»   » ಅಭಿಮಾನಿಗೆ ಕಣ್ಣು ಕೊಟ್ಟ ಕರ್ಣನ ಕತೆ

ಅಭಿಮಾನಿಗೆ ಕಣ್ಣು ಕೊಟ್ಟ ಕರ್ಣನ ಕತೆ

Posted By: *ವಿನಾಯಕರಾಮ್ ಕಲಗಾರು
Subscribe to Filmibeat Kannada

ಸಮಯ ಬೆಳಗ್ಗೆ ಹನ್ನೊಂದು. ಸ್ಥಳ ಜಯನಗರ ಪೋರ್ತ್ ಬ್ಲಾಕ್, ವಿಷ್ಣುವರ್ಧನ್ ಮನೆ ಮುಂಭಾಗ. ಭಾರತಿ ವಿಷ್ಣುವರ್ಧನ್ ಅವರಿಗೆ ಸಾಂತ್ವನ ಹೇಳಲು ಹತ್ತಾರು ಮಂದಿ ಬರುತ್ತಿದ್ದಾರೆ. ಹೋಗುತ್ತಿದ್ದಾರೆ. ಬಿಸಿಲು ಇನ್ನೇನು ನೆತ್ತಿ ಸುಡಲು ಹವಣಿಸುತ್ತಿದೆ, ಆಗ ಬಂದ ಆ ವೃದ್ಧ... ಬಾಡಿದ ಮುಖ. ಅದಕ್ಕೆ ಹೊಂದಿಕೊಂಡ ಕಣ್ಣುಗಳು. ಬಲಗಣ್ಣ ರೆಟಿನಾ ಸುತ್ತ ಬಿಳಿ ಪೊರೆ. ತಲೆ ಮೇಲೆ ಟೊಪ್ಪಿಯ ಮರೆ.

ಮಂಜು ಮಂಜು ಎನಿಸಿದಾಗಲೆಲ್ಲ ಸರಿ ದಾರಿ ತೋರುವ ಕನ್ನಡಕ. ಅಚ್ಚ ವಿಜಾಪುರ ಭಾಷೆಯಲ್ಲೇ ಮಾತನಾಡುತ್ತಿದ್ದ ಆ 'ಇಳಿ"ಯರಾಜ.ಗೇಟ್ ಪಕ್ಕ ನಿಂತು ಮುಖ ಮುರಿಯುತ್ತಿದ್ದ ಸೆಕ್ಯುರಿಟಿ ಸಮೀಪ ಬಂದು, ಅಮ್ಮಾವ್ರು ಇದ್ದಾರಾ ಸ್ವಾಮಿ... ಎನ್ನುವ ಹೊತ್ತಿಗೆ ಗಂಟಲು ಒಣ ಮರು ಭೂಮಿ. ಕಣ್ಣು ಮತ್ತೆ ನೀರ ಮೇಲಿನ ಗುಳ್ಳೆ. ಸೆಕ್ಯುರಿಟಿ ಸಮೀಪವೇ ಇದ್ದ ವಿಷ್ಣು ದತ್ತು ಪುತ್ರ ಶ್ರೀಧರ್ ವೃದ್ಧನ ಪರಿಸ್ಥಿತಿ ಕಂಡು ಮರುಗಿದರು. ಮರುಕ್ಷಣದಲ್ಲೇ ಮಾತಿಗೆ ನಿಂತರು.

ತಾವು ಎಲ್ಲಿಂದ ಬಂದದ್ದು?
ನನ್ ಹೆಸರು ಸುಭಾಷ್ ಚಂದರ್ ಅಂತಾರೀ... ವಿಜಾಪುರದಿಂದ ಬಂದೀನ್ರೀ... ದಯವಿಟ್ಟು ಅಮ್ಮಾವ್ರನ್ನ ಒಮ್ಮೆ ಭೆಟ್ಟಿ ಮಾಡಿಸ್ರೀ...ಶ್ರೀಧರ್ ಮತ್ತೆ ಮಾತನಾಡಲಿಲ್ಲ. ಅವರನ್ನು ಮನೆಯ ಒಳಗೆ ಕರೆತಂದು ಕೂರಿಸಿ, ಅಮ್ಮಾವ್ರಿಗೆ ಸುದ್ದಿ ಮುಟ್ಟಿಸಿದರು. ಭಾರತಿಯವರು ಮನೆಯಿಂದ ಹೊರಬೀಳುತ್ತಿದ್ದಂತೆ ವೃದ್ಧನ ಕಣ್ಣೀರು ಕೋಡಿಯಾಯಿತು.

ಅಮ್ಮಾವ್ರೇ, ಯಜಮಾನ್ರು ನಮ್ಮನ್ನ ಬಿಟ್ಟು ಹೇಳ್ದೇ ಕೇಳ್ದೇ ಹೊಂಟೋಗ್‌ಬುಟ್ರು. ಹಿಂದಿನ ವರ್ಷ ಕಣ್ಣಿನ ಆಪರೇಷನ್ ಮಾಡಿಸ್ಬೇಕು ಅಂತ ಬೆಂಗ್ಳೂರ್‌ಗೆ ಬಂದಿದ್ದೇರೀ... ನನ್ ಪರಿಚಯಸ್ಥ ಒಬ್ಬ ಬಾ ಅಂತ ಹೇಳಿ,ಕೊನೆಗೆ ಕೈ ಕೊಟ್ಟಾರೀ... ಅವನ ಅಡ್ರೆಸ್ ಸಿಗದೇ ಅಲೆದಾಡ್ತಾ ಇದ್ದೇರಿ. ಅಲ್ದು ಅಲ್ದು ಸುಸ್ತಾಗಿ, ಒಂದು ದಿನ ನಿಮ್ ಮನೆ ಮುಂದೆ ಹೋಗ್ತಿದ್ದಾಗ ವಿಷ್ಣೂ ಸಾಹೇಬ್ರು ಕಂಡ್ರೂರೀ... ಹಿಂಗ್ ಆಗ್‌ಬುಟೈತ್ರೀ ಸರ ಅಂತ ಹೇಳಿದಾಗ, ಖುದ್ದಾಗಿ ಮನೆ ಒಳಕ್ ಕರ್‍ಕೊಂಡ್ ಬಂದ್ರೂರೀ... ಕೂರಿಸಿ, ಊಟ ಮಾಡಿಸಿ, ತಮಗೆ ಗೊತ್ತಿದ್ದೋರ್‌ಗೆ ಫೋನ್ ಮಾಡಿ, ಆಸ್ಪತ್ರೆಗೆ ಸೇರಿಸಿದ್ರೂ ರೀ...

ವಿಷ್ಣು ಸಾರ್ ಹೇಳ್ಯಾರ ಅಂತ ಅಲ್ಲಿ ನಯಾ ಪೈಸಿ ತೊಗೊಳ್ದೇನೇ ಕಣ್ಣಿನ ಆಪರೇಷನ್ ಮಾಡಿದ್ರೂರೀ... ಅಷ್ಟೇ ಅಲ್ರೀ... ಆಮ್ಯಾಕ ಊರಿಗ್ ಹೋಗ್ಲಿಕ್ ಅಂತ ಕೈ ತುಂಬಾ ದುಡ್ಡು ಕೊಟ್ಟು ಕಳ್ಸಿದ್ರೂರೀ... ನಾನು ಹೊರಡೋ ಮುನ್ನ- ಚಂದರ್‌ಜೀ ಮುಂದಿನ್ ವರ್ಷ ಮತ್ತೆ ಬನ್ನಿ.ಇನ್ನೊಂದ್ ಕಣ್ಣಿನ್ ಆಪರೇಷನ್ ಮಾಡಿಸ್ಕೊಬಿಡಿ ಅಂತ ಹೇಳಿದ್ರೂರೀ... ಆದ್ರ ಈಗ ಅವರೇ ಇಲ್ಲಾರೀ... ನಂಗಂತೂ ನಂಬೋಕೇ ಆಗ್ತಿಲ್ಲಾ.

ಈಗ ನನ್ ಕಣ್ಣು ಸರೀ ಇದ್ದೂ ವ್ಯರ್ಥಾರೀ... ಬೆಂಗ್ಳೂರ್‌ಗೆ ನಿನ್ನೇನೇ ಬಂದೀನ್ರೀ... ಬೆಳಗ್ಗೆ 9ಕ್ಕ ಅವರಿರೋ ಜಾಗಕ್ಕ (ಅಭಿಮಾನ್ ಸ್ಟುಡಿಯೊ) ಹೋಗಿದ್ದೇರಿ. ನಮ್ಮನ್ನೆಲ್ಲ ಯಾಕ್ ಬಿಟ್ಟೋದ್ರಿ ಅಂತ ಕೇಳ್ತಾನೇ ಇದ್ದೇರಿ. ಒಟ್ಟಾ ಮಾತಾಡ್ಲಿಲ್ಲರೀ.. ಸಂಜೆ ತನಕ ಅಲ್ಲೇ ಇದ್ದು, ಬಂದೇರೀ... ಬಿಟ್ ಬರ್‍ಲಿಕ್ಕ ಭಾಳ್ ಕಷ್ಟಾತ್ ನೋಡ್ರೀ...- ಅಲ್ಲಿಗೆ ವೃದ್ಧ ಮತ್ತಷ್ಟು ಕುಗ್ಗಿಹೋದ. ಭಾರತಿ ಮತ್ತಷ್ಟು ಸಮಾಧಾನ ಮಾಡಿದ್ರು.

ಹಸಿದ ಹೊಟ್ಟೆಗೆ ಅನ್ನದಾನ ಮಾಡಿ, 'ಇರಿ ಒಂದು ನಿಮಿಷ" ಎಂದು ಒಳಗೆ ಹೋದರು. ಹಿಂದಿರುಗಿ ಬಂದಾಗ ಕೈಯಲ್ಲಿ ಒಂದು ಬಿಳಿ ಕವರ್ ಇತ್ತು. ಅದನ್ನು ಅವನಿಗೆ ಕೊಡುತ್ತಾ... ನೋಡಿ, ನಿಮ್ಮ ಎರಡೂ ಕಣ್ಣು ಆಪರೇಷನ್ ಮಾಡಿಸ್ಬೇಕು ಎನ್ನುವುದು ಅವರ ಆಸೆಯಾಗಿತ್ತು. ಹೋಗಿ. ಇವತ್ತೇ ಆಸ್ಪತ್ರೆಗೆ ತೋರಿಸಿ, ಗುಣ ಮಾಡಿಕೊಂಡೇ ಊರು ಸೇರಿಕೊಳ್ಳಿ... ದೇವ್ರು ಒಳ್ಳೇದ್ ಮಾಡ್ತಾನೆ ನಿಮ್ಗೆ...ಎಂದು ಮತ್ತೆ ಮೌನವೀಣೆಯಾದರು.

ತಾತನಿಗೆ ಮಾತು ಬರಲಿಲ್ಲ. ಕಣ್ಣಲ್ಲೇ ಇಡೀ ಮನೆಯನ್ನು ಮತ್ತೊಮ್ಮೆ ನೋಡುತ್ತಾ... ದಯವಿಟ್ಟು ಸಾಹೇಬ್ರದ್ದು ಒಂದೇ ಒಂದು ಫೋಟೊ ಇದ್ರೆ ಕೊಡ್ರೀ... ಎಂದ. ಶ್ರೀಧರಣ್ಣ ಫೋಟೊ ತಂದುಕೊಟ್ಟ. ತಾತ ಅದನ್ನೇ ನೋಡುತ್ತಾ ಎರಡು ನಿಮಿಷ ಕುಸಿದ. ಮತ್ತೆ ಒಂದೇ ಉಸಿರಿನಲ್ಲಿ ಆ ಭಾವಚಿತ್ರಕ್ಕೆ ಮುತ್ತಿಡುತ್ತಾ ಅಲ್ಲಿಂದ ಹೊರಟ. ಆ ಫೋಟೊ ಮೇಲೆ ಆಪ್ತರಕ್ಷಕ ಎಂದು ಬರೆದಿತ್ತು !

ಹಾಗೇ ಮುತ್ತಿಡುತ್ತಾ, ವೃದ್ಧ ಮನೆಯಿಂದ ನಿರ್ಗಮಿಸಿದ. ಭಾರತಿಯವರ ಕಣ್ಣುಗಳು ಅವನ ಕಡೆಯೇ ದೃಷ್ಟಿ ಮಾಡಿತ್ತು. ಶ್ರೀಧರ್ ಹಾಗೂ ವಿಷ್ಣುವರ್ಧನ್ ಕಾರಿನ ಪರ್ಮನೆಂಟ್ ಡ್ರೈವರ್ ರಾಧಾ ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದರು. (ಸ್ನೇಹಸೇತು: ವಿಜಯ ಕರ್ನಾಟಕ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada