»   » ಆಪ್ತರಕ್ಷಕ ವಿಷ್ಣು ಅಭಿಮಾನಿಗಳ ಚಿತ್ರ: ಭಾರತಿ

ಆಪ್ತರಕ್ಷಕ ವಿಷ್ಣು ಅಭಿಮಾನಿಗಳ ಚಿತ್ರ: ಭಾರತಿ

Posted By:
Subscribe to Filmibeat Kannada

ಸಾಹಸಸಿಂಹ ವಿಷ್ಣುವರ್ಧನ್ ನಮ್ಮ ನಡುವೆ ಇಲ್ಲ ಎಂದು ನನಗೆ ಅನ್ನಿಸುತ್ತಿಲ್ಲ. ರಾತ್ರಿ ಏಳು ಗಂಟೆಗೆಲ್ಲಾ ಚಿತ್ರೀಕರಣ ಮುಗಿಸಿಕೊಂಡು ಮನೆಗೆ ಬಂದಿದ್ದಾರಲ್ಲಾ. ಸುದೀರ್ಘ ರಜೆಯ ಮೇಲೆ ವಿಷ್ಣು ವಿದೇಶಕ್ಕೆ ಹೋಗಿದ್ದಾರೆ. ಒಂದು ದಿನ ನನ್ನನ್ನೂ ತಪ್ಪದೆ ಕರೆದೊಯ್ಯುತ್ತಾರೆ ಎಂಬ ನಂಬಿಕೆಗಳಲ್ಲಿ ತಾವು ದಿನ ಕಳೆಯುತ್ತಿರುವುದಾಗಿ ವಿಷ್ಣುವರ್ಧನ್ ಅವರ ಪತ್ನಿ ಭಾರತಿ ವಿಷ್ಣುವರ್ಧನ್ ತಿಳಿಸಿದ್ದಾರೆ.

ವಿಷ್ಣುವರ್ಧನ್ ಕಣ್ಮರೆಯಾದ ಐದು ತಿಂಗಳ ಬಳಿಕ ಡಾ.ಭಾರತಿ ವಿಷ್ಣುವರ್ಧನ್ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು. ಜಯನಗರ ನಾಲ್ಕನೆ ಬ್ಲಾಕ್ ನಲ್ಲಿರುವ ಅವರ ಮನೆಯಲ್ಲಿ ಬುಧವಾರ ನೀರವ ಮೌನ ಕವಿದಿತ್ತು. ಕಾಲ ಹಿಂದಕ್ಕೆ ಸರಿಯುತ್ತಿತ್ತು, ವಿಷ್ಣು ನೆನಪುಗಳು ಕಣ್ಮುಂದೆ ಬಂದು ನಿಲ್ಲುತ್ತಿದ್ದವು.

ವಿಷ್ಣು ಬದುಕಿದ್ದಾಗ ಮನೆಯಲ್ಲಿ ಕೆಲಸ ಕಾರ್ಯಗಳು ಹೇಗೆ ನಡೆಯುತ್ತಿದ್ದವೋ ಇಂದೂ ಹಾಗೆಯೇ ನಡೆಯುತ್ತಾ ಬಂದಿವೆ. ಅವರ ಕೊನೆಯ ಚಿತ್ರ ಆಪ್ತರಕ್ಷಕ ಅವರ ಅಭಿಮಾನಿಗಳಿಗೆ ಸೇರಿದ್ದು . ವಿಷ್ಣುವರ್ಧನ್ ಚಾರಿಟಿಬಲ್ ಟ್ರಸ್ಟ್ ತನ್ನ ಕಾರ್ಯ ಕಲಾಪಗಳನ್ನು ಸಾಂಗವಾಗಿ ನಿರ್ವಹಿಸುತ್ತಿದೆ ಎಂದು ಹೇಳಿದರು.

ವಿಷ್ಣು ಸ್ಮಾರಕ ನಿರ್ಮಾಣದ ಬಗ್ಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ,ವಾರ್ತಾ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಹಾಗೂ ಅಂಬರೀಶ್ ಅವರು ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಸ್ಮಾರಕ ನಿರ್ಮಾಣಕ್ಕೆ ಬಿಡುಗಡೆಯಾಗುವ ನಿಧಿ ಸಂಪೂರ್ಣವಾಗಿ ಅದಕ್ಕೆ ಮೀಸಲು. ಅದರಲ್ಲಿ ನಮಗೆ ಯಾವುದೇ ಹಕ್ಕಿಲ್ಲ. ಹಾಗೆಯೇ ಸ್ವೀಕರಿಸುವ ವಂತಿಗೆ ನೇರವಾಗಿ ವಿಷ್ಣು ಟ್ರಸ್ಟ್ ಗೆ ಸಂದಾಯವಾಗುತ್ತದೆ. ನಿಂತ ಭಂಗಿಯಲ್ಲಿರುವ ವಿಷ್ಣುವರ್ಧನ್ ಪ್ರತಿಮೆ ನಿರ್ಮಿಸಬೇಕು ಎಂಬ ಆಲೋಚನೆಯೂ ಇದೆ ಎಂದರು.

ಆಪ್ತರಕ್ಷಕ ಚಿತ್ರದ ಪೋಸ್ಟರ್ ಗಳನ್ನು ನೋಡಿದಾಗ ಕೃಷ್ಣ ಪ್ರಜ್ವಲ್ ಅವರು ಚಿತ್ರಕ್ಕೆ ಸರಿಯಾದ ಪ್ರಚಾರ ಕೊಟ್ಟಿಲ್ಲ ಅಂತ ಅನ್ನಿಸುತ್ತದೆ. ಚಿತ್ರದ ಪೋಸ್ಟರ್ ಗಳು ವಿವರ್ಣವಾಗಿವೆ. ವಿಷ್ಣು ಅಭಿಮಾನಿಗಳು ನಿರಾಸೆಗೆ ಒಳಗಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು. ವಿಷ್ಣು ಬೆಳೆಸಿಕೊಂಡು ಬಂದ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವ ಭರವಸೆಯನ್ನು ಭಾರತಿ ನೀಡಿದರು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada