For Quick Alerts
  ALLOW NOTIFICATIONS  
  For Daily Alerts

  2009ರ ವರ್ಷದ ನಟಿ ಸೌಗಂಧಿಕಾ ಪುಷ್ಪ!

  By *ಜಯಂತಿ
  |

  ಜಂಗ್ಲಿ ಚಿತ್ರೀಕರಣದ ಸಂದರ್ಭ. ನೀನೆಂದರೆ ನನ್ನೊಳಗೆ ಹಾಡು. ನಿರ್ದೇಶಕ ಸೂರಿ ಒಂದಿಷ್ಟು ಹೆಚ್ಚೇ ಯೋಚಿಸಿದರು. ನಾಯಕ ವಿಜಯ್ ಕಟ್ಟುಮಸ್ತಾದ ಆಳು. ಅವರ ಅಂಗೈ ಮೇಲೆ ಒಂದೇ ಕಾಲಲ್ಲಿ ನಿಂತು, ಮೆಲ್ಲಗೆ ಮೈಮೇಲೆ ಬೀಳುವಂಥ ಶಾಟ್ ಸಿದ್ಧಗೊಂಡಿತು. ನಾಯಕಿ ಆ ಶಾಟ್ ಕೂಡದೆಂದು ನಿಷ್ಠುರವಾಗಿ ಹೇಳಿಬಿಟ್ಟರು. ಪಕ್ಕದಲ್ಲಿದ್ದ ಅವರಮ್ಮ ಸಿದ್ಧವಿದ್ದರೂ ನಟಿಯೇ ಒಲ್ಲೆ ಅಂತ ಹೇಳಿದ್ದು ನಿರ್ದೇಶಕ ಸೂರಿ, ವಿಜಯ್ ಇಬ್ಬರಿಗೂ ಅಚ್ಚರಿಯ ತಂದಿತ್ತು. ಏನು ಮಾಡಬೇಕು, ಏನು ಮಾಡಕೂಡದು ಎಂದು ಥಟ್ಟನೆ ನಿರ್ಧಾರ ತೆಗೆದುಕೊಂಡ ಆ ನಟಿಯ ಹೆಸರು ಐಂದ್ರಿತಾ ರೇ.

  2009ರ ಪ್ರಾರಂಭದಲ್ಲಿ ಜಂಗ್ಲಿ ಚಿತ್ರದ ಹಾಡುಗಳು ಟೀವಿಯಲ್ಲಿ ಮೂಡತೊಡಗಿದಾಗಲೇ ಐಂದ್ರಿತಾ ಮೋಹಪುಷ್ಪ ಅರಳತೊಡಗಿದ್ದು ನಿಜ. ಮಲ್ಲಿಗೆ ತೂಕದ ಈ ಬಾಲೆಗೆ ನಿರ್ದೇಶಕ ಸೂರಿ ಸೌಗಂಧಿಕಾ ಪುಷ್ಪ ಅಂತ ಹೆಸರಿಟ್ಟರು. ಹಾಗಂದರೆ ಏನು ಗೊತ್ತೆ ಅಂದರೆ, ಅಯ್ಯೋ ಅದು ನಿರ್ದೇಶಕರು ಕೊಟ್ಟ ಬಿರುದಷ್ಟೆ ಅಂತ ಆಗ ಐಂದ್ರಿತಾ ನಕ್ಕಿದ್ದರು. ಕೆಲವೇ ತಿಂಗಳಲ್ಲಿ ಮೋಡಿ ಮಾಡಿದ ಐಂದ್ರಿತಾ ವರ್ಷದ ನಟಿ ಎಂಬುದರಲ್ಲಿ ಅನುಮಾನವೇ ಇಲ್ಲ.

  ಸಂಖ್ಯೆಯ ದೃಷ್ಟಿಯಲ್ಲಿ ಪೂಜಾ ಗಾಂಧಿ ನಟನೆಯ ಹೆಚ್ಚು ಚಿತ್ರಗಳು ಬಂದರೂ ಐಂದ್ರಿತಾ ಕಣ್ಣೋಟದ ಮುಂದೆ ಅವು ಉಳಿಯಲಿಲ್ಲ. ಮುಗ್ಧತೆ ತುಂಬಿಕೊಂಡ ಗಲ್ಲ, ಕೆಂಪೇರಬಲ್ಲ ಕೆನ್ನೆ, ಕೊಲ್ಲುವ ಕಣ್ಣು, ಸಿಂಹಕಟಿ, ಬಾಗಿ-ಬಳುಕಬಲ್ಲ ದೇಹ, ಮೇಲಾಗಿ ಭಾವಸ್ಫುರಿಸುವ ಚಹರೆ ಐಂದ್ರಿತಾಗೆ ದೇವರು ಕೊಟ್ಟ ಉಡುಗೊರೆಗಳು. ಇವನ್ನೆಲ್ಲಾ ಇಟ್ಟುಕೊಂಡು ಗಾಂಧಿನಗರದ ಗಲ್ಲಿಗಳಲ್ಲಿ ಓಡಾಡುವ ಧೈರ್ಯವೂ ಆಕೆಗೆ ಇದೆ.

  ಪಶ್ಚಿಮ ಬಂಗಾಳ ಐಂದ್ರಿತಾ ಮೂಲ. ಅಪ್ಪ ಮಿಲಿಟರಿಯಲ್ಲಿ ದಂತವೈದ್ಯ. ಐಂದ್ರಿತಾ ಕೂಡ ಅಪ್ಪನಂತೆಯೇ ಆಗಬೇಕೆಂದು ಡೆಂಟಿಸ್ಟ್ ಪದವಿ ಕೋರ್ಸ್‌ಗೆ ಭರ್ತಿಯಾಗಿದ್ದರು. ಸಣ್ಣಪುಟ್ಟ ಮಾಡೆಲಿಂಗ್ ಮಾಡಿದ್ದೇ ಗಾಂಧಿನಗರದಲ್ಲಿ ಫೋಟೋಗಳು ಹರಿದಾಡಿದವು. ನೋಡನೋಡುತ್ತಲೇ ಐಂದ್ರಿತಾ ಬೆಳೆದರು. ಮೂರು ವರ್ಷದ ಹಿಂದೆ ಪೂಜಾ ಗಾಂಧಿ ಕೂಡ ಹೀಗೆಯೇ ರಾತ್ರೋರಾತ್ರಿ ನಂಬರ್ ಒನ್ ಆಗಿದ್ದು. ಆದರೆ, ಚಿತ್ರಗಳ ಆಯ್ಕೆಯ ವಿಷಯದಲ್ಲಿ ಐಂದ್ರಿತಾ, ಪೂಜಾಗಿಂತ ಎಚ್ಚರಿಕೆ ವಹಿಸುತ್ತಿರುವುದಕ್ಕೆ ಸಾಕ್ಷಿಗಳಿವೆ.

  ವಾಯುಪುತ್ರ ಚಿತ್ರದಲ್ಲಿ ಲವಲವಿಕೆಯಿಂದ ನಟಿಸಿದ ಐಂದ್ರಿತಾ ಪ್ರತಿಭೆಗೆ ಸಿಕ್ಕ ಅಸಲಿ ಟೆಸ್ಟ್ ಮನಸಾರೆ. ಮನಸಾರೆಯಲ್ಲಿ ಮೌನ ಅಂತ ಏನಾದರೂ ಇದ್ದರೆ ಅದು ಐಂದ್ರಿತಾ ಪಾತ್ರದಲ್ಲಿ. ಅದನ್ನು ಅವರು ಮುಖದ ತುಂಬಾ ಆವಾಹಿಸಿಕೊಂಡು ನಟಿಸಿದ್ದಾರೆ. ಯೋಗರಾಜ ಭಟ್ಟರು ಆಕೆಯ ಚಹರೆಯ ಮೇಲಿನ ಒಂದೊಂದೂ ಭಾವದ ಪದರವನ್ನು ಅಂದಾಜು ಮಾಡಿರಲಿಕ್ಕೂ ಸಾಕು.

  ವರ್ಷದ ಕೊನೆಯಲ್ಲಿ ಉದ್ಭವಿಸಿದ ನಾಗತೀಹಳ್ಳಿ ಕಪಾಳಮೋಕ್ಷ ಪ್ರಕರಣ ಐಂದ್ರಿತಾ ಬದುಕಿನ ಮಹತ್ವದ ಹಾಗೂ ವಿಷಾದಕರ ಅನುಭವ. ತನ್ನ ವಿಷಯದಲ್ಲಿ ನಿರ್ದೇಶಕ ಅಸಹ್ಯಕರವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ನಟಿಯೊಬ್ಬಳು ಸಾರ್ವಜನಿಕವಾಗಿ ಹೇಳುವುದು ಗಾಂಧಿನಗರದಲ್ಲಿ ಸುಲಭವಲ್ಲ. ತಾನು ಶೀಲವಂತೆ ಎಂದು ಹೆಣ್ಣುಮಗಳೊಬ್ಬಳು ಹೀಗೆ ಹೇಳಿಕೊಳ್ಳುವುದು ತುಂಬಾ ಕಷ್ಟವೂ, ಸೂಕ್ಷ್ಮವೂ ಆದ ವಿಷಯ. ಐಂದ್ರಿತಾ ಈ ಪ್ರಕರಣದ ವಿಷಯದಲ್ಲಿ ಮಾಧ್ಯಮದ ಯಾವ ಪ್ರತಿನಿಧಿಗೂ ಬೆನ್ನುಮಾಡಲಿಲ್ಲ. ಒಂದು ಸಣ್ಣ ಎಸ್‌ಎಂಎಸ್‌ಗೂ ಥಟ್ಟನೆ ಉತ್ತರ ಕೊಟ್ಟರು. ಅವಕಾಶ ಬೇಕು ಎಂಬ ಕಾರಣಕ್ಕೆ ವ್ಯಕ್ತಿತ್ವಕ್ಕೆ ಮಸಿ ಬಳಿದುಕೊಳ್ಳಲು ತಾವು ಸುತರಾಂ ಸಿದ್ಧವಿಲ್ಲ ಅಂತ ಕಡ್ಡಿತುಂಡುಮಾಡಿದಂತೆ ಹೇಳಿಬಿಟ್ಟರು.

  ದೊಡ್ಡ ಜಿಗಿತದಲ್ಲಿದ್ದ ಐಂದ್ರಿತಾ ಮುಂದೆ ಹೇಗೆ ಬೆಳೆಯುತ್ತಾರೆ ಎಂಬ ಕುತೂಹಲ ಕನ್ನಡದ ಹದಿನಾರಾಣೆ ಪ್ರೇಕ್ಷಕನಿಗೆ ಇದೆ. ನಾಗತೀಹಳ್ಳಿ ಅವರಿಗೆ "ಇವಳು ಹೇಗೆ ಬೆಳೆದಾಳು" ಎಂಬ ಲೆಕ್ಕಾಚಾರ ಇರಬೇಕು. ಎನಿವೇಸ್, ನಮ್ಮ ವರ್ಷದ ನಾಯಕಿ ಐಂದ್ರಿತಾ ರೇ. ನಾಯಕ ಪ್ರಧಾನ ಇಂಡಸ್ಟ್ರಿಯಲ್ಲಿ ನಾವು ನಾಯಕಿಯನ್ನು ಮೊದಲು ನೆನೆಯುತ್ತಿದ್ದೇವೆ.

  ಅಂದಹಾಗೆ, ಐಂದ್ರಿತಾ ಅವರಷ್ಟೇ ಪ್ರತಿಭೆ ಇರುವ, ಅಪ್ಪಟ ಕನ್ನಡದ ಇನ್ನೊಬ್ಬ ನಟಿ ರಾಧಿಕಾ ಪಂಡಿತ್. "ಒಲವೆ ಜೀವನ ಲೆಕ್ಕಾಚಾರ" ಹಾಗೂ "ಲವ್‌ಗುರು" ಚಿತ್ರಗಳು ಸೋತರೂ ರಾಧಿಕಾ ಪಂಡಿತ್ ಗೆದ್ದಿದ್ದಾರೆ. ಅವರಿಗೂ ಆಲ್ ದಿ ಬೆಸ್ಟ್. ನಾವು ಹೀಗೆಲ್ಲಾ ಅಂದುಕೊಳ್ಳುತ್ತಿರುವ ಹೊತ್ತಲ್ಲೇ ನಮ್ಮದೇ ಹುಡುಗಿ ಪ್ರಿಯಾಮಣಿ "ರಾಮ್"ನಲ್ಲಿ ಕುಣಿದು ಕುಪ್ಪಳಿಸಿ ಪುನೀತ್‌ಗೂ ಸವಾಲೊಡ್ಡಿದ್ದಾರೆ. ರಮ್ಯಾ ಮೇಡಂ, ಇನ್ನು ಮುಂದೆ ನೀವು ಹುಷಾರಾಗಿರಿ!

  Wednesday, January 6, 2010, 16:21
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X