»   »  ಜಾಲಿ ಪಾರ್ಟಿಯಲ್ಲಿ ಕಿಟ್ಟಿ ಗೆಳೆಯರು...

ಜಾಲಿ ಪಾರ್ಟಿಯಲ್ಲಿ ಕಿಟ್ಟಿ ಗೆಳೆಯರು...

Subscribe to Filmibeat Kannada

ಕುಡಿಯಿರಿ! ಕುಣಿಯಿರಿ! ಎರಡೇ ಎರಡು ಅಂಶಗಳ ಪಾರ್ಟಿಯದು. ಅತಿಥಿಗಳು ಶಕ್ತ್ಯಾನುಸಾರ ಕುಡಿದರು. ಕಸುವಿದ್ದವರು ಕುಣಿದರು. ಕಂಠ ಚೆನ್ನಾಗಿದ್ದವರು ಹಾಡಿದರು. ನೆಲಮಂಗಲ ಸಮೀಪದ ಹಾಲಿಡೇ ಪಾಮ್ಸ್ ರೆಸಾರ್ಟ್‌ಗೆ ತಾರೆಗಳ ಲೋಕವೇ ಇಳಿದುಬಂದಂತಿತ್ತು.

* ಜಯಂತಿ

ಕಾರ್ಯಕ್ರಮದ ಕೇಂದ್ರಬಿಂದು ಶ್ರೀನಗರ ಕಿಟ್ಟಿ. ಕಳೆದ ವರ್ಷ ಇದೇ ದಿನ ಸಿನಿಮಾದ ಕನಸುಗಳನ್ನು ಕಣ್ಣತುಂಬ ತುಂಬಿಕೊಂಡಿದ್ದ ಕಿಟ್ಟಿ ಈಗ ಕನ್ನಡದ ಭರವಸೆಯ ನಾಯಕ ನಟರಲ್ಲೊಬ್ಬರು. ದೊಡ್ಡ ಹಿಟ್ ಕೊಡದಿದ್ದರೂ, ತಮ್ಮ ಹೆಸರಿನಿಂದಲೇ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆತರುವ ವರ್ಚಸ್ಸಿಲ್ಲದಿದ್ದರೂ, ಕಿಟ್ಟಿ ಪ್ರತಿಭೆಯ ಬಗ್ಗೆ ಎರಡು ಮಾತಿಲ್ಲ. ಇಂತಿಪ್ಪ ಕಿಟ್ಟಿಯ ಸವಾರಿ ಸದ್ದು ಮಾಡಿದೆ. ಒಲವೇ ಜೀವನ ಲೆಕ್ಕಾಚಾರದಲ್ಲಿನ ಅವರ ಪರ್ಫಾಮೆನ್ಸ್ ಬಗ್ಗೆ ಒಳ್ಳೆ ಮಾತಿದೆ. ಮುಂದಿನ ಮಳೆ ಬರಲಿ ಮಂಜೂ ಇರಲಿ ಚಿತ್ರದ ಬಗ್ಗೆ ಒಳ್ಳೆಯ ಮಾತುಗಳೂ ಇವೆ. ಹಾಗಾಗಿಯೇ ಈ ಸಲದ ಕಿಟ್ಟಿ ಹುಟ್ಟುಹಬ್ಬಕ್ಕೆ ತಾರಾಲೋಕದ ಪ್ರಭಾವಳಿಯಿತ್ತು.

ರಾತ್ರಿ 8ರಿಂದ ಬೆಳಗ್ಗೆ 8 ಎನ್ನುವುದು ಪಾರ್ಟಿಯ ಹೆಡ್‌ಲೈನ್. ಸಂಜೆ ಕಪ್ಪಡರತೊಡಗಿದ ಏಳರ ವೇಳೆಗಾಗಲೇ ಒಬ್ಬೊಬ್ಬರೇ ಅತಿಥಿಗಳು, ಪತ್ರಕರ್ತರು ರೆಸಾರ್ಟ್‌ನಲ್ಲಿ ಕಾಣಿಸಿಕೊಳ್ಳತೊಡಗಿದರು. ಮೊದಲಿಗೆ ಕಿಟ್ಟಿಗೆ ಸಾಂಪ್ರದಾಯಿಕವಾಗಿ ಶುಭಾಶಯ ಸಲ್ಲಿಕೆ. ನಂತರದ್ದು ಔಪಚಾರಿಕ ಕಾರ್ಯಕ್ರಮ. ಅಲ್ಲಿ ಮಾತು ಗೌಣ. ಮದಿರೆಯದೇ ಪ್ರದರ್ಶನ.

ನೆಲಮಂಗಲ ಸೀಮೆಗೆ ಸೇರಿದ ಗೋಲ್ಡನ್ ಸ್ಟಾರ್ ಗಣೇಶ್ ಪಾರ್ಟಿಯಲ್ಲಿದ್ದರು. ಕಿಟ್ಟಿಗೆ ಹೆಣ್ಣು ಕೊಟ್ಟ ಮಾವ ರವಿ ಬೆಳಗೆರೆಯಿದ್ದರು. ಬೆಳಗೆರೆಗೆ ಆಪ್ತರಾದ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಕುಟುಂಬ ಸಮೇತ ಹಾಜರಿದ್ದರು. ಪೂಜಾ ಗಾಂಧಿ ತನ್ನ ಸೋದರಿ ರಾಧಿಕಾಳ ಜೊತೆ ಪಾರ್ಟಿಯ ಗ್ಲಾಮರ್ ಹೆಚ್ಚಿಸಿದ್ದರು. ಶಿವಧ್ವಜ್, ರಘು ದೀಕ್ಷಿತ್, ರಘು ಮುಖರ್ಜಿ, ಅರುಣ್ ಸಾಗರ್, ಶಿವಧ್ವಜ್, ತುಷಾರ್ ರಂಗನಾಥ್- ಹೀಗೆ ತಾರೆಗಳ ಸೇರ್ಪಡೆಯಾಗುತ್ತಿತ್ತು. ರಾತ್ರಿಯುದ್ದಕ್ಕೂ ಕೂಡಿ ಕಳೆಯುವ ಲೆಕ್ಕಾಚಾರ ಚಾಲ್ತಿಯಲ್ಲಿತ್ತು.

ಅಳಿಯನ ಹುಟ್ಟುಹಬ್ಬದ ಕಾರ್ಯಕ್ರಮವನ್ನು ರಂಗೇರಿಸುವ ಹೊಣೆಯನ್ನು ರವಿ ಬೆಳಗೆರೆ ಹೆಗಲಿಗೆಳೆದುಕೊಂಡರು. ಕಿರುತೆರೆಯಲ್ಲಿ ಕಾರ್ಯಕ್ರಮ ನಿರೂಪಿಸಿದ ಅನುಭವ ಉಂಟಲ್ಲ? ಆ ಶೈಲಿಯಲ್ಲಿ ರಾತ್ರಿಯ ನೀರವತೆಗೆ ಕಿಚ್ಚು ಹಚ್ಚಿದರು. ನಗೆ ಚಟಾಕಿಗಳ ಹಾರಿಸಿದರು. ಕೆಲವರು ನಕ್ಕರು. ನಗದಿದ್ದವರನ್ನು, ನಗ್ರಪ್ಪಾ ಎಂದು ಕಾಡಿ ನಗಿಸಿದರು.

ಕಿಟ್ಟಿ ಪಾರ್ಟಿಯ ಮತ್ತೊಂದು ವಿಶೇಷ ನಿನ್ನ ಪೂಜೆಗೆ ಬಂದೆ ಮಾದೇಶ್ವರ ಗೀತೆಯ ಖ್ಯಾತಿಯ ರಘು ದೀಕ್ಷಿತ್‌ರ ಹಾಡುಗಾರಿಕೆ. ಗಂಡುಕಂಠದಲ್ಲಿ ರಘು ಹಾಡಿದರು. ಕೇಳುಗರನ್ನು ಕಾಡಿದರು. ಒಳಗಣ ರಂಗು ಬಯಲಿಗೂ ಬಂತು. ಕ್ಯಾಂಪ್ ಫೈರ್ ಧಗಧಗ. ಮತ್ತೆ ಕುಣಿತ. ನಿರಂತರ ಕುಡಿತ.

ರಾತ್ರಿ 8ರಿಂದ ಬೆಳಗ್ಗೆ 8. ಡೆಡ್‌ಲೈನ್‌ಗೆ ಮೊದಲೇ ತಂತಮ್ಮ ಗಮ್ಯಗಳತ್ತ ಸವಾರಿ ಹೊಂಟವರ ಸಂಖ್ಯೆ ದೊಡ್ಡದಿತ್ತು. ಬೆಳಗಿನ ವೇಳೆಗೆ ಮತ್ತದೇ ಮೌನ. ಮತ್ತದೇ ಸೂರ್ಯ.

ಪಾರ್ಟಿ ಮುಗಿದಿದೆ. ಕಿಟ್ಟಿ- ಹ್ಯಾಪಿ ಬರ್ತಡೇ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada