರಾಗಿದ್ದಾರೆ. ಈ ಸಲ ಮಾತಾಡೋಲ್ಲ, ಸಿನಿಮಾ ಮಾಡಿ ತೋರಿಸುತ್ತೇನೆ ಅಂತ ಹೊಸ ವರಸೆಯಲ್ಲಿ ಮಾತಾಡಿದ್ದಾರೆ. ಒಟ್ಟಿನಲ್ಲಿ ಕನ್ನಡ ಚಿತ್ರಗಳ ಸೋಲುಗಳ ಪಟ್ಟಿ ಈ ವರ್ಷ ಉದ್ದವಾಗುತ್ತಲೇ ಇದೆ. ಪರಿಸ್ಥಿತಿ ಕಳೆದ ವರ್ಷಕ್ಕಿಂತ ಅಧ್ವಾನ ಎಂಬುದೇ ಆತಂಕ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada