»   » ಶಿವರಾತ್ರಿಗೆ ರಾಷ್ಟ್ರಪ್ರಶಸ್ತಿ ವಿಜೇತ 'ವಿಮುಕ್ತಿ'

ಶಿವರಾತ್ರಿಗೆ ರಾಷ್ಟ್ರಪ್ರಶಸ್ತಿ ವಿಜೇತ 'ವಿಮುಕ್ತಿ'

Posted By:
Subscribe to Filmibeat Kannada

ನವ್ಯ ಚಿತ್ರ ಕ್ರಿಯೇಷನ್ಸ್ ಲಾಂಛನದಲ್ಲಿ ತಯಾರಾದ 'ವಿಮುಕ್ತಿ' ಚಿತ್ರ ಈ ವಾರ(ಫೆ.12) ತೆರೆಕಾಣುತ್ತಿದೆ. ಪಿ. ಶೇಷಾದ್ರಿ ನಿರ್ದೇಶನದ ಈ ಚಿತ್ರ 56ನೇ ರಾಷ್ಟ್ರಪ್ರಶಸ್ತಿಯಲ್ಲಿ ಅತ್ಯುತ್ತಮ ಕನ್ನಡ ಚಿತ್ರವೆಂದು ಪ್ರಶಸ್ತಿ ಪಡೆದಿದೆ. ಭಾವನಾ, ರಾಮಕೃಷ್ಣ, ಹೋದಾ (ಇರಾನ್ ನಟಿ), ಬೇಬಿ ಸಾನಿಯಾ ಅಯ್ಯರ್ ಮುಖ್ಯ ತಾರಾಗಣದಲ್ಲಿರುವ ಈ ಚಿತ್ರಕ್ಕೆ ಎಸ್. ರಾಮಚಂದ್ರ ಛಾಯಾಗ್ರಹಣ, ಪ್ರವೀಣ್ ಗೋಡ್ಖಿಂಡಿ ಸಂಗೀತ ಹಾಗೂ ಕೆಂಪರಾಜ್ ಸಂಕಲನವಿದೆ.

ಗಂಡು-ಹೆಣ್ಣುಗಳ ನಡುವಿನ ಸಂಬಂಧದ ಸ್ವರೂಪ ತುಂಬಾ ನಾಜೂಕು ಹಾಗೂ ಸಂಕೀರ್ಣವಾದುದು. ಈ ಸಂಬಂಧದ ಸಂಕೀರ್ಣತೆಯನ್ನ ತೀರಾ ಭಿನ್ನ ನೆಲೆಯೊಂದರ ಮೂಲಕ ಕಂಡರಿಸುವ ಪ್ರಯತ್ನ 'ವಿಮುಕ್ತಿ' ಚಲನಚಿತ್ರದ್ದು. ತಾಯಿಯ ಪ್ರೀತಿಯಿಂದ ವಂಚಿತಳಾದ ಮಗಳೊಬ್ಬಳು, ತಂದೆಯ ಮೇಲೆ ಅತಿಯಾದ ವ್ಯಾಮೋಹ/ಅವಲಂಬನೆ ಇಟ್ಟುಕೊಂಡಿರುವ ಮಾನಸಿಕ ಅಸ್ಥಿಮಿತವೇ 'ಎಲೆಕ್ಟ್ರೋ ಕಾಂಪ್ಲೆಕ್ಸ್'. ಈ ಅಸಹಜ ಹಾಗೂ ಅತಿ ವರ್ತನೆಗಳು ಆಕೆಯ ಕೌಟುಂಬಿಕ ಸಂಬಂಧಗಳನ್ನು ಬಿಗಡಾಯಿಸುತ್ತಾ ಹೋಗುತ್ತವೆ...

ಪ್ರಖ್ಯಾತ ಕಲಾವಿದ ಕೇಶವ ರಾವ್ ಅವರ ಏಕೈಕ ಪುತ್ರಿ ಮಾಧವಿ ಈ ಚಲನಚಿತ್ರದ ನಾಯಕಿ. ಬಾಲ್ಯದಿಂದ ತಂದೆಯ ಪ್ರೀತಿಯಾಸರೆಯಡಿಯಲ್ಲಿಯೇ ಬೆಳೆದು, ಮದುವೆಯ ನಂತರ ಕೂಡ ತಂದೆಯ ಮೇಲೆ ಅತಿಯಾದ ವ್ಯಾಮೋಹ ಮುಂದುವರಿದ ಪರಿಣಾಮ, ಆಕೆಯ ಕೌಟುಂಬಿಕ ಜೀವನದಲ್ಲಿ ಬಿರುಕು ಮೂಡುತ್ತದೆ. ಅದನ್ನು ಅರಿತ ಕೇಶವರಾವ್ ಮಗಳಿಂದ ದೂರಾಗುತ್ತಾರೆ.

ಹಲವಾರು ವರ್ಷಗಳ ಬಳಿಕ ಪತ್ರಿಕೆಯೊಂದರಲ್ಲಿ ಬಂದ ಲೇಖನವೊಂದರ ಮೂಲಕ ಆಕಸ್ಮಿಕವಾಗಿ ತಂದೆ ಕಾಶಿಯಲ್ಲಿ ಇರುವ ಅಂಶ ಆಕೆಯ ಅರಿವಿಗೆ ಬರುತ್ತದೆ. ತಂದೆಯನ್ನು ಹುಡುಕುತ್ತಾ ವಾರಣಾಸಿಗೆ ಸಾಗುವ ಆಕೆ, ಹುಡುಕಾಟದ ನಡುವೆಯೇ ಅಲ್ಲಿನ ವಿಚಿತ್ರ- ವಾಸ್ತವ ಲೋಕಕ್ಕೆ ತೆರೆದುಕೊಳ್ಳುತ್ತಾಳೆ.

ಜಸ್ಟ್ ಮಾತ್ ಮಾತಲ್ಲಿ ಸ್ಪರ್ಧೆಯಲ್ಲಿ ಭಾಗವಹಿಸಿ ಇಲ್ಲಿ

ಆ ಮೂಲಕ ತನ್ನನ್ನು ತಾನೇ ಹುಡುಕುತ್ತಾ ಸಾಗುವ ಆಕೆ ಬದುಕಿಗೆ ಬೇರೊಂದು ಅರ್ಥ ಕಂಡುಕೊಳ್ಳುತ್ತಾಳೆ. ಅತ್ಯಂತ ಕ್ಲಿಷ್ಟ ಚಿತ್ರಕಥೆ ಹೊಂದಿರುವ ವಿಮುಕ್ತಿಯನ್ನು ಸಿನಿಮಾ ಮಾಧ್ಯಮದಲ್ಲಿ ಪಿ. ಶೇಷಾದ್ರಿ ಅವರು ತಂದಿದ್ದು ಈ ವಾರ ಅದು ಬಿಡುಗಡೆಯಾಗುತ್ತಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada