»   »  'ಸುಗ್ರೀವ'ನ ನಾಯಕಿಯಾಗಿ ಯಜ್ಞಶೆಟ್ಟಿ

'ಸುಗ್ರೀವ'ನ ನಾಯಕಿಯಾಗಿ ಯಜ್ಞಶೆಟ್ಟಿ

Subscribe to Filmibeat Kannada

ಪುಂಖಾನುಪುಂಖ ಸಿನಿಮಾಗಳನ್ನು ನಿರ್ಮಿಸುವವರ ಸಾಲಿಗೆ ಸೇರಿದ ಅಣಜಿ ನಾಗರಾಜ್ ವಿಶ್ವ ದಾಖಲೆ ಮಾಡಹೊರಟಿದ್ದಾರೆ. 'ಸುಗ್ರೀವ" ಹೆಸರಿನ ಚಿತ್ರವನ್ನು ಕೇವಲ ಹದಿನೆಂಟು ಗಂಟೆಯಲ್ಲಿ ಚಿತ್ರೀಕರಿಸಿ ಗಿನ್ನೆಸ್ ದಾಖಲೆ ಪುಸ್ತಕ ಸೇರುವ ಕನಸು ಅವರದ್ದು.

ಅಕ್ಟೋಬರ್ 11, ಭಾನುವಾರ ನಸುಕು 6 ಗಂಟೆಯಿಂದ ಶುರುವಾಗಿ ನಡುರಾತ್ರಿ 12ರೊಳಗೆ ಇಡೀ ಚಿತ್ರದ ಚಿತ್ರೀಕರಣ ಮುಗಿಸುವುದು ಅವರ ಯೋಚನೆ. ಮಲಯಾಳದಲ್ಲಿ ಮೋಹನ್ ಲಾಲ್ ಅವರನ್ನು ನಾಯಕರನ್ನಾಗಿಸಿ 19 ತಾಸಿನಲ್ಲಿ ಚಿತ್ರೀಕರಣ ನಡೆಸಿ 'ಭಗವಾನ್" ಎಂಬ ಚಿತ್ರ ನಿರ್ದೇಶಿಸಿದ್ದ ಪ್ರಶಾಂತ್ ಈ ಚಿತ್ರವನ್ನೂ ನಿರ್ದೇಶಿಸಲಿದ್ದಾರೆ. ವೈಯಕ್ತಿಕವಾಗಿ ನಿರ್ದೇಶಕರಾಗಿ ಅವರಿಗಿದು ಎರಡನೇ ಸಿನಿಮಾ.

ಚೆನ್ನೈಗೆ ಹೋಗಿದ್ದಾಗ ಆಕಸ್ಮಿಕವಾಗಿ ಈ ನಿರ್ದೇಶಕ ಅಣಜಿ ಕಣ್ಣಿಗೆ ಬಿದ್ದಿದ್ದಾರೆ. ಆಗಲೇ ಇಂತಹ ಸಾಹಸ ಮಾಡುವ ಬಯಕೆ ಅಣಜಿಯವರಲ್ಲಿ ಚಿಗುರೊಡೆದದ್ದು. ಎಂಟು ತಿಂಗಳ ಚಿಂತನೆ, ಹೋಂವರ್ಕ್ ನಂತರ ಈಗ ಚಿತ್ರ ಸಿದ್ಧವಾಗಲಿದೆ.

ಶಿವರಾಜ್‌ಕುಮಾರ್ ಈ ಕೌಟುಂಬಿಕ ಚಿತ್ರದ ನಾಯಕ. ಕೇವಲ ಅರ್ಧ ಸಂಭಾವನೆ ಪಡೆದು ಅವರು ಇಂಥ ಪ್ರಯೋಗದ ಭಾಗವಾಗಲು ಒಪ್ಪಿರುವುದು ವಿಶೇಷ. ಹದಿನೆಂಟು ತಾಸಿನಲ್ಲಿ ಒಂದು ಸೆಕೆಂಡೂ ಪುರುಸೊತ್ತಿಲ್ಲದಂತೆ ಅವರು ನಟಿಸಬೇಕಿದೆ. ಮೂರು ಸಾಹಸ, ಒಂದು ಹಾಡು, ಬಗೆಬಗೆಯ ಕಾಸ್ಟ್ಯೂಮ್ಸ್ ತೊಟ್ಟು, ಆಗಾಗ ಟಚಪ್ ಮಾಡಿಸಿಕೊಳ್ಳುತ್ತ ಮ್ಯಾರಥಾನ್ ಅಭಿನಯಕ್ಕೆ ಶಿವಣ್ಣ ಸಜ್ಜಾಗಿದ್ದಾರೆ. ಚಿತ್ರದ ನಾಯಕಿ ಯಜ್ಞಾ ಶೆಟ್ಟಿ. ನಿರ್ದೇಶಕ ಪ್ರಶಾಂತ್ ಪ್ರಕಾರ ಮೋಹನ್‌ಲಾಲ್‌ಗಿಂತ ಶಿವಣ್ಣ ಎನರ್ಜಿಟಿಕ್. ಹಾಗಾಗಿ ದಾಖಲೆಯ ಕೆಲಸ ಅವರಿಂದ ಆಗುವುದು ಖಂಡಿತ.

ಬೆಂಗಳೂರು ಹೊರವಲಯದಲ್ಲಿ ಎಂಟು ಸೆಟ್‌ಗಳು ಈಗಾಗಲೇ ಸಿದ್ಧಗೊಳ್ಳುತ್ತಿವೆ. ಅಲ್ಲಿ 'ಸುಗ್ರೀವ" ಚಿತ್ರೀಕರಣ ನಡೆಯಲಿದೆ. ಆ ಜಾಗ ಯಾವುದು ಎಂಬುದನ್ನು ಅಣಜಿ ಗುಟ್ಟು ಮಾಡಿದ್ದಾರೆ. ಜನಸಂದಣಿ ಜಮಾಯಿಸಿದರೆ ಚಿತ್ರೀಕರಣಕ್ಕೆ ತೊಂದರೆಯಾದೀತು ಎಂಬುದು ಅವರ ಆತಂಕ.

ಎರಡು ಜಿಪ್ಪಿ ಜಿಮ್, ಮೂರು ಸ್ಟೆಡಿ ಕ್ಯಾಮ್, ಅಗತ್ಯ ಬಿದ್ದರೆ ಇರಲಿ ಎಂದು ಆಂಬ್ಯುಲೆನ್ಸ್ ಎಲ್ಲವನ್ನೂ ಅಣಜಿ ಒಟ್ಟುಮಾಡಿದ್ದಾರೆ. ಅದಕ್ಕೂ ಮಿಗಿಲಾಗಿ ಹತ್ತು ಸಹ ನಿರ್ದೇಶಕರು ಪ್ರಶಾಂತ್ ಒಟ್ಟಿಗೆ ಕೆಲಸ ಮಾಡಲಿದ್ದಾರೆ. ಓಂಪ್ರಕಾಶ್, ಪಿ.ಎನ್.ಸತ್ಯ, ನಾಗಶೇಖರ್, ಪ್ರಮೋದ್ ಚಕ್ರವರ್ತಿ, ಅನಂತು, ವಿಜಿ, ರಾಘವ ಲೋಕಿ, ಎ.ಪಿ.ಅರ್ಜುನ್, ಪಾಂಡು, ತುಷಾರ್ ರಂಗನಾಥ್ ಆ ನಿರ್ದೇಶಕರು. ವಿಷ್ಣು, ಶೇಖರ್ ಚಂದ್ರ, ಸತ್ಯ ಹೆಗಡೆ, ಆರ್.ಗಿರಿ, ಸುರೇಶ್ ಬಾಬು, ಎಂ.ಆರ್.ಸೀನು, ಕೃಷ್ಣ, ನಿರಂಜನ ಬಾಬು ಕೆ.ಕೆ, ವೀನಸ್ ಮೂರ್ತಿ ಹಾಗೂ ಸುರೇಶ್ ಛಾಯಾಗ್ರಾಹಕ ತಂಡದಲ್ಲಿದ್ದಾರೆ. ರಾಮ್‌ನಾರಾಯಣ್ ಚಿತ್ರಕ್ಕೆ ಸಂಭಾಷಣೆ ಬರೆದಿದ್ದು, ಗುರುಕಿರಣ್ ಸಂಗೀತ ನೀಡಿದ್ದಾರೆ.

ಅಂದಹಾಗೆ, ಅಣಜಿ ಮಾಡಹೊರಟಿರುವ ಈ ಪ್ರಯೋಗಕ್ಕೆ ಬಜೆಟ್ ಕಡಿಮೆಯೇನೂ ಆಗುತ್ತಿಲ್ಲ. ಇಡೀ ಚಿತ್ರ ಬಿಡುಗಡೆಯಾಗುವ ಹೊತ್ತಿಗೆ ಎರಡೂವರೆ, ಮೂರು ಕೋಟಿ ರುಪಾಯಿ ಖರ್ಚಾಗಲಿದೆ. ಉದ್ಯಮದ ಅನೇಕ ಗಣ್ಯರು ಅಣಜಿ ನಿರ್ಮಾಣದ ಈ ಪ್ರಯೋಗವನ್ನು ನೋಡಲು ಭಾನುವಾರ ಚಿತ್ರೀಕರಣ ನಡೆಯುವ ಜಾಗದಲ್ಲಿ ಜಮಾಯಿಸಲಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada