»   »  ಉಪೇಂದ್ರ ಮಾರುಕಟ್ಟೆ ಕಷ್ಟದಲ್ಲಿ, ಸ್ಥಿತಿ ಚಿತ್ರಾನ್ನ!

ಉಪೇಂದ್ರ ಮಾರುಕಟ್ಟೆ ಕಷ್ಟದಲ್ಲಿ, ಸ್ಥಿತಿ ಚಿತ್ರಾನ್ನ!

Posted By: *ಜಯಂತಿ
Subscribe to Filmibeat Kannada

ಘಟನೆ ಒಂದು
ನಿರ್ಮಾಪಕ ಶೈಲೇಂದ್ರ ಬಾಬು, ಉಪೇಂದ್ರ ಕಾಲ್‌ಷೀಟ್‌ಗೆ ಎಂಬತ್ತು ಲಕ್ಷ ಒಪ್ಪಿಸಿ ಮಾಡಿದ ಸಿನಿಮಾ "ದುಬೈ ಬಾಬು". ಚಿತ್ರದ್ದು ದಯನೀಯ ಸೋಲು. ಶೈಲೇಂದ್ರ ಬಾಬುಗೆ ಆದ ನಷ್ಟ ಮೂರು ಕೋಟಿಗೆ ಕಡಿಮೆಯಿಲ್ಲ ಎನ್ನುತ್ತಿದೆ ಗಾಂಧೀನಗರ. ಉಪೇಂದ್ರ ಮಾತ್ರ ಈ ಸೋಲಿನಿಂದ ಕಂಗೆಟ್ಟಿಲ್ಲ.

ಘಟನೆ ಎರಡು
ರಾಜೇಂದ್ರ ಸಿಂಗ್ ಬಾಬು ಇದೇ ಉಪೇಂದ್ರ ಅವರನ್ನು ನಾಯಕನಾಗಿಸಿ "ಭೀಮೂಸ್ ಬ್ಯಾಂಗ್ ಬ್ಯಾಂಗ್ ಕಿಡ್ಸ್" ತೆಗೆದಿರುವುದು ಗೊತ್ತೇ ಇದೆ. ಅದರ ಡಬಿಂಗ್‌ಗೆ ಬರುವುದಿಲ್ಲ ಎಂದು ಉಪೇಂದ್ರ ಪಟ್ಟು ಹಿಡಿದಿದ್ದಾರೆ. ಬಾಬು ಮೂವತ್ತು ಲಕ್ಷ ಸಂಭಾವನೆಯನ್ನು ಬಾಕಿ ಉಳಿಸಿಕೊಂಡಿದ್ದಾರೆಂಬುದೇ ಇದಕ್ಕೆ ಕಾರಣ. ಬಾಬು ಅದನ್ನು ಕೊಡುವುದಿಲ್ಲ ಅಂತೇನೂ ಹೇಳಲಿಲ್ಲ. ಸಿನಿಮಾ ತೆರೆಕಾಣಲಿ, ಆಮೇಲೆ ಕೊಡುತ್ತೇನೆ. ಸದ್ಯಕ್ಕೆ ಹಣವಿಲ್ಲ ಎಂದಿದ್ದಾರೆ.

ಉಪೇಂದ್ರ ಇದಕ್ಕೆ ಒಪ್ಪದೆ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ಕೊಟ್ಟಿದ್ದಾರೆ. ಅಲ್ಲಿ ಸಿಂಗ್ ಬಾಬು ಕಷ್ಟಕ್ಕೆ ಕರಗಿದವರೆಲ್ಲಾ ಉಪೇಂದ್ರ ಅವರಿಗೆ ಸುಮ್ಮನೆ ಡಬ್ ಮಾಡಿಕೊಡುವಂತೆ ತಾಕೀತು ಮಾಡಿರುವ ಸುದ್ದಿ ಇದೆ. ಸುಮ್ಮನೆ ಇದ್ದಿದ್ದರೆ ಆಮೇಲಾದರೂ ಮೂವತ್ತು ಲಕ್ಷ ಸಿಗುವ ಸಾಧ್ಯತೆ ಇತ್ತು. ಈಗ ಉಪ್ಪಿಗೆ ಅದೂ ಸಿಗುವುದು ಅನುಮಾನ.

ಘಟನೆ ಮೂರು
"ರಜನಿ" ಚಿತ್ರದ ನಾಯಕ ಕೂಡ ಉಪೇಂದ್ರ. ತೊಂಬತ್ತು ಲಕ್ಷ ಸಂಭಾವನೆಯ ಮಾತಾಗಿತ್ತು. ಯಾವಾಗ ದುಬೈ ಬಾಬು ತೋಪಾಯಿತೋ, ನಿರ್ಮಾಪಕ ರಾಮು ಕೊಟ್ಟಿದ್ದ ನಲ್ವತ್ತು ಲಕ್ಷ ಅಡ್ವಾನ್ಸನ್ನೇ ಸಂಭಾವನೆ ಎಂದು ಗೊತ್ತುಪಡಿಸಿದರು. ಉಪೇಂದ್ರ ಹಾಗೂ ರಾಮು ನಡುವೆ ಈಗ ಶೀಲತಸಮರ ನಡೆಯುತ್ತಿದೆ.

ಒಂದು ಕಾಲವಿತ್ತು. ರಾಜ್‌ಕುಮಾರ್ ಶೂಟಿಂಗ್ ಮುಗಿದ ಮೇಲೆ ನಿರ್ಮಾಪಕರ ಜೊತೆ ಸಂಭಾವನೆಯ ಮಾತಾಡುತ್ತಿದ್ದರು. ಬಬ್ರುವಾಹನ ಚಿತ್ರದ ಡಬ್ಬಲ್ ರೋಲ್‌ಗೆ ಅವರು ಪಡೆದ ಸಂಭಾವನೆ ಎಷ್ಟು ಗೊತ್ತೆ? ಬರೀ 1.2 ಲಕ್ಷ. ಚಿತ್ರೀಕರಣವನ್ನು ಸಂಪೂರ್ಣ ಮುಗಿಸಿದ ಮೇಲೆ ಅಷ್ಟು ಹಣವನ್ನು ಕೆಸಿಎನ್ ಚಂದ್ರು ನಗುನಗುತ್ತಾ ಕೊಟ್ಟಿದ್ದರು. ರಾಜ್‌ಕುಮಾರ್ ಸಿನಿಮಾ ಅಂದರೆ ಆಗ ದುಪ್ಪಟ್ಟು ಲಾಭ ಗ್ಯಾರಂಟಿ.

ಈಗ ಉಪೇಂದ್ರ ಅವರಿಗೆ ತಮ್ಮ ಚಿತ್ರ ಓಡುತ್ತದೆಂಬ ನಂಬಿಕೆಯಿಲ್ಲ. ಅದಕ್ಕೇ ಡಬಿಂಗ್‌ಗೆ ಮೊದಲೇ ಅಷ್ಟೂ ಹಣ ಇಸಿದುಕೊಳ್ಳುವ ಜಾಯಮಾನ. ವಿಷ್ಣುವರ್ಧನ್ ಕೂಡ ಅಷ್ಟೂ ಹಣ ಸಂದಾಯವಾದ ಮೇಲೆಯೇ ಡಬ್ ಮಾಡುವುದು. ಒಟ್ಟಿನಲ್ಲಿ, ಉಪೇಂದ್ರ ಮಾರುಕಟ್ಟೆ ಈಗ ಕಷ್ಟದಲ್ಲಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada