»   » ರಂಗುರಂಗಿನ ಬಣ್ಣದೋಕುಳಿಯ ಹೋಳಿ

ರಂಗುರಂಗಿನ ಬಣ್ಣದೋಕುಳಿಯ ಹೋಳಿ

Posted By:
Subscribe to Filmibeat Kannada

ಶಂಕರಲಿಂಗ ಸುಗ್ನಳ್ಳಿ ಅವರ ನಿರ್ಮಾಣದ 8ನೇ ಚಿತ್ರ 'ಹೋಳಿ' ಇದೇ ವಾರ ಬಿಡುಗಡೆಯಾಗಬೇಕಿತ್ತು. ದೊಡ್ಡ ಚಿತ್ರಗಳ ಭರಾಟೆಯಲ್ಲಿ ಇಂಥಾ ಅತ್ಯುತ್ತಮ ಕಲಾಕೃತಿ ಸಿಕ್ಕಿ ಹಾಕಿಕೊಳ್ಳುವುದು ಬೇಡ ಎಂದು ನಿರ್ದೇಶಕ ಸುಗ್ನಳ್ಳಿ ಅವರು ತಮ್ಮ ಚಿತ್ರದ ಬಿಡುಗಡೆಯನ್ನು 23ಕ್ಕೆ ಮುಂದೂಡಿದ್ದಾರೆ. ಐ.ಪಿ.ಎಲ್. ಕ್ರಿಕೆಟ್ ನಡೆಯುತ್ತಿರುವುದೂ ಮತ್ತೊಂದು ಕಾರಣ. ರಂಗುರಂಗಿನ ಬಣ್ಣದೋಕುಳಿಯ ಹಬ್ಬದ ಹಿಂದಿನ ದುರಂತ ಕಥೆಯನ್ನು ಚಿತ್ರನಾಟಕ ರೂಪಕ್ಕೆ ತಂದಿದ್ದಾರೆ ಸುಗ್ನಳ್ಳಿ.

ಚಿತ್ರೀಕರಣೇತರ ಚಟುವಟಿಕೆಗಳು, ಗ್ರಾಫಿಕ್ಸ್ ಮೊದಲಾದ ಕೆಲಸಗಳಿಂದ ಚಿತ್ರದ ಬಿಡುಗಡೆ ಸ್ವಲ್ಪ ತಡವಾಯಿತು ಎಂದು ಮೊನ್ನೆ ನಡೆದ ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕರು ತಿಳಿಸಿದರು. ಹೋಳಿ ಹಬ್ಬದ ದಿನವೇ ಚಿತ್ರದ ಬಿಡುಗಡೆ ಮಾಡಬೇಕಿತ್ತು. ಅದೂ ಸಾಧ್ಯವಾಗಲಿಲ್ಲ. ಯು.ಕೆ. ಇಂಗ್ಲೆಂಡ್ ಮೊದಲಾದ ಕಡೆ ಕೂಡ ಚಿತ್ರದ ಬಿಡುಗಡೆಮಾಡುವ ಪ್ಲಾನ್ ಹಾಕಿಕೊಂಡಿರುವುದಾಗಿ ತಿಳಿಸಿದರು.

ಐತಿಹಾಸಿಕ ಹಾಗೂ ಸಾಮಾಜಿಕ ಕಥೆಯನ್ನು ಜೊತೆ ಮಾಡಿಕೊಂಡು ನಿರೂಪಿಸಿರುವ ಈ ಚಿತ್ರದಲ್ಲಿ ಕ್ಲೈಮ್ಯಾಕ್ಸ್ ಬಹಳ ಮುಖ್ಯವಾದುದು. ರಕ್ತದ ಓಕುಳಿಯನ್ನೇ ಹರಿಸುವ ದೃಶ್ಯವಾದರೂ ಅದನ್ನು ಸಾಂಕೇತಿಕವಾಗಿ ತೋರಿಸಿದ್ದೇನೆ, ಎಂದರಲ್ಲದೆ 10 ಲಕ್ಷ ಧ್ವನಿಸುರುಳಿಯ ಸಿ.ಡಿ. ಹಾಗೂ ಕ್ಯಾಸೆಟ್ ಗಳನ್ನು ಇದುವರೆಗೆ ಮಾರ್ಕೆಟಿಗೆ ಬಿಟ್ಟಿರುವುದಾಗಿಯೂ ಹೇಳಿಕೊಂಡರು. ಸಿಡಿ ತಯಾರಿಸಲು ತಗಲುವ ವೆಚ್ಚವನ್ನು ಮಾತ್ರ ತೆಗೆದುಕೊಂಡು ಸಂಪೂರ್ಣ ರಿಯಾಯಿತಿ ದರದಲ್ಲಿ ಕೊಟ್ಟಿದ್ದರಿಂದ ಇಂಥ ಸಾಧನೆ ಮಾಡಲು ಸಾಧ್ಯವಾಯಿತು ಎಂದು ಹೇಳಿದ್ದಾರೆ.

ನಾಯಕಿ ರಾಗಿಣಿ ಕನ್ನಡದಲ್ಲಿ ಅಭಿನಯಿಸಿದ ಮೊಟ್ಟಮೊದಲ ಚಿತ್ರವಿದು. ಇದು ಕಮರ್ಷಿಯಲ್ ಚಿತ್ರವಲ್ಲ. ಹಳ್ಳಿಯ ಕಥೆ, ಗ್ಲಾಮರ್ ಕೂಡ ಇದೆ. ದ್ವಿತೀಯಾರ್ಧದಲ್ಲಿ ಪ್ರಬಲವಾದ ಸಂದೇಶ ಕೂಡ ಇದೆ. ಸಂತಸ, ದುಃಖ ಎರಡೂ ಸಮಾನವಾಗಿದ್ದು, ಈ ಚಿತ್ರ ನನಗೆ ತುಂಬಾ ಸ್ಪೆಷಲ್. ಏಕೆಂದರೆ, ಸ್ವತಂತ್ರವಾಗಿ ಕ್ಯಾಮೆರಾ ಎದುರಿಸಿದ ಪ್ರಥಮ ಚಿತ್ರವಿದು. ಸೆನ್ಸಿಟೀವ್ ಟಾಪಿಕ್ ಈ ಚಿತ್ರದಲ್ಲಿದೆ. ಚಿತ್ರವನ್ನು ನೋಡಿದಾಗ ತುಂಬಾ ಆಶ್ಚರ್ಯವಾಯಿತು. ಈ ಪಾತ್ರವನ್ನು ಮಾಡಿದ್ದು, ನಾನೇನಾ ಎಂದು ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡರಲ್ಲದೆ ದೇವದಾಸಿ ಪದ್ಧತಿಯ ಬಗ್ಗೆ ತಮ್ಮ ಪಾತ್ರದ ಮೂಲಕ ವಿವರಿಸಿರುವುದಾಗಿಯೂ ಹೇಳಿಕೊಂಡರು.

ನಾಯಕ ವೆಂಕಟೇಶ ಪ್ರಸಾದ್ ಮಾತನಾಡಿ ಶುದ್ಧ ಸಾಂಸಾರಿಕ ಚಿತ್ರ, ಸಂಪೂರ್ಣ ಪ್ರೇಮ ಕಥಾನಕ ಇದಾಗಿದ್ದು, ಸುಂದರ ಹಾಡುಗಳ, ನವಿರಾದ ಸಂಭಾಷಣೆ ಪ್ರೇಕ್ಷಕರನ್ನು ಸೆಳೆಯುವಂತಿದೆ. ಅಲ್ಲದೆ ನನ್ನ ಪಾತ್ರ ತುಂಬಾ ಎಮೋಷನಲ್ ಆಗಿದೆ. ದೇವದಾಸಿ ಪದ್ಧತಿಯನ್ನು ನಿರ್ಮೂಲನ ಮಾಡುವಲ್ಲಿ ಸತತ ಹೋರಾಟ ನಡೆಸುವ ಪಾತ್ರವಾಗಿದೆ ಎಂದು ಹೇಳಿಕೊಂಡರು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada