»   » ಹೌಸ್ ಫುಲ್ ಪ್ರದರ್ಶನ ಕಂಡ 'ಬಂಗಾರದ ಮನುಷ್ಯ'

ಹೌಸ್ ಫುಲ್ ಪ್ರದರ್ಶನ ಕಂಡ 'ಬಂಗಾರದ ಮನುಷ್ಯ'

Posted By:
Subscribe to Filmibeat Kannada
Kannada classics in Dignity Film Festival
ಐವತ್ತು ವರ್ಷ ದಾಟಿದ ಹಿರಿಯ ನಾಗರಿಕರಿಗಾಗಿ ನಡೆಯುತ್ತಿರುವ ಡಿಗ್ನಿಟಿ ಚಲನಚಿತ್ರೋತ್ಸವಕ್ಕೆ ಎರಡನೇ ದಿನವೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಈ ವಿಭಿನ್ನ ಚಲನಚಿತ್ರೋತ್ಸವ ಐದು ದಿನಗಳ ಕಾಲ ನಡೆಯಲಿದೆ. ಎರಡನೆ ದಿನದ ಚಿತ್ರೋತ್ಸವದಲ್ಲಿ ವಿಷ್ಣುವರ್ಧನ್ ಅಭಿನಯದ 'ನಾಗರಹಾವು' ಪ್ರದರ್ಶನ ಕಂಡಿತು.

ಕನ್ನಡ ಚಿತ್ರರಂಗದ ಹಿರಿಯ ಕಲಾವಿದರಾದ ಭಾರತಿ ವಿಷ್ಣುವರ್ಧನ್, ಲೀಲಾವತಿ, ಆರತಿ ಹಾಗೂ ನಟ ವಿನೋದ್ ರಾಜ್ ಅವರ ಆಗಮನದಿಂದ ಕಾರ್ಯಕ್ರಮ ಮತ್ತಷ್ಟು ರಂಗೇರಿತು. ಸೃಜನಶೀಲ ನಿರ್ದೇಶಕ ರಾಮು ಕಣಗಾಲ್ ಸಹ ಉಪಸ್ಥಿತರಿದ್ದರು. ಡಿಗ್ನಿಟಿ ಚಲನಚಿತ್ರೋತ್ಸವ ಏಪ್ರಿಲ್7 ರಿಂದ 11ರವರೆಗೆ ನಡೆಯಲಿದೆ.

ಕಬ್ಬನ್ ಪಾರ್ಕ್ ನ ಬಾಲ ಭವನ ಸಭಾಂಗಣದಲ್ಲಿ 1950ರಿಂದ 1970 ರ ಅವಧಿಯಲ್ಲಿ ತೆರೆಕಂಡ ಸೂಪರ್ ಹಿಟ್ ಸಿನಿಮಾಗಳನ್ನು ಪ್ರದರ್ಶಿಸಲಾಗುತ್ತಿದೆ. ವರನಟ ಡಾ.ರಾಜ್ ಕುಮಾರ್ ಅಭಿನಯದ 'ಬಂಗಾರದ ಮನುಷ್ಯ' ಚಿತ್ರ ಪ್ರದರ್ಶನಕ್ಕೆ ಬಾಲ ಭವನ ಸಭಾಂಗಣ ಹೌಸ್ ಫುಲ್ ಆಗಿತ್ತು. ತಮ್ಮ ಕಾಲದ ಚಿತ್ರವನ್ನು ನೋಡಿ ಹಿರಿಯರು ಸಂತಸ ಪಟ್ಟರು.

ಗತಕಾಲದ ಹಳೆಯ ಚಿತ್ರಗಳನ್ನು ನೋಡುವುದು ಒಂದು ವಿಭಿನ್ನ ಅನುಭವ ಎನ್ನುತ್ತಾರೆ ಎಪ್ಪತ್ತೊಂದರ ಹರಯದ ರಾಜಾಜಿನಗರದ ರಂಗರಾಜು. ಐವತ್ತು, ಎಪ್ಪತ್ತರ ದಶಕದಲ್ಲಿ ತೆರೆಕಂಡ ಕನ್ನಡ, ಹಿಂದಿ ಮತ್ತು ಇಂಗ್ಲಿಷ್ ಚಿತ್ರಗಳನ್ನು ಡಿಗ್ನಿಟಿ ಚಿತ್ರೋತ್ಸವದಲ್ಲಿ ಪ್ರದರ್ಶಿಸಲಾಗುತ್ತಿದೆ.

ಚಿತ್ರ ಪ್ರದರ್ಶನದಲ್ಲಿನ ಹಳೆಯ ಕಾಲದ ವಸ್ತ್ರ ವೈಭವ, ಉಡುಗೆ ತೊಡುಗೆ , ವೇಷಭೂಷಣಗಳು ಐವತ್ತು, ಎಪ್ಪತ್ತರ ದಶಕಕ್ಕೆ ಕೊಂಡೊಯ್ಯುತ್ತವೆ. ಏಪ್ರಿಲ್ 9ರಂದು ವಿ ಶಾಂತಾರಾಂ ಅವರ 'ನವರಂಗ್' ಚಿತ್ರ ಪ್ರದರ್ಶನ ಕಾಣಲಿದೆ. ಹೆಚ್ಚಿನ ಮಾಹಿತಿಗಾಗಿ ಎನ್ ಬಿ ಜಯಪ್ರಕಾಶ್ ಅವರನ್ನು ಮೊಬೈಲ್ ಸಂಖ್ಯೆ 99020 4959 ಸಂಪರ್ಕಿಸಬಹುದು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada