»   »  ತುಂತುರು ನಿರಂತರವಾಗಿದೆ ಕಬಡ್ಡಿ ಕಾವೇರುತ್ತಿದೆ!

ತುಂತುರು ನಿರಂತರವಾಗಿದೆ ಕಬಡ್ಡಿ ಕಾವೇರುತ್ತಿದೆ!

Subscribe to Filmibeat Kannada

ನಿರ್ದೇಶಕ ನರೇಂದ್ರಬಾಬು ಖುಷಿಯಾಗಿದ್ದಾರೆ. ಸೋಮವಾರ ಸುದ್ದಿಗೋಷ್ಠಿಯಲ್ಲಿ ಲಕಲಕಿಸುತ್ತಿದ್ದ ಅವರ ಮೊಗದಲ್ಲಿ ಕಬಡ್ಡಿ ಪಂದ್ಯಾವಳಿ ಗೆದ್ದ ಸಂಭ್ರಮವಿತ್ತು. ಮೊನ್ನೆ, ಜುಲೈ 3ರ ಶುಕ್ರವಾರ ಕಬಡ್ಡಿ ತೆರೆಕಂಡಾಗ ಹೇಳಿಕೊಳ್ಳುವಂಥ ಪ್ರತಿಕ್ರಿಯೆ ಪ್ರೇಕ್ಷಕರಿಂದ ವ್ಯಕ್ತವಾಗಿರಲಿಲ್ಲ. ಇದಕ್ಕೆ ಸರಿಯಾಗಿ ಮಳೆಯ ಕಣ್ಣಾಮುಚ್ಚಾಲೆಯೂ ಸೇರಿಕೊಂಡು- ಕಬಡ್ಡಿ ಆಟ ಆರಂಭವಾಗುವ ಮೊದಲೇ ಮುಗಿಯುತ್ತಾ ಎನ್ನುವ ಅನುಮಾನ ಶುರುವಾಗಿತ್ತು. ಶನಿವಾರವೂ ಕಲೆಕ್ಷನ್ ಡಲ್ಲೋ ಡಲ್ಲು! ಆದರೆ, ಭಾನುವಾರದಿಂದ ಆಟ ಸುಧಾರಿಸುತ್ತಿದೆ. ಸೋಮವಾರ ಮತ್ತಷ್ಟು ರಂಗೇರಿದೆ.

ಪತ್ರಿಕೆಗಳಲ್ಲಿ ಸಿನಿಮಾ ಬಗ್ಗೆ ಉತ್ತಮ ವಿಮರ್ಶೆ ಬಂದಿದೆ. ವಿದ್ಯುನ್ಮಾನ ಮಾಧ್ಯಮಗಳಿಂದಲೂ ಉತ್ತೇಜನ ದೊರಕಿದೆ. ಈವರೆಗೆ ಸಿನಿಮಾ ನೋಡಿದವರು ಬಾಯಿಪ್ರಚಾರ ನಡೆಸುತ್ತಿದ್ದಾರೆ. ಇದೆಲ್ಲದರಿಂದಾಗಿ ನಿಧಾನವಾಗಿ ಸಿನಿಮಾ ಕಲೆಕ್ಷನ್ ಉತ್ತಮಗೊಳ್ಳುತ್ತಿದೆ ಎಂದರು ನರೇಂದ್ರಬಾಬು.

ನಮ್ಮ ಕೆಲಸವನ್ನು ನಾವು ಅಚ್ಚುಕಟ್ಟಾಗಿ ಮಾಡಿದ್ದೇವೆ. ಸಿನಿಮಾ ಗೆದ್ದೇಗೆಲ್ಲುತ್ತೆ ಎನ್ನುವ ವಿಶ್ವಾಸವಿತ್ತು. ನಮ್ಮ ನಂಬಿಕೆ ನಿಜವಾಗುವ ಸೂಚನೆಗಳು ಕಾಣಿಸುತ್ತಿವೆ ಎಂದು ಸಂತೋಷ ಹಂಚಿಕೊಂಡ ನಿರ್ದೇಶಕರ ಮಾತಿಗೆ ಹಿನ್ನೆಲೆಯಾಗಿ ಇಡೀ ತಂಡದ ದನಿಯಿತ್ತು.

ಎರಡನೇ ವಾರದಿಂದ ಪ್ರಚಾರವನ್ನು ಇನ್ನಷ್ಟು ಚುರುಕುಗೊಳಿಸಲು ಹಾಗೂ ಪೋಸ್ಟರ್‌ಗಳ ವಿನ್ಯಾಸ ಬದಲಿಸಲು ಕಬಡ್ಡಿ ತಂಡ ಉದ್ದೇಶಿಸಿದೆ. ಇದೆಲ್ಲ ಸಿನಿಮಾ ಗೆಲುವಿಗೆ ಪೂರಕವಾಗಬಹುದು ಎನ್ನುವುದು ತಂಡದ ಲೆಕ್ಕಾಚಾರ. ಅಂದಹಾಗೆ, ನಾಯಕ ಪ್ರವೀಣ್, ನಾಯಕಿ ಪ್ರಿಯಾಂಕ ಹಾಗೂ ಇನ್ನಿತರ ಕಲಾವಿದರು, ತಂತ್ರಜ್ಞರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada