»   »  ಪಂಚೆ ಕಳಚಿ ಖಾಕಿ ಧರಿಸಿರುವ ರೂರಲ್ ಸ್ಟಾರ್!

ಪಂಚೆ ಕಳಚಿ ಖಾಕಿ ಧರಿಸಿರುವ ರೂರಲ್ ಸ್ಟಾರ್!

Subscribe to Filmibeat Kannada

ನಿಷ್ಕರ್ಷ ಚಿತ್ರದ ಖಳನಾಯಕ ನಿಮಗೆ ಗೊತ್ತಲ್ಲ. ಬಿ ಸಿ ಪಾಟೀಲ್ ಮೊನ್ನೆ ಬೆಂಗಳೂರು ಸಿಟಿನಲ್ಲಿ ಸಿಕ್ಕಿದ್ದರು. ಏನ್ರೀ ಪತ್ತೇನೇ ಇಲ್ಲ ಎಂದು ಕೇಳಿದರೆ, ರಾಜಕೀಯದಲ್ಲಿ ಮುಳುಗಿದ ನಂತರ ಕನ್ನಡ ಸಿನಿಮಾ ಅಂಗಳಕ್ಕೆ ಬರುವುದಕ್ಕೆ ಪುರುಸೊತ್ತೇ ಇಲ್ಲಾಂತ ಉತ್ತರ ಕೊಟ್ಟರು. ಉತ್ತರ ಸರಿಯಾಗಿದೆ ಮತ್ತು ಒಪ್ಪತಕ್ಕ ವಿಚಾರವೇ. ಏಕೆಂದರೆ, ಲಕ್ಷಾಂತರ ಮತದಾರರು ಅವರನ್ನು ಆರಿಸಿ ವಿಧಾನಸಭೆಗೆ ಕಳಿಸಿರುತ್ತಾರೆ. ಶಾಸಕರು ತಮ್ಮ ಊರಿಗೆ ಕೇರಿಗೆ ಏನಾದರೂ ಒಳ್ಳೆ ಕೆಲಸ ಮಾಡೋದು ಬಿಟ್ಟು ಶೂಟಿಂಗು ಡಬ್ಬಿಂಗು ಎನ್ನುತ್ತಾ ಲೊಕೇಶನ್ನು ಸ್ಟೂಡಿಯೋದಲ್ಲಿ ಕಾಲಕಳೆದರೆ ಆ ಶಿವ ಒಪ್ಪುತ್ತಾನಾ. ಇಲ್ಲರೀ.

ಪಾಟೀಲರು ಗುಳೆ ಹೋಗಿದ್ದು ಚಿತ್ರರಂಗದಿಂದ ರಾಜಕೀಯಕ್ಕೇ ಹೊರತು ಅವರೇನು ಪಕ್ಷಾಂತರ ಮಾಡಿಲ್ವಲ್ಲ. ಜೆಡಿಎಸ್ಸಿನಿಂದ ಕಾಂಗ್ರೆಸ್ಸಿಗೆ ಪಕ್ಷಾಂತರ ಮಾಡಿರಬಹುದು ಆದರೆ ಅದು ಬೇರೆ ವಿಷ್ಯ. ನಮಗೇನು ರಾಜಕೀಯ ಬೇಡ, ಮಾಡೋದಕ್ಕೆ ಇಂಟರೆಸ್ಟೂ ಇಲ್ಲ. ನಮ್ಮ ನಟ ನಿರ್ಮಾಪಕ ಪಾಟೀಲರು ಆಗಾಗ ಕನ್ನಡ ಚಿತ್ರರಂಗಕ್ಕೆ ಬಂದು ಹೋಗಿ ಮಾಡುತ್ತಿದ್ದರೆ ಅಷ್ಟೇ ನಮಗೆ ಸಮಾಧಾನ. ನಮ್ಮಂಥ ಅಭಿಮಾನಿಗಳಿಗೋಸ್ಕರವೇ ಈಗ ಅವರು ಇನ್ನೊಂದು ಚಿತ್ರ ತೆಗೀತಾ ಇದಾರೆ. ಅದರ ಹೆಸರು ಸೆಲ್ಯೂಟ್ ಅಂತ. ಎಷ್ಟೇ ಆಗಲಿ ಪೊಲೀಸ್ ಇಲಾಖೆಯಲ್ಲಿದ್ದ ಬಿಸಿಪಿ ಎಷ್ಟೋ ಸೆಲ್ಯೂಟುಗಳನ್ನು ಹೊಡೆದಿದ್ದಾರೆ, ಹೊಡೆಸಿಕೊಂಡಿದ್ದಾರೆ.

ಪಾಟೀಲರು ನಮಗೆ ಸೆಲ್ಯೂಟ್ ಚಿತ್ರದ ಹಾಡುಗಳ ಸಿಡಿ ಕೊಟ್ರು. ಸಿಡಿ ಮೇಲೆ Rural Star BC Patil strikes again ಎಂದು ಬರೆದಿದೆ. ಕಥೆ, ಚಿತ್ರಕಥೆ-ನಿರ್ಮಾಣ, ನಿರ್ದೇಶನ ಅವರೇ ಮಾಡಿದ್ದಾರೆ. ಸಂಗೀತ ಸಾಯಿ ಕಾರ್ತಿಕ್. ಚಿತ್ರಕ್ಕೆ ಹೀರೋ ಯಾರು ಎಂದರೆ ಅವರೇ ಸಾರ್, ಬಿ ಸಿ ಪಾಟೀಲ್ ! ಹೀರೋಯಿನ್ ಮಾತ್ರ ಅಶ್ವಿನಿ. ಪಡ್ಡೆಗಳಿಗೆ ಇರಲಿ ಅಂತ ರಚನಾ ಮೌರ್ಯಳಿಂದ ಥಕತೈ ಕುಣಿಸುತ್ತಿದ್ದಾರೆ ಪಾಟೀಲ್.

ಹಳೆ ನೆನಪುಗಳನ್ನು ಮೆಲಕು ಹಾಕುವುದೆಂದರೆ ಪಾಟೀಲರಿಗೆ ತುಂಬಾ ಪ್ರೀತಿ. ಹಳೆ ಮಿತ್ರರನ್ನು ಅವರು ಮರೆಯೋದೇ ಇಲ್ಲ. ಅಕಸ್ಮಾತ್ ಮರೆತರೂ ಸುನೀಲ್ ಕುಮಾರ್ ದೇಸಾಯಿ ಅವರನ್ನು ಜನ್ಮದಲ್ಲಿ ಮರೆಯಕ್ಕಾಗಲ್ಲ. ಸಿನಿಮಾ ಗೆಲ್ಲಿಸುವುದಲ್ಲದೆ ಕಂಪನಿ ನಾಟಕದ ಪೌರಾಣಿಕ ಪಾತ್ರಗಳಲ್ಲಿ ಮೆರೆಯುತ್ತಿದ್ದ ಪಾಟೀಲರಲ್ಲಿದ್ದ ಕಲಾವಿದನಿಗೆ ಇಸ್ತ್ರಿಹಾಕಿ ದೊಡ್ಡ ಪರದೆಯಲ್ಲಿ ಖಳನಟನನ್ನಾಗಿ ಮಾಡಿದ್ದು ಸಾಮಾನ್ಯನಾ. ಅದನ್ನೆಲ್ಲ ಅವರು ನೆನೆಪಿಸಿಕೊಂಡು ಮತ್ತೆ ಮತ್ತೆ ಸಂತಸಪಟ್ಟರು. ಇದೇ ವೇಳೆ ನಿಷ್ಕರ್ಷ ಸಿನಿಮಾನ ಉದಯ ಟಿವಿನೋರು ಅದೆಷ್ಟು ಬಾರಿ ಹಾಕಿದರೋ ನಾನಂತೂ ಲೆಕ್ಕ ಇಟ್ಟಿಲ್ಲ ಎಂದರು. ಲೆಕ್ಕ ಪಕ್ಕಾ ಯಾಕೆಬೇಕು?ಕನ್ನಡ ಚಾನಲ್ ಗೆ ಒಂದು ಚಿತ್ರ ಕೋಟಿಗಟ್ಟಲೆ ಹಣ ತಂದುಕೊಟ್ಟಿದ್ದರೆ ಕನ್ನಡಿಗರಿಗೆ ಸಂತೋಷ ಆಗದೆ ಇರತ್ತಾ.

ನಿಷ್ಕರ್ಷ ಚಿತ್ರ ಟೈಪೇ ಬೇರೆ , ಕೌರವ ಟೈಪೇ ಬೇರೆ. ಕೌರವ ಪರವಾಗಿಲ್ಲ ಅನ್ನೋಮಟ್ಟಿಗೆ ಓಡಿತು. ಆದ್ರೂ ಯಾಕೋ ಈಚೆಗೆ ಕುಕ್ಕುಕ್ಕೂ ಹಾಡನ್ನು ಯಾವ ಚಾನಲ್ಲಿನವರೂ ಹಾಕ್ತಾ ಇಲ್ಲ.ಪಾಟೀಲರಿಗೆ ಅದಕ್ಕೇನೂ ಬೇಜಾರಿಲ್ಲ. ಆದ್ರೆ ಪಂಚೆ ಎತ್ತಿಕಟ್ಟಿ ಕೆರೆ ಏರಿಮೇಲೆ ಗತ್ತಿನಿಂದ ನಡೆಯೋ ನಾಯಕ ಮತ್ತು ಹಸುರು ಗಿಡಗಳ ಸುತ್ತ ಗಿಣಿಥರ ಸುತ್ತೋ ಪ್ರೇಮಾನ ನೋಡಕ್ಕಾಗಿಲ್ಲ ಅಂತ ನಮಗೆ ಬೇಜಾರೇ ಹೊರತು ಇನ್ನೇನಿಲ್ಲ.

ಈ ಕೌರವ ಅಂತಿಂಥ ಕೌರವ ಅಲ್ಲಾರೀ. ನಾಟಕಗಳಲ್ಲಿ ಕೌರವನ ಪಾತ್ರ ಮಾಡಿದ್ದಾಯ್ತು, ಕೌರವ ಟೈಟಲ್ ಇಟ್ಕೊಂಡು ಸಿನಿಮಾ ಮಾಡಿದ್ದಾಯ್ತು. ಮತ್ತೆ ಈಗ ದಿನ ಪತ್ರಿಕೆ ಮಾಡ್ತಾಯಿದ್ದಾರಂತೆ. ಪೇಪರ್ ಹೆಸರೇ ಕೌರವ ಎಂದು ಇಟ್ಟಿದ್ದಾರಂತೆ. ಹಾವೇರಿಯಿಂದ ಪ್ರಕಟ ಆಗ್ತಾ ಇರೋ ಪೇಪರ್ ಸುತ್ತಾಮುತ್ತಾ ಐದಾರು ಜಿಲ್ಲೆಗೆ ಹೋಗತ್ತಂತೆ. ಅಂತೂ ಪೊಲೀಸ್ ಹುದ್ದೆ, ಶಾಸಕರ ಹುದ್ದೆ, ಪೇಪರ್ ಕಿಂಗ್ ಆಗಿರೋ ಬಿ ಸಿ ಪಾಟೀಲರು ಅಷ್ಟಕ್ಕೇ ಬಿಟ್ಟಿಲ್ಲ. ಹಿರೇಕೆರೂರಿನಲ್ಲಿ ಒಂದು ಸ್ಕೂಲು ಕೂಡ ಓಪನ್ ಮಾಡಿದಾರೆ. ಒಂದನೇ ತರಗತಿಯಿಂದ ಹತ್ತನೇ ತರಗತಿವರೆಗೆ ಇರೋ ಶಾಲೆಯಲ್ಲಿ ಬರೋ ವರ್ಷಕ್ಕೆ ಸೀಟು ಬೇಕು ಅಂದರೂ ಸಿಗೋದು ಕಷ್ಟರೀ ಎಂದು ಅಭಿಮಾನಿ ಕೌರವನ ಟೈಪು ಮೀಸೆ ಮೇಲೆ ಕೈಹಾಕ್ಕೊಂಡು ಹೋಗೇ ಬಿಟ್ರು.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada