»   » ಕಲ್ಯಾಣ ಗೀತೆಯಲ್ಲಿ 'ಮಾಯದಂಥ ಮಳೆ'

ಕಲ್ಯಾಣ ಗೀತೆಯಲ್ಲಿ 'ಮಾಯದಂಥ ಮಳೆ'

Posted By:
Subscribe to Filmibeat Kannada

ಉರಿ ಬಿಸಿಲಿನಿಂದ ತತ್ತರಿಸುತ್ತಿರುವ ಚನ್ನಪಟ್ಟಣದಲ್ಲಿ 'ಮಾಯದಂಥ ಮಳೆ' ಬಂದಿದೆ. ಬೊಂಬೆನಗರದ ಸಮೀಪದಲ್ಲಿರುವ ದೇವರಹಳ್ಳಿಯಲ್ಲೂ ಮಳೆಯ ಸಿಂಚನ. ಗಂಗಾಪರಮೇಶ್ವರಿ ಪ್ರೋಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ 'ಮಾಯದಂಥ ಮಳೆ ಚಿತ್ರಕ್ಕಾಗಿ ಕೆ.ಕಲ್ಯಾಣ್ ರಚಿಸಿರುವ 'ಕಂಡ ಹಾಗೆ ಅಲ್ಲ ಬಾಳು ದಾರಿ ಪೂರ ಏಳು ಬೀಳು ಎಲ್ಲಿ ಮೊದಲೊ ಎಲ್ಲಿ ಕೊನೆಯೊ ಇಲ್ಲಿ ಯಾರು ಬಲ್ಲರು' ಎಂಬ ಹಾಡಿನ ಚಿತ್ರೀಕರಣ ದೇವರಹಳ್ಳಿಯ ಡಿ.ಟಿ.ಜಯಕುಮಾರ್ ಹೌಸ್‌ನಲ್ಲಿ ನಡೆದಿದೆ.

ಶರತ್‌ಬಾಬು, ರೇಖಾ ವಿ ಕುಮಾರ್, ಭಾವನಾರಾವ್, ಪ್ರಕಾಶ್‌ಶೆಣೈ, ಸಿಹಿಕಹಿಚಂದ್ರು, ಪದ್ಮಜಾರಾವ್, ಸುಂದರಶ್ರೀ ಮುಂತಾದ ಕಲಾವಿದರ ಅಭಿನಯದಲ್ಲಿ ಚಿತ್ರೀಕರಣಗೊಂಡ ಈ ಗೀತೆಗೆ ಮಾಲೂರು ಶ್ರೀನಿವಾಸ್ ನೃತ್ಯ ನಿರ್ದೇಶನ ಮಾಡಿದ್ದಾರೆ. ಸಾಕಷ್ಟು ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿರುವ ವೀರೇಶ್ ದೊಡ್ಡಬಳ್ಳಾಪುರ ಈ ಚಿತ್ರವನ್ನು ನಿರ್ದೇಶಿಸುವ ಮೂಲಕ ಸ್ವತಂತ್ರ ನಿರ್ದೇಶಕರಾಗಿದ್ದಾರೆ.

ಕವಿರಾಜ್, ಕಲ್ಯಾಣ್, ವಿ.ನಾಗೇಂದ್ರ ಪ್ರಸಾದ್ ಹಾಗೂ ಮಂಜುನಾಥರಾವ್ ರಚಿಸಿರುವ ಹಾಡುಗಳಿಗೆ ಮ್ಯೂಜಿಕ್ ಮೋಹನ್ ಸಂಗೀತ ನೀಡಿದ್ದಾರೆ. ಕೆರೆಮಲ್ಲು ಬದ್ರಿ ಅವರು ನಿರ್ಮಿಸುತ್ತಿರುವ ಈ ಚಿತ್ರಕ್ಕೆ ನಿರ್ದೇಶಕರೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಎ.ಸಿ.ಮಹೇಂದರ್ ಛಾಯಾಗ್ರಹಣ, ಕೆಂಪರಾಜ್ ಅವರ ಸಂಕಲವಿರುವ ಚಿತ್ರದ ತಾರಾಬಳಗದಲ್ಲಿ ನಾಗಕಿರಣ್, ರವಿಚೇತನ್, ಭಾವನಾರಾವ್, ರೂಪಿಕಾ, ಶರತ್‌ಬಾಬು, ಶೃತಿ, ಪ್ರಕಾಶ್‌ಶೆಣೈ, ಸಿಹಿಕಹಿಚಂದ್ರು, ಪದ್ಮಜಾರಾವ್, ರೇಖಾ ವಿ ಕುಮಾರ್, ಹೊನ್ನವಳಿ ಕೃಷ್ಣ, ಸುಂದರಶ್ರೀ, ಋತು ಮುಂತಾದವರಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada