»   » ಸಿನಿಮಾಗಳಲ್ಲಿ ಕಪ್ಪು ಹಣ: ಯುಆರ್ಎ ವಿಷಾದ

ಸಿನಿಮಾಗಳಲ್ಲಿ ಕಪ್ಪು ಹಣ: ಯುಆರ್ಎ ವಿಷಾದ

Posted By:
Subscribe to Filmibeat Kannada

ಕೆಲವು ವರ್ಗದ ಜನರಿಗೆ ಚಿತ್ರ ನಿರ್ಮಾಣ ಎಂಬುದು ಕಪ್ಪು ಹಣ ತೊಡಗಿಸುವ ಕ್ಷೇತ್ರವಾಗಿ ಪರಿಣಮಿಸಿದೆ. ಇದು ಅಪಾಯಕಾರಿ ಬೆಳವಣಿಗೆ ಎಂದು ಖ್ಯಾತ ಸಾಹಿಸಿ ಯು ಆರ್ ಅನಂತಮೂರ್ತಿ ಅಭಿಪ್ರಾಯಪಟ್ಟಿದ್ದಾರೆ. ಅವರು ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ 'ಚಲನಚಿತ್ರ ಸಂಸ್ಕೃತಿ ಒಂದು ಸಂವಾದ' ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡುತ್ತಿದ್ದರು.

ಸಮಾಜದ ಎಲ್ಲ ವರ್ಗದ ಜನ ಹೋಗಿ ನೋಡುವಂತಹ ಸಿನಿಮಾ ಬರಬೇಕು. ಕಡಿಮೆ ಅವಧಿಯ ಚಿತ್ರಗಳನ್ನು ತಯಾರಿಸಿ ಯಾವುದೇ ಹುರುಳಿಲ್ಲದ ಚಿತ್ರಗಳನ್ನು ಮಾಡುತ್ತಿದ್ದಾರೆ ಎಂದು ಇಂದಿನ ಸಿನಿಮಾಗಳ ಬಗ್ಗೆ ವಿಷಾದ ವ್ಯಕ್ತಪಡಿಸಿದರು. ಸಿನಿಮಾಗಳಲ್ಲಿ ಕೊಲೆ, ಸುಲಿಗೆಗಳನ್ನು ವೈಭವೀಕರಿಸಲಾಗುತ್ತಿದ್ದು ಪ್ರೇಕ್ಷಕರು ಕಿರಿಕಿರಿ ಅನುಭವಿಸುವಂತಾಗಿದೆ ಎಂದರು.

ಸಿನಿಮಾ ತಾರೆಯರನ್ನು ರಂಜನೀಯವಾಗಿ ತೋರಿಸಿ ಅಗ್ಗದ ಪ್ರಚಾರ ಗಿಟ್ಟಿಸುವ ತಂತ್ರ ಖಂಡನೀಯ.ಶಾಲಾ ಮಕ್ಕಳಿಗೆ ಕನಿಷ್ಠ ಒಂದು ಗಂಟೆ ಸದಭಿರುಚಿಯ ಚಿತ್ರವನ್ನು ತೋರಿಸಿ ಮಕ್ಕಳಲ್ಲಿ ಸಿನಿಮಾ ನೋಡುವ ಕಲೆಯನ್ನು ಬೆಳೆಸುವಅಗತ್ಯವಿದೆ ಎಂದು ಅನಂತಮೂರ್ತಿ ಅಭಿಪ್ರಾಯಪಟ್ಟರು.

ಖ್ಯಾತ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ ಮಾತನಾಡುತ್ತಾ, ಚಿತ್ರಗಳನ್ನು ಕಲಾತ್ಮಕ ಹಾಗೂ ಕಮರ್ಷಿಯಲ್ ಚಿತ್ರಗಳೆಂದು ವಿಂಗಡಿಸುವುದು ಸರಿಯಲ್ಲ. ಸಿನಿಮಾ ಎಂದರೆ ಕೇವಲ ಹಾಲಿವುಡ್ ಎಂಬ ಅಭಿಪ್ರಾಯವೂ ಸರಿಯಲ್ಲ ಎಂದರು. ವಿಮರ್ಶಕ ಪ್ರೊ.ಎನ್ ಮನುಚಕ್ರವರ್ತಿ ಮಾತನಾಡುತ್ತಾ, ಸಿನಿಮಾಗಳನ್ನು ಸಾಮಾನ್ಯ ಮತ್ತು ಅಸಾಮಾನ್ಯ ಚಿತ್ರಗಳೆಂದು ವಿಂಗಡಿಸುತ್ತಿರುವ ಹಿಂದೆ ದೊಡ್ಡ ಹುನ್ನಾರವೇ ಅಡಗಿದೆ ಎಂದು ಹೇಳಿದರು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada