»   »  ಸಖತ್ ಫೀಲಿಂಗ್‌ನ ಕೃಷ್ಣನ್ ಲವ್ ಸ್ಟೋರಿ!

ಸಖತ್ ಫೀಲಿಂಗ್‌ನ ಕೃಷ್ಣನ್ ಲವ್ ಸ್ಟೋರಿ!

Subscribe to Filmibeat Kannada

ಮೊಗ್ಗಿನೊಳಗೆ ಹುದುಗಿದ್ದ ಶಶಾಂಕ್ ಹೊರಬಂದಿದ್ದಾರೆ. ಕೃಷ್ಣನ್ ಲವ್ ಸ್ಟೋರಿಯಲ್ಲಿ ಲೀನವಾಗಿದ್ದಾರೆ. ಅಕ್ಟೋಬರ್ 9, ಶುಕ್ರವಾರದಿಂದ ಕೃಷ್ಣನ್ ಲವ್ ಸ್ಟೋರಿ ಚಿತ್ರೀಕರಣ. ಎರಡು ದಿನ ಮುಂಚೆ ಪತ್ರಕರ್ತರಿಗೆ ಮುಖಾಮುಖಿಯಾಗಿದ್ದ ಚಿತ್ರತಂಡದಲ್ಲಿ ಉತ್ಸಾಹ ಪುಟಿಯುತ್ತಿತ್ತು. ಅದು ಪ್ರೇಮಕಥೆಯೊಂದರ ತಾಜಾತನ ತಂದ ಹುರುಪು.

ಕಥೆಯ ಎಳೆಯನ್ನು ನಿರ್ಮಾಪಕರಿಗೆ ಹೇಳಿದೆ. ಹದಿನೈದೇ ನಿಮಿಷಗಳಲ್ಲಿ ಸಿನಿಮಾ ಮಾಡಲಿಕ್ಕೆ ಅವರು ಒಪ್ಪಿಕೊಂಡರು ಎಂದರು ಶಶಾಂಕ್. ಹೊಸ ಚಿತ್ರದ ಈ ಸಂಭ್ರಮ ನನ್ನಲ್ಲಿ ಒಂದು ರೀತಿಯ ಸಂಕಟವನ್ನೂ ಉಂಟುಮಾಡುತ್ತಿದೆ. ಉತ್ತರ ಕರ್ನಾಟಕದಲ್ಲಿ ಲಕ್ಷಾಂತರ ಮಂದಿ ನೆರೆಯಿಂದಾಗಿ ನೆಮ್ಮದಿ ಕಳಕೊಂಡಿರುವಾಗ ನಾವಿಲ್ಲಿ ಸಂಭ್ರಮ ಪಡುವುದು ಮುಜುಗರ ಹುಟ್ಟಿಸುತ್ತದೆ. ಆದರೆ ಇಂಥ ವೈರುಧ್ಯಗಳು ಜೀವನದಲ್ಲಿ ಮಾಮೂಲು. ನಮ್ಮ ತಂಡ ಆ ಜನರ ಸಂಕಟಕ್ಕೆ ಸ್ಪಂದಿಸುತ್ತದೆ ಎಂದಷ್ಟೇ ಈ ಸಂದರ್ಭದಲ್ಲಿ ಹೇಳಬಲ್ಲೆ ಎಂದರು ಶಶಾಂಕ್. ಅಂದಹಾಗೆ, ಚಿತ್ರದ ಅಡಿಬರಹ ಸಖತ್ ಫೀಲಿಂಗ್ ಮಗಾ!

ಕೃಷ್ಣನ್ ಲವ್ ಸ್ಟೋರಿ ಬಗ್ಗೆ ಶಶಾಂಕ್‌ಗೆ ಇನ್ನಿಲ್ಲದ ಆತ್ಮವಿಶ್ವಾಸ. ಇಷ್ಟೊಂದು ತೀವ್ರತೆಯುಳ್ಳ ಪ್ರೇಮಕಥೆ ಈಚಿನ ವರ್ಷಗಳಲ್ಲಿ ಕನ್ನಡದಲ್ಲಿ ಬಂದೇ ಇಲ್ಲ. ಸುದೀಪ್‌ರ ಹುಚ್ಚ ಚಿತ್ರವೊಂದು ಇದಕ್ಕೆ ಅಪವಾದ. ಆದರೆ ಹುಚ್ಚ ರೀಮೇಕ್. ನಮ್ಮದು ಸ್ವಮೇಕ್ ಎಂದು ಶಶಾಂಕ್ ಹೆಮ್ಮೆಯಿಂದ ಹೇಳಿಕೊಂಡರು.

ಗೆಳೆಯನೊಬ್ಬನ ಪ್ರೇಮ ಪ್ರಸಂಗಗಳನ್ನು ಆಧರಿಸಿ ಶಶಾಂಕ್ ಕೃಷ್ಣನ ಲವ್ ಸ್ಟೋರಿ ಹೊಸೆದಿದ್ದಾರೆ. ಗೆಳೆಯರ ತಂಡದೊಂದಿಗೆ ಹೊರನಾಡಿಗೆ ಪ್ರವಾಸ ಹೋಗಿ ಹಿಂತಿರುಗುವಾಗ ಈ ಕಥೆ ಮಾತಿನ ನಡುವೆ ಬಂತಂತೆ. ಗೆಳೆಯನ ಪ್ರೇಮ ಕಥೆ ಕೇಳಿ ಇತರರು ನಕ್ಕು ಹಗುರಾದರಂತೆ. ಶಶಾಂಕ್‌ಗೆ ಮಾತ್ರ ಅನೇಕ ದಿನಗಳ ಕಾಲ ಕಥೆ ಕಾಡುತ್ತಲೇ ಇತ್ತಂತೆ. ನನ್ನ ಕಥೆಯನ್ನು ಇಟ್ಟುಕೊಂಡು ಸಿನಿಮಾ ಮಾಡು ಎನ್ನುವ ಗೆಳೆಯನ ತಮಾಷೆಯ ಮಾತನ್ನು ಗಂಭೀರವಾಗಿ ಪರಿಗಣಿಸಿ ಸಿನಿಮಾ ಮಾಡಲಿಕ್ಕೆ ಹೊರಟಿದ್ದಾರೆ. ಮುಕ್ಕಾಲು ಪಾಲು ಸತ್ಯ ಸಂಗತಿಗಳು, ಉಳಿದದ್ದು ಕಲ್ಪನೆಯಂತೆ.

ಸಿನಿಮಾ ತೆರೆಕಂಡ ದಿನ ನನ್ನ ಗೆಳೆಯನನ್ನು ನಿಮಗೆಲ್ಲ ಪರಿಚಯಿಸುತ್ತೇನೆ. ಅವನಿಂದ ಅವನ ಲವ್ ಸ್ಟೋರಿಯ ಕ್ಲೈಮ್ಯಾಕ್ಸ್ ಹೇಳಿಸುತ್ತೇನೆ. ಸಿನಿಮಾದಲ್ಲಿ ಕ್ಲೈಮ್ಯಾಕ್ಸ್ ಬೇರೆಯೇ ಆಗಿರುತ್ತದೆ ಎಂದರು ಶಶಾಂಕ್. ರಾವಣ ಚಿತ್ರದ ನಿರ್ಮಾಪಕರಾದ ಉದಯ್ ಮೆಹ್ತಾ ಹಾಗೂ ಮೋಹನ್ ನಾಯಕ್ ಈ ಚಿತ್ರದ ನಿರ್ಮಾಪಕರು. ಯೋಗೇಶ್ ಹುಣಸೂರು ಕಾರ್ಯಕಾರಿ ನಿರ್ಮಾಪಕ.

ಪ್ರೇಮ್ ಕಹಾನಿಯ ಅಜಯ್ ಹಾಗೂ ಮೊಗ್ಗಿನ ಮನಸು ರಾಧಿಕಾ ಪಂಡಿತ್, ಶಶಾಂಕ್ ಪ್ರೇಮಕಥೆಯ ನಾಯಕ ನಾಯಕಿ. ಪಕ್ಕದ ಮನೆಯ ಹುಡುಗ ಹುಡುಗಿಯರನ್ನು ಹೋಲುವ ಕೃಷ್ಣ ಹಾಗೂ ಗೀತಾ ಎನ್ನುವ ಪಾತ್ರಗಳಲ್ಲಿ ಅವರು ನಟಿಸುತ್ತಿದ್ದಾರಂತೆ. ಪುರಾಣದ ಕೃಷ್ಣನಿಗೂ ಈ ಕೃಷ್ಣನಿಗೂ ಹೋಲಿಕೆಯೇನಿಲ್ಲ. ಆದರೆ ದ್ವಾಪರದ ಕೃಷ್ಣನಂತೆ ಈ ಕೃಷ್ಣನದೂ ರಂಜನೀಯ ವ್ಯಕ್ತಿತ್ವ ಎಂದರು ಅಜಯ್.

ಕಥೆಯ ಎಳೆಯನ್ನು ಬಿಟ್ಟುಕೊಡಲು ನಿರ್ದೇಶಕರು ಒಪ್ಪಲಿಲ್ಲ. ಅವರ ಅಪ್ಪಣೆಯನ್ನು ಕಲಾವಿದರು ಚಾಚೂ ತಪ್ಪಲಿಲ್ಲ. ಶೇಖರ್‌ಚಂದ್ರರ ಛಾಯಾಗ್ರಹಣ, ಶ್ರೀಧರ್ ಸಂಗೀತವಿರುವ ಕೃಷ್ಣನ್ ಲವ್ ಸ್ಟೋರಿ ಚಿತ್ರದಲ್ಲಿ ಯಾವ ಮೆಸೇಜೂ ಇಲ್ಲವಂತೆ. ಇದೊಂದು ಸರಳ ಪ್ರೇಮಕಥೆಯ ನಿರೂಪಣೆ, ಅಷ್ಟೇ ಎಂದರು ಶಶಾಂಕ್.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada