twitter
    For Quick Alerts
    ALLOW NOTIFICATIONS  
    For Daily Alerts

    ಹಿಂದಿ ಚಿತ್ರದ ಕ್ಲಿಯೋಪಾತ್ರಾ ಡಿಂಪಲ್ ಕಪಾಡಿಯಾ

    By * ಯಶೋಧರ್
    |

    ಆರು ವರ್ಷಗಳಲ್ಲಿ ನಿರ್ಮಾಣದಲ್ಲಿಯೇ ಕಳೆದು 1970ರಲ್ಲಿ ಹಿಂದಿ ಚಿತ್ರರಂಗದ ಶೋಮ್ಯಾನ್ ರಾಜ್ ಕಪೂರ್ ಅವರ ಭಾರೀ ಮಹತ್ವಾಕಾಂಕ್ಷೆಯ 'ಮೇರಾ ನಾಮ್ ಜೋಕರ್' ಚಿತ್ರ ತೆರೆಕಂಡು ಕೋಟಿ ಕೋಟಿ ಕಳೆದು ರಾಜ್ ತಲೆಯ ಮೇಲೆ ಚಪ್ಪಡಿ ಕಲ್ಲನ್ನು ಎಳೆದಿತ್ತು. ಫಿಲಂಫೇರ್ ಪ್ರಶಸ್ತಿಗಳನ್ನು ಬಾಚಿಕೊಂಡರೂ ರಾಜ್ ಕಿಸೆಯನ್ನು ಜೋಕರ್ ತುಂಬಲೇ ಇಲ್ಲ.

    ಬೆಕ್ಕಿನ ಕಂಗಳ ರಾಜ್ ಕಪೂರ್ ಕನಸು ಛಿದ್ರ ಛಿದ್ರವಾಗಿತ್ತು. ಕಲಾರಾಧಕರಿಗೆ ಈ ಚಿತ್ರ ಖಂಡಿತ ಮೆಚ್ಚುಗೆಯಾಗಬಲ್ಲದೆಂದು ಅತೀವ ವಿಶ್ವಾಸ ಹೊಂದಿದ್ದ ರಾಜ್ ಗೆ ಜನ ಬೆನ್ನು ಮಾಡಿ ನಿಂತುಬಿಟ್ಟಿದ್ದರು. ಆದರೂ, ರಾಜ್ ಕಂಗೆಡಲಿಲ್ಲ. ಹಣೆಯ ಗೆರೆಗಳನ್ನು ಮುಚ್ಚಿದ ಮುಂಗುರುಳನ್ನು ಕೊಡವಿಕೊಂಡ ರಾಜ್ 1973ರಲ್ಲಿ ಮೇರಾ ನಾಮ್ ಜೋಕರ್ ಚಿತ್ರದಲ್ಲಿ ಬಾಲಕ ರಾಜುವಾಗಿ ಅಭಿನಯಿಸಿ ಈಗ ಚಿಗುರು ಮೀಸೆ ಹೊತ್ತ ಯುವಕನಾಗಿ ನಿಂತಿದ್ದ ರಿಷಿ ಕಪೂರ್ ನನ್ನು ಹಾಕಿಕೊಂಡು 'ಬಾಬ್ಬಿ' ಚಿತ್ರ ತೆಗೆದ. ಯುವ ಪ್ರೇಮಿಗಳ ಹುಚ್ಚು ಹೊಳೆಯನ್ನು ಅಣೆಕಟ್ಟು ಕಟ್ಟಿ ಅದ್ಭುತವಾದ ಹಾಡುಗಳೊಂದಿಗೆ ಪ್ರೀತಿಯನ್ನು ಹರಿಯಬಿಟ್ಟ. ರಿಷಿಯಲ್ಲಿ ಸ್ಟಾರ್ ಉದಯಸಿದ್ದ.

    ಚಿತ್ರವನ್ನು ಮುಗಿಬಿದ್ದು ನೋಡುವ ಪ್ರೇಕ್ಷಕರಿಗೆ ಏನು ಬೇಕೋ ಅದನ್ನೇ ನೀಡಿದ್ದೇನೆ ಅಂತ ಎದೆ ತಟ್ಟಿಕೊಂಡು ಹೇಳಿದ್ದ ರಾಜ್. ಚಿತ್ರರಸಿಕರೂ ರಾಜ್ ಕೈಬಿಡಲಿಲ್ಲ. ಮೇರಾ ನಾಮ್ ಜೋಕರ್ ನಲ್ಲಿ ಕಳೆದುಕೊಂಡದ್ದನ್ನು ಬಾಬ್ಬಿಯಲ್ಲಿ ಬಡ್ಡಿ ಸಮೇತ ರಾಜ್ ಕಪೂರ್ ಗಳಿಸಿದ್ದ.

    ಅದೇ ಚಿತ್ರದಲ್ಲಿ ಇನ್ನೂ ಹದಿನಾರಕ್ಕೆ ಕಾಲಿಡದಿದ್ದ ತುಂಡುಡುಗೆಯಲ್ಲೇ ತುಂಬು ಯೌವನದ ಹುಡುಗಿಯೊಬ್ಬಳು ರಸಿಕರಲ್ಲಿ ಪ್ರೇಮದ ಉನ್ಮಾದವೆಬ್ಬಿಸಿದ್ದಳು. ಹದಿನೆಂಟು ದಾಟಿರದಿದ್ದರೂ ಮೊಳಕಾಲ್ಮೇಲೆ ಉಡುಗೆ ತೊಟ್ಟು ಪ್ರಥಮ ಚಿತ್ರದಲ್ಲೇ ಚಿತ್ರಪ್ರೇಕ್ಷಕರ ಹೃದಯ ಗೆದ್ದಿದ್ದಳು. ಅವಳೇ ಡಿಂಪಲ್ ಚುನ್ನಿಭಾಯ್ ಕಪಾಡಿಯಾ. ಹಿಂದಿ ಚಿತ್ರರಂಗದ ಮೊದಲ ಸೂಪರ್ ಸ್ಟಾರ್ ರಾಜೇಶ್ ಖನ್ನಾರನ್ನು ಮದುವೆಯಾಗಿ ಇಬ್ಬರು ಮುದ್ದು ಮಕ್ಕಳನ್ನು ಕಾಣಿಕೆಯಾಗಿ ನೀಡಿ, ವಿಚ್ಛೇದನ ಪಡೆದ ಡಿಂಪಲ್ ಗೆ ಈಗ 53ರ ಹರೆಯ.

    ಡಿಂಪಲ್ ಕಪಾಡಿಯಾ ಮಾಡಿದರ ಪಾತ್ರಗಳಿಲ್ಲ. ಬಾಬ್ಬಿಯಂಥ ಹಸಿಬಿಸಿ ಚಿತ್ರಗಳಿಂದ ಹಿಡಿದು ರುಡಾಲಿ, ಲೇಕಿನ್ ನಂಥ ಕಲಾತ್ಮಕ ಚಿತ್ರಗಳಲ್ಲಿ ನಟಿಸಿ ಎಂಥ ಪಾತ್ರ ಮಾಡುವ ತಾಕತ್ತು ತನ್ನಲ್ಲಿದೆ ಎಂದು ತೋರಿಸಿದವಳು. ಬಾಬ್ಬಿ ಚಿತ್ರದಲ್ಲಿನ ನಟನೆಗಾಗಿ ಫಿಲಂಫೇರ್ ಪ್ರಶಸ್ತಿ ಪಡೆದ ಡಿಂಪಲ್ ರುಡಾಲಿ ಚಿತ್ರಕ್ಕೆ ಅತ್ಯುತ್ತಮ ನಟಿ ರಾಷ್ಟ್ರಪ್ರಶಸ್ತಿಯನ್ನು ಪಡೆದಳು.

    ಬಾಬ್ಬಿ ಬಿಡುಗಡೆಯಾಗುವ ಮೊದಲೇ ಹದಿನಾರರ ಹರೆಯದಲ್ಲಿ ರಾಜೇಶ್ ಖನ್ನಾನನ್ನು ಮದುವೆಯಾಗಿ, 1984ರಲ್ಲಿ ವಿಚ್ಛೇದನ ಬಿಸಾಕಿದ ಡಿಂಪಲ್ ಸಾಗರ್ ಚಿತ್ರಕ್ಕಾಗಿ ಧರಿಸಿದ ಬಟ್ಟೆಗಳನ್ನೂ ಬಿಸಾಕಿ 'ಸಾಗರ್' ಚಿತ್ರದಲ್ಲಿ ಬಿಕಿನಿಯಲ್ಲಿ ಕಾಣಿಸಿ ಚಿತ್ರರಂಗದಲ್ಲಿ ಭಾರೀ ಅಲೆಯಬ್ಬಿಸಿದ್ದಳು. ಸಾಗರ್ ಚಿತ್ರದಲ್ಲಿ ಬಾಬ್ಬಿಯ ಜೋಡಿಯೇ ಮತ್ತೆ ಕಾಣಿಸಿಕೊಂಡಿತು. 'ಹಮ್ ತುಮ್ ಏಕ ಕಮರೇಮೆ ಬಂದ ಹೈ' ಹಾಡಿನ ಹಾಗೆ 'ಚೆಹೆರಾ ಹೈ ಯಾ ಚಾಂದ ಸಿತಾರೆ, ಜುಲ್ಫ್ ಘನೇರಿ ಶಾಮ್ ಹೈ ಕ್ಯಾ' ಹಾಡು ಪ್ರೇಕ್ಷಕರರಲ್ಲಿ ಮೋಹಿ ಮಾಡಿತು.

    ವಿಪರ್ಯಾಸದ ಸಂಗತಿಯೆಂದರೆ, ಸಾಗರದ ಅಲೆಗಳ ಮೇಲೆ ತುಯ್ದಾಡುವ ದೋಣಿಯಂತೆ ಡಿಂಪಲ್ ಕಪಾಡಿಯಾ ಜೀವನ ಕೂಡ ಸಾಗಿದೆ. ರಾಜೇಶ್ ಖನ್ನಾ ಜೊತೆಗಿನ ವೈವಾಹಿಕ ಜೀವನ ಸುಖಮಯವಾಗಿರಲಿಲ್ಲ. ಮಧ್ಯ ವಯಸ್ಸು ದಾಟಿ ಮಕ್ಕಳು ಹೆಗಲು ದಾಟಿದ ಮೇಲೆ ಕೂಡ ತನ್ನ ಅರ್ಧ ವಯಸ್ಸಿನ ಸನ್ನಿ ಡಿಯೋಲ್ ಜೊತೆ ಚಕ್ಕಂದವಾಡಿಳು ಡಿಂಪಲ್. ಅವಲ ವೈಯಕ್ತಿಕ ಜೀವನ ಏನೇ ಆಗಲಿ, 53ರ ಹರೆಯದಲ್ಲೂ ಅದೇ ಸೌಂದರ್ಯ ಉಳಿಸಿಕೊಂಡಿರುವ ಡಿಂಪಲ್ ಇನ್ನಷ್ಟು ಪ್ರಬುದ್ಧ ಚಿತ್ರಗಳಲ್ಲಿ ನಟಿಸಲಿ. ರುಡಾಲಿ, ಲೇಕಿನ್ ನಂಥ ಚಿತ್ರಗಳಲ್ಲಿ ಮತ್ತೆ ನಟಿಸಿ ಪ್ರೇಕ್ಷಕರನ್ನು ರಂಜಿಸಲಿ ಎಂಬುದೇ ಆಶಯ.

    ಅಂದ ಹಾಗೆ : ಪ್ರೀತ್ಸೋದ್ ತಪ್ಪಾ, ಪ್ರೀತ್ಸೋಣ ಬಾ ಅನ್ನುತ್ತಲೇ ಆಟೋ ಶಂಕರ್ ಬೆನ್ನು ಬಿದ್ದು ಕನ್ನಡಿಗರ ಮನ ಗೆದ್ದ ಮಂಗಳೂರು ಬೆಡಗಿ, ಬಾಜಿಗರ್ ಹುಡುಗಿ ಶಿಲ್ಪಾ ಶೆಟ್ಟಿ ಹುಟ್ಟುಹಬ್ಬ ಕೂಡ ಇಂದೇ. ಅವಳಿಗೂ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು.

    Tuesday, June 8, 2010, 19:41
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X