»   »  ಮಳೆ ನೃತ್ಯದಿಂದ ವೆಂಕಟನ ಗೆದ್ದ ಶರ್ಮಿಳಾ

ಮಳೆ ನೃತ್ಯದಿಂದ ವೆಂಕಟನ ಗೆದ್ದ ಶರ್ಮಿಳಾ

Subscribe to Filmibeat Kannada

ಕಣ್ ಕಣ್ಣ ಸಲಿಗೆಯಿಂದಲೇ ರಸಿಕರ ಪ್ರೀತಿ ಸುಲಿಗೆ ಮಾಡಿರುವ ಗ್ಲಾಮರ್ ಬೊಂಬೆ 'ಸಜನಿ' ಶರ್ಮಿಳಾ ಮಾಂಡ್ರೆ 'ವೆಂಕಟ ಇನ್ ಸಂಕಟ' ಚಿತ್ರದಲ್ಲಿ ಕನ್ನಡದ ಸಮಸ್ತ ನಾಯಕಿಯರೂ ನಾಚುವಂತೆ ನರ್ತಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಕೃತಕ ಮಳೆಯಲ್ಲಿ ತೊಯ್ದು ತೊಪ್ಪೆಯಾಗಿರುವ ಶರ್ಮಿಳಾ ಹಿಂದಿಯ ಊರ್ಮಿಳಾ ಕೂಡ ನಾಚಬೇಕು ಎಂಬಂತೆ ಕುಣಿದಿದ್ದಾರೆ.

ಇತ್ತೀಚೆಗೆ ಬಿಡುಗಡೆಯಾಗಿ ಪ್ರೇಕ್ಷಕರ ಅವಕೃಪೆಗೆ ಪಾತ್ರವಾಗಿರುವ ಶಿವಮಣಿ ಚಿತ್ರದಲ್ಲಿ ಕಾಣಿಸಿದ್ದಕ್ಕಿಂತ ರಮಣೀಯವಾಗಿ ವೆಂಕಟ ಇನ್ ಸಂಕಟ ಚಿತ್ರದಲ್ಲಿ ಶರ್ಮಿಳಾ ಕಾಣಿಸಿಕೊಂಡಿದ್ದಾರೆ. ಸದ್ಯಕ್ಕೆ ರಮೇಶ್ ಊರ್ಫ್ ವೆಂಕಟನ ಸಂಕಟವಂತೂ ದೂರ ಮಾಡಿದ್ದಾರೆ ಶರ್ಮಿಳಾ.

ತೊಯ್ದು ತೊಪ್ಪೆಯಾಗಿ ಆಕ್ಷಿ ಆಕ್ಷಿ ಅನ್ನುತ್ತಿದ್ದರೂ ಬಿಡದೆ ನಿರ್ದೇಶಕರಿಗೆ ಮನತೃಪ್ತಿಯಾಗುವಂತೆ ಶರ್ಮಿಳಾ ಮಳೆ ಹಾಡಿನಲ್ಲಿ ಕುಣಿದಿದ್ದಾರೆ. ಒದ್ದೆ ಒದ್ದೆ ಸೀರೆಯಲ್ಲಿ ಅಭಿನಯಿಸಿದರೂ ಎಳ್ಳಷ್ಟೂ ಅಶ್ಲೀಲವಾಗಿ ಬಂದಿಲ್ಲ ಎನ್ನುವುದು ಶರ್ಮಿಳಾ ಅಭಿಪ್ರಾಯ. ಎಷ್ಟು ಸುಂದರವಾಗಿ ಚಿತ್ರೀಕರಿಸಲಾಗಿದೆಯೆಂದರೆ ಅದನ್ನು ವಲ್ಗರ್ ಎಂದು ಹೇಳಲು ಯಾರಿಂದಲೂ ಸಾಧ್ಯವಿಲ್ಲ ಎಂದು ಶರ್ಮಿಳಾ ಹೇಳಿರುವುದು ನಿರ್ದೇಶಕರ ಸೌಂದರ್ಯಪ್ರಜ್ಞೆಗೆ ನೀಡಿರುವ ಸರ್ಟಿಫಿಕೇಟ್.

ಮಳೆಯಲಿ ನೆನೆದು ಹಾಡಿ ಕುಣಿದಾಡುವ ಸೀರೆ ಸುಂದರಿಯರನ್ನು ನೋಡುವುದು ಪ್ರೇಕ್ಷಕರಿಗೇನೋ ಸೊಗಸಾಗಿರುತ್ತದೆ. ಆದರೆ, ನಾವು ಪಡುವ ಪಾಡು ರಾಮ ರಾಮಾ ಅನ್ನುತ್ತಾರೆ ಶರ್ಮಿಳಾ. ಶರ್ಮಿಳಾ ಅವರ ಸಂಕಟವನ್ನು ಅರ್ಥ ಮಾಡಿಕೊಂಡ ನಿರ್ದೇಶಕ ರಮೇಶ್ ಚಿತ್ರೀಕರಣದ ಮಧ್ಯದಲ್ಲಿ ಮೈಯನ್ನು ಒಣಗಿಸಿಕೊಳ್ಳಲು ಆಗಾಗ ಅನುವು ಮಾಡಿಕೊಡುತ್ತಿದ್ದರಂತೆ.

ಸಜನಿ ಚಿತ್ರದಿಂದ ಚಿತ್ರರಂಗಕ್ಕೆ ಪಾದಾರ್ಪಣ ಮಾಡಿದ ಶರ್ಮಿಳಾ ಇಲ್ಲಿವರೆಗೆ ಕೃಷ್ಣ, ಈ ಬಂಧನ, ನವಗ್ರಹ, ಶಿವಮಣಿ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇವುಗಳಲ್ಲೆಲ್ಲ ಗ್ಲಾಮರ್ ಗೊಂಬೆಯಾಗಿಯಷ್ಟೆ ಅವರ ಪಾತ್ರಗಳು ಸೀಮಿತವಾಗಿವೆ. ಅವರ ನಟನೆಯಲ್ಲಿ ಅವರಿಗಿರುವ ಲಿಮಿಟ್ಟನ್ನು ಶರ್ಮಿಳಾ ಕೂಡ ಅರಿತಿದ್ದಾರೆ. ಅದಕ್ಕಾಗಿಯೇ ಸವಾಲೆನ್ನಿಸುವ ಪಾತ್ರವನ್ನೂ ಅವರು ಆಯ್ದುಕೊಂಡಿಲ್ಲ. ಸಿಕ್ಕಿಲ್ಲ ಅನ್ನುವುದು ಹೆಚ್ಚು ಸೂಕ್ತವೇನೋ.

(ದಟ್ಸ್ ಸಿನಿ ವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada